ಬೆಂಗಳೂರು: “ಈ ದೇಶದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ರೈತರ ಗೋಳು ಮುಗಿಯಲ್ಲ. ಅಧಿಕಾರ ಬೇಕಾದಾಗ ರೈತ ಈ ದೇಶದ ಬೆನ್ನಲುಬು ಎಂದು ಭಾಷಣ ಮಾಡುತ್ತಾರೆ, ಅಧಿಕಾರಕ್ಕೆ ಬಂದಾಗ ಆತನ ಬೆನ್ನಲುಬು ಮುರೀತಾರೆ’. ಹೀಗೆಂದು, ರೈತನಿಗೆ ಸೇರಿದ ಜಮೀನನ್ನು ಅರಣ್ಯ ಭೂಮಿಯೆಂದು ಘೋಷಿಸಿದ ಪ್ರಕರಣವೊಂದರ ಅರ್ಜಿ ವಿಚಾರಣೆ ವೇಳೆ ಆಳುವ ವರ್ಗ ರೈತರನ್ನು ನಡೆಸಿಕೊಳ್ಳುವ ರೀತಿ ಬಗ್ಗೆ ಹೈಕೋರ್ಟ್ ಬುಧವಾರ ತೀವ್ರ ಬೇಸರ ವ್ಯಕ್ತಪಡಿಸಿತು.
ಕೋಲಾರ ಜಿಲ್ಲೆ ಶ್ರೀನಿವಾಸಪುರದ ರೈತ ಬಿ.ಎಂ.ಪ್ರಕಾಶ್ ಅವರಿಗೆ ಸೇರಿದೆ ಎನ್ನಲಾದ ನಾಲ್ಕು ಎಕರೆ ಜಮೀನು ಅರಣ್ಯ ಪ್ರದೇಶವೆಂದು ಹೇಳಿ ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ
ನ್ಯಾ.ಬಿ.ವೀರಪ್ಪ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು. ಈ ವೇಳೆ, ನ್ಯಾ.ವೀರಪ್ಪ ಅವರು “ಅಧಿಕಾರಕ್ಕೆ ಬರುವ ಮೊದಲು ಪ್ರತಿಯೊಬ್ಬರು ರೈತರ ರಕ್ಷಣೆ ಮಾಡುತ್ತೇವೆ, ಅವರನ್ನು ಉದಾಟಛಿರ ಮಾಡುತ್ತೇವೆ ಎಂದು ಹೇಳುತ್ತಾರೆ. ಅಧಿಕಾರ ಸಿಕ್ಕ ಮೇಲೆ ರೈತರನ್ನು ಮರೆತು ಬಿಡುತ್ತಾರೆ. ರೈತರ ಹಿತ ಅನ್ನುವುದು ಬರೀ ಭಾಷಣಗಳಿಗೆ ಮಾತ್ರ. ದೇಶದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ರೈತರನ್ನು ಮಾತ್ರ ರಕ್ಷಣೆ ಮಾಡಲ್ಲ. ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ, ರೈತನ ಬೆನ್ನೆಲುಬನ್ನೇ ಮುರಿದು ಮೂಲೆಗುಂಪು
ಮಾಡುತ್ತಾರೆ. ಇದು ನಮ್ಮ ರೈತನ ಪರಿಸ್ಥಿತಿ ಎಂದು ಮೌಖೀಕವಾಗಿ ಬೇಸರ ವ್ಯಕ್ತಪಡಿಸಿದರು.
ವಿಚಾರಣೆ ವೇಳೆ ಅರ್ಜಿದಾರ ರೈತ ಬಿ.ಎಂ.ಪ್ರಕಾಶ್ ಪರ ವಕೀಲರು ವಾದಿಸಿ, ಶ್ರೀನಿವಾಸಪುರ ಗ್ರಾಮದಲ್ಲಿ ಸರ್ವೇ ನಂಬರ್ 84ರಲ್ಲಿ 4.38 ಎಕರೆ ಜಮೀನು ಪ್ರಕಾಶ್ ಅವರಿಗೆ ಸೇರಿದೆ. ಈ ಜಮೀನನ್ನು 1952ರಲ್ಲಿ ಪ್ರಕಾಶ್ ಅವರ ಅಜ್ಜನಿಗೆ ಕಂದಾಯ ಇಲಾಖೆ ಮಂಜೂರು ಮಾಡಿ, ಸಾಗುವಳಿ ಚೀಟಿ ನೀಡಿದೆ. 2007ರಲ್ಲಿ ಆ ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂದು ಆದೇಶ ಹೊರಡಿಸಿದೆ. ಈ ಆದೇಶ ಕಾನೂನು ಬಾಹಿರ ಎಂದು ವಾದಿಸಿದರು.
ಇದಕ್ಕೆ, 1952ರಿಂದಲೂ ವಿವಾದಿತ ಜಮೀನು ಪ್ರಕಾಶ್ ಅವರ ಕುಟುಂಬಸ್ಥರು ಸ್ವಾಧೀನದಲ್ಲಿದ್ದಾಗ, 2007ರಲ್ಲಿ ಅರಣ್ಯ ಪ್ರದೇಶವೆಂದು ಹೇಗೆ ತೀರ್ಮಾನಿಸಿದ್ದೀರಿ, ಇಷ್ಟು ವರ್ಷ ಅಧಿಕಾರಿಗಳು ಏನು ಮಾಡಿದರು. ಹಾಗೇ ನೋಡಿದರೆ ಈ ಪ್ರಕರಣದಲ್ಲಿ ಮೊದಲು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸರ್ಕಾರಿ ವಕೀಲರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ಕಂದಾಯ ಇಲಾಖೆ ಕಾರ್ಯದರ್ಶಿ, ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿ, ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗೆ ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿದರು.
ಪ್ರಕರಣವೇನು?: ಕೋಲಾರದ ಶ್ರೀನಿವಾಸಪುರ ಗ್ರಾಮದ ಪ್ರಕಾಶ್ ಎಂಬುವರಿಗೆ ಸೇರಿದ 4.38 ಎಕರೆ ಜಮೀನು ಇದೆ. ಆದರೆ, ಈ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು, ಅದನ್ನು ತೆರವುಗೊಳಿಸಬೇಕು ಎಂದು 2007ರಲ್ಲಿ ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಪ್ರಕಾಶ್ ಸಲ್ಲಿಸಿದ್ದ ಮೇಲ್ಮನವಿಯನ್ನು 2014ರಲ್ಲಿ ಜೂ.6ರಂದು ಬೆಂಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಜಾಗೊಳಿಸಿದ್ದರು. ಈ ಆದೇಶ ಪ್ರಶ್ನಿಸಿ ಪ್ರಕಾಶ್ ತಕರಾರು ಅರ್ಜಿ ಸಲ್ಲಿಸಿದ್ದಾರೆ.