Advertisement

ಈ ವರ್ಷವಾದರೂ ನಡೆಯುವುದೇ ನುಡಿಹಬ್ಬ?

04:22 PM Jul 05, 2018 | Team Udayavani |

ದಾವಣಗೆರೆ: ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್‌ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಹಸಿರು ನಿಶಾನೆ… ತೋರಲಿದೆಯೇ ಎಂಬ ಕುತೂಹಲದ ಪ್ರಶ್ನೆ ಕನ್ನಡಿಗರನ್ನು ಕಾಡುತ್ತಿದೆ.

Advertisement

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 2017ರ ಮಾ. 16 ರಂದು ಮಂಡಿಸಿದ 2018-19ನೇ ಸಾಲಿನ ಬಜೆಟ್‌ನಲ್ಲಿ ದಾವಣಗೆರೆಯಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಘೋಷಣೆಯ ಜೊತೆಗೆ 20 ಕೋಟಿ ಅನುದಾನ ನಿಗದಿಪಡಿಸಿದ್ದರು. 

ದಾವಣಗೆರೆಯೊಂದಿಗೆ ಬಳ್ಳಾರಿಯಲ್ಲೂ ಮೂರನೇ ವಿಶ್ವ ಕನ್ನಡ ಸಮ್ಮೇಳನ ನಡೆಸಬೇಕು ಎಂಬ ಒತ್ತಾಯವೂ ಇತ್ತು. ಬಳ್ಳಾರಿಯಲ್ಲಿ ವಿಶ್ವ ವಿಖ್ಯಾತ ಹಂಪಿ ಉತ್ಸವದ ಜೊತೆಗೆ ಕೆಲವಾರು ಸಾಂಸ್ಕೃತಿಕ ಉತ್ಸವಗಳು ನಿರಂತರವಾಗಿ ನಡೆಯುವ ಹಿನ್ನೆಲೆಯಲ್ಲಿ ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಮಹತ್ವದ ತೀರ್ಮಾನ ಕೈಗೊಳ್ಳಲಾಗಿತ್ತು.
 
ದಾವಣಗೆರೆಯಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನ ಪಕ್ಕಾ ಆಗುತ್ತಿದ್ದಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ನೇತೃತ್ವದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಹಿರಿಯ ಐಎಎಸ್‌ ಅಧಿಕಾರಿ, ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌. ಲಕ್ಷ್ಮಿನಾರಾಯಣ ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಸಮ್ಮೇಳನದ ಯಶಸ್ಸಿಗೆ ಸ್ವಾಗತ, ವೇದಿಕೆ, ಮೆರವಣಿಗೆ, ವಿಚಾರ ಸಂಕಿರಣ, ವಸತಿ… ಹೀಗೆ 15 ಸಮಿತಿಗಳ ರಚನೆಯೂ ಆಗಿತ್ತು.
 
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಕಾರ್ಯದರ್ಶಿ ಬಾವಿಕಟ್ಟಿ ಅವರ ನೇತೃತ್ವದ ತಂಡ ದಾವಣಗೆರೆಗೆ ಭೇಟಿ ನೀಡಿ, ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನ, ಬಾಪೂಜಿ ಎಂಬಿಎ ಮೈದಾನ, ಮೋತಿ ವೀರಪ್ಪ ಕಾಲೇಜು ಮೈದಾನ ಒಳಗೊಂಡಂತೆ ಅನೇಕ ಕಡೆ ಸ್ಥಳ ಪರಿಶೀಲನೆ ನಡೆಸಿತ್ತು. ಏಕ ಕಾಲದಲ್ಲಿ 15 ಕಡೆ ವೇದಿಕೆ ಕಾರ್ಯಕ್ರಮ ನಡೆಸಲು ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹರಿಹರದಲ್ಲೂ ಕೆಲ ಕಡೆ ಸ್ಥಳ ಪರಿಶೀಲನೆ ನಡೆಸಿತ್ತು.

ವಿಶ್ವ ಕನ್ನಡ ಸಮ್ಮೇಳನಕ್ಕೆ ಬರುವವರಿಗೆ ವಸತಿ ವ್ಯವಸ್ಥೆಗಾಗಿ ದಾವಣಗೆರೆ ಮತ್ತು ಹರಿಹರದಲ್ಲಿ 250ಕ್ಕೂ ಹೆಚ್ಚು ಕಲ್ಯಾಣ ಮಂಟಪ, ಸಮುದಾಯ ಭವನ, ಖಾಸಗಿ ಶಾಲಾ-ಕಾಲೇಜು-ಮಹಾವಿದ್ಯಾಲಯ ಅತಿಥಿಗೃಹಗಳ ಪಟ್ಟಿಯನ್ನೂ ಮಾಡಲಾಗಿತ್ತು. ಸ್ಥಳ ಪರಿಶೀಲನಾ ತಂಡದ ವರದಿಯ ಆಧಾರದಲ್ಲಿ ಜೂನ್‌ ತಿಂಗಳಲ್ಲಿ ವಿಶ್ವ ಕನ್ನಡ ಸಮ್ಮೇಳನದ ನಡೆಸುವ ಬಗ್ಗೆಯೂ ಸರ್ಕಾರ ಘೋಷಣೆ ಮಾಡಿತ್ತು. ಘೋಷಣೆಯ ಜೊತೆಗೆ ಹಲವಾರು ಮಹತ್ತರ ಸಭೆ ನಡೆಸಲಾಗಿತ್ತು. ಜಿಲ್ಲಾಡಳಿತಕ್ಕೆ 4-4.5 ಕೋಟಿ ಅನುದಾನವೂ ಬಿಡುಗಡೆ ಮಾಡಲಾಗಿತ್ತು.

