ಜಪ್ತಿ ನಡೆಸಿದಾಗ ಚುನಾವಣಾ ಆಯೋಗ ಹಾಗೂ ಐಟಿ ಇಲಾಖೆಗೆ 150 ಕೋಟಿ ರೂ.ನಷ್ಟು ಅಕ್ರಮ ಪತ್ತೆಯಾಗಿದೆ. ಪತ್ತೆಯಾಗದ ಅಕ್ರಮ ಅದಿನ್ನೆಷ್ಟು ಪ್ರಮಾಣದಲ್ಲಿ ನಡೆದಿರಬಹುದು?
ಈ ಬಾರಿಯ ಚುನಾವಣೆಯಲ್ಲಿ ಭ್ರಷ್ಟಾಚಾರವೇ ಪ್ರಮುಖ ವಿಷಯ. ಮೂರೂ ಪಕ್ಷಗಳು ಪರಸ್ಪರ ಭ್ರಷ್ಟಾಚಾರದ ಆರೋಪ ಮಾಡುತ್ತಿವೆ. ಭ್ರಷ್ಟಾಚಾರದಲ್ಲಿ ಯಾರು ನಂ.1 ಎಂದು ಲೆಕ್ಕ ಮಾಡಲಾಗುತ್ತಿದೆ. ಭ್ರಷ್ಟಾಚಾರ ರಹಿತ ಆಡಳಿತದ ಭರವಸೆ ನೀಡಲಾಗುತ್ತಿದೆ. ವಾಸ್ತವ ಸಂಗತಿಯೆಂದರೆ, ವೇದಿಕೆ ಮೇಲೆ ರಾಜಕಾರಣಿಗಳು ನಿಂತು ಹೇಳುವ ಈ ಮಾತಿಗೂ ಚುನಾವಣಾ ಅಧಿಕಾರಿಗಳು ಜನತೆ ಮುಂದಿಟ್ಟಿರುವ ಲೆಕ್ಕಕ್ಕೂ ತಾಳೆಯೇ ಬರುತ್ತಿಲ್ಲ. ಕರ್ನಾಟಕ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲೇ ಅತ್ಯಧಿಕ ಮೊತ್ತವಾದ 150 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಅಕ್ರಮ ಈ ಬಾರಿ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಚುನಾವಣಾ ಆಯೋಗವಷ್ಟೇ ಚುನಾವಣಾ ಅಕ್ರಮಗಳ ಮೇಲೆ ನಿಗಾ ಇಡುತ್ತದೆ. ಆದರೆ ಈ ಬಾರಿ ಆದಾಯ ತೆರಿಗೆ ಇಲಾಖೆಯೂ ಅಕ್ರಮ ಹಣದ ಹರಿವಿನ ಮೇಲೆ ಕಣ್ಣಿಟ್ಟಿದ್ದು ವಿಶೇಷ.
ಚುನಾವಣೆಯಿಂದ ಚುನಾವಣೆಗೆ ಸುಧಾರಣೆ ಪ್ರಕ್ರಿಯೆ ನಡೆಯುತ್ತಾ ಹೋಗಿದೆ. ಭಾರತೀಯ ಚುನಾವಣೆಗೆ ಹೊಸ ದಿಕ್ಕು ನೀಡಿದ ಮಾಜಿ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ಅವರನ್ನು ನೆನಪಿಸಿ ಕೊಳ್ಳಲೇಬೇಕು. ಚುನಾವಣಾ ಅಕ್ರಮಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಹಲವಾರು ದಿಟ್ಟ ಕ್ರಮಗಳನ್ನು ಶೇಷನ್ ಕೈಗೊಂಡಿದ್ದರು. ನಕಲಿ ಮತದಾನ ತಡೆಗಟ್ಟುವ ನಿಟ್ಟಿನಲ್ಲಿ ಮತದಾರರ ಗುರುತಿನ ಚೀಟಿಯನ್ನು ಜಾರಿಗೆ ತಂದರು. ಪ್ರಚಾರದ ಹೆಸರಲ್ಲಿ ಜನರಿಗೆ ಹಿಂಸೆ ಯಾಗುವುದನ್ನು, ಪರಿಸರಕ್ಕೆ ಮಾರಕ ಆಗುವುದನ್ನು ತಪ್ಪಿಸಲು ಬ್ಯಾನರ್, ಬಂಟಿಂಗ್ಸ್‌ಗೆ ಕಡಿವಾಣ ಹಾಕಿದರು. ರಾತ್ರಿ 10 ಗಂಟೆಯ ನಂತರ ಪ್ರಚಾರಕ್ಕೆ ನಿಷೇಧ ಹೇರಿ ದರು. ನಂತರದ ವರ್ಷಗಳಲ್ಲಿ ವಿದ್ಯು ನ್ಮಾನ ಮತಯಂತ್ರಗಳು ಬಂದವು. ಒಟ್ಟಾರೆ ಮತದಾನ, ಮತ ಎಣಿಕೆ ಪ್ರಕ್ರಿಯೆ ಚುರುಕಾದವು. ಜತೆಗೆ ಮತಗಟ್ಟೆಗಳ ಅಕ್ರಮಗಳಿಗೂ ಕಡಿ ವಾಣ ಬಿತ್ತು. ಇದೀಗ ಮತ ದೃಢೀ ಕರಣಕ್ಕಾಗಿ ವಿವಿಪ್ಯಾಟ್ ಬಂದಿದೆ. ಕಣದಲ್ಲಿರುವ ಅಭ್ಯರ್ಥಿಗಳ ತಿರಸ್ಕಾ ರಕ್ಕೆ ನೋಟಾ ಆಯ್ಕೆಯೂ ಇದೆ. ಇಷ್ಟೆಲ್ಲಾ ಸುಧಾರಣೆ ಪ್ರಕ್ರಿಯೆಗಳ ಬಳಿಕವೂ ಉಳಿದುಕೊಂಡಿರುವ ಕೆಟ್ಟ ಚಾಳಿಯೆಂದರೆ, ಮತದಾರರ ಖರೀದಿ. ಹಣ, ಹೆಂಡ, ಉಡುಗೊರೆಗಳ ಆಮಿಷ ನೀಡಿ ಮತದಾರರನ್ನು ಸೆಳೆದುಕೊಳ್ಳುವ ಅಭ್ಯರ್ಥಿಗಳ ಕರಾಮತ್ತಿಗೆ ಕಡಿವಾಣ ಬೀಳುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಇದು ಹೆಚ್ಚುತ್ತಲೇ ಇದೆ.
