Advertisement

Desi Swara: ಮನುಷ್ಯ ದೇವರಾದರೆ ಏನಾಗಬಹುದು ? ದೇವರಾಗಲು ನಾವು ಏನು ಮಾಡಬೇಕು ?

11:54 AM Feb 17, 2024 | Nagendra Trasi |

ರಾಮ ದೇವರು ಆದದ್ದು ಯಾವಾಗ ? ಹೇಗೆ? ನಾನು ದೇವರಾಗಬಹುದಾ? ದೇವರಾಗಲು ಏನು ಮಾಡಬೇಕು? ಭಾರತಕ್ಕೆ ಹೋದರೆ ಅಯೋಧ್ಯೆಗೆ ಹೋಗೋಣವೆ? ಹನುಮಂತನ ಊರು ಕರ್ನಾಟಕದಲ್ಲಿದೆಯಂತೆ, ನಿನಗೆ ಗೊತ್ತೆ? ಹನುಮಂತನಿಗೆ ಅಷ್ಟು ಶಕ್ತಿ ಹೇಗೆ ಬಂತು? ಹೀಗೆ ಆ ಒಂದು ಪ್ರಶ್ನೆಯ ಒಳಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರಕ್ಕಾಗಿ ಮುಖ ನೋಡುತ್ತಾ ನನ್ನ ಪಾಲಿನ ಭಕ್ತ ಪ್ರಹ್ಲಾದನಂತೆ ಭಾಸವಾಗುತ್ತ ನಿಂತ. ಸಿಟ್ಟು ಸರ್ರನೆ ಇಳಿದು ಹಾಸ್ಯಕ್ಕೆ ಬದಲಾಗಿ ನಗುತ್ತಾ ಮೊದಲು ಟಿವಿ ನೋಡುವುದನ್ನು ಬಿಟ್ಟರೆ ಅಥವಾ ಕಡಿಮೆ ಮಾಡಿದರೆ ನಮ್ಮ ಪಾಲಿಗೆ ನೀನು ದೇವರಾಗುವುದಂತು ಸತ್ಯ ಎಂದು ಹೇಳಿ ನಾಟಕೀಯವಾಗಿ ಕೈಮುಗಿದೆ.

Advertisement

ಅತ್ಯಂತ ರೋಚಕವಾದ ಪ್ರಶ್ನೆಯಲ್ಲವೆ? ಊಹಿಸಿ, ಯಾರು ಮತ್ತು ಏಕೆ ಇಂತಹ ಪ್ರಶ್ನೆಯನ್ನು ಕೇಳಬಹುದು? ಒಂದೊಮ್ಮೆ ಇದಕ್ಕೆ ಉತ್ತರವಿದ್ದಲ್ಲಿ ಅಥವಾ ದೊರೆತರೆ ಎಲ್ಲೆಲ್ಲಿ ಏನೇನೂ ಘಟನೆಗಳು ಜರಗಬಹುದು, ಎಂತೆಂತಹ ಕಂಟಕಗಳು ಸೃಷ್ಟಿಯಾಗಬಹುದು? ಯಾರ್ಯಾರ ಮನಸಲ್ಲಿ ಎಂತೆಂತಂತಹ ಆಸೆ-ದುರಾಸೆಗಳು ಹುಟ್ಟಿಕೊಳ್ಳಬಹುದು? ಊಹಿಸುವುದು ಅಸಾಧ್ಯವೇ ಸರಿ.

