Advertisement

ಹೊಸ ದಾಖಲೆ ಬರೆದ ವಾಟ್ಸ್‌ಆ್ಯಪ್‌

11:32 PM Jan 04, 2021 | Team Udayavani |

ಹೊಸ ವರ್ಷದ ಮುನ್ನಾ ದಿನದಂದು ಅಂದರೆ ಡಿ. 31ರಂದು ಪ್ರಪಂಚದಾದ್ಯಂತದ ವಾಟ್ಸ್‌ಆ್ಯಪ್‌ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಹೊಸ ವರ್ಷದ ಮುನ್ನಾದಿನದಂದು ವಾಟ್ಸ್‌ಆ್ಯಪ್‌ ಬಳಕೆದಾರರು 140 ಕೋಟಿಗೂ ಹೆಚ್ಚು ಧ್ವನಿ ಮತ್ತು ವೀಡಿಯೋ ಕರೆಗಳನ್ನು ಮಾಡಿದ್ದಾರೆ ಎಂದು ಫೇಸ್‌ಬುಕ್‌ ತಿಳಿಸಿದೆ.

Advertisement

ಇದು ಒಂದು ದಿನದಲ್ಲಿ ಮಾಡಿದ ಕರೆಗಳ ದಾಖಲೆಯ ಸಂಖ್ಯೆಯೂ ಹೌದು. ವಿಶ್ವಾದ್ಯಂತ 200 ದಶಲಕ್ಷಕ್ಕೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆ್ಯಪ್‌ ಜಗತ್ತಿನ ಅತಿದೊಡ್ಡ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್ ಆಗಿದೆ. ಇದು 2019 ಮತ್ತು 2020ರಲ್ಲಿ ಮತ್ತಷ್ಟು ಬೆಳೆದಿದೆ.

ಕಳೆದ ವರ್ಷಕ್ಕಿಂತ ಶೇ. 50ರಷ್ಟು ಹೆಚ್ಚಳ
ಡಿ. 31ರಂದು ದಾಖಲಾದ ಅತೀ ಹೆಚ್ಚಿನ ಕರೆ ಸಂಖ್ಯೆಯು ಈ ಹಿಂದಿನ ವರ್ಷಕ್ಕಿಂತ ಶೇ. 50ರಷ್ಟು ಹೆಚ್ಚಾಗಿದೆ. ಇದಕ್ಕೆ ಕೋವಿಡ್‌ ಸಂದರ್ಭ ಹೇರಲಾದ ಲಾಕ್‌ಡೌನ್‌ ಕಾರಣ ಎಂದು ಸಂಸ್ಥೆ ಹೇಳಿದೆ. ಲಾಕ್‌ಡೌನ್‌ ಪ್ರಯುಕ್ತ ಜನರು ಮನೆಯಲ್ಲೇ ಇದ್ದುದರಿಂದ ಸಂಪರ್ಕಕ್ಕಾಗಿ ಸಾಮಾಜಿಕ ಜಾಲತಾಣವನ್ನು ಹೆಚ್ಚು ಆಶ್ರಯಿಸಿದ್ದಾರೆ. ಹೆಚ್ಚಿನ ಬಳಕೆದಾರರು ಉದ್ಯೋಗದ ಕಾರಣ ಮತ್ತು ತಮ್ಮ ಪ್ರೀತಿಪಾತ್ರರ ಜತೆ ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲು ವೀಡಿಯೋ ಮತ್ತು ಧ್ವನಿ ಕರೆಗಳನ್ನು ಬಳಸಿದ್ದಾರೆ.

ಕೋವಿಡ್‌ 19ರ ಮೊದಲು ಅಂದರೆ 2019 ರಲ್ಲಿಯೂ ಬಳಕೆಯ ಅವಧಿ ಮತ್ತು ಪ್ರಮಾಣ ಹೆಚ್ಚಳವಾಗಿತ್ತು. ಆದರೆ 2020ರಲ್ಲಿ ಮಾತ್ರ ಭಾರೀ ಬೇಡಿಕೆಯನ್ನೇ ಪಡೆದಿದೆ. ಸಾಮಾನ್ಯವಾಗಿ ಹೊಸ ವರ್ಷದ ಮುನ್ನಾದಿನದಂದು ಮಧ್ಯರಾತ್ರಿಯಲ್ಲಿ ಮೆಸೇಜಿಂಗ್‌, ಫೋಟೋ ಅಪ್ಲೋಡ್‌ಗಳ ಸಂಖ್ಯೆ ಹೆಚ್ಚೇ ಇರುತ್ತಿದ್ದವು.

ಫೇಸ್‌ಬುಕ್‌ ಇನ್‌ಸ್ಟಾಗ್ರಾಂನಲ್ಲಿ 5.5 ಕೋಟಿ ಲೈವ್‌!
ಹೊಸ ವರ್ಷದ ಮುನ್ನಾ ದಿನದಂದು, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ 55 ದಶಲಕ್ಷಕ್ಕೂ ಹೆಚ್ಚು ನೇರ ಪ್ರಸಾರಗಳು ನಡೆದಿವೆ. ಅಮೆರಿಕದಲ್ಲಿ ಹೊಸ ವರ್ಷದ ಮುನ್ನಾದಿನ ಅತೀ ಹೆಚ್ಚು ಫೇಸ್‌ಬುಕ್‌ ಗ್ರೂಪ್‌ ವೀಡಿಯೋ ಕರೆಗಳು ದಾಖಲಾಗಿವೆ. ಮೆಸೇಂಜರ್‌ ವೀಡಿಯೋ ಕರೆಯಲ್ಲಿ 3 ಮತ್ತು ಅದಕ್ಕಿಂತ ಹೆಚ್ಚಿನ ಜನರು ಇದ್ದರೆ ಅದನ್ನು ಗ್ರೂಪ್‌ ಕಾಲ್‌ ಎಂದು ಕರೆಯಲಾಗುತ್ತದೆ. ಗುಂಪು ವೀಡಿಯೋ ಕರೆಗಳು ಸಾಮಾನ್ಯ ದಿನಗಳಿಗಿಂತ ಸುಮಾರು 2 ಪಟ್ಟು ಹೆಚ್ಚಾಗಿತ್ತು ಸಂಸ್ಥೆ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next