ಹೊಸದಿಲ್ಲಿ : ವಾಟ್ಸಾಪ್ ಮೂಲಕ ಸುಳ್ಳು ಸುದ್ದಿಗಳು, ವದಂತಿಗಳನ್ನು ಹರಡಿಸುವ ಮೂಲಕ ಸಮಾಜದಲ್ಲಿ ಅಶಾಂತಿ, ಹಿಂಸೆ, ದೊಂಬಿ ಹುಟ್ಟು ಹಾಕುವುದನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಗಂಭೀರವಾಗಿರುವ ಹಿನ್ನೆಲೆಯಲ್ಲಿ , “ಭಾರತದಲ್ಲಿನ ತನ್ನ ಬಳಕೆದಾರರು ಇನ್ನು ಒಂದು ಬಾರಿಗೆ ಐದಕ್ಕಿಂತ ಹೆಚ್ಚು ಚ್ಯಾಟ್‌ಗಳಿಗಿಂತ ಫಾರ್ವರ್ಡ್ ಮಾಡಲು ಅವಕಾಶ ಇರುವುದಿಲ್ಲ” ಎಂದು ವಾಟ್ಸಾಪ್ ಇಂದು ಶುಕ್ರವಾರ ಹೇಳಿದೆ. ಅದೇ ರೀತಿ ಮೀಡಿಯಾ ಮೆಸೇಜಸ್ ಮೇಲಿನ ಕ್ವಿಕ್ ಫಾರ್ವರ್ಡ್ ಬಟನ್ ಕೂಡ ತೆಗೆದು ಹಾಕಲಾಗುವುದು ಎಂದು ವಾಟ್ಸಾಪ್ ಹೇಳಿದೆ.
ಈ ಬಗ್ಗೆ ವಾಟ್ಸಾಪ್ ತನ್ನ ಬ್ಲಾಗ್ ಪೋಸ್ಟ್ ನಲ್ಲಿ ಹೀಗೆ ಹೇಳಿದೆ :
ಕೆಲವು ವರ್ಷಗಳ ಹಿಂದೆ ನಾವು ವಾಟ್ಸಾಪ್ ನಲ್ಲಿ ಬಹುಸಂಖ್ಯೆಯ ಚ್ಯಾಟ್‌ಗಳನ್ನು ಒಂದೇ ಬಾರಿಗೆ ಫಾರ್ವರ್ಡ್ ಮಾಡುವ ಅವಕಾಶವನ್ನು ಒದಗಿಸಿದ್ದೆವು. ಇಂದು ನಾವು ಭಾರತದಲ್ಲಿನ ವಾಟ್ಸಾಪ್ ಬಳಕೆದಾರರಿಗೆ ಒಂದೇ ಬಾರಿಗೆ ಐದು ವಾಟ್ಸಾಪ್ ಚ್ಯಾಟ್‌ಗಳ ಫಾರ್ವರ್ಡ್ ಮಿತಿಯನ್ನು ಹೇರುತ್ತಿದ್ದೇವೆ. ವಿಶ್ವದ ಬೇರೆ ಯಾವುದೇ ದೇಶಗಳಿಗಿಂತ ಅತೀ ಹೆಚ್ಚು ಸಂದೇಶಗಳು, ಫೋಟೋಗಳು ಮತ್ತು ವಿಡಿಯೋಗಳನ್ನು ಭಾರತದಲ್ಲಿನ ಬಳಕೆದಾರರು ಫಾರ್ವರ್ಡ್ ಮಾಡುತ್ತಾರೆ. ಇಂದು ನಾವು ಇದಕ್ಕೆ ಪರೀಕ್ಷಾರ್ಥವಾಗಿ ಮಿತಿಯನ್ನು ಹೇರುತ್ತಿದ್ದೇವೆ.ಹಾಗೆಯೇ ನಾವು ಮೀಡಿಯಾ ಮೆಸೇಜ್‌ಗಳ ಮೇಲಿನ ಕ್ವಿಕ್ ಫಾರ್ವರ್ಡ್ ಬಟನ್ ಕೂಡ ತೆಗೆಯಲಿದ್ದೇವೆ.
ಖಾಸಗಿ ಮೆಸೇಜಿಂಗ್ ಆ್ಯಪ್ ಆಗಿ ಅಭಿವೃದ್ಧಿಪಡಿಸಿರುವ ವಾಟ್ಸಾಪ್ ಅನ್ನು ಅದರ ಮೂಲ ಉದ್ದೇಶಕ್ಕೆ ಅನುಗುಣವಾಗಿ ಕಾಯ್ದುಕೊಳ್ಳಲಾಗುವುದು. ಈಗಿನ್ನು ನಾವು ಮಾಡಲಿರುವ ಬದಲಾವಣೆಯನ್ನು ಕಾಲಕಾಲಕ್ಕೆ ಪರಾಮರ್ಶಿಸುವೆವು. ಬಳಕೆದಾರರ ಸುರಕ್ಷೆ ಮತ್ತು ಖಾಸಗಿತನ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ; ಅಂತೆಯೇ ವಾಟ್ಸಾಪ್ ಆದ್ಯಂತವಾಗಿ ಎನ್‌ಕ್ರಿಪ್ಟ್ ಮಾಡಲಾಗಿರುವ ಆ್ಯಪ್ ಆಗಿದೆ. ಈ ರೀತಿಯ ಗುಣಲಕ್ಷಣಗಳೊಂದಿಗೆ ನಮ್ಮ ಈ ಆ್ಯಪನ್ನು ಸುಧಾರಿಸುವ ಕೆಲಸವನ್ನು ನಾವು ನಿರಂತರವಾಗಿ ಕೈಗೊಳ್ಳುವೆವು.
ವಾಟ್ಸಾಪ್ ಮೂಲಕ ಫೇಕ್ ನ್ಯೂಸ್‌ಗಳು ಹಬ್ಬುತ್ತಿದ್ದು ದೇಶದಲ್ಲಿ ಅಶಾಂತಿ, ಅರಾಜಕತೆ, ದೊಂಬಿ, ಹಿಂಸೆ ಹೆಚ್ಚಲು ಈದು ಕಾರಣವಾಗಿದೆ ಎಂದು ಭಾರತ ಸರಕಾರ ವಾಟ್ಸಾಪ್ ವಿರುದ್ದ ಆಕ್ಷೇಪದ ಧ್ವನಿಯನ್ನು ಎತ್ತಿತ್ತು.