ಹೀಗಿರುವಾಗ ಕಳೆದ ರವಿವಾರ ಬೆಳ್ಳಂಬೆಳಗ್ಗೆ ಮಗ ತನ್ನ ಮನದ ಇಂಗಿತವನ್ನು ಹೇಳಿಕೊಳ್ಳುತ್ತಾ ಮುಂದೆ ತಾನೊಬ್ಬ ದೊಡ್ಡ
ಫುಟ್ಬಾಲ್‌ಪಟುವಾಗಿ ಮತ್ತೆ ನಮ್ಮನ್ನು (ಅಪ್ಪ, ಅಮ್ಮ ತಂಗಿ ಮತ್ತು ಉಳಿದವರೆಲ್ಲರನ್ನು) ಲಂಡನ್ನಿಗೆ ಮರಳಿ ಕರೆತರುವುದಾಗಿಯೂ ಅದಕ್ಕಾಗಿ ತಾನು ಫುಟ್ಬಾಲ್‌ ವರಸೆಗಳನ್ನು ಟಿವಿಯಲ್ಲಿ ನೋಡಿ ಕಲಿಯುತ್ತಿರುವುದಾಗಿ ಹೇಳಿ ಟಿವಿಯನ್ನು ಹಚ್ಚಲು ಮುಂದಾದ. ಸದಾ ಟಿವಿ ನೋಡುವುದು, ಅದಕ್ಕಾಗಿ ನೆವನಗಳನ್ನು ಹೇಳುವುದು. ಹೇಗಾದರು ಸರಿ ಟಿವಿ ನೋಡಬೇಕು ಮತ್ತು ಅದರ ಮುಂದೆ ನಿಂತು ಚೆಂಡನ್ನು ಒದೆಯುತ್ತಿರಬೇಕು ಎನ್ನುದಷ್ಟೆ ಪ್ರಪಂಚ ಅಂದುಕೊಂಡಂತಿರುವ ಅವನು ಮತ್ತು ಅವನ ಟಿವಿ ನೋಡುವ ಗೀಳು ಅದರಲ್ಲೂ ಆ ಫುಟ್ಬಾಲ್‌ ಆಟಗಳು ಅದರಲ್ಲಿನ ಒರಟುತನ ಅಳವಡಿಸಿಕೊಳ್ಳುತ್ತಿರುವುದನ್ನು ನೋಡಿ ನೋಡಿ ನಮಗೆ ಅದು ಒಂದು ರೀತಿಯ ಗೋಳಾಗಿ ಹೋಗಿದೆ.

ಈ ಅವಿರತ ಯಾತನೆಯಿಂದ ಬಸವಳೆದು ಕೊನೆಗೆ ಒಂದು ಒಪ್ಪಂದಕ್ಕೆ ಬಂದು ರಜಾ ದಿನಗಳಲ್ಲಿ ಟಿವಿ ನೋಡುವುದಾದರೆ ಮೊದಲು ಬೆಳಗಿನ ಎಲ್ಲ (ಹಲ್ಲುಜ್ಜುವ, ಸ್ನಾನ ಶೌಚ ಇತ್ಯಾದಿ) ಕಾರ್ಯಕ್ರಮಗಳನ್ನು ಮೊದಲು ಮುಗಿಸಬೇಕು ಅನ್ನುವ ಕರಾರಿನೊಂದಿಗೆ ರವಿವಾರ ಪ್ರಾರಂಭವಾಯಿತು. ಹಲ್ಲುಜ್ಜಿ ಸ್ನಾನಮಾಡಿ ತರಾತುರಿಯಲ್ಲಿ ಬಟ್ಟೆಗಳನ್ನು ಹಾಕಿಕೊಳ್ಳುತ್ತಾ ಟಿವಿ ನೋಡಲು ತಯಾರಾದ ಮಗರಾಯನಿಗೆ ಅದೇನು ಹೊಳೆಯಿತೊ ಗೊತ್ತಿಲ್ಲ. ಬಹುಶಃ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯ ಸದ್ದು ಗದ್ದಲ ಜೋರಾಗಿಯೇ ಇದ್ದುದ್ದರಿಂದ ಮತ್ತು ಕಳೆದವಾರ ಅದರಲ್ಲಿ ಭಾಗಿಯಾಗಿದ್ದರಿಂದ ಒಳಗಡೆ ಹೋಗಿ ದೇವರ ಮುಂದೆ ನಿಂತು ಅವನಿಗೆ ಬೈದಂತೆ ಕೆಲವು ಮಂತ್ರಗಳನ್ನು ಹೇಳಿ ಹೊರ ಬಂದವನೆ ಏನೇನೊ ಹುಡುಕಿ ಕೊನೆಗೆ ಟಿವಿಯಲ್ಲಿ ಮಕ್ಕಳಿಗಾಗಿ ಕಾರ್ಟೂನ್‌ ರೂಪದಲ್ಲಿ ನಿರ್ಮಾಣಗೊಂಡಿರುವ ರಾಮಾಯಣದ ವೀಡಿಯೋ ಒಂದನ್ನು ಹಾಕಿ ನೋಡಲಾರಂಭಿಸಿದ.

