ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದು ಹೋಗಿವೆ. ಆ ಸಾಲಿಗೆ “ಅಡಚಣೆಗಾಗಿ ಕ್ಷಮಿಸಿ’ ಎಂಬ ಹೊಸಬರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದೀಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಭರತ್ ಎಸ್.ನಾವುಂದ ನಿರ್ದೇಶನದ ಈ ಚಿತ್ರ ಇದೀಗ ಬಿಡುಗಡೆಗೆ ರೆಡಿಯಾಗಿದೆ. ನಿರ್ದೇಶಕ ಭರತ್ ಅವರು ಕಳೆದ ಹನ್ನೆರಡು ವರ್ಷಗಳಿಂದಲೂ ಚಿತ್ರರಂಗದಲ್ಲಿ ಒಂದಷ್ಟು ಅನುಭವ ಪಡೆದುಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಚಿತ್ರಕ್ಕೆ ಕಥೆ, ಸಾಹಿತ್ಯ ಮತ್ತು ಸಾಹಸದ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.
ಈ ಚಿತ್ರ ಶುರುವಾಗಿದ್ದು, ಗೆಳೆಯರಿಂದ. ಅದರಲ್ಲೂ, ಕಾಲೇಜು ಗೆಳೆಯರೆಲ್ಲ ಸೇರಿಕೊಂಡು ಸಿನಿಮಾ ಮಾಡಬೇಕು ಎಂಬ ಆಸೆಯಿಂದ ಈ ಚಿತ್ರ ಶುರುಮಾಡಿದ್ದಾರೆ. ಕೊನೆಗೆ ಒಂದು ಹಂತದ ಚಿತ್ರೀಕರಣ ಮುಗಿಸಿದ ಬಳಿಕ ಒಂದಷ್ಟು ಹಣದ ಸಮಸ್ಯೆ ಎದುರಾಗಿದೆ. ಆಮೇಲೆ ಮುಂದೇನು ಎಂಬ ಪ್ರಶ್ನೆ ಕಾಡಿದ ಸಂದರ್ಭದಲ್ಲಿ ಒಂದಷ್ಟು ಮಂದಿ ಸೇರಿ ಚಿತ್ರಕ್ಕೆ ಹಣಕಾಸಿನ ಸಹಾಯ ಮಾಡಿದ್ದಾರೆ. ಈಗ ಚಿತ್ರ ಬಿಡುಗಡೆ ಹಂತಕ್ಕೆ ಬಂದು ನಿಂತಿದೆ.
ಅಂದಹಾಗೆ, “ಅಡಚಣೆಗಾಗಿ ಕ್ಷಮಿಸಿ’ ಚಿತ್ರದ ಶೀರ್ಷಿಕೆ ಕಥೆಗೆ ಪೂರಕವಾಗಿಯೇ ಇದೆ. ಚಿತ್ರದಲ್ಲಿ ಹದಿನಾಲ್ಕು ಪಾತ್ರಗಳು ಮುಖ್ಯವಾಗಿ ಕಾಣಸಿಗುತ್ತವೆ. ಇಲ್ಲಿರುವ ಪ್ರತಿ ಪಾತ್ರಕ್ಕೂ ಅದರದೇ ಆದಂತಹ ವಿಶೇಷತೆ ಇದೆ ಎಂಬುದು ನಿರ್ದೇಶಕರ ಮಾತು. ಇದೊಂದು ನೈಜ ಘಟನೆಯ ಸ್ಫೂರ್ತಿಯಿಂದ ಹುಟ್ಟಿಕೊಂಡ ಕಥೆ ಎನ್ನುವ ನಿರ್ದೇಶಕ ಭರತ್, ಭೂತಕಾಲ ಮತ್ತು ವರ್ತಮಾನ ಕಥೆ ಇಲ್ಲಿ ಸಾಗಲಿದೆ.
