Advertisement

ಮೊಬೈಲ್‌ ಟವರ್‌-ವಿಂಡ್‌ಮಿಲ್‌ಗೆ ತೆರಿಗೆ ಏಕಿಲ್ಲ?

12:36 PM Jul 04, 2017 | Team Udayavani |

ಚಿತ್ರದುರ್ಗ: ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ತಲೆಎತ್ತುತ್ತಿರುವ ಮೊಬೈಲ್‌ ಟವರ್‌, ಸೋಲಾರ್‌ ಎನರ್ಜಿ ಘಟಕ ಹಾಗೂ ವಿಂಡ್‌ ಮಿಲ್‌ಗ‌ಳ ಭೂಪರಿವರ್ತನೆ ಆಗದ ಹೊರತು ಗ್ರಾಪಂಗಳಿಂದ ಯಾವುದೇ ಕಾರಣಕ್ಕೂ ಸಾಮಾನ್ಯ ಪರವಾನಗಿ (ಎನ್‌ಒಸಿ) ನೀಡಬಾರದು ಎಂದು ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಇಲ್ಲಿನ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಪಂ ಪಿಡಿಒಗಳು ತಮಗಿಷ್ಟ ಬಂದಂತೆ ಪರವಾನಗಿ ನೀಡುತ್ತಿದ್ದು, ಸಮಗ್ರ ತನಿಖೆ ಮಾಡಿ ವರದಿ ನೀಡುವಂತೆ ಸಿಇಒಗೆ ತಿಳಿಸಿದರು.  ಪರವಾನಗಿ ನೀಡುವ ವಿಷಯದಲ್ಲಿ ತಪ್ಪಿತಸ್ಥರು ಎಂದು ಕಂಡುಬಂದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಸೋಲಾರ್‌, ವಿಂಡ್‌ಮಿಲ್‌, ಮೊಬೈಲ್‌ ಟವರ್‌ಗಳ ವ್ಯವಹಾರದ ಬಗ್ಗೆ ಮತ್ತು ಎನ್‌ ಒಸಿ ನೀಡಿರುವ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದರು.

ತೆರಿಗೆ ನೀಡದೆ ವಂಚನೆ: ಇದಕ್ಕೂ ಮುನ್ನ ಮಾತನಾಡಿದ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಕೋಳಿ ಸಾಕಾಣಿಕೆ ರೈತರ ಉಪ ಕಸುಬು. ಈ ಉದ್ಯಮಕ್ಕೆ ಸಾಕಷ್ಟು ತೆರಿಗೆ ಕಟ್ಟಿಸಿಕೊಳ್ಳುವ ಪಿಡಿಒಗಳು, ಸೋಲಾರ್‌ ಎನರ್ಜಿ ಉತ್ಪಾದನಾ ಘಟಕ, ಮೊಬೈಲ್‌ ಟವರ್‌, ವಿಂಡ್‌ಮಿಲ್‌ ಘಟಕಗಳಿಗೆ ವಿನಾಯತಿ ನೀಡಿದ್ದಾರೆ. ಕೋಟ್ಯಂತರ ರೂ. ವಹಿವಾಟು ಮಾಡುವ ಈ ಕಂಪನಿಗಳು ಒಂದು ರೂ. ತೆರಿಗೆಯನ್ನೂ ಗ್ರಾಪಂಗಳಿಗೆ ಕಟ್ಟುತ್ತಿಲ್ಲ. ಹೀಗಾದರೆ ಸ್ಥಳೀಯ ಸಂಸ್ಥೆಗಳು ಹೇಗೆ ನಡೆಯಬೇಕು, ಸಂಪನ್ಮೂಲ ಕ್ರೋಢೀಕರಿಸಿಕೊಂಡು ಆಡಳಿತ ನಡೆಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಳುತ್ತಿರುವಾಗ ಈ ಕಂಪನಿಗಳು ನಮಗೆ ಸಂಬಂಧವಿಲ್ಲ, ನಾವು ಕಂದಾಯ
ಇಲಾಖೆಯಿಂದ ಲೀಸ್‌, ಗುತ್ತಿಗೆ ಪಡೆದಿದ್ದೇವೆ. ತೆರಿಗೆ ವ್ಯಾಪ್ತಿಗೆ ನಾವು ಒಳಪಡುವುದಿಲ್ಲ ಎಂದು ಸಬೂಬು ಹೇಳುತ್ತಾ ತೆರಿಗೆ ಕಟ್ಟದೆ ವಂಚನೆ ಮಾಡುತ್ತಿವೆ. ಜಿಲ್ಲೆಯ ಎಲ್ಲ ಸೋಲಾರ್‌, ಮೊಬೈಲ್‌ ಟವರ್‌, ವಿಂಡ್‌ಮಿಲ್‌ ಕಂಪನಿಗಳ ಬಗ್ಗೆ ಸುದೀರ್ಘ‌ವಾಗಿ ಚರ್ಚಿಸಲು ಪ್ರತ್ಯೇಕ ಸಭೆ ಕರೆಯಬೇಕು. ಇಂತಹ ಘಟಕಗಳಿಂದ ಪ್ರತಿ ತಿಂಗಳು ಎಷ್ಟು ತೆರಿಗೆ ಸಂಗ್ರಹ ಮಾಡಬೇಕೆಂಬ ಬಗ್ಗೆ ಚರ್ಚಿಸುವಂತೆ ಪಟ್ಟು ಹಿಡಿದರು.

