ಹೊಸದಿಲ್ಲಿ: ನಿಮ್ಮ ಖಾಸಗಿ ಮೊಬೈಲ್ ಸಂಖ್ಯೆಗೆ ಪ್ರತೀದಿನ ಎಲ್ಲೆಲ್ಲಿಂದಲೋ ಕರೆಗಳು ಬಂದೂಬಂದೂ ನಿಮಗೆ ಬೇಸರ ಹುಟ್ಟಿಸಿರಬಹುದು. ಆದರೆ ಇಂತಹ ನಕಲಿ ಕರೆಗಳು ಕೇವಲ ಖಾಸಗಿ ಸಂಖ್ಯೆಗಳಿಗೆ ಮಾತ್ರವಲ್ಲ ವಾಟ್ಸ್‌ಆ್ಯಪ್‌ಗ್ ಬರಲು ಶುರುವಾಗಿವೆ! ದಿನನಿತ್ಯ ಈ ಬಗ್ಗೆ ಟ್ವೀಟ್ ಮಾಡಿ ದೂರು ದಾಖಲಿಸುವವರ ಸಂಖ್ಯೆಯೂ ಹೆಚ್ಚಿದೆ.
ಇದಕ್ಕೆ ಒಂದು ಪರಿಹಾರ ಮಾಡಲು ವಾಟ್ಸ್ ಆ್ಯಪ್ ಬಲವಾದ ಹೆಜ್ಜೆ ಇಟ್ಟಿದೆ. ಟ್ರೂಕಾಲರ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಅದು, ತನ್ನ ಬಳಕೆದಾರರಿಗೆ ಬರುವ ನಕಲಿ ಕರೆಗಳನ್ನು ಗುರ್ತಿಸಲು ಮುಂದಾಗಿದೆ. ಟ್ರೂಕಾಲರ್ ಮುಂದಿನ ದಿನಗಳಲ್ಲಿ ವಾಟ್ಸ್‌ಆ್ಯಪ್‌ನಲ್ಲೂ ಸೇವೆ ಆರಂಭಿಸಲಿದೆ.
ಈ ಫೀಚರ್ ಸದ್ಯ ವಾಟ್ಸ್‌ಆ್ಯಪ್‌ನಲ್ಲಿ ಪ್ರಾಯೋಗಿಕ ಹಂತದಲ್ಲಿದೆ. ಅರ್ಥಾತ್ ಕೆಲವೇ ಕೆಲವರಿಗೆ ಲಭ್ಯವಾಗುತ್ತಿದೆ. ಮೇ ತಿಂಗಳ ಅಂತ್ಯದ ಇಡೀ ಜಗತ್ತಿನಾದ್ಯಂತ ಲಭ್ಯವಾಗುವ ನಿರೀಕ್ಷೆಯಿದೆ. ಇಡೀ ಜಗತ್ತಿನಲ್ಲಿ 200 ಕೋಟಿಗೂ ಅಧಿಕ ವಾಟ್ಸ್‌ಆ್ಯಪ್ ಬಳಕೆದಾರರಿದ್ದಾರೆ. ಭಾರತದಲ್ಲಿ ವ್ಯಕ್ತಿಯೊಬ್ಬ ತಿಂಗಳಿಗೆ ಸರಾಸರಿ 17 ನಕಲಿ ಕರೆಗಳನ್ನು ಪಡೆಯುತ್ತಾನೆ.
ಪರಿಹಾರವೇನು?: ತನ್ನ ಬಳಕೆದಾರರಿಗೆ ಬಂದಿರುವ ಈ ಸಮಸ್ಯೆಯಿಂದ ಎಚ್ಚೆತ್ತಿರುವ ವಾಟ್ಸ್‌ಆ್ಯಪ್, ನಕಲಿ ಕರೆಗಳನ್ನು ಕೂಡಲೇ ಬ್ಲಾಕ್ ಮಾಡಿ, ವರದಿ ಮಾಡಲು ತಿಳಿಸಿದೆ.
ಸದ್ಯ ಕೀನ್ಯಾ, ಮಲೇಷ್ಯಾ, ವಿಯೆಟ್ನಾಮ್, ಇಥಿಯೊಪಿಯಾದಂತಹ ದೇಶಗಳ ಕೋಡ್‌ಗಳನ್ನು ಹೊಂದಿರುವ ಸಂಖ್ಯೆಗಳಿಂದ ಕರೆಗಳು ಬರುತ್ತಿವೆ. ಇಂತಹ ಕರೆಗಳನ್ನು ಯಾರು ಮಾಡುತ್ತಿದ್ದಾರೆ, ಅವರ ಹುನ್ನಾರವೇನೆಂದು ಮಾತ್ರ ಇನ್ನೂ ಗೊತ್ತಾಗಿಲ್ಲ.