Advertisement

ವಾಟ್ಸಾಪ್ ಪಿಂಕ್ ಹೆಸರಿನಲ್ಲಿ ದಾಳಿಯಿಟ್ಟ ಹ್ಯಾಕರ್ಸ್: ನೀವು ಲಿಂಕ್ ಕ್ಲಿಕ್ ಮಾಡಿದ್ದೀರಾ ?

04:42 PM Apr 20, 2021 | Team Udayavani |

ಇಂದು ವಾಟ್ಸಾಪ್ ಬಳಕೆದಾರರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಇದರ ನಡುವೆ ವಾಟ್ಸಾಪ್ ಕೂಡ ಹೊಸ ಹೊಸ ಫೀಚರ್ ಗಳ ಮೂಲಕ ಬಳಕೆದಾರರನ್ನು ಸೆಳೆಯುತ್ತಿದೆ. ಏತನ್ಮಧ‍್ಯೆ ‘ವಾಟ್ಸಾಪ್ ಪಿಂಕ್’ ಎಂಬ ಹೆಸರಿನಲ್ಲಿ ಕಳೆದ ಕೆಲವು ದಿನಗಳಿಂದ ಲಿಂಕ್ ಒಂದು ಹರಿದಾಡುತ್ತಿದ್ದು ಪ್ರತಿಯೊಬ್ಬರು ಎಚ್ಚರದಿಂದಿರಬೇಕಾದ ತುರ್ತು ಅಗತ್ಯವಿದೆ.

Advertisement

ಏನಿದು ವಾಟ್ಸಾಪ್ ಪಿಂಕ್ ?

ಆನ್ ಲೈನ್ ನಲ್ಲಿ ದುಷ್ಕರ್ಮಿಗಳು ಮತ್ತೊಂದು ಮಹಾಸಂಚನ್ನು ರೂಪುಗೊಳಿಸಿದ್ದು ವಾಟ್ಸಾಪ್ ಪಿಂಕ್ ಎಂಬ ಹೆಸರಿನಲ್ಲಿ ದಾಂಗುಡಿಯಿಟ್ಟಿದ್ದಾರೆ. ವಾಟ್ಸಾಪ್ ಚಾಟ್ ಮೂಲಕ ಲಿಂಕ್ ಒಂದನ್ನು ಶೇರ್ ಮಾಡಿರುವ ಹ್ಯಾಕರ್ಸ್, ಅದನ್ನು ಕ್ಲಿಕ್ ಮಾಡಿರುವ ಬಳಕೆದಾರರ ಡಿವೈಸ್ ಗಳಿಗೆ ಲಗ್ಗೆಯಿಡುತ್ತಿದ್ದಾರೆ.

ಹೌದು. ವಾಟ್ಸಾಪ್ ಪಿಂಕ್ ಎಂಬ ಹೆಸರಿನಲ್ಲಿ ಲಿಂಕ್ ಒಂದನ್ನು ಕ್ರಿಯೇಟ್ ಮಾಡಿರುವ ಹ್ಯಾಕರ್ ಗಳು ಹಸಿರು ಬಣ್ಣದಲ್ಲಿರುವ ವಾಟ್ಸಾಪ್,  ಪಿಂಕ್ ಬಣ್ಣಕ್ಕೆ ಬದಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಮಾತ್ರವಲ್ಲದೆ ವಾಟ್ಸಾಪ್ ಸಂಪೂರ್ಣವಾಗಿ ಹೊಸತನದಲ್ಲಿರುತ್ತದೆ ಎಂಬ ಅಮಿಷವೊಡ್ಡಿದ್ದಾರೆ. ಈಗಾಗಲೇ ಹಲವಾರು ಬಳಕೆದಾರರ ವಾಟ್ಸಾಪ್ ಅನ್ನು ಈ ಲಿಂಕ್ ತಲುಪಿದ್ದು, ಬಹುತೇಕರು ಇದರ ಮರ್ಮ ಅರಿಯದೆ ಫಾರ್ವರ್ಡ್ ಮಾಡಿದ್ದಾರೆ. ಲಿಂಕ್ ಕ್ಲಿಕ್ ಮಾಡಿದರ ಪರಿಣಾಮ ಕೆಲವರ ಸ್ಮಾರ್ಟ್ ಫೋನ್ ಗಳಿಗೆ APK ( ಆ್ಯಂಡ್ರಾಯ್ಡ್ ಪ್ಯಾಕೇಜ್ ) ಫೈಲ್ ಗಳು ಕೂಡ ಇನ್ ಸ್ಟಾಲ್ ಆಗಿದೆ.

