Advertisement

ಹೊಸಾ ಸ್ವೀಟು ಏನಿದೆ ಅಂದ್ರಾ?

07:40 PM Oct 08, 2019 | Lakshmi GovindaRaju |

ದಸರಾ ರಜೆ ಇರೋದ್ರಿಂದ ನೆಂಟರು ಮನೆಗೆ ಬಂದಿದ್ದಾರೆ. ಅವರು ಮೆಚ್ಚುವಂಥ ತಿಂಡಿ ಮಾಡಬೇಕು. ಏನು ಮಾಡ್ಹೋದು ಎಂದು ಬಹಳಷ್ಟು ಮಹಿಳೆಯರು ಯೋಚನೆಯಲ್ಲಿದ್ದಾರೆ. ದಸರೆಯ ಮೆನುವಿಗೆ ಯಾವೆಲ್ಲಾ ಹೊಸ ತಿಂಡಿ ಸೇರಿಸಬಹುದು ಅಂತ ಯೋಚಿಸುತ್ತಿರುವವರಿಗೆ ಇಲ್ಲೊಂದಿಷ್ಟು ರೆಸಿಪಿಗಳಿವೆ ನೋಡಿ…

Advertisement

ನವಣೆ ಅಕ್ಕಿಯ ಹೋಳಿಗೆ
ಬೇಕಾಗುವ ಸಾಮಗ್ರಿ: ನವಣೆ- ಅರ್ಧ ಕೆ.ಜಿ, ಹೆಸರುಬೇಳೆ ಮತ್ತು ಕಡಲೆಬೇಳೆ- ಅರ್ಧ ಕೆ.ಜಿ., ಬೆಲ್ಲ- ಅರ್ಧ ಕೆ.ಜಿ., ಮೈದಾ ಹಿಟ್ಟು – ಅರ್ಧ ಕೆ.ಜಿ., ಏಲಕ್ಕಿ ಪುಡಿ, ಶುಂಠಿ ಪುಡಿ, ತುಪ್ಪ.

ಮಾಡುವ ವಿಧಾನ: ನವಣೆ, ಹೆಸರುಬೇಳೆ, ಕಡಲೆಬೇಳೆಯನ್ನು ಹುರಿದು, ಹಿಟ್ಟು ಮಾಡಿಕೊಳ್ಳಿ. ಮೂರನ್ನೂ ಮಿಶ್ರಣ ಮಾಡಿ, ಏಲಕ್ಕಿ ಮತ್ತು ಚೂರು ಶುಂಠಿ ಪುಡಿಯನ್ನು ಸೇರಿಸಿ. ಬೆಲ್ಲಕ್ಕೆ ನೀರು ಹಾಕಿ ಪಾಕ ಬರುವವರೆಗೆ ಕುದಿಸಿ. ಪಾಕ ಬಂದ ನಂತರ ಅದಕ್ಕೆ, ನವಣೆ ಹಿಟ್ಟಿನ ಮಿಶ್ರಣ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮೈದಾ ಹಿಟ್ಟಿಗೆ ಸ್ವಲ್ಪ ನೀರು ಮತ್ತು ಎಣ್ಣೆ ಬೆರೆಸಿ, ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಹೂರಣವನ್ನು ಇಟ್ಟು ಲಟ್ಟಿಸಿ, ಕಾವಲಿಯ ಮೇಲಿಟ್ಟು ಬೇಯಿಸಿ.
* ರೇಣುಕಾ ತಳವಾರ

ರಸ್‌ಮಲಾಯಿ
ಬೇಕಾಗುವ ಸಾಮಗ್ರಿ: ಹಾಲು-2 ಲೀ., ಸಕ್ಕರೆ-1 ಕೆ.ಜಿ., ಲಿಂಬೆರಸ- 3 ಚಮಚ, ಏಲಕ್ಕಿಪುಡಿ, ಕೇಸರಿ, ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ.

ಮಾಡುವ ವಿಧಾನ: ಮೂರ್ನಾಲ್ಕು ಚಮಚ ಹಾಲಿನಲ್ಲಿ ಕೇಸರಿ ದಳಗಳನ್ನು ನೆನೆಯಲು ಇಡಿ. ನಂತರ ಬಾಣಲೆಯಲ್ಲಿ ಒಂದು ಲೀಟರ್‌ ಹಾಲು ಹಾಕಿ ಚೆನ್ನಾಗಿ ಕುದಿಸಿ. ಆ ಹಾಲಿಗೆ ಸ್ವಲ್ಪಸ್ವಲ್ಪವೇ ಲಿಂಬೆ ರಸ ಬೆರೆಸಿರಿ. ಹೀಗೆ ಮಾಡಿದಾಗ ಹಾಲು ಒಡೆಯಲು ಆರಂಭಿಸುತ್ತದೆ. ಒಂದು ತೆಳ್ಳನೆಯ ಬಟ್ಟೆಯ ಸಹಾಯದಿಂದ ಒಡೆದ ಹಾಲಿನಿಂದ ನೀರಿನಂಶವನ್ನು ಸೋಸಿ, ಗಟ್ಟಿ ಭಾಗವನ್ನು ಬೇರ್ಪಡಿಸಿ. ಆ ಪನೀರ್‌ ಅನ್ನು ಚೆನ್ನಾಗಿ ಮಿಶ್ರಣ ಮಾಡಿ, ಚಿಕ್ಕ ಚಿಕ್ಕ ಉಂಡೆ ಕಟ್ಟಿ. ನಂತರ ಬಾಣಲೆಯಲ್ಲಿ 3-4 ಚಮಚ ತುಪ್ಪ ಹಾಕಿ ಬಾದಾಮಿ, ಒಣದ್ರಾಕ್ಷಿ, ಗೋಡಂಬಿ ಹಾಕಿ ಹುರಿಯಿರಿ.

