Advertisement
ನಮ್ಮೆಲ್ಲರಲ್ಲೂ ಇವತ್ತಿಗೂ ಕುತೂಹಲ ಮೂಡಿಸುವುದು ಶಾಸ್ತ್ರ ಕೇಳುವ ಪರಿಪಾಠ. ಮದುವೆ, ಉಪನಯನ, ಹೊಸ ಕಛೇರಿ, ಹೊಸ ವ್ಯಾಪಾರ, ಹೊಸ ಮನೆ, ಏನೇ ಹೊಸ ಕೆಲಸ ಪ್ರಾರಂಭಿಸುವುದಕ್ಕೆ ಮುಂಚೆ ನಮ್ಮ ಗ್ರಹಗತಿಗಳು ಸರಿಯಾಗಿ ಫಲ ಕೊಡುತ್ತವೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಮುಂದಾಗುತ್ತೇವೆ. ಇತ್ತೀಚೆಗಂತೂ ಇದು ದೊಡ್ಡ ವ್ಯಾಪಾರವಾಗಿದೆ. ಹೆಚ್ಚು ಜನ ಶಾಸ್ತ್ರ ಹೇಳುವವರು ಹುಟ್ಟಿಕೊಂಡಿದ್ದಾರೆ. ಶಾಸ್ತ್ರ ಹೇಳುವುದು ಒಂದು ಕಲೆ ಎಂದು ತಿಳಿದಿರುವ ಇವರು, ಮುಖ ನೊಡಿ, ಜಾತಕ ನೋಡಿ, ಸಂಖ್ಯೆಗಳನ್ನು ಕೂಡಿಸಿ ಭವಿಷ್ಯ ಹೇಳುತ್ತಾರೆ. ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿ ಇರುವ ಭವಿಷ್ಯ ಹೇಳುವ ಕ್ರಿಯೆಗೆ ತನ್ನದೇ ಆದ ವಿಧಿ ವಿಧಾನಗಳಿವೆ.
Related Articles
Advertisement
ಹೇಗೆ ಜಗತ್ತಿನ ನಿಯಮಗಳು ತಮ್ಮ ಪಾಡಿಗೆ ತಾವು ಚಲಿಸುತ್ತವೋ ಹಾಗೆ ಗ್ರಹಗಳೂ ಕೂಡ ತಮ್ಮ ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತವೆ. ನಾವು ಸತ್ಯ-ಧರ್ಮದಿಂದಿದ್ದರೆ ನಮ್ಮ ಪಾಪ ಕರ್ಮಗಳು ತಾವಾಗೇ ಕಡಿಮೆಯಾಗುತ್ತವೆ. ಸುಳ್ಳು ಹೇಳಿಕೊಂಡು ಅಧರ್ಮ ಕಾರ್ಯಗಳನ್ನು ಮಾಡಿದರೆ ನಮ್ಮ ಪಾಪದ ಕೊಡ ತುಂಬುತ್ತಾ ಹೋಗುತ್ತದೆ. ನವಗ್ರಹಗಳಿಗೇನೂ ನಮ್ಮ ಮೇಲೆ ದ್ವೇಷ ಇಲ್ಲ, ಬೇಕು ಬೇಕು ಅಂತ ನಮ್ಮನ್ನೇ ಹುಡುಕಿ ಕಷ್ಟ ಕೊಡುವುದಕ್ಕೂ ಅವು ಬರುವುದಿಲ್ಲ. ನಮ್ಮ ಹಿಂದಿನ ಜನ್ಮಗಳ ಪಾಪ-ಪುಣ್ಯಗಳ ಖಾತೆ ಅವುಗಳ ಬಳಿ ಇರುತ್ತದೆ. ಅದರ ಪ್ರಕಾರ ನಮಗೆ ಸುಖ-ದುಃಖವನ್ನು ಹಂಚುತ್ತವೆ.
ಭಗವದ್ಗೀತೆಯಲ್ಲೂ ಸಹ ಕೃಷ್ಣ ಶಾಸ್ತ್ರದ ಬಗ್ಗೆ ವಿವರಿಸಿದ್ದಾನೆ. ಹದಿನೇಳನೇ ಅಧ್ಯಾಯದಲ್ಲಿ, “ವೇದ, ಯಜ್ಞ, ಶಾಸ್ತ್ರ ಈ ಮೂರು ವಿಧಿ ವಿಧಾನಗಳು ಪರಬ್ರಹ್ಮನ ವಾಚನದಿಂದಲೇ ಹೊರ ಬಂದಿದ್ದು, ಭೂತ ಭವಿಷ್ಯ ವರ್ತಮಾನ ಎಲ್ಲವೂ ನಾನೇ ಆಗಿರುವುದಿಂದ ಶಾಸ್ತ್ರವನ್ನು ಅನುಸರಿಸುವವನಿಗೂ ನನ್ನನ್ನು ಅರಿಯುವ ಯೋಗ್ಯತೆ ಇರಬೇಕು’ ಎಂದಿದ್ದಾನೆ.