ನೋಡಗನ ಆಲೋಚನೆಯನ್ನು ಮುರಿದು ಹಾಕುವ ಸನ್ನಿವೇಶಗಳು ಸಹ ಇಲ್ಲಿ ಬರಲಿವೆ. ಸ್ಲಂನಲ್ಲಿ ವಾಸಿಸುವ ಜನರು ಒಳ್ಳೆಯದು ಮತ್ತು ಕೆಟ್ಟದ್ದನ್ನು ಮಾಡಿದಾಗ, ಸಮಾಜದ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂಬುದು ಕಥೆಯ ಒನ್‌ಲೈನ್. ಶೇ.80 ರಷ್ಟು ಚಿತ್ರೀಕರಣ ರಾತ್ರಿಯಲ್ಲೇ ನಡೆದಿದೆ. ಕಥೆ ಕೂಡ ರಾತ್ರಿಯೇ ನಡೆಯುವುದರಿಂದ, ಚಿತ್ರೀಕರಣ ಸಹ ಕತ್ತಲಲ್ಲೇ ನಡೆದಿದೆ.
ಇನ್ನುಳಿದಂತೆ ಮಡಿಕೇರಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರ ವೀಕ್ಷಿಸಿರುವ ಸೆನ್ಸಾರ್ ಮಂಡಳಿ “ಎ’ ಪ್ರಮಾಣ ಪತ್ರ ನೀಡಿದೆ ಎಂಬ ವಿವರ ನಿರ್ದೇಶಕರದ್ದು. ಚಿತ್ರದಲ್ಲಿ ಪ್ರದೀಪ್‌ವರ್ಮ, ಶ್ರೀಧರ್, ಶ್ರೀನಿವಾಸಪ್ರಭು, ಶಿವು, ಅರ್ಪಿತಾಗೌಡ, ಮೇಘ, ಪ್ರೀತಿ ಮುಂತಾದವರು ನಟಿಸಿದ್ದಾರೆ. ಸಂಗೀತ ನಿರ್ದೇಶಕ ಪ್ರದೀಪ್‌ವರ್ಮ ಇಲ್ಲಿ ಐದು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಜೊತೆಗೆ ಮುಖ್ಯ ಪಾತ್ರದಲ್ಲೂ ನಟಿಸಿದ್ದಾರೆ.
ಇಲಿ ಮೂರು ವಿಶೇಷ ಗೆಟಪ್‌ಗ್ಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಒಂದು ಚಾಲಕ, ಇನ್ನೊಂದು ತನಿಖಾಧಿಕಾರಿ ಪಾತ್ರ. ಮತ್ತೂಂದು ಪಾತ್ರ ತೆರೆಯ ಮೇಲೆ ನೋಡಬೇಕು ಎಂಬುದು ಪ್ರದೀಪ್‌ವರ್ಮ ಅವರ ಮಾತು. ಪ್ರದೀಪ್ ವರ್ಮ ಅವರ ತಂದೆ ಸದ್ಗುಣಮೂರ್ತಿ ಅವರು ಸಹ ಹಿರಿಯ ಸಂಗೀತ ನಿರ್ದೇಶಕರಾಗಿದ್ದವರು. ಈ ಚಿತ್ರಕ್ಕೆ ನಿರ್ಮಾಪಕರು ಹೌದು.
ಇವರಿಗೆ ಮಧುಸೂದನ್ ಶ್ರೀನಿವಾಸ್, ಭಾರ್ಗವಿ ಕಿಶೋರ್, ನಾಗೇಶ್‌ಕುಮಾರ್ ಕುಂದಾಪುರ ಮತ್ತು ಭರತ್ ಕೂಡ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದು, ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಸ್.ಎ.ಚಿನ್ನೇಗೌಡ, ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು ಅವರು ಚಿತ್ರದ ಟ್ರೇಲರ್ ಹಾಗೂ ಲಿರಿಕಲ್ ವಿಡಿಯೋವನ್ನು ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ.