ಒಂದೂರಿನಲ್ಲಿ ಒಬ್ಬ ವ್ಯಕ್ತಿಯಿದ್ದ. ಸರಿಸುಮಾರು 70 ವರ್ಷವಾಗಿರಬಹುದು. ಸದಾ ಖುಷಿ ಖುಷಿಯಲ್ಲಿರುತ್ತಿದ್ದ. ಅವನನ್ನು ಕಂಡವರಿಗೆಲ್ಲಾ ಅಚ್ಚರಿ. ಹೇಗೆ ಈತ ಸದಾ ನಗುತ್ತಿರುತ್ತಾನೆ?
ಈ ವಿಷಯ ಊರಿಂದ ಊರಿಗೆ ಹರಡಿ ಬಹಳ ರಾಜನ ಕಿವಿಗೂ ಬಿತ್ತು. ಅವನಿಗೂ ಆಚ್ಚರಿಯಾಯಿತು. ಎಲ್ಲ ಸುಖ ಸಂಪತ್ತುಗಳಿವೆ, ಅಧಿಕಾರವಿದೆ, ಅಂತಸ್ತಿದೆ. ಆದರೂ ಬದುಕು ಯಾಕಯ್ನಾ ಬೇಕು ಎಂದು ಎನ್ನಿಸುವುದುಂಟು. ಅಂಥದ್ದರಲ್ಲಿ ಅವನು ಹೇಗೆ ಖುಷಿಯಾಗಿರುತ್ತಾನೆ ಎಂಬ ಕುತೂಹಲ ಮೂಡಿತು. ತನ್ನ ಮಂತ್ರಿವರ್ಯರನ್ನು ಕರೆದು ಅವನನ್ನು ಕರೆತರುವಂತೆ ಆದೇಶಿಸಿದ.
ಮಂತ್ರಿವರ್ಯರು ಸಕಲ ವ್ಯವಸ್ಥೆಗಳೊಂದಿಗೆ ಆ ವ್ಯಕ್ತಿಯಿದ್ದ ಕಡೆಗೆ ಹೊರಟರು. ಕುದುರೆ ಸವಾರಿ. ಬೇಕಾಗುವಷ್ಟು ಆಹಾರ ಸಾಮಗ್ರಿಗಳ ಜತೆಗೆ ಕಂಡಾಪಟ್ಟೆ ಎನ್ನುವಷ್ಟು ಚಿನ್ನಾಭರಣಗಳನ್ನು ಶೇಖರಿಸಿಕೊಂಡು ಹೊರಟಿದ್ದರು. ಅದಕ್ಕೆ ಕಾರಣ, ಯಾವ ಬೆಲೆಯನ್ನಾದರೂ ತೆತ್ತು ಅವನನ್ನು ಕರೆದುಕೊಂಡು ಹೋಗುವುದು. ಊರಿನವರು ವಿರೋಧಿಸಿದರೂ ಸೂಕ್ತ ಬೆಲೆಯನ್ನು ಕೊಟ್ಟು ಬರಲೂ ಸಿದ್ಧರಾಗಿದ್ದರು. ಎರಡು ದಿನಗಳ ಪಯಣದ ಬಳಿಕ ಆ ಊರು ಸಿಕ್ಕಿತು. ಹೆಬ್ಟಾಗಿಲಲ್ಲೇ ಜನರಿಗೆ ಈ ರಾಶಿ ರಾಶಿ ಕುದುರೆ ಮತ್ತು ಜನರನ್ನು ಕಂಡು ದಿಗಿಲಾಯಿತು. ಅಷ್ಟರಲ್ಲಿ ಹಿರಿಯ ಮಂತ್ರಿಯೊಬ್ಬ ಜನರಲ್ಲಿ ಕೈ ಮುಗಿದು ತಾವು ಬಂದ ಉದ್ದೇಶವನ್ನು ವಿವರಿಸಿದ. ಇದನ್ನು ಕೇಳಿದ ಜನರು ಇಡೀ ಸೈನ್ಯವನ್ನು ಕರೆದುಕೊಂಡು ಅಚ್ಚರಿ ವ್ಯಕ್ತಿಯ ಬಳಿ ಕರೆದೊಯ್ದರು.
