ಸಾಮಾಜಿಕ ಜಾಲತಾಣಗಳು ಇಡಿ ಭೂಮಂಡಲವನ್ನೇ ಆವರಿಸಿದ ಈ ಸಮಯದಲ್ಲಿ ಅದರ ಮಾಯೆಯನ್ನು ತಿಳಿಯುವುದು ಪ್ರಸ್ತುತವೆನಿಸಿದೆ. ಯುವ ಜನಾಂಗದ ಶತ್ರುವಾದ ಈ ಹೊಸ ಮಾಧ್ಯಮಗಳ ಪ್ರಭಾವ ಎಷ್ಟರ ಮಟ್ಟಿಗೆ ಆವರಿಸಿದೆಯೆಂದರೆ ಅದಿಲ್ಲದಿದ್ದರೆ ಕಾಲೇಜು ಜೀವನವೇ ಸಾಗುವುದಿಲ್ಲ ಎಂಬಂತಾಗಿದೆ. ಕೂತಲ್ಲಿ ನಿಂತಲ್ಲಿ ತಮ್ಮ ಪ್ರೀತಿಪಾತ್ರರಿಗೆ ಸಂದೇಶ ಕಳುಹಿಸುತ್ತ ಅದರ ದಾಸರಾದವರು ಅದೆಷ್ಟೋ ಜನ.
ಸಾಮಾನ್ಯವಾಗಿ ಪಿಯುಸಿ, ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮೊಬೈಲ್‌ನ್ನು ಕಾಲೇಜಿನ ಆವರಣದಲ್ಲಿ ಬಳಸಬಾರದೆಂಬ ನಿಯಮವಿದೆ. ಆದರೂ ಕಾಲೇಜಿನ ಸಮೀಪದವರೆಗೂ ತಂದು ಪರಿಚಿತರ ಬಳಿ ಕೊಟ್ಟು ಕಾಲೇಜು ಮುಗಿದಾಗ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವುದನ್ನು ನಾವು ಕಾಣಬಹುದು. ಏನೇ ಇರಲಿ, ಈ ಫೇಸ್‌ಬುಕ್ ವಾಟ್ಸಾಪ್ ಗಳು ಪ್ರತಿಯೊಬ್ಬರ ಅವಿಭಾಜ್ಯ ಅಂಗವಾಗಿದ್ದು ಮಾತ್ರ ಸುಳ್ಳಲ್ಲ.
ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಗೆ ಬಲಗಾಲಿಟ್ಟ ಮೊದಲ ದಿನವೇ ವಿಚಾರ ವಿನಿಮಯದ ಬದಲು ಮೊಬೈಲ್ ನಂಬರ್‌ಗಳ ಪರಸ್ಪರ ವಿನಿಮಯವಾಗಿದ್ದು ಇವತ್ತಿಗೂ ಅವಿಸ್ಮರಣೀಯವಾದದ್ದು. ಆ ದಿನ ಪ್ರತಿಯೊಬ್ಬರೂ ಅಪರಿಚಿತರಾದರೂ ಹೈಕ್‌ನಲ್ಲಿ ಕ್ಲಾಸ್‌ನ ಮೊದಲ ಗ್ರೂಪ್ ಓಪನ್ ಆಗಿತ್ತು. ಅದು ಕೂಡ ಪಾನೀಪೂರಿ ತಿನ್ನುತ್ತ ಓಪನ್ ಮಾಡಿದ ಅಕೌಂಟ್. ಪಾನೀಪೂರಿಯ ಸವಿಯನ್ನು ಆಸ್ವಾದಿಸುತ್ತ ತೆಗೆದ ಸೆಲ್ಫಿ ಮೊದಲ ಬಾರಿಗೆ ಗ್ರೂಪ್‌ನಲ್ಲಿ ಅಪ್‌ಲೋಡ್ ಆದಾಗ ಆ ಕ್ಷಣವ ನೆನೆದು ಮೈಮೆರತವರೆಷ್ಟೋ. ನಂತರದಲ್ಲಿ ವಾಟ್ಸಾಪ್ ಗ್ರೂಪ್ ಕೂಡ ಆರಂಭವಾಗಿತ್ತು. ಕ್ಲಾಸ್‌ನಲ್ಲಿದ್ದ 30 ಜನರಿಗೆ ಹತ್ತು ಮಂದಿ ಅಡ್ಮಿನ್‌ಗಳು. ಗ್ರೂಪ್ ಆರಂಭವಾದ ಪ್ರಾರಂಭದ ದಿನಗಳಲ್ಲಿ ಉಭಯ ಕುಶಲೋಪರಿಗಳು ನಿಮಿಷಕ್ಕೊಮ್ಮೆ ಆಗುತ್ತಿದ್ದವು.