ಶಾಸ್ತ್ರವನ್ನರಿಯದೆ, ಕ್ಷಣಿಕ ಸಂತೋಷಕ್ಕಾಗಿ ತಪ್ಪು ವಿಧಾನಗಳನ್ನು ಅನುಸರಿಸುವುದಕ್ಕಿಂತ ಸುಮ್ಮನಿರುವುದು ಲೇಸು. ಕೆಲವರು ವಾಸ್ತುವಿನ ಹುಚ್ಚು ಹಿಡಿಸಿಕೊಂಡಿದ್ದಾರೆ. ವಾಸ್ತುಶಾಸ್ತ್ರ ದೈವಿಕವಾದದ್ದು, ಆದರೆ ಅದನ್ನು ನಮಗೆ ತಿಳಿಸುತ್ತಿರುವವರಿಗೇ ಅದು ಸರಿಯಾಗಿ ತಿಳಿಯದಿದ್ದರೆ?! ನನಗೆ ತಿಳಿದಿರುವ ಎಷ್ಟೋ ಜನ ತಮ್ಮ ಮನೆಯ ಗೋಡೆಗಳನ್ನು 3-4 ಸಲ ಒಡೆಸಿ ಬದಲಾ ಯಿಸಿದ್ದಾರೆ. ಒಬ್ಬ ವಾಸ್ತು ಶಾಸ್ತ್ರಜ್ಞ ಒಂದು ಹೇಳಿದರೆ, ಮತ್ತೂಬ್ಬರು ಇನ್ನೊಂದನ್ನು ಹೇಳಿ ಹೆದರಿಸಿ, ಅಯ್ಯೋ ಅದು ಸರಿಯಾಗಿಲ್ಲ, ನಿಮಗೆ ಕೆಡುಕಾಗುತ್ತೆ ಎಂದು ಮತ್ತೆ ಬದಲಾಯಿಸುತ್ತಾರೆ.
ಮನೆಯ ಗೋಡೆ ಬಣ್ಣಗಳನ್ನು ಪ್ರತಿ 3 ತಿಂಗಳಿಗೆ ಬದಲಾಯಿಸುವವರಿದ್ದಾರೆ. ಆದರೆ ಅ ಮನೆಯಲ್ಲಿರುವ ವ್ಯಕ್ತಿಯ ಮನಸ್ಥಿತಿ ಮಾತ್ರ ಬದಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಕಾರುಗಳಿಗೆ ವಾಸ್ತು ಪ್ರಕಾರ ಬಾಗಿಲು ಬದಲಾಯಿಸಬೇಕು ಎಂದು ಯಾರಾದರೂ ಹೇಳಿದರೆ ಏನು ಮಾಡುವುದು? ನಮ್ಮ ನಮ್ಮ ಗ್ರಹಚಾರಗಳ ಪ್ರಕಾರ ಕಾರಿನ ಬಾಗಿಲು ಕೆಳಗಡೆ ಇರಿಸಿ ಎಂದರೆ? ಅಥವಾ ಡಿಕ್ಕಿಯಿಂದ ಒಳಗೆ ಏರಿ ಎಂದರೆ?!ಸದ್ಯ ಇವರೆಲ್ಲ ಬರೀ ಬಟ್ಟೆಯ ಬಣ್ಣಗಳ ಬಗ್ಗೆ ಹೇಳಿದ್ದಾರೆ. ಸೋಮವಾರ ಈ ಬಣ್ಣ, ಮಂಗಳವಾರ ಆ ಬಣ್ಣ ಅಂತ. ವಾಸ್ತು ಪ್ರಕಾರ ಪ್ಯಾಂಟನ್ನು ತಲೆ ಮೇಲಿಂದ ಹಾಕಿಕೊಳ್ಳಬೇಕು ಅಂದಿಲ್ಲ! ಎಲ್ಲಾ ದೈವಿಕ ವಿಧಿ ವಿಧಾನಗಳನ್ನು ಪರಮಾತ್ಮನೇ ಶಾಸ್ತ್ರದ ಮೂಲಕ ನಮಗೆ ತಿಳಿಸಿರುವುದು. ಅವುಗಳಲ್ಲಿ ಸರಿ ತಪ್ಪುಗಳನ್ನು ಅರಿತು ಅಳವಡಿಸಿಕೊಳ್ಳುವ ಬುದ್ಧಿಯನ್ನೂ ಅವನೇ ಕೊಟ್ಟಿದ್ದಾನೆ. ಇವೆಲ್ಲವನ್ನು ಅನುಸರಿಸದಿದ್ದರೂ ಪ್ರೀತಿಯಿಂದ ನನ್ನನ್ನು ನೆನೆದರೆ ನಾನೇ ನಿನ್ನ ಜೀವನವನ್ನು ಸಂತೋಷಮಯವನ್ನಾಗಿ ಮಾಡುತ್ತೇನೆ ಎಂದಿದ್ದಾನೆ.