ಉಗ್ರ ಹಫೀಜ್ ಸಯೀದ್‌ನ ವಿರುದ್ಧ ಪಾಕ್ ಕಠಿನ ಕ್ರಮಗಳನ್ನು ಕೈಗೊಂಡಿದೆ. ಉಗ್ರವಾದಿಗಳನ್ನು ಮಟ್ಟಹಾಕುವ ಕೆಲಸವೂ ಜೋರಾಗಿ ನಡೆಯುತ್ತಿದೆ. ನಿಜಕ್ಕೂ ಪಾಕ್ ಎಚ್ಚೆತ್ತು ಕೊಂಡಿದೆಯೇ ಅಥವಾ ಅಂತಾರಾಷ್ಟ್ರೀಯ ಸಮುದಾಯದ ಕಣ್ಣಿಗೆ ಮಣ್ಣೆರಚಲು ಹೀಗೆ ಮಾಡುತ್ತಿದೆಯೇ ಎನ್ನುವುದೇ ಪ್ರಶ್ನೆ.
ಮುಂಬಯಿ ನಗರದ ಮೇಲೆ 2008, ನ. 26ರಂದು ನಡೆದ ಭಯೋತ್ಪಾದಕ ದಾಳಿಯ ರೂವಾರಿ, ಎಲ್‌ಇಟಿ ಸ್ಥಾಪಕ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಗೃಹ ಬಂಧನಕ್ಕೊಳಗಾಗಿ ಸುಮಾರು ಒಂದು ತಿಂಗಳಾಗುತ್ತಾ ಬಂತು. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರಕ್ಕೇರಿದ ಬೆನ್ನಿಗೆ ಪಾಕಿಸ್ತಾನ ಕೈಗೊಂಡ ಈ ಕ್ರಮ ಅಚ್ಚರಿಯ ನಡೆಯಾಗಿತ್ತು. ಯಾರೂ ಪಾಕ್‌ಗೆ ಹಫೀಜ್‌ನನ್ನು ಬಂಧಿಸಿ ಎಂದು ಒತ್ತಾಯಿಸಿರಲಿಲ್ಲ, ಭಾರತ ಅವನ ವಿರುದ್ಧ ಇನ್ನಷ್ಟು ಸಾಕ್ಷ್ಯಾಧಾರ ಒದಗಿಸಿರಲಿಲ್ಲ. ಆದರೂ ಪಾಕಿಸ್ತಾನ ದಿಢೀರ್ ಎಂದು ಎಚ್ಚೆತ್ತುಕೊಂಡಂತೆ ನಟಿಸಿ ಹಫೀಜ್‌ನನ್ನು ಗೃಹ ಬಂಧನದಲ್ಲಿರಿಸಿತು. ದೇಶದ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಅಲ್ಲಿನ ಪ್ರಧಾನಿ, ಸೇನಾ ಮುಖ್ಯಸ್ಥರು ಹೇಳಿಕೊಳ್ಳುತ್ತಿದ್ದಾರೆ. ಹೀಗಿದ್ದರೂ ಟ್ರಂಪ್‌ಗೆ ಹೆದರಿಯೇ ಹಫೀಜ್‌ನನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂಬ ವಿಷಯ ರಹಸ್ಯವಾಗಿ ಉಳಿದಿಲ್ಲ. ಅವನ ಶಸ್ತ್ರಾಸ್ತ್ರ ಪರವಾನಿಗೆಗಳನ್ನು ಹಿಂದೆಗೆದುಕೊಳ್ಳಲಾಗಿದೆ, ವಿದೇಶ ಪ್ರಯಾಣವನ್ನು ತಡೆಹಿಡಿಯಲಾಗಿದೆ, ಅವನ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸಲಾಗಿದೆ. ಆದರೆ ಈಗ ಇರುವ ಪ್ರಶ್ನೆ ನಿಜಕ್ಕೂ ಪಾಕ್‌ಗೆ ಹಫೀಜ್‌ನನ್ನು ನಿಗ್ರಹಿಸಲು ಸಾಧ್ಯವೇ?