ಇದಕ್ಕೆ ಬೆಂಬಲ ವ್ಯಕ್ತಪಡಿಸಿದ ಸದಸ್ಯ ಕೆ.ಟಿ. ಗುರುಮೂರ್ತಿ, ಚಿತ್ರದುರ್ಗ ತಾಲೂಕಿನ ಗುಡ್ಡ ಬೆಟ್ಟಗಳಲ್ಲಿ 236 ವಿಂಡ್‌ಮಿಲ್‌, 96 ಮೊಬೈಲ್‌ ಟವರ್‌ಗಳಿವೆ. ನನ್ನ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ 82 ಪವನ ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ. ಒಂದು ಕಂಪನಿ 12 ಎಕರೆ ಲೀಸ್‌ ಪಡೆದು 23 ಪವನ ಯಂತ್ರಗಳನ್ನು ಅಳವಡಿಸಿದೆ. ಒಂದು ಪವನ ಯಂತ್ರಕ್ಕೆ ಎಷ್ಟು ಜಾಗ ಬೇಕು, ಓಡಾಡಲು ರಸ್ತೆ, ವಿಂಡ್‌ಮಿಲ್‌ ಬಳಕೆಯಿಂದಾಗಿ ನಾಶವಾದ ಗಿಡ ಮರಗಳಿಗೆ ಪರ್ಯಾಯ ವ್ಯವಸ್ಥೆ ಏನು, ವಾರ್ಷಿಕ ವಹಿವಾಟು ಏನು, ಸರ್ಕಾರಕ್ಕೆ ಎಷ್ಟು ತೆರಿಗೆ ಕಟ್ಟಬೇಕೆಂಬ ವಿಷಯ ತಿಳಿಯಲು ವಿಶೇಷ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು. ಸದಸ್ಯೆ ಶಶಿಕಲಾ ಸುರೇಶ್‌ ಬಾಬು, ಸದಸ್ಯರಾದ ನರಸಿಂಹರಾಜು, ನಾಗರಾಜ, ಪ್ರಕಾಶಮೂರ್ತಿ, ಅಜ್ಜಪ್ಪ ಮತ್ತಿತರರು ಧ್ವನಿಗೂಡಿಸಿದರು. 

ಕಂಪನಿಗಳ ವಿರುದ್ಧ ಕ್ರಮ: ಒಂದು ವಿಂಡ್‌ಮಿಲ್‌ ಯಂತ್ರಕ್ಕೆ ಸಾಮರ್ಥ್ಯಕ್ಕೆ ಅನುಗುಣವಾಗಿ ವಾರ್ಷಿಕ 5 ಸಾವಿರದಿಂದ 1 ಲಕ್ಷ ರೂ.ವರೆಗೆ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ಕಟ್ಟಬೇಕು. ಒಂದು ಮೊಬೈಲ್‌ ಟವರ್‌ಗೆ ಪ್ರತಿ ತಿಂಗಳು 12 ಸಾವಿರ ರೂ. ತೆರಿಗೆ ನೀಡಬೇಕು. ಇನ್ನು ಸೋಲಾರ್‌ ಭೂ ಪರಿವರ್ತನೆ ಅ ಧಿಕಾರ ಜಿಲ್ಲಾಧಿಕಾರಿಗಳಿಗೆ ಇರುವುದರಿಂದ ಅವರಿಂದ ಮಾಹಿತಿ ಪಡೆದು ಭೂ ಪರಿವರ್ತನೆ ಮಾಡದೆ ಇರುವ ಕಂಪನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಕಂಪನಿಗಳಿಂದ ಬಾಕಿ ತೆರಿಗೆಯನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳುವಂತೆ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌
ಸೂಚಿಸಿದರು. 

Advertisement

ಪ್ರತಿ ತಿಂಗಳು ತೆರಿಗೆ ವಸೂಲಿಗೆ ಕ್ರಮ
ಗ್ರಾಪಂ ವ್ಯಾಪ್ತಿಯಲ್ಲಿ ಸ್ಥಾಪಿಸುವಂತಹ ಯಾವುದೇ ಸೋಲಾರ್‌, ಮೊಬೈಲ್‌ ಟವರ್‌, ವಿಂಡ್‌ಮಿಲ್‌ ಯಂತ್ರಗಳಿಗೆ ಎಷ್ಟು ತೆರಿಗೆ ವಿಧಿ  ಸಬೇಕೆಂದು ಪರಿಷ್ಕರಣೆಗೊಂಡ ಪ್ರತಿ ಇಂದು ನಮ್ಮ ಕೈಸೇರಿದೆ. ಅದನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ಜಿಲ್ಲೆಯ ಎಲ್ಲ ಗ್ರಾಪಂಗಳಿಗೆ ಸುತ್ತೋಲೆ ಹೊರಡಿಸಲಾಗುವುದು. ಬಾಕಿ ಬಿಲ್‌ ಸೇರಿದಂತೆ ಪ್ರತಿ ತಿಂಗಳು ತೆರಿಗೆ ವಸೂಲಿ ಮಾಡುವಂತೆ ಪಿಡಿಒಗಳಿಗೆ ಸೂಚಿಸುವುದಾಗಿ ಜಿಪಂ ಸಿಇಒ ನಿತೇಶ್‌ ಪಾಟೀಲ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next