Advertisement

ಸೈಬರ್ ಪರಿಣಿತರ ಪ್ರಕಾರ ನಿರ್ದಿಷ್ಟ ಡಿವೈಸ್ ಅಥವಾ ಸ್ಮಾರ್ಟ್ ಫೋನ್ ಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಹಾಗೆಯೇ ಡೇಟಾಗಳನ್ನು ಅಪಹರಿಸಲು ಈ ತೆರೆನಾದ ಲಿಂಕ್ ಅನ್ನು ಹರಿಯಬಿಡಲಾಗಿದೆ ಎಂದು ತಿಳಿಸಿದ್ದಾರೆ. ಈ ಲಿಂಕ್ ಬಳಕೆದಾರರ ವಾಟ್ಸಾಪ್ ಅಕೌಂಟ್ ಅನ್ನು ಲಾಕ್ ಮಾಡುವುದು, ಮಾತ್ರವಲ್ಲದೆ ಕೆಲವೊಮ್ಮೆ ಸಂಪೂರ್ಣ ಮೊಬೈಲ್ ಅನ್ನು ನಿಷ್ಕ್ರೀಯಗೊಳಿಸುತ್ತದೆ.

ಈ ಕುರಿತು ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಸೈಬರ್ ಸೆಕ್ಯೂರಿಟಿ ಪರಿಣಿತ ರಾಜ್ ಶೇಖರ್ ರಜಾರಿಯಾ, ವಾಟ್ಸಾಪ್ ಪಿಂಕ್ ಕುರಿತು ಎಚ್ಚರಿಕೆಯಿಂದಿರಿ. ವೈರಸ್ ಒಂದು APK ಡೌನ್ ಲೋಡ್ ಲಿಂಕ್ ಜೊತೆಗೆ ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ. ವಾಟ್ಸಾಪ್ ಪಿಂಕ್ ಎಂಬ ಹೆಸರಿನಲ್ಲಿರುವ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ಇದು ನಿಮ್ಮ ಸ್ಮಾರ್ಟ್ ಫೋನ್ ಪ್ರವೇಶಿಸಲು ಹ್ಯಾಕರ್ ಗಳಿಗೆ ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.

ಗಮನಿಸಬೇಕಾದ ಅಂಶವೆಂದರೇ ಈವರೆಗೂ ಫೇಸ್ ಬುಕ್ ಒಡೆತನದ ವಾಟ್ಸಾಪ್ ಸಂಸ್ಥೆ, ತನ್ನ ಪಿಂಕ್ ವರ್ಷನ್ ಅಪ್ ಡೇಟ್ ಕುರಿತು ಮಾಹಿತಿ ನೀಡಿಲ್ಲ. ಹೀಗಾಗಿ ಯಾವುದೇ ಅನುಮಾನಗಳಿಲ್ಲದೆ ಇದೊಂದು ಹ್ಯಾಕರ್ ಗಳ ಕೃತ್ಯ ಎಂದು ತಿಳಿಯಬಹುದು.

