Advertisement

ನೀವು ಮಾಡಿದ ಒಳ್ಳೆಯ ಕೆಲಸ ಯಾವುದು?

07:06 PM Dec 08, 2020 | Suhan S |

ಕೋವಿಡ್ ನೆಪದಲ್ಲಿ ಎಲ್ಲರನ್ನೂ ಹೆದರಿಸಿದ 2020ನೇ ವರ್ಷ ಮುಗಿಯುತ್ತಾ ಬಂತು. ಕೋವಿಡ್ ವಿಷಯ ಅತ್ಲಾಗಿರಲಿ. ಈ ವರ್ಷ ನೀವು ಮಾಡಿದ ಒಳ್ಳೆಯಕೆಲಸ ಯಾವುದು,ಯಾವಕೆಲಸದಿಂದ ನಿಮ್ಮ ಮನಸ್ಸಿಗೆ ತೃಪ್ತಿ ಸಿಕ್ಕಿತು ಎಂಬ ಪ್ರಶ್ನೆಯನ್ನು ಹಲವರಿಗೆ ಕೇಳಿದಾಗ ದೊರಕಿದ ಉತ್ತರಗಳ ಗುಚ್ಛವೊಂದು ಇಲ್ಲಿದೆ…

Advertisement

ವಿಶೇಷ ಚೇತನ ಮಕ್ಕಳೊಂದಿಗೆ… :

ಈ ಕೋವಿಡ್ – 2020ರಕೊನೆಯಲ್ಲಿ ಒಮ್ಮೆಕಣ್ಣು ಮುಚ್ಚಿ ನೆನಸಿಕೊಂಡರೆ ನನಗೆ ನೆನಪಾಗುವ ಈ ವರ್ಷದ ಅರ್ಥಪೂರ್ಣ ದಿನ ಅಂದ್ರೆ ಅದು ನನ್ನ ಹುಟ್ಟುಹಬ್ಬ…ಕೇವಲ ನನ್ನ ಹುಟ್ಟಿದ ದಿನ ಆಗಿದ್ದರೆ ಅದು ವಿಶೇಷ ಅನಿಸುತ್ತಿರಲಿಲ್ಲ. ಆ ದಿನ ನನ್ನೊಂದಿಗಿದ್ದವ್ಯಕ್ತಿಗಳಿಂದ ಅದು ವಿಶೇಷ ದಿನ ಅನಿಸಿಕೊಂಡಿತು… ಅವರೇ ದೇವರ ಮಕ್ಕಳು (ಸ್ಪಂದನ ಶಾಲೆಯ ವಿಶೇಷ ಚೇತನ ಮಕ್ಕಳು). ಅಲ್ಲಿ10-12-15 ವರ್ಷದ ಮಕ್ಕಳಿದ್ದಾರೆ. ಆದರೆ ಅವರ ಮನಸ್ಸು ಇನ್ನು ಮಗುವಾಗಿಯೇ ಉಳಿದಿದೆ… ಇಂತಹ ದೇವರ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿದ್ದು ನನಗೆ ತೃಪ್ತಿ ಕೊಟ್ಟಿದೆ. ಸ್ಪಂದನ ವಿಶೇಷ ಚೇತನ ಮಕ್ಕಳ ಶಾಲೆಯ ಆವರಣದಲ್ಲಿಕಲ್ಪವೃಕ್ಷ, ಸೀತಾಫ‌ಲ ಮತ್ತು ಹಲವು ಬಗೆಯ ಹೂವಿನ ಗಿಡಗಳನ್ನು ನೆಟ್ಟಿದ್ದರಿಂದಲೂ ನನ್ನ ಖುಷಿ ದುಪ್ಪಟ್ಟಾಯಿತು. – ಶಿಲ್ಪಾ ಶೆಟ್ಟಿ, ಕಲಾವಿದೆ, ಉಡುಪಿ

ಇಷ್ಟದ ಪುಸ್ತಕ ಖರೀದಿಸಿದ್ದು… :