ಅಂತು ಫುಟ್ಬಾಲ್‌ ಭೂತ ಸ್ವಲ್ಪ ಹೊತ್ತಾದರೂ ಬಿಟ್ಟಿತಲ್ಲ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಪ್ರಶ್ನೆಗಳ ಸುರಿಮಳೆ ಮಾಡಲಾರಂಭಿಸಿದ. ರಾಮಾಯಣ ನಿಜವಾಗಿಯೂ ನಡೆದಿತ್ತಾ ? ಅಥವಾ ಕಾಲ್ಪನಿಕ ಕಥೆಯಾ ? ದಶರಥ ಮಹಾರಾಜನಿಗೆ ಮೂರು ಜನ ಪತ್ನಿಯರಿದ್ದಿದ್ದೇಕೆ? ಒಬ್ಬರೇ ಇದ್ದಿದ್ದರೆ ರಾಮ ಆರಾಮವಾಗಿ ಅಪ್ಪ ಅಮ್ಮನ ಜತೆಯಲ್ಲಿ ಇರಬಹುದಿತ್ತಲ್ಲವೆ ? ಸೀತೆಯ ಅಪ್ಪ ಯಾರು? ಅವರ ಊರು ಯಾವುದು? ಅವರೇಕೆ ಸಹಾಯ ಮಾಡಲಿಲ್ಲ? ಹೀಗೆ ಪ್ರಶ್ನೆಗಳು ತೂರಿ ಬರಲಾರಂಭಿಸಿದವು. ಒಂದೊಂದನ್ನು ನನಗೆ ತಿಳಿದಷ್ಟು, ತಕ್ಕಮಟ್ಟಿಗೆ ಉತ್ತರಿಸಲು ಆರಂಭಿಸಿದೆ.

Advertisement

ರಾಮಾಯಣ ಸಾವಿರಾರು ವರ್ಷಗಳ ಹಿಂದೆ ತ್ರೇತಾಯುಗದಲ್ಲಿ ನಿಜವಾಗಿಯೂ ನಡೆದದ್ದು, ಅದನ್ನು ವಾಲ್ಮೀಕಿ ಮಹರ್ಷಿಗಳು ರಚಿಸಿದ್ದಾರೆ ಎಂದು ತಿಳಿಸಿದೆ. ಆಗಿನ ಕಾಲದಲ್ಲಿ ಬಹುಪತ್ನಿತ್ವ ರೂಢಿಯಲ್ಲಿ ಇದ್ದುದ್ದರಿಂದ ದಶರಥ ಮಹಾರಾಜನಿಗೆ ಮೂವರು ಪತ್ನಿಯರಿದ್ದರು ಎಂದು ಹೇಳಿ, ಸೀತಾ ಜನಕ ರಾಜನ ಮಗಳು ಮತ್ತು ಅವಳ ಊರು ಮಿಥಿಲೆ. ಅವಳನ್ನು ರಾಮ ಸ್ವಯಂವರದಲ್ಲಿ ಶಿವನ ಧನುಸ್ಸನ್ನು ಮುರಿದು ಮದುವೆಯಾದನು ಎಂದು ಸಂಕ್ಷಿಪ್ತವಾಗಿ ತಿಳಿಸಿದೆ. ಅಲ್ಲಿಗೆ ಸ್ವಲ್ಪ ಸಮಾಧಾನಗೊಂಡು ಟಿವಿ ನೋಡುವುದನ್ನು ಮುಂದುವರಿಸಲು ಹೋದ.