ಚುನಾವಣೆ ಹೊತ್ತಲ್ಲಿ ಕಾಂಚಾಣದ ಹರಿವು ತಡೆಯಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ, ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ರಂಗೋಲಿ ಕೆಳಗೆ ನುಸುಳುತ್ತಿವೆ. ಮತದಾರರ ಕೈಗೆ ಹಣ ದಾಟಿಸಲು ಹೊಸ ಹೊಸ ವಿಧಾನವನ್ನು ಅನ್ವೇಷಿಸುತ್ತಿವೆ. ಜನಾಭಿಪ್ರಾಯ ರೂಪಿಸುವ ಪ್ರಜಾತಂತ್ರದ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯೆಂಬ ಈ ಉತ್ಸವದಲ್ಲಿ ಈ ರೀತಿಯಾಗಿ ಮತ ಬಿಕರಿ ನಡೆಯುವುದು ನಿಜಕ್ಕೂ ದುರಂತ. ಜನರಿಗೆ ತಾವೇನು ಮಾಡುತ್ತೇವೆ ಎಂಬ ನೈಜ ಭರವಸೆಗಳ ಮಾತಿಲ್ಲ. ವೇದಿಕೆ ಮೇಲೆ ನಿಂತು ರಾಜಕಾರಣಿಗಳು ಬರೀ ವ್ಯಂಗ್ಯ, ಟೀಕೆಗಳ ಮಾತಿನ ಮಂಟಪ ಕಟ್ಟುತ್ತಾರೆ. ಬಳಿಕ ಗೌಪ್ಯವಾಗಿ ಹಣ ಹಂಚಿಕೆ ನಡೆಸುತ್ತಾರೆ. ಈ ವ್ಯವಸ್ಥೆ ಸುಧಾರಣೆಯಾಗುವುದೆಂತು? ಅಪನಗದೀಕರಣದ ನಂತರವಾದರೂ ಚುನಾವಣಾ ಅಕ್ರಮಗಳಿಗೆ ಕಡಿವಾಣ ಬೀಳಬಹುದೆಂಬ ನಾಗರಿಕರ ನಿರೀಕ್ಷೆ ಹುಸಿಯಾಗಿದೆ. ಎಟಿಎಂಗಳಲ್ಲಿ ಜನರಿಗೆ ದುಡ್ಡು ಸಿಗುತ್ತಿಲ್ಲ. ರಾಜಕಾರಣಿಗಳ, ಬೆಂಬಲಿಗರ ಬಳಿ ಕೋಟಿಗಟ್ಟಲೆ ನೋಟಿನ ಕಂತೆ ಸಿಗುತ್ತಿದೆ. ಜಪ್ತಿ ನಡೆಸಿದ ವೇಳೆ ಚುನಾವಣಾ ಆಯೋಗ ಹಾಗೂ ಐಟಿ ಇಲಾಖೆಗೆ 150 ಕೋಟಿ ರೂ.ನಷ್ಟು ಅಕ್ರಮ ಪತ್ತೆಯಾಗಿದೆ. ಪತ್ತೆಯಾಗದ ಅಕ್ರಮ ಅದಿನ್ನೆಷ್ಟು ಪ್ರಮಾಣದಲ್ಲಿ ನಡೆದಿರಬಹುದು? ವೇದಿಕೆ ಮೇಲೆ ಸ್ವತ್ಛ ಆಡಳಿತದ ಬಗ್ಗೆ ಮಾತನಾಡುವ ನಾಯಕರು ಈ ಅಕ್ರಮಗಳ ಬಗ್ಗೆ ಉತ್ತರಿಸಬಲ್ಲರಾ? ಜನರೂ ಈ ಭ್ರಷ್ಟಾಚಾರದಿಂದ ರೋಸಿ ಹೋಗಿದ್ದಾರೆ. ನಾವು ನಡೆಸಿರುವ ಜನಾಭಿಪ್ರಾಯ ಸಂಗ್ರಹಣೆಯಲ್ಲೂ ಅಭಿವೃದ್ಧಿಯ ಅಜೆಂಡಾದೊಂದಿಗೆ ಪಕ್ಷಗಳು ಚುನಾವಣೆ ಎದುರಿಸಬೇಕೇ ಹೊರತು, ಮತದಾರರ ಖರೀದಿಸುವ ಶಕ್ತಿಯಿಂದಲ್ಲ ಎಂಬ ಸಂಗತಿ ವ್ಯಕ್ತವಾಗಿದೆ. ಈ ಜನಧ್ವನಿಯನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳುವುದೊಳಿತು.