ಬೆಂಗಳೂರು: ಅಂದುಕೊಂಡಂತೆ ನಡೆದಿದ್ದರೆ ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣ ಇತ್ತೀಚೆಗೆ ಒಡಿಶಾದ ಭುವನೇಶ್ವರದಲ್ಲಿ ಮುಕ್ತಾಯಗೊಂಡಿದ್ದ ಪ್ರತಿಷ್ಠಿತ ಏಶ್ಯನ್ ಆ್ಯತ್ಲೆಟಿಕ್ಸ್ ಕೂಟಕ್ಕೆ ಆತಿಥ್ಯ ವಹಿಸಬೇಕಿತ್ತು. ಭಾರತೀಯ ಆ್ಯತ್ಲೆಟಿಕ್ಸ್ ಒಕ್ಕೂಟ ಮೊದಲ ಸಲ ಇಂತಹದೊಂದು ಪ್ರಸ್ತಾವನೆಯನ್ನು ರಾಜ್ಯ ಆ್ಯತ್ಲೆಟಿಕ್ಸ್ ಸಂಸ್ಥೆ ಮುಂದೆ ಇಟ್ಟಿತ್ತು. ಆದರೆ ಬೆಂಗಳೂರಿನ ಕ್ರೀಡಾಂಗಣದಲ್ಲಿ ಫುಟ್‌ಬಾಲ್ ಹಾವಳಿಯಿಂದಾಗಿ ಕೂಟ ನಡೆಸಲು ಸಾಧ್ಯವೇ ಇಲ್ಲ ಎನ್ನುವುದನ್ನು ಒಕ್ಕೂಟಕ್ಕೆ ಮನವಿ ಮಾಡಿಕೊಟ್ಟ ರಾಜ್ಯ ಆ್ಯತ್ಲೆಟಿಕ್ಸ್ ಸಂಸ್ಥೆ ಆತಿಥ್ಯದಿಂದ ಹಿಂದೆ ಸರಿದಿತ್ತು. ಸ್ವತಃ ಈ ವಿಷಯವನ್ನು “ಉದಯವಾಣಿ’ಗೆ ರಾಜ್ಯ ಆ್ಯತ್ಲೆಟಿಕ್ಸ್ ಸಂಸ್ಥೆ ಕಾರ್ಯದರ್ಶಿ ಚಂದ್ರಶೇಖರ್ ರೈ ತಿಳಿಸಿದ್ದಾರೆ.
8 ತಿಂಗಳ ಬಳಿಕ ಬಯಲಾದ ಸತ್ಯ
ಕಂಠೀರವ ಕ್ರೀಡಾಂಗಣ ರಾಜ್ಯದ ಆ್ಯತ್ಲೀಟ್‌ಗಳ ನೆಚ್ಚಿನ ತಾಣ. ಕೆನ್ನತ್ ಪೋವೆಲ್, ಅಶ್ವಿನಿ ನಾಚಪ್ಪ, ಪ್ರಮೀಳಾ ಅಯ್ಯಪ್ಪ, ಎಸ್.ಡಿ. ಈಶನ್, ಉದಯ್ ಕೆ. ಪ್ರಭು ಸೇರಿದಂತೆ ಸಾವಿರಾರು ಆ್ಯತ್ಲೀಟ್‌ಗಳನ್ನು ದೇಶಕ್ಕೆ ಪರಿಚಯಿಸಿರುವ ಪುಣ್ಯ ಸ್ಥಳ. ಇಂಥ ಕ್ರೀಡಾಂಗಣ ಈಗ ಆ್ಯತ್ಲೀಟ್‌ಗಳ ಅಭ್ಯಾಸಕ್ಕೆ ಸಿಗುತ್ತಿಲ್ಲ. ಜಿಂದಾಲ್‌ನ ಕ್ಲಬ್ ತಂಡವೊಂದು ಕ್ರೀಡಾಂಗಣದಲ್ಲಿ ಫುಟ್‌ಬಾಲ್ ಕೂಟವನ್ನು ಆಯೋಜಿಸುತ್ತಿರುವುದು ಇಷ್ಟಕ್ಕೆಲ್ಲ ಕಾರಣ. ಸದ್ಯ ಕ್ರೀಡಾಪಟುಗಳ, ಕೋಚ್‌ಗಳ ಭಾರೀ ವಿರೋಧದ ನಡುವೆಯೂ ಫುಟ್‌ಬಾಲ್ ಅಭ್ಯಾಸ ಮುಂದುವರಿದಿದೆ. ಇದು ಕ್ರೀಡಾಪಟುಗಳನ್ನು ಕೆರಳುವಂತೆ ಮಾಡಿದೆ. ಈ ಬಗ್ಗೆ “ಉದಯವಾಣಿ’ ವರದಿ ಪ್ರಕಟಿಸಿತ್ತು.
ಇದೀಗ ಸಮಸ್ಯೆ ಮತ್ತಷ್ಟು ಮಿತಿ ಮೀರಿ ಹೋಗುತ್ತಿದೆ. ಇಂಥ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ್ ರೈ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಭುವನೇಶ್ವರದಲ್ಲಿ ನಡೆಯಬೇಕಿದ್ದ ಪ್ರತಿಷ್ಠಿತ ಕೂಟಕ್ಕೆ ನಾವು ಆತಿಥ್ಯವಹಿಸಿಕೊಳ್ಳಬೇಕಿತ್ತು. ಕಳೆದ 8 ತಿಂಗಳ ಹಿಂದೆ ಭಾರತೀಯ ಆ್ಯತ್ಲೆಟಿಕ್ಸ್ ಒಕ್ಕೂಟ ನೀವು ಆತಿಥ್ಯ ನೀಡಿ ಎಂದು ನಮಗೆ ಆಹ್ವಾನ ನೀಡಿದ್ದರು. ಒಂದು ಕಡೆ ಕಂಠೀರವದ ಟ್ರ್ಯಾಕ್ ಕಿತ್ತು ಹೋಗಿದೆ. ಅದಲ್ಲದೆ ಮುಖ್ಯವಾಗಿ ಫುಟ್‌ಬಾಲ್ ಸಂಘಟಕರ ಹಾವಳಿ. ಜತೆಗೆ ಆಟಗಾರರ ಕೊಠಡಿ ಬೇರೆ ಸರಿ ಇಲ್ಲ, ಜಿಮ್, ಶೌಚಾಲಯ ಗಬ್ಬು ನಾರುತ್ತಿದೆ. ಇಂತಹ ಸ್ಥಿತಿಯಲ್ಲಿ ಆತಿಥ್ಯವಹಿಸುವುದಾದರೂ ಹೇಗೆ? ಇದನ್ನೆಲ್ಲ ಸರಿಪಡಿಸಿಕೊಡಲು ಯುವ ಸಬಲೀಕರಣ ಕ್ರೀಡಾ ಇಲಾಖೆಗೆ ಮನವಿ ಮಾಡಿ ಆಗಿದೆ. ಇದನ್ನು ಇನ್ನೂ ಸರಿಪಡಿಸಿಲ್ಲ. ಇದೆಲ್ಲದರಿಂದಾಗಿ ಬೇರೆ ದಾರಿ ಕಾಣದೆ ನಾವು ಆತಿಥ್ಯದಿಂದ ಹಿಂದೆ ಸರಿಯಬೇಕಾಯಿತು ಎಂದು ರೈ ಬೇಸರ ವ್ಯಕ್ತಪಡಿಸಿದರು. ಏಶ್ಯನ್ ಕೂಟದಲ್ಲಿ ಒಟ್ಟಾರೆ 41 ರಾಷ್ಟ್ರ 560 ಆ್ಯತ್ಲೀಟ್‌ಗಳು ಭಾಗವಹಿಸಿದ್ದರು. ಭಾರತ 28 ಪದಕ ಗೆದ್ದು ಸಮಗ್ರ ಪ್ರಶಸ್ತಿ ಬಾಚಿತ್ತು.
ಫೀಲ್ಡ್ ಆ್ಯತ್ಲೀಟ್‌ಗಳಿಗೆ ಪ್ರವೇಶವಿಲ್ಲ!
ಕಂಠೀರವ ಕ್ರೀಡಾಂಗಣದ ಫೀಲ್ಡ್ ಭಾಗದಲ್ಲಿರುವ ಹುಲ್ಲಿಗೆ ಮರಳು ಹಾಕ ಲಾಗುತ್ತಿದೆ. ಇದರಿಂದಾಗಿ ಫೀಲ್ಡ್ ಆ್ಯತ್ಲೀಟ್‌ಗಳಾದ ಜಾವೆಲಿನ್, ಹೈಜಂಪ್, ಶಾಟ್‌ಪುಟ್ ಸ್ಪರ್ಧಿಗಳು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ. ಇವರಿಗೆ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ರೈ ಆರೋಪಿಸಿದ್ದಾರೆ. ಜಿಂದಾಲ್ ಹಾಗೂ ಕ್ರೀಡಾ ಇಲಾಖೆ ನಡುವಿನ ಒಪ್ಪಂದ ಅವಧಿ ಮುಗಿದಿದೆ. ಜಿಂದಾಲ್ ಮತ್ತೆ ಕಂಠೀರವದಲ್ಲಿ ಕಾಮಗಾರಿ ನಡೆಸುತ್ತಿರುವುದನ್ನು ನೋಡಿದರೆ ಮತ್ತೆ ಇಲಾಖೆ ಅನುಮತಿ ನೀಡಿದೆಯೆ? ಎನ್ನುವ ಅನುಮಾನ ಹೆಚ್ಚಾಗಿದೆ.
ರಾಜ್ಯ ಹಿರಿಯರ ಆ್ಯತ್ಲೆಟಿಕ್ಸ್ ಕೂಟ ಮೂಡಬಿದಿರೆಗೆ ಅಂತಾರಾಷ್ಟ್ರೀಯ ಕೂಟವೊಂದರ ಆತಿಥ್ಯ ಪಡೆಯುವ ಅವಕಾಶದಲ್ಲಿ ಬೆಂಗಳೂರು ಈಗಾಗಲೇ ವಂಚಿತವಾಗಿದೆ. ಜತೆಗೆ ರಾಜ್ಯ ಹಿರಿಯರ ಕಿರಿಯರ ಆ್ಯತ್ಲೆಟಿಕ್ಸ್ ಕೂಟವೂ ಬೆಂಗಳೂರಿನಿಂದ ತಪ್ಪಿಸಿಕೊಂಡಿದೆ. ಸೆ. 3ರಿಂದ 5ರ ವರೆಗೆ ನಡೆಯಲಿರುವ ಕೂಟವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಚಂದ್ರಶೇಖರ ರೈ ತಿಳಿಸಿದ್ದಾರೆ.
ಹೇಮಂತ್ ಸಂಪಾಜೆ