Advertisement

ಈಗ ಇನ್ನೊಂದು ಪಾತ್ರೆಯಲ್ಲಿ ಅರ್ಧ ಕೆ.ಜಿಯಷ್ಟು ಸಕ್ಕರೆ ಮತ್ತು ಒಂದು ಕಪ್‌ ನೀರು ಹಾಕಿ 10-15 ನಿಮಿಷ ಕಾಲ ಚೆನ್ನಾಗಿ ಪಾಕ ಮಾಡಿಕೊಳ್ಳಿ. ಈಗಾಗಲೇ ತಯಾರಿಸಿದ ಪನೀರ್‌ ಉಂಡೆಗಳನ್ನು ಇದರೊಳಗೆ ಹಾಕಿ 10 ನಿಮಿಷಗಳ ಕಾಲ ಕುದಿಸಿ, ಪ್ರತ್ಯೇಕವಾಗಿ ತೆಗೆದಿಡಿ. ಈಗ ಇನ್ನೊಂದು ಪಾತ್ರೆಯಲ್ಲಿ ಉಳಿದ ಹಾಲಿಗೆ ಅರ್ಧ ಕೆ.ಜಿ ಸಕ್ಕರೆ ಹಾಕಿ ಅದು ಹದವಾಗಿ ಗಟ್ಟಿಯಾಗುವವರೆಗೆ ಕುದಿಸಿ, ಪನೀರ್‌ ಉಂಡೆಗಳನ್ನು ಸಕ್ಕರೆ ಪಾಕದಿಂದ ತೆಗೆಯಿರಿ. ನಂತರ, ಹಾಲಿನಲ್ಲಿ ನೆನೆಸಿಟ್ಟ ಕೇಸರಿ, ತುಪ್ಪದಲ್ಲಿ ಹುರಿದಿಟ್ಟ ದ್ರಾಕ್ಷಿ ಗೋಡಂಬಿ­ಗಳನ್ನು ಸೇರಿಸಿ ಚೆನ್ನಾಗಿ ಕಲಸಿ.
* ಸುಮನಾ ಆಚಾರ್‌

ಗಸಗಸೆ ಹಲ್ವ
ಬೇಕಾಗುವ ಸಾಮಗ್ರಿ: ಗಸಗಸೆ- 1/4 ಕೆ.ಜಿ., ಹಾಲು – 1ಕಪ್‌, ಒಣಕೊಬ್ಬರಿ -ಅರ್ಧ ಕಪ್‌, ಸಕ್ಕರೆ -1/4 ಕೆ.ಜಿ., ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ, ತುಪ್ಪ.

ಮಾಡುವ ವಿಧಾನ: ಗಸೆಗಸೆಯನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಟ್ಟು, ನಂತರ ಅದಕ್ಕೆ ಕೊಬ್ಬರಿ ತುರಿ ಹಾಗೂ ಹಾಲು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಆ ಮಿಶ್ರಣವನ್ನು ಒಂದು ಬಾಣಲೆಗೆ ಹಾಕಿ, ಸಕ್ಕರೆ ಸೇರಿಸಿ ಮಿಶ್ರಣ ಮಾಡುತ್ತಾ, ಬೇಯಿಸಿ. ಅದು ಗಟ್ಟಿಯಾಗುತ್ತಾ ಬಂದಂತೆ, ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ ಹಾಕಿ ಮಧ್ಯೆ ಮಧ್ಯೆ ತುಪ್ಪ ಸೇರಿಸುತ್ತಾ ಫ್ರೈ ಮಾಡಿದರೆ ಗಸಗಸೆ ಹಲ್ವ ಸಿದ್ಧ.

ತೆಂಗಿನ ತುರಿ ಲಡ್ಡು
ಬೇಕಾಗುವ ಸಾಮಗ್ರಿ: ತೆಂಗಿನ ತುರಿ- 4 ಕಪ್‌, ಕಂಡೆನ್ಸ್‌$x ಮಿಲ್ಕ್- ಅರ್ಧ ಲೀಟರ್‌, ಸಕ್ಕರೆ, ಒಣ ದ್ರಾಕ್ಷಿ.

ಮಾಡುವ ವಿಧಾನ: ತೆಂಗಿನತುರಿಯನ್ನು ಬಾಣಲೆಗೆ ಹಾಕಿ, ಸಣ್ಣ ಉರಿಯಲ್ಲಿ ಐದಾರು ನಿಮಿಷ ಹುರಿಯಿರಿ. ಗರಿಗರಿಯಾದ ತೆಂಗಿನತುರಿಯನ್ನು ಮಿಕ್ಸಿಗೆ ಹಾಕಿ ಒಂದು ಸುತ್ತು ತಿರುಗಿಸಿ, ಪುಡಿ ಮಾಡಿ. ನಂತರ, ಒಂದು ಪಾತ್ರೆಗೆ ಕಂಡೆನ್ಸ್‌ ಮಿಲ್ಕ್, ಸಕ್ಕರೆ, ತೆಂಗಿನ ತುರಿ ಹಾಕಿ ಚೆನ್ನಾಗಿ ಮಗುಚಿ, ಉಂಡೆ ಕಟ್ಟಿ, ಒಣದ್ರಾಕ್ಷಿಯಿಂದ ಅಲಂಕರಿಸಿ. ಬೇಕಿದ್ದರೆ ಏಲಕ್ಕಿ ಪುಡಿ, ಬಾದಾಮಿ, ಗೋಡಂಬಿ ಸೇರಿಸಬಹುದು.
* ನೀತಾ ಎಸ್‌.ಎನ್‌

Advertisement

Udayavani is now on Telegram. Click here to join our channel and stay updated with the latest news.

Next