ಹತ್ತು ಹದಿನೈದು ನಿಮಿಷಗಳು ಕಳೆದಿರಬಹುದು ಊಹಿಸಿದಂತೆ ಮತ್ತೆ ಪ್ರತ್ಯಕ್ಷನಾದ. ಈ ಬಾರಿ ಪ್ರಶ್ನೆ ರಾಮಾಯಣ ನೀನು ನೋಡಿದ್ದೀಯಾ ಎಂದು? ಹೌದು ನೋಡಿದ್ದೇನೆ ಎಂದೆ, ಪೂರ್ಣವಾಗಿ ನೋಡಿದ್ದಿಯಾ? ಹೌದು ನಾನು ಚಿಕ್ಕವನಿದ್ದಾಗ ರಮಾನಂದ ಸಾಗರ್‌ ನಿರ್ಮಾಣದ ರಾಮಾಯಣ ದೂರದರ್ಶನದಲ್ಲಿ ಪ್ರತೀ ರವಿವಾರ ಬೆಳಗ್ಗೆ ಪ್ರಸಾರಗೊಳ್ಳುತ್ತಿತ್ತು. ಆಗ ನಮ್ಮ ಮನೆಯಲ್ಲಿ ಟಿವಿ ಇಲ್ಲದ್ದಿದ್ದುದ್ದರಿಂದ ಮತ್ತು ನಮ್ಮ ಅಜ್ಜಿಯವರಾದ ಗುಂಡಮ್ಮ ಶ್ರೀ ಭೀಮಾಚಾರ ಜೋಷಿಯವರ ಪುಣ್ಯದಿಂದ ನಮ್ಮ ಊರಿನ (ದೇವದುರ್ಗದ) ಪ್ರತಿಷ್ಠಿತ ಮನೆತನವಾದ ಹಂಚಾಟೆ ಬಂಧುಗಳ (ಗೋವಿಂದರಾವ್‌ ಹಂಚಾಟೆ, ಹನುಮಂತರಾವ್‌ ಹಂಚಾಟೆ, ರಾಜಾರಾಮ ಹಂಚಾಟೆ, ಮೋಹನ್‌ ರಾವ್‌ ಮಹೇಂದ್ರಕರ್‌, ಡಾ| ಶ್ರೀನಿವಾಸರಾವ ಹಂಚಾಟೆ ಯವರ) ಮನೆಯಲ್ಲಿ ಬಿಟ್ಟು ಬಿಡದೆ ಪೂರ್ಣವಾಗಿ ನೋಡುವ ಅವಕಾಶ ದೊರೆತಿದ್ದನ್ನು ಮೆಲುಕು ಹಾಕುತ್ತಾ ಅವನಿಗೆ ವಿವರಿಸಿದೆ ಮತ್ತು ಈ ಬಾರಿ ಊರಿಗೆ ಹೋದಾಗ ಅವನಿಗೆ ಆ ಮನೆಗಳನ್ನು ತೋರಿಸುವುದಾಗಿ ಹೇಳಿದೆ. ಸರಿ ಎನ್ನುತ್ತ ಸಿಡಿಮಿಡಿಗೊಳ್ಳುವ ಹಂತದಲ್ಲಿದ್ದ ನನ್ನತ್ತ ನೋಡಿ ಮತ್ತೊಂದು ಪ್ರಶ್ನೆಯಿದೆ ಎಂದು ಕೇಳಲು ಅಂಗಲಾಚಿದ.

ಸ್ವಲ್ಪ ಸಿಟ್ಟಿನಿಂದಲೆ ಏನೂ ಎಂಬಂತೆ ಅವನತ್ತ ನೋಡಿದೆ ಅಷ್ಟೇ. ಒಂದೇ ಉಸಿರಿನಲ್ಲಿ ರಾಮ ದೇವರು ಆದದ್ದು ಯಾವಾಗ ? ಹೇಗೆ? ನಾನು ದೇವರಾಗಬಹುದಾ? ದೇವರಾಗಲು ಏನು ಮಾಡಬೇಕು? ಭಾರತಕ್ಕೆ ಹೋದರೆ ಅಯೋಧ್ಯೆಗೆ ಹೋಗೋಣವೆ? ಹನುಮಂತನ ಊರು ಕರ್ನಾಟಕದಲ್ಲಿದೆಯಂತೆ, ನಿನಗೆ ಗೊತ್ತೆ? ಹನುಮಂತನಿಗೆ ಅಷ್ಟು ಶಕ್ತಿ ಹೇಗೆ ಬಂತು? ಹೀಗೆ ಆ ಒಂದು ಪ್ರಶ್ನೆಯ ಒಳಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರಕ್ಕಾಗಿ ಮುಖ ನೋಡುತ್ತಾ ನನ್ನ ಪಾಲಿನ ಭಕ್ತ ಪ್ರಹ್ಲಾದನಂತೆ ಭಾಸವಾಗುತ್ತ ನಿಂತ. ಸಿಟ್ಟು ಸರ್ರನೆ ಇಳಿದು ಹಾಸ್ಯಕ್ಕೆ ಬದಲಾಗಿ ನಗುತ್ತಾ ಮೊದಲು ಟಿವಿ ನೋಡುವುದನ್ನು ಬಿಟ್ಟರೆ ಅಥವಾ ಕಡಿಮೆ ಮಾಡಿದರೆ ನಮ್ಮ ಪಾಲಿಗೆ ನೀನು ದೇವರಾಗುವುದಂತು ಸತ್ಯ ಎಂದು ಹೇಳಿ ನಾಟಕೀಯವಾಗಿ ಕೈಮುಗಿದೆ.