ಸಣ್ಣ ಗುಡಿಸಲು. ಅಂಗಳದಲ್ಲಿ ಹತ್ತಾರು ಹೂವುಗಳು ಅರಳಿದ್ದವು. ಒಂದೊಂದರಲ್ಲೂ ಒಂದೊಂದು ಬಣ್ಣ. ಕಣ್ಣ ತುಂಬಿಕೊಂಡಷ್ಟೂ ಬಣ್ಣ. ಸುತ್ತಲೂ ಹಸಿರು. ಮನೆಯ ಹಿಂದೆ ಬೆಟ್ಟದ ರಾಶಿ. ಮನಸ್ಸು ಪ್ರಫುಲ್ಲಗೊಳ್ಳುವಂಥ ವಾತಾವರಣ. ಮನೆಯ ಬಾಗಿಲು ತೆರೆದೇ ಇತ್ತು. ಊರಿನ ವ್ಯಕ್ತಿಯೊಬ್ಬ ಮನೆಯೊಳಗೆ ಹೋಗಿ ಅಚ್ಚರಿ ವ್ಯಕ್ತಿಗೆ ವಿಷಯ ತಿಳಿಸಿದ. ಆಯಿತೆಂದು ತಲೆ ಆಡಿಸಿಕೊಂಡು ಹೊರ ಬಂದ ವ್ಯಕ್ತಿ ಎಲ್ಲರಿಗೂ ಕೈ ಮುಗಿದ.
ಮಂತ್ರಿ ಅವನಲ್ಲಿ ತನ್ನ ಉದ್ದೇಶವನ್ನು ತಿಳಿಸಿ, ರಾಜನಲ್ಲಿಗೆ ಬರುವಂತೆ ವಿನಂತಿಸಿಕೊಂಡ. ಕೆಲ ಕ್ಷಣ ಆಲೋಚಿಸಿದವ ಬಳಿಕ ಒಪ್ಪಿಕೊಂಡ. ಸಣ್ಣದೊಂದು ಬಟ್ಟೆಯ ಗಂಟನ್ನು ಹಿಡಿದುಕೊಂಡು ಸಿದ್ಧನಾದ ಅಚ್ಚರಿ ವ್ಯಕ್ತಿ. ಮಂತ್ರಿ ತಂದ ಆಭರಣಗಳನ್ನೆಲ್ಲಾ ಕೊಡಲು ಮುಂದಾದಾಗ ಅದೇ ಅಚ್ಚರಿ ವ್ಯಕ್ತಿ ಜನರತ್ತ ಕೈ ತೋರಿಸಿದ. ರಾಜನ ಕಡೆಯವರು ಅವುಗಳನ್ನೆಲ್ಲಾ ಊರಿಗೇ ಹಂಚಿ ಬಿಟ್ಟರು.
ಎಲ್ಲರಿಗೂ ಬಯಸದೇ ಬಂದ ಭಾಗ್ಯದಿಂದ ಆದ ಖುಷಿ ಅಷ್ಟಿಷ್ಟಲ್ಲ. ಎಂಥ ಒಳ್ಳೆಯ ವ್ಯಕ್ತಿ ಆತ, ತನಗೇನೂ ಇಟ್ಟುಕೊಳ್ಳದೇ ನಮಗೆ ನೀಡಲು ಹೇಳಿದವನು ಎಂದೆಲ್ಲಾ ಹೊಗಳಿದರು. ಆದರೂ ವ್ಯಕ್ತಿಯ ಮುಖದ ಮೇಲಿನ ಮುಗುಳ್ಳಗೆಯ ಬಣ್ಣ ಬದಲಾಗಲಿಲ್ಲ.
ಬಟ್ಟೆ ಗಂಟು ತಲೆಯ ಮೇಲಿಟ್ಟುಕೊಂಡು ನಡೆದು ಹೊರಟ. ಮಂತ್ರಿಗಳು ಕುದುರೆ ಮೇಲೆ ಹತ್ತುವಂತೆ ಕೋರಿದರು. ಅದಕ್ಕೆ ಆತ ಸದ್ಯಕ್ಕೆ ಅಗತ್ಯವಿಲ್ಲ, ಬೇಕಾದಾಗ ಹೇಳುವೆ ಎಂದು ಬೀಸು ನಡೆ ಹಾಕತೊಡಗಿದ. ಇಡೀ ರಾಜನ ಸೈನ್ಯವೇ ಅವನನ್ನು ಹಿಂಬಾಲಿಸತೊಡಗಿತು.
(ಮುಂದಿನವಾರ : ಆ ಮುಗುಳ್ನಗೆಯ ಮೌಲ್ಯ ತಿಳಿದದ್ದೇ ಆಗ)