ಉಡುಪಿ: ಎಸೆಸೆಲ್ಸಿ ಅನಂತರ ಪಿಯುಸಿಯಲ್ಲಿ ಯಾವ ವಿಭಾಗ ಸೇರಬೇಕು, ಐಟಿಐ, ಡಿಪ್ಲೊಮಾ ಸೇರಿದರೆ ಹೇಗೆ ಎಂಬಿತ್ಯಾದಿ ಹಲವು ಗೊಂದಲ, ಜಿಜ್ಞಾಸೆಗೆ ಉದಯವಾಣಿ ಸೋಮವಾರ ನಡೆಸಿದ “ಎಸೆಸೆಲ್ಸಿ ಅನಂತರ ಮುಂದೇನು’ ಕಾರ್ಯಕ್ರಮದಲ್ಲಿ ಸ್ಪಷ್ಟ ಉತ್ತರ ಸಿಕ್ಕಿತು.
ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ “ಉದಯವಾಣಿ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಜಗದೀಶ್, ಮಣಿಪಾಲ ಎಂಐಟಿ ಪ್ರಾಧ್ಯಾಪಕ ಪ್ರೊ| ಬಾಲಕೃಷ್ಣ ಮಧ್ದೋಡಿ ಮತ್ತು ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಮಾಹಿತಿ ಗಳನ್ನು ನೀಡಿದರು.
ಜಿಲ್ಲೆಯ ವಿವಿಧೆಡೆಯ ವಿದ್ಯಾರ್ಥಿಗಳು ತಮ್ಮ ಪಾಲಕ, ಪೋಷಕರ ಜತೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಸೆಸೆಲ್ಸಿ ಅನಂತರ ಪಿಯುಸಿಯ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗ ತೆಗೆದುಕೊಳ್ಳುವ ವಿದ್ಯಾರ್ಥಿ ಗಳಿಗೆ ಪದವಿ, ಉನ್ನತ ಶಿಕ್ಷಣದ ಜತೆಗೆ ಉದ್ಯೋಗಾವ ಕಾಶಗಳು, ಕೋರ್ಸ್ ಗಳ ಆಯ್ಕೆಯಲ್ಲಿ ವಿದ್ಯಾರ್ಥಿಗಳ ನಿಲುವು, ಹೆತ್ತವರ ಪ್ರೋತ್ಸಾಹ, ರಾ. ಶಿಕ್ಷಣ ನೀತಿಯ ಅನುಕೂಲಗಳು, ಐಟಿಐ, ಡಿಪ್ಲೊಮಾ ಕೋರ್ಸ್‌ನಲ್ಲಿ ಆಗಿರುವ ಬದಲಾವಣೆ ಇತ್ಯಾದಿ ಮಾಹಿತಿ ನೀಡಿದರು.
ಮೇ 17 ರಂದು ಮಂಗಳೂರಿನಲ್ಲಿ ವಿಶೇಷ ಉಚಿತ ಕಾರ್ಯಕ್ರಮ
ಮಂಗಳೂರು: “ಎಸೆಸೆಲ್ಸಿ ಬಳಿಕ ಎಷ್ಟೆಲ್ಲ ಅವಕಾಶ’ ಎಂಬ ವಿಶೇಷ ಕಾರ್ಯಕ್ರಮವನ್ನು ಉದಯವಾಣಿ ಆಯೋಜಿಸುತ್ತಿದೆ. ಮಂಗಳೂರಿನಲ್ಲಿ ಮೇ 17(ಮಂಗಳವಾರ)ರಂದು ಉರ್ವ ಕೆನರಾ ಶಾಲೆಯ ಮಿಜಾರು ಗೋವಿಂದ ಪೈ ಸಭಾಂಗಣದಲ್ಲಿ ಸಂಜೆ 3ರಿಂದ 5ರ ವರೆಗೆ ಕಾರ್ಯಕ್ರಮ ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಪ್ರೊ| ಕುರಿಯನ್, ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಡಾ| ಅನಂತ ಪ್ರಭು, ಮೂಲ್ಕಿ ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲ ಡಾ| ಬೆಳ್ಳೆ ವಾಸುದೇವ ಅವರು ಭಾಗವಹಿಸಲಿರುವರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿಲ್ಲ, ಎಸೆಸೆಲ್ಸಿ ಫಲಿತಾಂಶ ನಿರೀಕ್ಷಿಸುತ್ತಿರುವವರು, ಹೈಸ್ಕೂಲ್ ವಿದ್ಯಾರ್ಥಿಗಳು, ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಇದರಲ್ಲಿ ಭಾಗವಹಿಸಬಹುದು. ಮಾಹಿತಿಗೆ ಮೊಬೈಲ್ ಸಂಖ್ಯೆ
9900567000 ಸಂಪರ್ಕಿಸಬಹುದು.