ದಾವಣಗೆರೆ: ಯಾವುದೇ ರೀತಿಯಲ್ಲಿನ ಅನುಕರಣೆ ಬದುಕಿನ ಗುರಿ ಈಡೇರಿಕೆ, ಉತ್ತಮ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ಕಾರಿಗನೂರು ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ಜಿ.ಸಿ. ನಿರಂಜನ್ ತಿಳಿಸಿದ್ದಾರೆ.
ಮಂಗಳವಾರ ಎಆರ್‌ಜಿ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪದಲ್ಲಿ ಮಾತನಾಡಿದ ಅವರು, ಪ್ರಸ್ತುತ ವಾತಾವರಣದಲ್ಲಿ ಯುವ ಜನಾಂಗ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಲ್ಲೇ ಮುಳುಗಿದೆ.
ಯಾವುದೇ ಸಂಸ್ಕೃತಿಯನ್ನು ಅನುಕರಣೆ ಮಾಡಿದರೂ ಅದು ನಮ್ಮತನದ ಜೊತೆಗೆ ಬದುಕಿನ ಗುರಿ ಈಡೇರಿಕೆ, ಉತ್ತಮ ಬೆಳವಣಿಗೆಗೆ ಪೂರಕವಾಗಿರಬೇಕು ಎಂದರು. ಇಂದಿನ ಆಧುನಿಕ, ವೈಜ್ಞಾನಿಕ ಯುಗದಲ್ಲಿ ಶಿಕ್ಷಣ ಒಳಗೊಂಡಂತೆ ಎಲ್ಲಾ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆ, ಪೈಪೋಟಿ ಇದೆ.
ಯಾವುದೇ ಕ್ಷೇತ್ರದಲ್ಲಿ ಎಂಥದ್ದೇ ಸಂದರ್ಭದಲ್ಲಿ ಅನಾರೋಗ್ಯಕರ ಪೈಪೋಟಿ ಒಳ್ಳೆಯದಲ್ಲ. ಅದು ಮಾರಕ ಎಂದು ಎಚ್ಚರಿಸಿದರು. ವಾಣಿಜ್ಯ ಸಂಬಂಧಿ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅದೇ ರೀತಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಇವೆ.
ಸತತ ಅಭ್ಯಾಸ, ಜೀವನದ ಗುರಿ ತಲುಪುವ ಛಲದೊಂದಿಗೆ ಚೆನ್ನಾಗಿ ಅಭ್ಯಾಸ ಮಾಡುವ ಮೂಲಕ ಉತ್ತಮ ಬದುಕನ್ನ ರೂಪಿಸಿಕೊಳ್ಳಬೇಕು ಎಂದರು. ಪ್ರಾಚಾರ್ಯ ಪ್ರೊ| ಕೆ.ಬಿ. ಕುಬೇರಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕವಿ ಯುಗಧರ್ಮ ರಾಮಣ್ಣ ಇತರರು ಇದ್ದರು.