ಆಗಷ್ಟೆ ಸೂರ್ಯ ಮುಳುಗಲಾರಂಭಿಸಿದ್ದ. ಪಕ್ಷಿಗಳೆಲ್ಲ ಚಿಲಿಪಿಲಿ ಗುಟ್ಟುತ್ತ ತಮ್ಮ ತಮ್ಮ ಗೂಡುಗಳಿಗೆ ಮರಳಲು ಹೊರಡುತ್ತಿದ್ದವು. ಇತ್ತ ಚಂದಿರ ತನ್ನ ಕರ್ತವ್ಯ ನಿರ್ವಹಿಸುವ ಸಲುವಾಗಿ ಭೂಮಿಗೆ ಹತ್ತಿರವಾಗತೊಡಗಿದ್ದ. ಇಂತಹ ದೃಶ್ಯಗಳು ನಮಗೆ ಕಂಡು ಬಂದದ್ದು ಅರಬ್ಬೀ ಸಮುದ್ರದ ತೀರ ಪ್ರದೇಶವಾದ ಮಲ್ಪೆಯಲ್ಲಿ.
ಇತ್ತೀಚೆಗೆ ನಾನು ಮತ್ತು ನನ್ನ ಸ್ನೇಹಿತರೆಲ್ಲ ಮಲ್ಪೆಯ ಕಡಲಿನ ಸೌಂದರ್ಯವನ್ನು ಸವಿಯಲು ಹೋಗಿದ್ದೆವು. ಆಗ ಅಲ್ಲಿನ ಸೀ-ವಾಕ್ ಮತ್ತು ಕಡಲಬ್ಬರಕ್ಕೆ ಶರಣಾಗಿ ನಾವೆಲ್ಲ ಒಮ್ಮೆ ಮೂಕವಿಸ್ಮಿತರಾದೆವು.
ಅಲ್ಲಿನ ನಿಸರ್ಗದ ಅದ್ಭುತವನ್ನು ಹೀಗೆ ಆಸ್ವಾದಿಸುತ್ತಿರುವಾಗಲೇ ನಮ್ಮ ಹೊಟ್ಟೆಯಲ್ಲಿ ಹಸಿವು ರುದ್ರತಾಂಡವವಾಡುತ್ತಿತ್ತು. ಹಾಗಾಗಿ, ಮೊದಲಿಗೆ ನಮ್ಮ ಹಸಿವನ್ನ ನೀಗಿಸಲು ಅಲ್ಲೇ ಸುತ್ತಮುತ್ತಲಿನ ಅಂಗಡಿಗಳಿಗೆ ಭೇಟಿ ಕೊಟ್ಟೆವು. ಅಲ್ಲಿದ್ದ ಹಲವಾರು ಅಂಗಡಿಗಳಲ್ಲಿ ನನ್ನ ಕಣ್ಣಿಗೆ ಬಿದ್ದಿದ್ದು ಒಬ್ಬಳು ಅಜ್ಜಿ. ಅದು ಆಗ ತಾನೇ ತಯಾರಿಸಿ ಮಾರುತ್ತಿದ್ದ ಚುರುಮುರಿಯ ಅಂಗಡಿ. ಆಗ ನಾನಲ್ಲಿ ತೆರಳಿ ಆ ಅಜ್ಜಿಯ ಬಳಿ ನನಗೂ ಚುರುಮುರಿ ಮಾಡಿಕೊಡಲು ಹೇಳಿದೆ. ಆ ಅಜ್ಜಿ ನನಗೆ ಚುರುಮುರಿ ಮಾಡಿಕೊಟ್ಟ ನಂತರದಲ್ಲಿ ಆ ಅಜ್ಜಿಯ ಹಿನ್ನಲೆಯನ್ನು ಕೇಳಬೇಕೆಂಬ ಸಣ್ಣ ಕುತೂಹಲವು ಮೂಡಿತು. ತಡ ಮಾಡದೆ ಆ ಅಜ್ಜಿಯ ಬಳಿ ಅವರ ಹಿನ್ನಲೆಯ ಬಗ್ಗೆ ಕೇಳಿದೆ.
ಆ ಅಜ್ಜಿ ತನ್ನ ಜೀವನಗಾಥೆಯನ್ನು ಎಳೆಎಳೆಯಾಗಿ ನನ್ನ ಬಳಿ ವಿವರಿಸತೊಡಗಿದರು. ಅವರು ಈ ತನಕ ನಡೆದು ಬಂದ ಹಾದಿಯ ಬಗ್ಗೆ ವಿವರಿಸುವಾಗ, ನನ್ನ ಮೇಲೆ ಗಾಢವಾಗಿ ಪರಿಣಾಮ ಬೀರಿದ ಅವರ ಆ ಮಾತೆಂದರೆ, “ನನಗೆ ವಯಸ್ಸಾಗಿದ್ದರೂ ನನ್ನ ಮಕ್ಕಳಿಗೆ ಯಾವುದೇ ತೊಂದರೆ ಕೊಡದೆ ನನ್ನ ಜೀವನವನ್ನು ನಾನು ನೋಡಿಕೊಳ್ಳುತ್ತಿದ್ದೇನೆ’ ನನ್ನನ್ನು ಕಾಡುತ್ತಿದ್ದ ಪ್ರಶ್ನೆಯಾದ “ಜೀವನವೆಂದರೇನು’ ಎಂಬುದಕ್ಕೆ ಸಣ್ಣದಾದ ಉತ್ತರದ ಸುಳಿವು ಇಲ್ಲಿ ಸಿಕ್ಕಿತು !
ಮಂಜುನಾಥ ಬಿ. ವಿ.
ಪ್ರಥಮ ಎಂ.ಎ.,
ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು, ಉಡುಪಿ.