ಮುಂಬಯಿ : ರಾಜಕಾರಣಿಗಳಿಗೆ ಪೊಲೀಸ್ ರಕ್ಷಣೆ, ಭದ್ರತೆ ನೀಡಲು ತೆರಿಗೆ ಪಾವತಿದಾರರ ಹಣವನ್ನು ಬಳಸುವ ಅಗತ್ಯ ಏನಿದೆ ಎಂದು ಬಾಂಬೆ ಹೈಕೋರ್ಟ್ ಇಂದು ಬುಧವಾರ ಮಹಾರಾಷ್ಟ್ರ ಸರಕಾರವನ್ನು ಪ್ರಶ್ನಿಸಿದೆ.
ರಾಜಕಾರಣಿಗಳಿಗೆ ತಮಗೆ ಪೊಲೀಸ್ ರಕ್ಷಣೆ, ಭದ್ರತೆ ಬೇಕು ಅಂತ ಅನ್ನಿಸಿದರೆ ಅವರು ತಮ್ಮ ರಾಜಕೀಯ ಪಕ್ಷದಿಂದ ಅದರ ವೆಚ್ಚವನ್ನು ಭರಿಸಬೇಕು ಎಂದು ಚೀಫ್ ಜಸ್ಟಿಸ್ ಮಂಜುಳಾ ಚೆಲ್ಲೂರ್ ಮತ್ತು ಜಸ್ಟಿಸ್ ಎಂ ಎಸ್ ಸೋನಾಕ್ ಅವರನ್ನು ಒಳಗೊಂಡ ಪೀಠವು ಖಡಕ್ ಆಗಿ ಹೇಳಿತು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಬಾಂಬೆ ಹೈಕೋರ್ಟ್ ಪೀಠ, “ಖಾಸಗಿ ವ್ಯಕ್ತಿಗಳಿಗೆ ಪೊಲೀಸ್ ರಕ್ಷಣೆ ನೀಡುವ ಮತ್ತು ಅದನ್ನು ಅನುಮೋದಿಸುವ ಹಾಲಿ ಕ್ರಮವನ್ನು ಸರಕಾರ ಮಾರ್ಪಡಿಸಬೇಕು’ ಎಂದು ಅಪ್ಪಣೆ ಕೊಡಿಸಿತು.
ಮಹಾರಾಷ್ಟ್ರ ಸರಕಾರ ರಾಜ್ಯದಲ್ಲಿನ ಖಾಸಗಿ ವ್ಯಕ್ತಿಗಳಿಗೆ ಪೊಲೀಸ್ ರಕ್ಷಣೆ ನೀಡಲು ತನ್ನ ಸುಮಾರು 1,000 ಸಿಬಂದಿಗಳನ್ನು ನಿಯೋಜಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.