ಮುಂದುವರಿದು ದೇವರಾಗಬೇಕೆಂದರೆ ಯಾವಾಗಲು ಒಳ್ಳೆಯದನ್ನು ಯೋಚಿಸಬೇಕು, ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಹೇಳಬೇಕು, ಒಳ್ಳೆಯ ಹಾದಿಯಲ್ಲಿ ನಡೆಯಬೇಕು. ಶ್ರೀ ರಾಮ ತನ್ನ ಜೀವಿತಾವಧಿಯಲ್ಲಿ ಎಂತಹ ಕಷ್ಟಗಳು ಬಂದರು ಸಹಿಸಿ ಅವುಗಳೆಲ್ಲವನ್ನು ಪಾಲಿಸಿದ್ದರಿಂದ ಜನರು ಮರ್ಯಾದಾ ಪುರುಷೋತ್ತಮನೆಂದು ಇಂದಿಗೂ ಅವನನ್ನು ಪೂಜಿಸುತ್ತಾರೆ ಎಂದು ತಿಳಿಸಿದೆ. ಅಲ್ಲಿಗೆ ನಾನು ಹಾಗೆ ಮಾಡುತ್ತೇನೆ, ಸಾಕಷ್ಟು ಶಕ್ತಿಯನ್ನು ಗಳಿಸಿ ತನ್ನ ಫುಟ್ಬಾಲ್‌ ತಂಡವನ್ನು ಗೆಲ್ಲಿಸುತ್ತೇನೆ ಎಂದು ಹೇಳುತ್ತಾ ಟಿವಿ ನೋಡುವುದನ್ನು ಮುಂದುವರಿಸಲು ಹೋದ. ಅನಂತರ ನಾನು ಒಂದು ಕ್ಷಣ ಭಾರತದಲ್ಲಿರುವ ಅವನ ಅಜ್ಜ ಅಜ್ಜಿಯರು ಈ ಪ್ರಶ್ನಾಚಾರಿಯ ಹಾವಳಿಯಿಂದ ತಪ್ಪಿಸಿಕೊಂಡಿರುವರಲ್ಲ, ಒಂದು ವೇಳೆ ಅವರಿದ್ದಿದ್ದರೆ ಹೇಗೆಲ್ಲಾ ಪ್ರತಿಕ್ರಿಯಿಸುತ್ತಿದ್ದರು ಎಂದು ನೆನೆಸಿಕೊಳ್ಳುತ್ತಾ ಜೋರಾಗಿ ನಕ್ಕುಬಿಟ್ಟೆ.

ಇತ್ತೀಚೆಗೆ ನಡೆದ ಅಯೋಧ್ಯೆಯಲ್ಲಿನ ಪ್ರಾಣಪ್ರತಿಷ್ಠಾಪನೆಯಿಂದ ನನ್ನ ಮಗ ದೇವರಾಗವುದರ (ಒಳ್ಳೆಯದನ್ನು ಪಾಲಿಸುವುದರ) ಬಗ್ಗೆ ಯೋಚಿಸುವಂತೆ ಆ ಶ್ರೀ ರಾಮ ಮಾಡಿದನಲ್ಲ ಎಂದು ಸಂತೋಷವಾಯಿತು.

* ಗೋವರ್ಧನ್‌ ಗಿರಿ ಜೋಷಿ, ಲಂಡನ್‌

Advertisement

Udayavani is now on Telegram. Click here to join our channel and stay updated with the latest news.

Next