ಈ ಸಮಯದಲ್ಲಿ ಪ್ರತಿಯೊಬ್ಬ ಬಳಕೆದಾರರು ಅನುಸರಿಸಬೇಕಾದ ಸರಳ ಸೂತ್ರವೆಂದರೆ ಯಾವುದೇ ಅನಧಿಕೃತ ಲಿಂಕ್ ಗಳನ್ನು ಕ್ಲಿಕ್ ಮಾಡದೆ ನಿರ್ಲಕ್ಷಿಸುವುದು. ಹಾಗೊಮ್ಮೆ ಬಣ್ಣ ಬದಲಾಗುವುದು ಸೇರಿದಂತೆ ಹೊಸ ಫೀಚರ್ ಗಳು ಬಂದಾಕ್ಷಣ ವಾಟ್ಸಾಪ್ ಸಂಸ್ಥೆಯೇ ಪ್ರತಿಯೊಬ್ಬರಿಗೂ ತಿಳಿಯುವಂತೆ ಮಾಹಿತಿ ನೀಡುತ್ತದೆ. ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವ ಮುನ್ನ ವಾಟ್ಸಾಪ್ ಸಂಸ್ಥೆಯ ಅಧಿಕೃತ ವೆಬ್ ಸೈಟ್ ಗಳನ್ನು ಗಮನಿಸಿ.

ಸೈಬರ್ ಇಂಟಲಿಜೆನ್ಸ್ ಫರ್ಮ್ ನ ನಿರ್ದೇಶಕ ಜಿತೆನ್ ಜೈನ್ ಹೇಳುವಂತೆ, ವಾಟ್ಸಾಪ್ ಪಿಂಕ್ ಎಂಬುದು ಕೀಬೋರ್ಡ್ ಆಧಾರಿತ ಮಾಲ್ವೇರ್ ಆಗಿದ್ದು, ಇದರ ಮೂಲಕ ನೀವು ಸ್ಮಾರ್ಟ್ ಫೋನ್ ಗಳಲ್ಲಿ ಟೈಪಿಸುವ ಪ್ರತಿಯೊಂದು ಪದಗಳು ಕೂಡ ರೆಕಾರ್ಡ್ ಆಗುತ್ತವೆ. ಇದರ ಜೊತೆಗೆ ಫೋಟೋಗಳು, ಎಸ್ ಎಂಎಸ್, ಕಾಂಟ್ಯಾಕ್ಟ್ ಗಳು ಕೂಡ ಸುಲಭವಾಗಿ ದುಷ್ಕರ್ಮಿಗಳ ಪಾಲಾಗುತ್ತದೆ ಎಂದಿದ್ದಾರೆ.

ನೀವೇನಾದರೂ ಈ ಲಿಂಕ್ ಕ್ಲಿಕ್ ಮಾಡಿದ್ದರೇ ಈ ಕ್ರಮ ಅನುಸರಿಸಿ

  • ಕೂಡಲೇ ವಾಟ್ಸಾಪ್ ಅನ್ ಇನ್ ಸ್ಟಾಲ್ ಮಾಡಿ ಹೊಸದಾಗಿ ಡೌನ್ ಲೋಡ್ ಮಾಡಿಕೊಳ್ಳಿ.
  • ವಾಟ್ಸಾಪ್ ವೆಬ್ ಡಿವೈಸ್ ಗಳನ್ನು ಅನ್ ಲಿಂಕ್ ಮಾಡಿ.
  • ಗೂಗಲ್ ಬ್ರೌಸರ್ / ನೀವು ಬಳಸುತ್ತಿರುವ ಬ್ರೌಸರ್ ಗಳ ಹಿಸ್ಟರಿ ಕ್ಲಿಯರ್ ಮಾಡಿ. (Clear Browser cache also)
  • ಡಿವೈಸ್ ನಲ್ಲಿರುವ ಎಲ್ಲಾ ಅಪ್ಲಿಕೇಶನ್ ಗಳನ್ನು ಪರಿಶೀಲಿಸಿ. ಹಾಗೂ ಯಾವೆಲ್ಲಾ ಪರ್ಮಿಶನ್ (ಅನುಮತಿ) ನೀಡಿದ್ದೀರಿ ಎಂಬುದನ್ನು ಗಮನಿಸಿ. ಅನಗತ್ಯ ಆ್ಯಪ್ ಗಳನ್ನು ಅನ್ ಇನ್ ಸ್ಟಾಲ್ ಮಾಡಿ.
Advertisement

Udayavani is now on Telegram. Click here to join our channel and stay updated with the latest news.

Next