Advertisement

ಇನ್ನೇನು ಹೊಸ ವರ್ಷ ಬಂದು ಬಿಡ್ತು ಅನ್ನುವಾಗ, ಒಮ್ಮೆ ಹಿಂತಿರುಗಿ ನೋಡುವುದು ವಾಡಿಕೆ. ಈ ವರ್ಷದಲ್ಲಿ ನಾವು ಮಾಡಬೇಕು ಅಂದುಕೊಂಡಿದ್ದ ಕೆಲಸಗಳನ್ನೆಲ್ಲಾ ಮಾಡಿದೆವಾ? ಈ ವರ್ಷ ಹಾಕಿಕೊಂಡ ರೆಸೆಲ್ಯೂಷನ್‌ಗಳಲ್ಲಿ ಎಷ್ಟು ಪೂರ್ಣಗೊಳಿಸಿದ್ದೇವೆ ಎಂದು ಲೆಕ್ಕ ಹಾಕಿದಾಗ, ನಿರಾಸೆಯಾಗುವುದೇ ಜಾಸ್ತಿ. ಈ ವರ್ಷ ನಾನು ಅಂದುಕೊಂಡಂತೆ ನಡೆದ ಏಕೈಕ ಸಂಗತಿ ಎಂದರೆ ನನ್ನ ಸಂಬಳದ 5% ಅನ್ನು ನನ್ನ ಇಷ್ಟದ ಪುಸ್ತಕಗಳನ್ನುಕೊಳ್ಳಲು ವಿನಿಯೋಗಿಸಿದ್ದು. ಲಾಕ್‌ಡೌನ್‌ ಟೈಂನಲ್ಲಿ ಒಂದರಹಿಂದೆ ಒಂದರಂತೆ ಜೊತೆಯಾದ ಪುಸ್ತಕಗಳನ್ನು ನಾನು ಓದಿದ್ದು ಮಾತ್ರವಲ್ಲ; ಅಲ್ಲಲ್ಲಿ ಸಿಗುವ ಸ್ನೇಹಿತರಿಗೂ ನೀಡಿ, ಓದಲು ಹೇಳುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ಗೆಳೆಯರಿಗೆ ಹಾಗೂ ಮಕ್ಕಳಿಗೆ ವಿಸ್ತರಿಸುವ ಒಳ್ಳೆಯ ರೆಸೆಲ್ಯೂಷನ್‌ ಸಹ ಇದೆ. ಏಕೆಂದರೆ, ಬೇಸರದ ಕ್ಷಣಗಳಲ್ಲೆಲ್ಲಾ ಪುಸ್ತಕ ಮಾತ್ರವೇ ನನ್ನ ಏಕೈಕ ಗೆಳತಿಯಾಗಿ ಜೊತೆಗೆ ಇದ್ದದ್ದು, ಡಿಪ್ರಶನ್‌ಗೆ ಹೋಗದಂತೆ ನನ್ನನ್ನುಕಾಪಾಡಿದ್ದು.  -ಎಡೆಯೂರು ಪಲ್ಲವಿ, ಪತ್ರಕರ್ತೆ

ಹೊಸ ಸಂಕಲ್ಪಗಳ ಜೊತೆಗೆ… :