ಹಫೀಜ್ ದೇಶಕ್ಕೆ ಅಪಾಯಕಾರಿ ವ್ಯಕ್ತಿ ಎಂದು ವಾದಿಸುವ ಒಂದು ವರ್ಗ ಪಾಕಿಸ್ತಾನದಲ್ಲೂ ಇದೆ. ಅವರ ಸಂಖ್ಯೆ ಕಡಿಮೆಯಿದ್ದರೂ ಹಿಂದಿನಿಂದಲೂ ಅವರು ಸರಕಾರಕ್ಕೆ ಹಫೀಜ್ ಕುರಿತು ಎಚ್ಚರಿಕೆ ನೀಡುತ್ತಲೇ ಇದ್ದರು. ಆದರೆ ಯಾರ ಮಾತಿಗೂ ಕ್ಯಾರೇ ಎನ್ನದ ಪಾಕ್ ಸರಕಾರ ಯಕಶ್ಚಿತ್ ತನ್ನ ಪ್ರಜೆಗಳ ಮಾತು ಕೇಳುತ್ತದೆಯೇ? ಹೀಗಾಗಿ ಆತ ಪಾಕಿಸ್ಥಾನದಲ್ಲಿ ಯಾವುದೇ ನಿರ್ಬಂಧವಿಲ್ಲದೆ ಓಡಾಡುತ್ತಿದ್ದ. ರ್ಯಾಲಿಗಳನ್ನು ಸಂಘಟಿಸಿ ಭಾರತ ಮತ್ತು ಅಮೆರಿಕದ ವಿರುದ್ಧ ಕಿಡಿ ಕಾರುತ್ತಿದ್ದ. ಹಫೀಜ್‌ನನ್ನು ಬಂಧಿಸಬೇಕೆಂದು ಭಾರತ ಮಾಡಿದ ಒತ್ತಾಯ, ಅಮೆರಿಕ ನೀಡಿದ ಎಚ್ಚರಿಕೆಗಳಿಗೆಲ್ಲ ಪಾಕ್ ಮಣಿದಿರಲಿಲ್ಲ. ಇದಕ್ಕೆ ಕಾರಣ ಹಫೀಜ್ ಪಾಕಿಸ್ತಾನದಲ್ಲಿ ಹೊಂದಿದ್ದ ಪ್ರಭಾವ. ಪಾಕಿಸ್ಥಾನದ ಸೇನೆ ಮತ್ತು ಗುಪ್ತಚರ ಪಡೆ ಐಎಸ್‌ಐ ಅವನನ್ನು ರಹಸ್ಯವಾಗಿ ಬೆಂಬಲಿಸುತ್ತಿವೆ.
ಸಮಾಜಸೇವೆಯ ಸೋಗು ಹಾಕಿರುವ ಅವನ ಜಮಾತ್ -ಉದ್-ದಾವಾ ಎಂಬ ಸಂಘಟನೆ ಪಾಕಿಸ್ತಾನದ ಪ್ರತಿ ನಗರದಲ್ಲೂ ಸಕ್ರಿಯವಾಗಿದ್ದು, ಕನಿಷ್ಠ 260 ಶಾಖೆಗಳ ಜಾಲ ಹೊಂದಿದೆ. ಸಾವಿರಾರು ಮದ್ರಸಗಳು ಜಮಾತ್ ಅಧೀನದಲ್ಲಿವೆ. ಕಿಂಡರ್‌ಗಾರ್ಟನ್‌ನಿಂದ ಹಿಡಿದು ಕಾಲೇಜು ತನಕ ಬ್ರೈನ್‌ವಾಶ್ ಮಾಡುವ ಶಿಕ್ಷಣ ಸಂಸ್ಥೆಗಳು ಜಮಾತ್ ಅಡಿಯಲ್ಲಿವೆ. ಫಲಾಹ್-ಇ-ಇನ್ಸಾನಿಯತ್ ಫೌಂಡೇಶನ್ ಎಂಬ ಜಮಾತ್‌ನ ಇನ್ನೊಂದು ಅಂಗ ಪಾಕಿಸ್ತಾನದಲ್ಲಿ ಸುಮಾರು 35 ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈ ಸಂಘಟನೆಯನ್ನು ಅಮೆರಿಕ ನಿಷೇಧಿಸಿದ್ದರೂ ಈಗಲೂ ಇದು ಪಾಕಿಸ್ಥಾನದ ಅತಿ ದೊಡ್ಡ ಎನ್‌ಜಿಒ. ಹಫೀಜ್ ತನ್ನದೇ ಆದ ನ್ಯಾಯಾಲಯಗಳನ್ನೂ ಹೊಂದಿದ್ದಾನೆ. ಪಾಕಿಸ್ಥಾನದ ನ್ಯಾಯಾಲಯಗಳಿಗಿಂತ ಹಫೀಜ್‌ನ ನ್ಯಾಯಾಲಯಗಳಲ್ಲಿ ತೀರ್ಪುಗಳು ತ್ವರಿತವಾಗಿ ಸಿಗುತ್ತವೆ. ಹಫೀಜ್‌ನ ಒಂದು ಆದೇಶಕ್ಕಾಗಿ ಸಜ್ಜಾಗಿ ನಿಂತಿರುವ ಸುಮಾರು 2 ಲಕ್ಷ ಮಂದಿ ಕಾಲಾಳುಗಳ ಪಡೆಯಿದೆ. ಎಲ್ಲಕ್ಕೂ ಮೇಲಾಗಿ ಹಫೀಜ್ ಕಾಲಿಗೆ ಬಿದ್ದು ಕೃತಾರ್ಥರಾಗುವ ರಾಜಕಾರಣಿಗಳಿದ್ದಾರೆ. ಒಟ್ಟಾರೆ ಹೇಳುವುದಾದರೆ ಪಾಕಿಸ್ತಾನದಲ್ಲಿ ಹಫೀಜ್ ಎಂದರೆ ಪರ್ಯಾಯ ಸರಕಾರ ಇದ್ದಂತೆ. ಸರಕಾರಕ್ಕಿಂತ ಉತ್ತಮ ಸಂಘಟನಾ ವ್ಯವಸ್ಥೆಯನ್ನು ಅವನು ಹೊಂದಿದ್ದಾನೆ. ಇಂತಹ ಉಗ್ರನನ್ನು ಬಂಧಿಸಿಡುವಷ್ಟು ಬಲಿಷ್ಠವಾಗಿವೆಯೇ ಪಾಕಿಸ್ತಾನದ ಜೈಲುಗಳು?
ಉಗ್ರ ರಾಷ್ಟ್ರಗಳ ಪಟ್ಟಿಗೆ ಸೇರುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಫೀಜ್ ಜತೆಗೆ ಸರಕಾರ ಮಾಡಿಕೊಂಡ ಒಪ್ಪಂದವೇ ಗೃಹ ಬಂಧನದ ನಾಟಕ ಎಂಬ ಗುಮಾನಿ ಹಿಂದಿನಿಂದಲೂ ಇದೆ. ಶಾಶ್ವತವಾಗಿ ಹಫೀಜ್‌ನನ್ನು ಜೈಲಿಗೆ ತಳ್ಳುವ ಸಾಮರ್ಥ್ಯ ಮತ್ತು ಇಚ್ಛಾಶಕ್ತಿ ಅಲ್ಲಿನ ಸರಕಾರಕ್ಕೆ ಇಲ್ಲ. ಗೃಹ ಬಂಧನ ಅವಧಿ ಮುಗಿದ ಬಳಿಕ ಹೊರಬರುವ ಹಫೀಜ್ ಇನ್ನಷ್ಟು ಉಗ್ರವಾಗಿ ಭಾರತದ ಮೇಲೆರಗಬಹುದು. ನಾವು ಈಗಿನಿಂದಲೇ ಎಚ್ಚರಿಕೆಯಿಂದಿರಬೇಕು.