Advertisement

ಉನ್ನತ ಶಿಕ್ಷಣಕ್ಕೆ ದಾರಿ ಯಾವುದಯ್ಯ?

06:00 AM Oct 23, 2018 | Team Udayavani |

ಹಿಂದೆ ಕಾಲವೊಂದಿತ್ತು, ಎಸ್‌.ಎಸ್‌.ಎಲ್‌.ಸಿ. ಪಾಸಾದವರನ್ನು ಎತ್ತಿನಗಾಡಿಯಲ್ಲಿ ಕುಳ್ಳಿರಿಸಿ ಹಾರ ಹಾಕಿ ಊರ ತುಂಬ ಮೆರವಣಿಗೆ ಮಾಡುತ್ತಿದ್ದ ಕಾಲ. ಆದರೀಗ ನಪಾಸಾಗುವವರೇ ಕಡಿಮೆ. ಜೊತೆಗೆ ಪದವೀಧರರೂ ಹೆಚ್ಚಿದ್ದಾರೆ. ಸ್ನಾತಕೋತ್ತರ ಪದವಿಗಳೂ ವಿಪುಲವಾಗಿ ದೊರೆಯುತ್ತಿದೆ. ಸಾಲದ್ದಕ್ಕೆ ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಹಾರುವವರೂ ಹೆಚ್ಚುತ್ತಿದ್ದಾರೆ. ಎಂಜಿನಿಯರಿಂಗ್‌, ಎಂ.ಟೆಕ್‌, ಎಂ.ಬಿ.ಎ ಓದಲು ಅಮೆರಿಕದ ಕನಸು ಕಾಣುವವರೂ ಹೆಚ್ಚುತ್ತಿದ್ದಾರೆ. ಕೆನಡಾ, ಇಂಗ್ಲೆಂಡ್‌, ಜರ್ಮನಿ, ಸ್ವಿಜರ್‌ಲೆಂಡ್‌, ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ಉನ್ನತ ಶಿಕ್ಷಣದ ಸ್ವರ್ಗವಾಗಿ ಪರಿಣಮಿಸಿದೆ. ವಿದೇಶದಲ್ಲಿ ಕಲಿತರೆ ಉನ್ನತ ಸ್ಥಾನಮಾನವೆಂದೋ, ವಿದೇಶದಲ್ಲಿ ಪಡೆದ ಪದವಿಗೆ ಇಲ್ಲಿ ಹೆಚ್ಚಿನ ಪಗಾರ (ಗಳಿಕೆ) ಸಿಗುವುದೆಂಬ ನಂಬಿಕೆಯಿಂದಲೋ ಹೋಗುವವರೇ ಹೆಚ್ಚು. 

Advertisement

ಜನರ ಈ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಕಾರ್ಯ ನಿರ್ವಹಿಸುವ ಕಂಪನಿಗಳೂ ಹುಟ್ಟಿಕೊಂಡಿವೆ. ಇತ್ತೀಚಿಗಷ್ಟೆ ಸಂಸ್ಥೆಯೊಂದು ವಿದೇಶಿ ಕಾಲೇಜಿನಲ್ಲಿ ಸೀಟು ಕೊಡಿಸುವ ಆಮಿಷ ಒಡ್ಡಿ ಲಕ್ಷಾಂತರ ರುಪಾಯಿ ಮೋಸ ಮಾಡುತ್ತಿದ್ದುದು ಬೆಳಕಿಗೆ ಬಂದಿತ್ತು. ಇವೆಲ್ಲದರಿಂದಾಗಿ ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ. ಉನ್ನತ ಶಿಕ್ಷಣ ಮಾಡುವ ನಿರ್ಧಾರ ಕೈಗೊಳ್ಳುವ ಮುನ್ನ ವಿದ್ಯಾರ್ಥಿಗಳು ಹಲ ವಿಚಾರಗಳನ್ನು ಸ್ಪಷ್ಟಪಡಿಸಿಕೊಂಡು, ಮುಂಜಾಗ್ರತೆ ವಹಿಸಿ ಮುಂದುವರಿಯಬೇಕು ಎನ್ನುವುದು