ಈ ವರ್ಷ ನೀವು ಮಾಡಿದ ಉತ್ತಮಕೆಲಸ ಯಾವುದು? ಈ ಪ್ರಶ್ನೆ ಕೇಳಲ್ಪಟ್ಟಾಗ ಕ್ಷಣ ಅಧೀರಳಾದದ್ದು ಸುಳ್ಳಲ್ಲ. ಒಂದು ದೃಶ್ಯ, ಒಂದು ಮಾತು, ಒಂದು ಘಟನೆ, ಒಬ್ಬ ವ್ಯಕ್ತಿ ಒಮ್ಮೊಮ್ಮೆ ಕೆಲವರ ಜೀವನವನ್ನೇ ಬದಲಿಸಿಬಿಟ್ಟ ಉದಾಹರಣೆಗಳ ನಡುವೆ ಈ ಒಂದು ಪ್ರಶ್ನೆ ನನ್ನನ್ನು ಬಹಳ ಕಾಡಿ, ನನ್ನಲ್ಲಿ ಒಂದು ಅಪರಾಧಿಭಾವವನ್ನು ಮೂಡಿಸುವುದರ ಜೊತೆಗೆ ಮುಂದಿನ ವರ್ಷದಲ್ಲಿ ಯಾದರೂ ಈ ಪ್ರಶ್ನೆಗೆ ಹೆಮ್ಮೆಪಟ್ಟುಕೊಳ್ಳುವ ಉತ್ತರ ನೀಡುವಂತೆ ಬಾಳಬೇಕೆಂಬ ಸಂಕಲ್ಪವನ್ನು ಮಾಡಿಸಿದೆ. ಆದಕಾರಣ ಈ ಪ್ರಶ್ನೆಗೆ ನಾನು ಋಣಿ. ಇನ್ನು ಈ ವರ್ಷ ನನ್ನ ಮನಸ್ಸಿಗೆ ತೃಪ್ತಿ ನೀಡಿದ ಕೆಲಸದ ಬಗ್ಗೆ ಹೇಳುವುದಾದರೆ- ಈ ವರ್ಷ ನಾನು ಆಧ್ಯಾತ್ಮದಲ್ಲಿ ನನ್ನನ್ನು ತೊಡಗಿಸಿಕೊಂಡು ಧ್ಯಾನ-ಜಪದಲ್ಲಿ ಬದುಕಿನ ಅನೇಕ ಗೊಂದಲಗಳಿಗೆ ಉತ್ತರ ಕಂಡುಕೊಂಡಿದ್ದೇನೆ. ಅರ್ವಿ ಪ್ರಕಾಶನ ಎಂಬ ಸ್ವಂತ ಪ್ರಕಾಶನದ ಮೂಲಕ ಪುಸ್ತಕ ತರುತ್ತಿದ್ದೇನೆ. ಒಂದಷ್ಟು ಗಿಡಗಳನ್ನು ಪೋಷಿಸಿದ್ದೇನೆ, ಇಷ್ಟೇ. ಒಂದು ವರ್ಷದ ಬದುಕಿನಲ್ಲಿ ನಾನು ಬದುಕಿದ್ದು ಇಷ್ಟೆನಾ ಎಂದು ಈಗ ವ್ಯಥೆಯಾಗುತ್ತಿದೆ. ನಾನು ಏನೆಲ್ಲ ಮಾಡಬಹುದಿತ್ತಲ್ಲವಾ ಅನಿಸುತ್ತಿದೆ! ಮುಂದೆ ಈ ತಪ್ಪು ಮರುಕಳಿಸದಂತೆ ಬದುಕಿಬಿಡಬೇಕು ಎಂಬ ಸಂಕಲ್ಪವನ್ನು ಈಗಲೇ ಮಾಡಿಕೊಂಡಿದ್ದೇನೆ. ನನ್ನ ಪ್ರಕಾರ, ಈ ನಿರ್ಧಾರವೂ ಒಂದು ಒಳ್ಳೆಯಕೆಲಸವೇ… – ವಿದ್ಯಾ ಅರಮನೆ, ಶಿಕ್ಷಕಿ- ಕವಿಯತ್ರಿ , ತುಮಕೂರು

ಆಟ,ಊಟ,ಓಟ..

ನಾವು ದಂಪತಿ ಗಳಿಬ್ಬರೂ ನೌಕರರಾಗಿರುವುದರಿಂದ ನಮ್ಮ ಬದುಕಿನಲ್ಲಿ ಬಿಡುವು ಎಂಬುದು ಅಪರೂಪ. ಮಕ್ಕಳೊಂದಿಗೆ ಬೆರೆಯಲು, ಆಡಲು ಸಮಯಕ್ಕಾಗಿ ಸಾಲ ಮಾಡಬೇಕಾದ ಪರಿಸ್ಥಿತಿ. ಮಕ್ಕಳಿಗಾಗೇ ಸಮಯ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಿರು ವಾಗ,ಲಾಕ್‌ಡೌನ್‌ಎಂಬ ಶಾಪಕ್ಕೆಬಲಿಯಾದೆ. ಸಾಲು ಸಾಲು ರಜೆಗಳು ಬಂದವು. ಮಕ್ಕಳೊಟ್ಟಿಗೆ ಆಡಲು, ಮತ್ತೆ ಮಕ್ಕಳಂತಾಗಲು ಸುಸಮಯ ಸಿಕ್ಕಂತಾಯಿತು. ನನ್ನಿಬ್ಬರೂ ಮಕ್ಕಳೊಟ್ಟಿಗೆ ಆಡಿದೆ, ಕುಣಿದೆ, ಸುಳ್ಳೇ ಕುಸ್ತಿ ಮಾಡಿದೆ, ಮಂಗನಂತೆ ಚೇಷ್ಟೆಗಳನ್ನು ಮಾಡಿದೆ. ಇದರ ಜೊತೆಗೆ, ಮಕ್ಕಳನ್ನು ಕೂರಿಸಿಕೊಂಡು ಅವರಿಗೆ ಕಥೆಗಳನ್ನು ಹೇಳಿಕೊಟ್ಟೆ, ಹಾಡುಗಳನ್ನು ಹೇಳಿಕೊಟ್ಟೆ. ನದಿ, ಹಳ್ಳಕೊಳ್ಳ, ಮರ ಗಿಡ, ಸೂರ್ಯೋದಯ, ಸೂರ್ಯಾಸ್ತ, ಆಗಸದ ಚುಕ್ಕಿಗಳು,ಬಿಳಿಬೂದುಬಣ್ಣದಮೋಡಗಳು-ಅವುಗಳಲ್ಲಿಕಾಣುವ ಚಿತ್ರಗಳು, ಸೋನೆ ಮಳೆ, ನಡುಗುವ ಚಳಿ, ಉರಿವ ಬಿಸಿಲು, ಹಸಿರು ಕಾಡು, ಕೂಗುವ ಕೋಗಿಲೆ,  ಹರಿಯುವ ಇರುವೆ ಸಾಲು, ಕಾಗದದ ದೋಣಿ, ಗಾಳಿಪಟ, ಚೌಕಾಬಾರ… ಅಸಂಖ್ಯ ಸಂತಸದ ಅನುಭವಗಳನ್ನು ಮಕ್ಕಳೊಟ್ಟಿಗೆಕಳೆದೆ  -ಸೋಮು

 ಕಣ್ಣುನಂಬಲಿಲ್ಲ..ಕರುಳು ಸುಮ್ಮನಿರಲಿಲ್ಲ :

ಈ ಸಲದ ಶಿಕ್ಷಕರ ದಿನಾಚರಣೆಯ ದಿನ ಕಳೆದ ವರ್ಷದ ನೆನಪುಗಳನ್ನು ನೆನೆದು- “ಮಕ್ಕಳೇ ಇರದೆ ಯಾವ ದಿನಾಚರಣೆ ಚಂದ?’ ಅಂದುಕೊಳ್ಳುವಾಗಲೇ ಶಾಲೆಯ ಗೇಟ್‌ನ ಹತ್ತಿರ ಶಾಲೆಯ ಯೂನಿಫಾರ್ಮ್ ಸುಳಿದಂತೆ ಅನಿಸ್ತು. ಕಣ್‌ ನಂಬದಿದ್ದರೂ ಕರುಳು ಸುಮ್ಮನಿರದು. ನನಗೇ ಗೊತ್ತಿಲ್ಲದಂತೆ, ಬರ್ರಿ ಬರ್ರಿ ಅಂದೆ. ಪ್ರೀತಿಯ ಅಲೆ ತೇಲಿ ಬಂದಂತೆ ಬಂದವರು ಇವರು.

ಕೈಯಲ್ಲೊಂದು ಬಾಕ್ಸು. ಅದರ ಮೇಲೆಕತ್ತರಿಸಿ ಅಂಟಿಸಿದ ರಟ್ಟಿನ ಹೃದಯ. ಅದಕ್ಕೆ ದಾಸವಾಳಹೂವಿನ ಅಲಂಕಾರ. ಅದಕ್ಕೂ ದೊಡ್ಡದಾದ ಹೂವಿನ ಚಿತ್ರ. ಅಲೆಯಂತೆ ಬರುತ್ತಿದ್ದವರನ್ನು “No, no entry’ ಅನ್ನುತ್ತಾ ಹಿಂದಕ್ಕೆಕರೆದು ಕೊಂಡು ಹೋಗಿ- “ಏನು?’ ಅಂದೆ. “ಗಿಫ್ಟ್ ಸಾರ್‌’ ಅಂದ್ರು. ಒಂದು ಪುಟ್ಟ ಬಾಕ್ಸುನ ತುಂಬ ಮನೆಯಲ್ಲೇ ತಯಾರಿಸಿದ ಸಿಹಿ ತಿನಿಸುಗಳು! ಆ ಕ್ಷಣಕ್ಕೆ ಅನಿಸಿದ್ದು- ಮಕ್ಕಳ ಪ್ರೀತಿಗೆ ಸರಿಸಮನಾದದ್ದು ಬೇರೆ ಏನೂ ಇಲ್ಲ. ಮುದ್ದು- ಮುಗ್ಧ ಮನಸ್ಸಿನ ಮಕ್ಕಳ ಜೊತೆಯಲ್ಲಿ ಶಿಕ್ಷಕರ ದಿನ ಆಚರಿಸಿದ್ದೇ ನಾನು ಈ ವರ್ಷ ಮಾಡಿದ ಒಳ್ಳೆಯ ಕೆಲಸ -ಸೋಮು ಕುದರಿಹಾಳ, ಶಿಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next