ಪತ್ರಿಕೋದ್ಯಮ ವಿದ್ಯಾರ್ಥಿಗಳಾದ್ದರಿಂದ ಸಾಮಾಜಿಕ ಸುದ್ದಿಗಳು, ಕಾಲೇಜಿಗೆ ಸಂಬಂಧಪಟ್ಟ ಮಹತ್ತರ ಸುದ್ದಿಗಳು ಪ್ರತಿ ಸೆಕೆಂಡಿಗೊಮ್ಮೆ ಅಪ್‌ಡೇಟ್ ಆಗುತ್ತಿದ್ದವು. ವಾಟ್ಸಾಪ್, ಫೇಸ್‌ಬುಕ್ ಯುಗದ ಮಹತ್ವ ಅರಿವಾದದ್ದೇ ನಂತರದ ದಿನಗಳಲ್ಲಿ. ಕ್ಲಾಸ್ ಅಸೈನ್‌ಮೆಂಟ್‌ಗಳು, ತರಗತಿಗಳು ಇಲ್ಲದಿರುವಿಕೆ, ವಿಶೇಷ ಕಾರ್ಯಕ್ರಮಗಳು, ಸೆಮಿನಾರ್‌ಗಳು, ಕೆಲಸ ಕಾರ್ಯಗಳ ಬಗ್ಗೆ ಪ್ರತಿನಿಮಿಷವೂ ಬ್ರೇಕಿಂಗ್ ನ್ಯೂಸ್‌ಗಳು ಬರುತ್ತಲೇ ಇರುತ್ತವೆ. ಒಂದು ದಿನ ವಾಟ್ಸಾಪ್ ಓಪನ್ ಮಾಡದೇ ಆತ ತರಗತಿಗೆ ಹೋದನೆಂದರೆ ಪೆಚ್ಚಾಗಿ ನಿಲ್ಲಬೇಕಾಗುತ್ತದೆ. ಯಾಕೆಂದರೆ, ಒಂದೋ ತರಗತಿಗಳು ಇರುವುದಿಲ್ಲ. ಇಲ್ಲವೆಂದರೆ ಸಮವಸ್ತ್ರ ಧರಿಸುವ ದಿನ ಕಲರ್ ಡ್ರೆಸ್ ಧರಿಸಿ ಇತರ ಸ್ನೇಹಿತರು ಮಂದಹಾಸ ಬೀರುತ್ತಿರುತ್ತಾರೆ. ಸಮವಸ್ತ್ರ ಧರಿಸಿದಾತ ಆ ದಿನ ಬರ್ತ್‌ಡೇ ಬಾಯ್ ಆಗಿ ಬದಲಾಗಿರುತ್ತಾನೆ. ಇದೇ ರೀತಿ ಹಲವಾರು ಘಟನೆಗಳು ಘಟಿಸುತ್ತಿರುತ್ತವೆ. ಕೆಲವೊಮ್ಮೆ ರಾಜಕೀಯ ವಿದ್ಯಮಾನಗಳ ಬಗ್ಗೆ ನಡೆವ ಚರ್ಚೆ ಅತಿರೇಕಕ್ಕೆ ಹೋಗುತ್ತದೆ. ಉದಯೋನ್ಮುಖ ಕವಿಗಳು ಬರೆಯುವ ಕತೆಗಳಂತೂ ಕಂಗಳಿಂದ ಆಸ್ವಾದಿಸಬೇಕಾದ ಅನಿವಾರ್ಯತೆ ಇರುತ್ತದೆ. ಇದರ ಮಧ್ಯೆಯೇ ಸ್ಟೇಟಸ್‌ಗಳ ಮ್ಯಾಟರ್ ಅಂತೂ ಆ ದೇವರಿಗೆ ಪ್ರೀತಿ. ಏಕಾಂಗಿ, ನೀನಿಲ್ಲದೆ ನಾನಿಲ್ಲ ಮುಂತಾದ ಸ್ಟೇಟಸ್‌ಗಳು ನವ ಪ್ರೇಮಿಗಳ ಆಲಾಪವನ್ನು ಎಲ್ಲರಿಗೂ ಪರಿಚಯಿಸುತ್ತದೆ.
