ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆ ತೋರಿಸಿ ತಮ್ಮ ಜೇಬಲ್ಲಿಟ್ಟುಕೊಂಡಿದ್ದ ಪೆನ್ ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯಿತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಮಹಿಳಾ ಆಯೋಗವು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಹಾಸನ ನಾಯಕರ ವಿರುದ್ಧ ಲೈಂಗಿಕ ಹಗರಣ ಆರೋಪ ಬರುತ್ತಿದ್ದು, ಈ ಬಗ್ಗೆ ಎಸ್‌ಐಟಿ ತನಿಖೆ ಮಾಡಬೇಕು ಎಂದು ಕೇಳಿರುವ ಪ್ರಶ್ನೆಗೆ ಡಿಕೆಶಿ ಈ ರೀತಿ ಉತ್ತರಿಸಿದರು.
ಕುಮಾರಸ್ವಾಮಿ ತೋರಿಸುತ್ತಿದ್ದ ಪೆನ್ ಡ್ರೈವ್ ಯಾವುದು, ಅದರಲ್ಲಿ ಏನಿದೆ ಎಂಬುದು ಆಗ ನನಗೆ ಗೊತ್ತಿರಲಿಲ್ಲ. ಅದರಲ್ಲಿ ಏನಿದೆ ಎಂದು ಈಗ ಗೊತ್ತಾಯಿತು. ಈ ಪೆನ್ ಡ್ರೈವ್ ಬಗ್ಗೆ ಕುಮಾರಣ್ಣನಿಗೆ ಚೆನ್ನಾಗಿ ಗೊತ್ತು. ಅವರ ಜೇಬಿನಲ್ಲೇ ಇಟ್ಟುಕೊಂಡಿದ್ದನ್ನು ಮಾಧ್ಯಮದವರಿಗೆ ತೋರಿಸಿದ್ದರು. ಹೀಗಾಗಿ ಇದರ ಬಗ್ಗೆ ಕುಮಾರಸ್ವಾಮಿ ಅವರನ್ನು ನೀವು ಕೇಳಬೇಕು. ಇದಕ್ಕೆ ಉತ್ತರಿಸಲು ಅವರೇ ಸೂಕ್ತ ವ್ಯಕ್ತಿ ಎಂದರು.
ಮಾಧ್ಯಮಗಳು ಈ ಹಗರಣದ ವಿಚಾರದಲ್ಲಿ ಸುಳ್ಳು ಹೇಳುತ್ತಿವೆ. ಅದು ಬರೀ ಹಾಸನದ ನಾಯಕನದಲ್ಲ. ಹಾಸನ ಲೋಕಸಭಾ ಕ್ಷೇತ್ರದ ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿಯದ್ದು, ಸಂಸದನದ್ದು. ಹೀಗಾಗಿ ಈ ವಿಚಾರವಾಗಿ ಪ್ರಧಾನಿ, ವಿಜಯೇಂದ್ರ, ಶೋಭಕ್ಕ, ಅಶೋಕ್, ಕುಮಾರಣ್ಣ, ಗಂಡಸ್ತನದ ಬಗ್ಗೆ ಮಾತನಾಡುತ್ತಿದ್ದ ಡಾ| ಅಶ್ವತ್ಥನಾರಾಯಣ ಉತ್ತರಿಸಬೇಕು ಎಂದು ತಾಕೀತು ಮಾಡಿದರು.