ಕೆಲ ಮೂಲಗಳನ್ನು ಕೆದಕಲು ಹೋಗಬಾರದು ಎಂದು ತಿಳಿದವರು ಹೇಳಿದ್ದಾರೆ. ಆದರೆ ಕೆದಕಲು ಹೋದ ಬಾಯ್‌ಫ್ರೆಂಡ್ ಒಬ್ಬನ ಕಥೆ ಇದು. ಅವನ ಹೆಸರು ಪ್ರೀತಂ, ಆಕೆಯ ಹೆಸರು ನಂದಿನಿ ಎಂದಿಟ್ಟುಕೊಳ್ಳೋಣ. ಪ್ರೀತಂ ಮತ್ತು ನಂದಿನಿ ಸುಮಾರು ವರ್ಷಗಳಿಂದ ಲಿವಿಂಗ್ ಟುಗೆದರ್ ರಿಲೇಶನ್‌ಶಿಪ್‌ನಲ್ಲಿದ್ದವರು. ಅವರು ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದರು.
ಅಂದು ನಂದಿನಿ ಕೆಲಸದ ನಿಮಿತ್ತ ಕಾಲೇಜಿಗೆ ತೆರಳಿದ್ದಳು. ಮನೆಯಲ್ಲಿದ್ದ ಪ್ರೀತಂಗೆ ಅವಳ ಕಾರ್ಡ್ ಬೋರ್ಡ್ ಬಾಕ್ಸ್ ಕಣ್ಣಿಗೆ ಬಿದ್ದಿದೆ. ಅವಳ ಬಾಕ್ಸನ್ನು ಅವಳ ಒಪ್ಪಿಗೆ ಇಲ್ಲದೆ ತೆರೆಯುವುದು ತಪ್ಪು ಎನ್ನುವುದು ಅವನಿಗೆ ಗೊತ್ತು. ಆದರೂ ಪ್ರೀತಂ ಕುತೂಹಲದಿಂದ ತೆರೆದರೆ ವರ್ಷಗಳ ಕಾಲ ಬಾಟಲಿಯಲ್ಲಿ ಬಂಧಿಸಿಟ್ಟಿದ್ದ ಪಿಶಾಚಿಯನ್ನು ಹೊರಕ್ಕೆ ಬಿಟ್ಟಂತಾಗಿತ್ತು ಅವನ ಪರಿಸ್ಥಿತಿ. ಅದರಲ್ಲಿ ನಂದಿನಿ ಅನಾದಿ ಕಾಲದಿಂದಲೂ ಸಂಗ್ರಹಿಸಿಟ್ಟಿದ್ದ ವಸ್ತುಗಳಿದ್ದವು. ಒಂದು ವಸ್ತು ಸಂಗ್ರಹಾಲಯವನ್ನೇ ತೆರೆಯಬಹುದಿತ್ತು, ಅಷ್ಟೊಂದು ವಸ್ತುಗಳಿದ್ದವು. ಎಲ್ಲವೂ ಪ್ರೀತಂನವೇ.
ತಾನು ಪ್ರವಾಸ ಹೋಗಿದ್ದಾಗ ಕಳೆದು ಕೊಂಡಿದ್ದ ಹಳೇ ಟೂತ್ ಬ್ರಷ್, ವರ್ಷಗಳ ಹಿಂದೆ ಬಳಸಿ ಎಸೆದಿದ್ದ ಬಾಚಣಿಗೆ, ಕೂದಲು, ಕಾಲುಗುರು, ರಶೀದಿಗಳು ಮತ್ತು ಇನ್ನೂ ಹಲವು ವೈಯಕ್ತಿಕವೆಂದು ಕರೆಯಬಹುದಾದ ವಸ್ತುಗಳು ಅದರಲ್ಲಿದ್ದವು. ಎಲ್ಲವೂ ಅವನವೇ. ಇಷ್ಟು ದಿನ ಬಾಕ್ಸ್ ಅಸ್ತಿತ್ವವೇ ಅವನಿಗೆ ತಿಳಿದಿರಲಿಲ್ಲ. ಅಷ್ಟು ರಹಸ್ಯಮಯವಾಗಿ ನಂದಿನಿ ಅದನ್ನು ಕಾಪಾಡಿಕೊಂಡಿದ್ದಳು. ಅದರಲ್ಲಿಟ್ಟಿದ್ದ ರಶೀದಿ, ಟೂತ್‌ಬ್ರಶ್ ಗಳನ್ನು ನೆನಪಿಗಾಗಿ ಇಟ್ಟುಕೊಂಡಿದ್ದಾಳೆ ಎಂದೇನೋ ಕ್ಷಮಿಸಿಬಿಡಬಹುದು. ಆದರೆ ಉಗುರು, ಕೂದಲನ್ನು? ಅವನ್ನೆಲ್ಲಾ ನೋಡುತ್ತಿದ್ದಂತೆ ಹಳೆಯ ದೆವ್ವದ
ಸಿನಿಮಾಗಳೆಲ್ಲ ಪ್ರೀತಂನ ಕಣ್ಮುಂದೆ ಹಾದುಹೋಗಿವೆ. ಹೊರಕ್ಕೆ ಹೋಗಿದ್ದ ಗೆಳತಿ ವಾಪಸ್ ಬಂದಾಗ ಪ್ರೀತಂ ಮೊದಲು ನೋಡಿದ್ದು ಅವಳ ಕಾಲುಗಳನ್ನು. ಅವನ ಪುಣ್ಯಕ್ಕೆ ಕಾಲುಗಳು ಹಿಂದುಮುಂದಾಗಿರಲಿಲ್ಲ!