ಆನಂದನಗರದಲ್ಲಿ ದೇವದತ್ತನೆಂಬ ಸಾತ್ವಿಕ ವಾಸವಾಗಿದ್ದ. ಆತ ದಾನಶೀಲನಾಗಿ ಎಲ್ಲರಿಗೂ ಪ್ರಿಯನಾಗಿದ್ದ. ಶ್ರೀಮಂತನಾಗಿ ಬದುಕಿ ಇಹಲೋಕ ತ್ಯಜಿಸಿದ. ತಂದೆಯ ಕಾಲಾನಂತರ ಮಗ ದಯಾನಂದ, ಆಸ್ತಿಯನ್ನು ಅನುಭವಿಸುತ್ತಾ ಜೀವಿಸುತ್ತಿದ್ದ. ತಂದೆಯಲ್ಲಿದ್ದ ದಯೆ, ತ್ಯಾಗ ಗುಣಗಳನ್ನು ಅವನು ಬೆಳೆಸಿಕೊಳ್ಳಲಿಲ್ಲ. ಸ್ವಾರ್ಥ ಪರತೆ ಹೆಚ್ಚಾದಂತೆ, ಅವನ ಹೆಂಡತಿ- ಮಕ್ಕಳೂ ಅವನನ್ನು ತ್ಯಜಿಸಿದರು.
ಒಂಟಿಯಾದ ನಂತರವೂ ಆತ ತನ್ನ ಸ್ವಾರ್ಥ ಬುದ್ಧಿಯನ್ನು ಬಿಡಲಿಲ್ಲ. ಒಮ್ಮೆ ಪಕ್ಕದ ಹಳ್ಳಿ ಪ್ರವಾಹದಿಂದ ಕೊಚ್ಚಿಹೋಯಿತು. ಆನಂದನಗರಿಯ ಜನರೆಲ್ಲ ಸೇರಿ, ಪಕ್ಕದ ಹಳ್ಳಿಗೆ ಎಲ್ಲಾ ರೀತಿಯ ಸಹಾಯ ಮಾಡಲು ನಿರ್ಧರಿಸಿ ದರು. ಸಹಾಯ ಕ್ಕಾಗಿ ದಯಾನಂದನ ಮನೆಗೆ ಬಂದಾಗ, ಆತ ತನ್ನ ಬಳಿ ಹಣವಿಲ್ಲ, ಒಂದಿಷ್ಟು ಹಳೆಯ ಬಟ್ಟೆಗಳಿವೆ, ಅದನ್ನೇ ಉಪಯೋಗಿಸಿ ಎಂದು ಕೊಟ್ಟು ಕಳುಹಿಸಿದ.
ಹಳ್ಳಿಯವರಿಗೆ ನಿರಾಸೆಯಾಯಿತು. ಕೆಲವು ದಿನಗಳ ನಂತರ ಆನಂದನಗರಿಗೂ ಪ್ರವಾಹ ಅಪ್ಪಳಿಸಿತು. ದಯಾನಂದನನ್ನು ಸೇರಿ, ಎಲ್ಲರೂ ನಿರಾಶ್ರಿತರಾದರು. ಹಿಂದೆ ಸಂಗ್ರಹಿಸಿದ ಬಟ್ಟೆಗಳಲ್ಲಿ ಮಿಕ್ಕಿದ್ದನ್ನು ಹಂಚಿದರು. ದಯಾನಂದ ಒಮ್ಮೆ ಪೆಚ್ಚಾದ. ಕಾರಣ, ಅವನು ಕೊಟ್ಟ ಹರಿದ ಬಟ್ಟೆಗಳೇ ಅವನಿಗೆ ಸಿಕ್ಕಿತ್ತು! ತ್ಯಾಗವೆ ನ್ನುವುದು ಅತ್ಯಂತ ಶ್ರೇಷ್ಠವಾದ ಸದ್ಗುಣ. ಸೃಷ್ಟಿ ತನ್ನ ಪ್ರತಿ ನಡೆಯಲ್ಲೂ ಇದನ್ನೇ ಸಾರಿ ಹೇಳುತ್ತಿದೆ. ಬೀಜದಿಂದ ಮೊಳಕೆ ಬರುತ್ತದೆ. ಮೊಳಕೆ ತನ್ನನ್ನು ತಾನು ಕಾಂಡಕ್ಕೆ ಕೊಟ್ಟುಕೊಳ್ಳುತ್ತೆ.
ಕಾಂಡ ಕೊಂಬೆಗಳಿಗೆ, ಹೀಗೆ ಮುಂದಿನ ವಿಕಾಸಕ್ಕೆ ತಮ್ಮನ್ನು ಕೊಟ್ಟುಕೊಳ್ಳುದರಿಂದಲೇ, ನಾವು ಕಡೆಯಲ್ಲಿ ಆ ವೃಕ್ಷದಿಂದ ಫಲವನ್ನು ಕಾಣಲು ಸಾಧ್ಯ. ಇಂದು ಒಳಿತು ಬಯಸಿದರೆ ಮುಂದೆ ಒಳಿತೆಂಬ ಫಲವೇ ಲಭ್ಯ. ಜೀವ- ಜೀವನ, ಜೀವನೋಪಕರಣ ಇವೆಲ್ಲ ವನ್ನೂ ಒಂದು ಹದವಾಗಿ,ವ್ಯವಸ್ಥಿತ ವಾಗಿ ಮಾಡಿ ಕೊಂಡು ಅದಕ್ಕೆ ತಕ್ಕಂತೆ ಒಂದು ದಾನಕ್ರಿಯೆಯನ್ನು ಇಟ್ಟುಕೊಂಡರೆ, ಅದು ಋಷಿಪಂಥಕ್ಕೆ ಸೇರಿದ ದಾನಕ್ರಿಯೆ ಎಂಬ ಶ್ರೀರಂಗಮಹಾಗುರುಗಳು ಹೇಳುತ್ತಿದ್ದ ಮಾತು ಇಲ್ಲಿ ಸ್ಮರಣೀಯ.
* ಚಂಪಕಾ ನರಸಿಂಹಭಟ್, ಸಂಸ್ಕೃತಿ ಚಿಂತಕಿ