ಸ್ಪರ್ಧೆ ಮುಗಿದು, ಸಮಾರೋಪ ಸಮಾರಂಭದಲ್ಲಿ ವಿಜೇತರೆಂದು ನಮ್ಮ ಹೆಸರು ಕೂಗಿದಾಗ ಹೊಸ ರಾಜನಾಗಿ ಪಟ್ಟಾಭಿಷೇಕ ಮಾಡಿದಷ್ಟು ಖುಷಿ ಆಗಿತ್ತು. ಮೇಷ್ಟ್ರು ಹತ್ತಿರ ಬಂದು ಶಹಬ್ಟಾಸ್‌ಗಿರಿ ನೀಡಿ, “ಬೆಳಗ್ಗೆ ಹೇಳಿದ ಮಾತಿಗೆ ಬೇಜಾರು ಮಾಡ್ಕೋಬೇಡ’ ಎಂದರು.
ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ನನ್ನೂರು ಸಕಲೇಶಪುರದಲ್ಲಿ ಡಿಸೆಂಬರ್- ಜನವರಿ ಬಂತೆಂದರೆ ಸಾಕು: ಮೈ ಕೊರೆಯುವ ಚಳಿ ಶುರುವಾಗುತ್ತದೆ. ಮುಂಜಾನೆ ಮನೆಯ ಹೊರಗಡೆ ಮಂಜಿನ ಇಬ್ಬನಿ ಬೀಳುತ್ತಿದ್ದರೆ, ಮೈತುಂಬಾ ಕಂಬಳಿ ಹೊದ್ದು ಮಲಗುವುದಿದೆಯಲ್ಲ… ಅಬ್ಟಾ, ಸ್ವರ್ಗ ಸುಖ ಅಂದರೆ ಅದೇ ಇರಬೇಕು.
ನಾನು 9ನೇ ತರಗತಿಯಲ್ಲಿದ್ದಾಗ, ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿಜ್ಞಾನ ಮೇಳವನ್ನು ಆಯೋಜಿಸಿತ್ತು. ಅದಕ್ಕಾಗಿ ಶಾಲೆಯಲ್ಲಿ ಸ್ಪರ್ಧೆ ಆಯೋಜಿಸಿದ್ದರು. ಈ ಸ್ಪರ್ಧೆಯಲ್ಲಿ ಆಯ್ಕೆಯಾದವರನ್ನು ಮುಂದಿನ ಹಂತದ ಸ್ಪರ್ಧೆಗಳಿಗೆ ಕಳುಹಿಸುತ್ತಿದ್ದರು. ಆಗ ನಾನು ಮತ್ತು ನನ್ನ ಸ್ನೇಹಿತ ಸೇರಿ, ಏನಾದರೊಂದು ವಿಜ್ಞಾನ ಮಾದರಿಯನ್ನು ಮಾಡಲೇಬೇಕು ಎಂದು ತೀರ್ಮಾನಿಸಿದೆವು. ಏನು ಮಾಡುವುದು ಅಂತ ತುಂಬಾ ತಲೆ ಕೆಡಿಸಿಕೊಂಡಾಗ ನಮಗೆ ಹೊಳೆದಿದ್ದು, “ತ್ಯಾಜ್ಯ ವಸ್ತುಗಳಿಂದ ಗೊಬ್ಬರ ತಯಾರಿಕೆಯ ಮಾದರಿ’ಯನ್ನು ಸಿದ್ಧಪಡಿಸುವ ಐಡಿಯಾ. ಅಂದುಕೊಂಡು ಬಿಟ್ಟರೆ ಕೆಲಸ ಆಗುತ್ತದೆಯೇ? ಮಾದರಿ ತಯಾರಿಕೆಗೆ ಅಗತ್ಯವಿರುವ ವಸ್ತುಗಳನ್ನು ಸಂಗ್ರಹಿಸಲು ನಾವಿಬ್ಬರೂ ಸಜ್ಜಾದೆವು.