ಇನ್ನು ಫೇಸ್‌ಬುಕ್‌ನಲ್ಲಿ ಹಾಕುವ ಫೋಟೋಗಳಿಗೆ ಲೈಕ್ ಬಂದಾಕ್ಷಣ ಬಾನಾಡಿಯಲ್ಲಿ ಹಾರಾಡುವ ಪಕ್ಷಿಗಳ ರೀತಿಯಲ್ಲಿ ಆಹ್ಲಾದ ಪಡೆಯವ ಗೆಳೆಯರ ಬಳಗವೇ ಇದೆ. ಫೇಸ್‌ಬುಕ್ ವಾಟ್ಸಾಪ್‌ಗ್ಳು ಇಂದು ಅನಿವಾರ್ಯ. ತಾಜಾ ಸುದ್ದಿಗಳಿಗಾಗಿ ಅವುಗಳನ್ನು ಆಶ್ರಯಿಸಬೇಕಾದ ಪ್ರಮೇಯ ಬಂದೊದಗಿದೆ. ಒಂದು ದಿನ ಸಾಮಾಜಿಕ ಜಾಲತಾಣವನ್ನು ನೋಡದೇ ಕಾಲೇಜಿಗೆ ಹೋದನೆಂದರೆ ಏನಾದರೂ ಬದಲಾವಣೆಗಳು ಆಗಿಯೇ ಆಗುತ್ತದೆ. ಅಸೈನ್‌ಮೆಂಟ್ ಯಾಕೆ ಬರೆದಿಲ್ಲವೆಂದೂ ಸರ್ ಕೇಳಿದರೇ “ನಾನು ನಿನ್ನೆ ಕ್ಲಾಸ್‌ಗೆ ಬರಲಿಲ್ಲ’ ಎಂದು ಹೇಳಿ ತಪ್ಪಿಸಿಕೊಳ್ಳುವ ಹಾಗಿಲ್ಲ. ಏಕೆಂದರೆ, ಆ ಕ್ಷಣವೇ ತರಗತಿಯ ನಾಯಕರು ಎದ್ದು ನಿಂತು, “ನಿನ್ನೆ ಸಂಜೆಯೇ ಗ್ರೂಪ್‌ನಲ್ಲಿ ಮೆಸೇಜ್ ಹಾಕಿದ್ದೆ ಸರ್’ ಎಂದು ಹೇಳುತ್ತಾರೆ. ಒಟ್ಟಾರೆ ಆತನ ಪರಿಸ್ಥಿತಿ “ಅತ್ತ ದರಿ ಇತ್ತ ಪುಲಿ’ ಎಂಬಂತಾಗುತ್ತದೆ. ನನ್ನ ಬಳಿ ಹಣವಿಲ್ಲ ಡಾಟಾ ಬ್ಯಾಲೆನ್ಸ್ ಇರಲಿಲ್ಲ ಎಂದು ಹೇಳಿದರೆ “ಕಾಲೇಜಿನಲ್ಲಿ ಸಿಗುವ ವೈಫೈನ್ನು ಯಾವುದಕ್ಕಾಗಿ ಬಳಕೆ ಮಾಡುತ್ತೀರಿ’ ಎಂಬ ಮರು ಪ್ರಶ್ನೆ ಬರುತ್ತದೆ. ಹೀಗೆ ಹೊಸ ಮಾಧ್ಯಮಗಳು ಬದಲಾವಣೆಯ ಶಕೆಯನ್ನು ಆರಂಭಿಸಿ ನಗು ಬೀರುತ್ತಿರುವುದು ಮಾತ್ರ ಸುಳ್ಳಲ್ಲ.
– ಮಿಥುನ್
ಎಸ್‌ಡಿಎಂ ಕಾಲೇಜು, ಉಜಿರೆ