ಗ್ರೇಡ್‌ ಗಮನಿಸಿ
ಅಫ್ಘಾನಿಸ್ತಾನದಿಂದ ಮೊದಲುಗೊಂಡು ವಿಯೆಟ್ನಾಮ್‌ವರೆಗೆ ಸುಮಾರು 108 ದೇಶಗಳ ವಿಶವ್ವಿದ್ಯಾಲಯಗಳು ವಿದೇಶಿ ವಿದ್ಯಾರ್ಥಿಗಳಿಗೆ ಬಾಗಿಲು ತೆರೆದಿವೆ. ಹೀಗಾಗಿ ಸೇರಬೇಕೆಂದಿರುವ ಕಾಲೇಜಿನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ವಿವರಗಳನ್ನು ಪಡೆದುಕೊಳ್ಳಬಹುದು. ಏನೇ ಅನುಮಾನಗಳಿದ್ದರೂ ಅಲ್ಲಿ ನೀಡಿರುವ ಇಮೇಲ್‌ ವಿಳಾಸ ಅಥವಾ ಫೋನ್‌ ನಂಬರ್‌ಗೆ ಕರೆ ಮಾಡಿ ಅನುಮಾನ ಪರಿಹರಿಸಿಕೊಳ್ಳಬಹುದು. ಕಾಲೇಜು ಆರಿಸುವಾಗ ಎಚ್ಚರಿಕೆ ಅಗತ್ಯ. ಆರಿಸಿದ ಕಾಲೇಜಿನ ಸ್ಥಿತಿಗತಿ, ಅನುಕೂಲ ಮುಂತಾದ ವಿಚಾರಗಳನ್ನು ಇಂಟರ್‌ನೆಟ್‌ನಲ್ಲಿಯೇ ಕಂಡುಕೊಳ್ಳಬಹುದು. ಮುಖ್ಯವಾಗಿ ಕಾಲೇಜಿನ ದರ್ಜೆ, ಸ್ಥಾನಮಾನ ಏನಿದೆ ಎಂಬುದನ್ನು ಗಮನಿಸಬೇಕು. ದರ್ಜೆ ನೀಡುವ ಸಂಸ್ಥೆಗಳು ವಿಭಿನ್ನವಾದ ಮಾನದಂಡಗಳನ್ನು ಅನುಸರಿಸುವುದರಿಂದ ಅದನ್ನೂ ಗಮನಿಸಬೇಕಾಗುತ್ತದೆ. ಇವುಗಳಲ್ಲಿ Times Higher Education ಪ್ರಕಟಿಸುವ ರ್‍ಯಾಂಕಿಂಗ್‌ ಪಟ್ಟಿ ಗಮನಾರ್ಹವಾದುದು. 

ಓದ್ತಾ ಓದ್ತಾ ದುಡಿಮೆ
ದೇಶದಲ್ಲೇ ಆಗಲಿ, ವಿದೇಶದಲ್ಲೇ ಆಗಲಿ ಓದಲು ಹೋಗುವ ಮುನ್ನ ವಿದ್ಯಾರ್ಥಿಗಳು ಅದಕ್ಕೆ ತಗಲುವ ವೆಚ್ಚವನ್ನೂ ಲೆಕ್ಕ ಹಾಕಿರಬೇಕು. ಮನೆಯವರಿಗೆ ಹೊರೆ ನೀಡಬಾರದೆನ್ನುವವರು ವಿದ್ಯಾರ್ಥಿ ವೇತನ, ಸಹಾಯ ಧನ ಮತ್ತು ಪಾರ್ಟ್‌ಟೈಮ್‌ ನೌಕರಿ ಮತ್ತಿತರ ಆಯ್ಕೆಗಳತ್ತ ಕಣ್ಣು ಹಾಯಿಸಬಹುದು. ವಿದೇಶಗಳಲ್ಲಿ ಓದುತ್ತಿದ್ದಂತೆಯೇ ಕೆಲಸ ಮಾಡುವುದು ತುಂಬಾ ಕಾಮನ್‌ ಸಂಗತಿ. ಈಗೀಗ ನಮ್ಮಲ್ಲೂ ಪಾರ್ಟ್‌ಟೈಮ್‌ ಅವಕಾಶಗಳನ್ನು ಯುವಜನರು ತಮ್ಮದಾಗಿಸಿಕೊಂಡು ಓದಿನ ನಡುವೆ ದುಡಿಮೆಯನ್ನೂ ಮಾಡಬಹುದು.

ಪ್ರವೇಶ ಪರೀಕ್ಷಾ ಕಾಲ
ಉನ್ನತ ಶಿಕ್ಷಣಕ್ಕೆ ಹೋಗಲಿಚ್ಛಿಸುವವರು, ಕ್ಯಾಟ್‌, ಜಿ- ಮ್ಯಾಟ್‌ನಂಥ ಎಂಟ್ರೆನ್ಸ್‌ ಎಕ್ಸಾಮ್‌ಗಳನ್ನು ತೆಗೆದುಕೊಳ್ಳಬಹುದು. ವಿದ್ಯಾರ್ಥಿಗಳು ಆರಿಸಿಕೊಳ್ಳುವ ಕೋರ್ಸುಗಳಿಗೆ ತಕ್ಕಂತೆ ವಿವಿಧ ಎಂಟ್ರೆನ್ಸ್‌ ಪರೀಕ್ಷೆಗಳು ನಮ್ಮಲ್ಲಿವೆ. ಈ ಕುರಿತ ಹೆಚ್ಚಿನ ಮಾಹಿತಿಗೆ goo.gl/XMhMza ಜಾಲತಾಣಕ್ಕೆ ಭೇಟಿ ನೀಡಬಹುದು. ಕೆಲ ಕಾಲೇಜುಗಳು ತಮ್ಮದೇ ಪ್ರತ್ಯೇಕ ಎಂಟ್ರೆನ್ಸ್‌ ಪರೀಕ್ಷೆಗಳನ್ನು ನಡೆಸುತ್ತವೆ. ಇದಲ್ಲದೆ ಅಭ್ಯರ್ಥಿಗಳಿಗೆ ಕೆಲ ವಿದ್ಯಾಸಂಸ್ಥೆಗಳು ಇಂಗ್ಲೀಷ್‌ ಜ್ಞಾನವನ್ನೂ ಪರೀಕ್ಷಿಸುವ ಸಲುವಾಗಿ TOEFL (Test of English as a Foreign Language ಮತ್ತು IELTS (International English Language Testing System)ನಂಥ ಪರೀಕ್ಷೆಗಳನ್ನು ವಿಧಿಸುತ್ತವೆ. ಅದಕ್ಕೂ ಅಭ್ಯರ್ಥಿಗಳು ಸಿದ್ಧರಿರಬೇಕು.

Advertisement

ವಿದೇಶಕ್ಕೆ ಹೋಗುವ ಮುನ್ನ
ಸೂಕ್ತ ದಾಖಲೆಗಳನ್ನು (ಪಾಸ್‌ಪೋರ್ಟ್‌, ವೀಸಾ, ಅಂಕಪಟ್ಟಿ, ಜನನ ಪ್ರಮಾಣ ಪತ್ರ ಇತ್ಯಾದಿ) ಮರೆಯದೆ ಜೋಡಿಸಿಟ್ಟುಕೊಳ್ಳಿ. ಅದರ ಪ್ರತಿಗಳನ್ನು ಮಾಡಿಸಿಟ್ಟುಕೊಂಡರೆ ಇನ್ನೂ ಒಳ್ಳೆಯದು. ಇಮೇಲ್‌ನಲ್ಲಿ ಸಾಫ್ಟ್ಕಾಪಿಯನ್ನು ಇಟ್ಟುಕೊಂಡಿರಿ. ಈ ಹಿಂದೆ ಅಲ್ಲಿ ವ್ಯಾಸಂಗ ಮಾಡಿದವರನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ. ಹಣಕಾಸು ನಿರ್ಹವಣೆಗೆ ಸಹಾಯವಾಗುವ ಹಾಗೆ ಸೂಕ್ತ ಬ್ಯಾಂಕನ್ನು ಆರಿಸಿಕೊಳ್ಳಿ. ಆ ದೇಶದಲ್ಲಿ ಭಾರತದ ದೂತವಾಸ ಕಛೇರಿ ಎಲ್ಲಿದೆ ಎನ್ನುವುದನ್ನು ನೋಟ್‌ ಮಾಡಿಕೊಳ್ಳಿ. ಅಲ್ಲದೆ ಆ ದೇಶದ ಕಾನೂನನ್ನು ತಿಳಿದುಕೊಳ್ಳಬೇಕಾದಷ್ಟು ಗೊತ್ತಿರಲಿ. ಏಕೆಂದರೆ ಒಂದು ಸಣ್ಣ ತಪ್ಪು ಕೂಡ ಘೋರ ಅಪರಾಧವಾಗಿ ಪರಿಣಮಿಸಬಹುದು. ತುರ್ತು ಸಂದರ್ಭದಲ್ಲಿ ಕರೆ ಮಾಡಬಹುದಾದ ದೂರವಾಣಿ ಕರೆಗಳ ಪಟ್ಟಿ ಜೇಬಿನಲ್ಲಿರಲಿ.

ಎನ್‌. ರಘು, ಪ್ರಾಚಾರ್ಯರು 

Advertisement

Udayavani is now on Telegram. Click here to join our channel and stay updated with the latest news.

Next