ವಿಶ್ವ ಕನ್ನಡ ಸಮ್ಮೇಳನದಂತಹ ಮಹತ್ವದ ಸಾಂಸ್ಕೃತಿಕ ಹಬ್ಬವನ್ನು ಮಳೆ ಇರುವ ಸಂದರ್ಭದಲ್ಲಿ ನಡೆಸಿದಲ್ಲಿ ಸಾಕಷ್ಟು ತೊಂದರೆ ಆಗಬಹುದು. ಹಾಗಾಗಿ ಜೂನ್‌ ತಿಂಗಳಲ್ಲಿ ವಿಶ್ವ ಕನ್ನಡ ಸಮ್ಮೇಳನ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಬರದ ಛಾಯೆ ಇರುವಂತಹ ಸಂದರ್ಭದಲ್ಲಿ ಉತ್ಸವ ಬೇಡ… ಮುಂದೆ ನಡೆಸಿದರೆ ಆಗುತ್ತದೆ ಎಂಬ ಮಾತು ಕೇಳಿ ಬಂದಿತು. ಹಾಗಾಗಿ ಜೂನ್‌ ತಿಂಗಳಲ್ಲಿ ನಡೆಯ ಬೇಕಿದ್ದ ವಿಶ್ವ ಕನ್ನಡ ಸಮ್ಮೇಳನ ಅಕ್ಟೋಬರ್‌ ನಂತರ, ಕನ್ನಡ ರಾಜ್ಯೋತ್ಸವದ ನಂತರ ನವೆಂಬರ್‌ನಲ್ಲಿ ನಡೆಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬರಲಾಯಿತು.

Advertisement

ವಿಶ್ವ ಕನ್ನಡ ಸಮ್ಮೇಳನದ ದಿನ ನಿಗದಿಯಾಗದೇ ಇರುವ ಕಾರಣಕ್ಕೂ ಮುಂದೂಡಲ್ಪಡುವುದು ನಡೆದೇ ಇತ್ತು. ಪ್ರಾರಂಭಿಕ ಹಂತದಲ್ಲಿ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಭಾರೀ ಅತ್ಯುತ್ಸಾಹ ತೋರಿದ್ದ ರಾಜ್ಯ ಸರ್ಕಾರವೇ ಸಮ್ಮೇಳನ ನಡೆಸಬೇಕಾದ ವಿಚಾರವನ್ನೇ ಮರೆಯಿತು. 

2018ರ ಫೆಬ್ರವರಿಯಲ್ಲಿ ನಡೆಸುವ ಪ್ರಸ್ತಾಪವೂ ಬಂದಿತು. ಆಗಲೂ ಸರ್ಕಾರದ ಕಡೆಯಿಂದ ಅಂತಹ ಉತ್ಸಾಹ, ಪ್ರೋತ್ಸಾಹದಾಯಕ ನಡೆ ಕಂಡು ಬರಲಿಲ್ಲ. ಅಂತಿಮವಾಗಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರವೂ ವಿಶ್ವ ಕನ್ನಡ ಸಮ್ಮೇಳನ ಕೈ ಬಿಟ್ಟು ಚುನಾವಣೆಯತ್ತ ದೃಷ್ಟಿ ನೆಟ್ಟ ಕಾರಣಕ್ಕೆ ಕೊನೆಗೆ ಸಮ್ಮೇಳನ ನಡೆಯಲೇ ಇಲ್ಲ.
 
ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್‌ನಲ್ಲಾದರೂ ಮೂರನೇ ವಿಶ್ವ ಕನ್ನಡ ಸಮ್ಮೇಳನದ ದಿನ ನಿಗದಿಯಾಗುವ ಜೊತೆಗೆ ಸಮ್ಮೇಳನ ನಡೆದೇ ತೀರುತ್ತದೆಯೇ ಎಂಬುದನ್ನು ಕಾದು ನೋಡುವಂತಾಗಿದೆ.

ಆಶಾಭಾವನೆ ಇದೆ…
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂರನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಬೇಡಿಕೆ ಇಟ್ಟಿತ್ತು. ಸರ್ಕಾರವೂ ಬೇಡಿಕೆಗೆ ಸ್ಪಂದಿಸಿ, ದಾವಣಗೆರೆಯಲ್ಲೇ ಮೂರನೇ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಘೋಷಣೆ ಮಾಡಿದ್ದಲ್ಲದೆ ಬಜೆಟ್‌ನಲ್ಲಿ 20 ಕೋಟಿ ಅನುದಾನವನ್ನೂ ನಿಗದಿಪಡಿಸಿತ್ತು. ಆದರೆ, ಕೆಲವಾರು ಕಾರಣದಿಂದ ಸಮ್ಮೇಳನ ನಡೆಯಲಿಲ್ಲ. ಈ ಸರ್ಕಾರದ ಅವಧಿಯಲ್ಲಿ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡದೇ ತೀರುತ್ತದೆ ಎಂಬ ಆಶಾಭಾವನೆ ಇದೆ.
 ಡಾ| ಎಚ್‌.ಎಸ್‌. ಮಂಜುನಾಥ್‌ ಕುರ್ಕಿ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು.

„ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next