ಸರ್ಕಾರ ಕೊಟ್ಟಿರುವ ಸೈಕಲ್ ಇರಬೇಕಾದರೆ ಚಿಂತೆ ಯಾಕೆ? ಶುರುವಾಯಿತು, ನಮ್ಮ ಪಯಣ. ಎಲ್ಲಿಗೆ? 3ಕಿ.ಮೀ. ದೂರದ ಮಾಗಲು ಎಂಬ ಸ್ಥಳಕ್ಕೆ. ಅಲ್ಲಿ ಒಂದು ಸಾವಯವ ಗೊಬ್ಬರ ತಯಾರಿಕೆಯ ಕಾರ್ಖಾನೆ ಇದೆ. ಅಲ್ಲಿಯ ಮುಖ್ಯಸ್ಥರನ್ನು ಭೇಟಿ ಮಾಡಿ, ಸಂಬಂಧಪಟ್ಟ ಮಾಹಿತಿ ಪಡೆದುಕೊಂಡೆವು. ಅಲ್ಲಿ ದೊರೆತ ಮಾಹಿತಿ ಪ್ರಕಾರ ಹೊಸ ಹುಮ್ಮಸ್ಸಿನಿಂದ ಕೋಳಿ ಕಸ, ಕುರಿ ಹಿಪ್ಪೆ, ಸಗಣಿ, ಎರೆಹುಳು ಮತ್ತು ಹಸಿರು ಎಲೆಗಳನ್ನು ಸಂಗ್ರಹಿಸಿದೆವು. ಅವುಗಳನ್ನು ಉಪಯೋಗಿಸಿಕೊಂಡು, ಗೊಬ್ಬರ ತಯಾರಿಕೆಯ ಮಾದರಿಯನ್ನು ರಚಿಸಿದೆವು. ಅಷ್ಟೆಲ್ಲಾ ಪರಿಶ್ರಮಪಟ್ಟ ಫಲವಾಗಿ ಆ ಸ್ಪರ್ಧೆಯಲ್ಲಿ ನಮ್ಮ ಮಾದರಿ ಆಯ್ಕೆಯಾಯಿತು.
ವಿಜ್ಞಾನ ಮೇಳ ನಡೆಯುವ ದಿನ ಬಂದೇ ಬಿಟ್ಟಿತು. ಚನ್ನರಾಯಪಟ್ಟಣದಲ್ಲಿ ಸ್ಪರ್ಧೆ ಆಯೋಜಿಸಿದ್ದರಿಂದ, ಬೆಳಗ್ಗೆ 6 ಗಂಟೆಯ ಹೊತ್ತಿಗೆ ನಾವಿಬ್ಬರೂ ಹೊರಡಬೇಕಿತ್ತು. ಆದರೆ, ಆ ದಿನ ನನಗೆ ಬೇಗ ಏಳಲು ಸಾಧ್ಯವಾಗಲೇ ಇಲ್ಲ. ಚಳಿ, ಚಳಿ ಎಂದು ಮುದುರಿ ಮಲಗಿದ್ದವನು ಏಳುವ ಹೊತ್ತಿಗೆ ಲೇಟಾಗಿಬಿಟ್ಟಿತ್ತು. ಗಡಿಬಿಡಿಯಲ್ಲಿ ತಯಾರಾಗಿ, “ಪರ್ವಾಗಿಲ್ಲ, ಬೇರೆ ಬಸ್ಸು ಇದೆಯಲ್ಲ’ ಎಂದು ಸಮಾಧಾನ ಮಾಡಿಕೊಂಡು, ಚಳಿಯನ್ನು ಶಪಿಸುತ್ತಾ ಬಸ್‌ಸ್ಟಾಂಡ್‌ಗೆ ನಡೆದೆ. ಆಗಲೇ ನನ್ನ ಸ್ನೇಹಿತ ಮತ್ತು ಮೇಷ್ಟ್ರು ಬಂದಿದ್ದರು. ಮೇಷ್ಟ್ರು ಸಿಟ್ಟಿನಿಂದ “ಸೋಮಾರಿ, ಈಗ್ಲಾ ಬರೋದು? ಇಷ್ಟೊತ್ತು ಮೇಕಪ್ ಮಾಡ್ಕೊàತಾ ಇದ್ಯಾ? ನಾವೇನು ಮದುವೆಗೆ ಹೋಗ್ತಿರೋದಾ?’ ಎಂದು ಬೈದರು. ಅಷ್ಟು ಮಾತ್ರ ಆಗಿದ್ದರೆ ಬೇಜಾರಾಗುತ್ತಿರಲಿಲ್ಲ, ಬಸ್‌ನಲ್ಲಿ ಕುಳಿತಾಗ ಪಕ್ಕದಲ್ಲಿದ್ದ ಹೆಂಗಸು ನಮ್ಮ ಬ್ಯಾಗಿನಿಂದ ಬರುತ್ತಿದ್ದ ತ್ಯಾಜ್ಯ ವಸ್ತುಗಳ ವಾಸನೆ ತಡೆಯಲಾರದೆ, ಎದ್ದು ಬೇರೆಡೆಗೆ ಹೋದಾಗ ತುಂಬಾ ಅವಮಾನವಾಯಿತು. ಈ ಹಾಳಾದ ಚಳಿಯಿಂದ ಏನೆಲ್ಲಾ ಅವಾಂತರ ಎಂದು ಹಿಡಿಶಾಪ ಹಾಕಿದೆ. ಹೇಗಾದ್ರೂ ಮಾಡಿ ಪ್ರಶಸ್ತಿ ಗೆಲ್ಲಲೇಬೇಕು ಎಂದು ಮನಸ್ಸಿನಲ್ಲೇ ನಿಶ್ಚಯಿಸಿದೆ. ಸ್ಪರ್ಧೆ ಮುಗಿದು, ಸಮಾರೋಪ ಸಮಾರಂಭದಲ್ಲಿ ವಿಜೇತರೆಂದು ನಮ್ಮ ಹೆಸರು ಕೂಗಿದಾಗ ಹೊಸ ರಾಜನಾಗಿ ಪಟ್ಟಾಭಿಷೇಕ ಮಾಡಿದಷ್ಟು ಖುಷಿ ಆಗಿತ್ತು. ಮೇಷ್ಟ್ರು ಹತ್ತಿರ ಬಂದು ಶಹಬ್ಟಾಸ್‌ಗಿರಿ ನೀಡಿ, “ಬೆಳಗ್ಗೆ ಹೇಳಿದ ಮಾತಿಗೆ ಬೇಜಾರು ಮಾಡ್ಕೊàಬೇಡ’ ಎಂದರು. ಮುಗುಳ್ನಗೆಯ ಉತ್ತರ ನೀಡಿ ಸುಮ್ಮನಾದೆ.
ಪದವಿ ವ್ಯಾಸಂಗಕ್ಕಾಗಿ ಬೆಂಗಳೂರಿನಲ್ಲಿ ನೆಲೆಸಿರುವ ನನಗೆ, ಚಳಿಗಾಲ ಬಂದಾಗಲೆಲ್ಲ ಮನಸ್ಸಿಗೆ ಏನೋ ಒಂಥರಾ ಖುಷಿ. ಅಂದಿನ ಸಮಾರಂಭದಲ್ಲಿ ರಾಜಠೀವಿಯಿಂದ ಪ್ರಶಸ್ತಿ ಸ್ವೀಕರಿಸಿದ ನೆನಪು ಒಂದೆಡೆಯಾದರೆ, ಬಸ್ಸಿನಲ್ಲಿ ನಡೆದ ಘಟನೆ ನಗು ತರಿಸುತ್ತದೆ.
-ಮೊಹಮ್ಮದ್ ರಫೀಕ್, ಹಾಸನ