Advertisement

ನಿನ್ನ ಈ ಆಕಾರವೇನೋ!

11:57 AM Mar 27, 2018 | |

ಕೋಲಾರ: “ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನೋ’ ಎಂದು ಸುಮಾರು ದಶಕಗಳ ಹಿಂದೆ
ವರನಟ ಡಾ. ರಾಜ್‌ಕುಮಾರ್‌ ತಮ್ಮ ಸುವರ್ಣ ಕಂಠದಲ್ಲಿ ಹಾಡಿದ್ದರು. ಅದು ವಾಯುಪುತ್ರ ಆಂಜನೇಯ ವಾಮನ
ಮೂರ್ತಿಯಂತೆ ಆಕಾಶದೆತ್ತರಕ್ಕೆ ಬೆಳೆದು ನಿಂತ ಕ್ಷಣವನ್ನು ವಿವರಿಸುವ ಗೀತೆ. ಆ ಅದ್ಭುತ ಗೀತೆಯನ್ನು ನೆನಪಿಸುವಂಥ,
ಆಂಜನೇಯನ ಬೃಹತ್‌ ಏಕಶಿಲಾ ವಿಗ್ರಹವೊಂದು ರಾಜಧಾನಿ ಬೆಂಗಳೂರಿಗೆ ಬರುತ್ತಿದೆ.

Advertisement

ಶ್ರವಣಬೆಳಗೊಳದ ಬಾಹುಬಲಿ (58 ಅಡಿಗಳು) ಮೂರ್ತಿಗಿಂತಲೂ ಎತ್ತರದ ರಾಮ, ಲಕ್ಷ್ಮಣ ಸಮೇತ ಹನುಮಾನ್‌ ವಿಗ್ರಹ ಸ್ಥಾಪನೆಯಾಗಲಿರುವುದು ಬೆಂಗಳೂರಿನ ಕಾಚರಕನ ಹಳ್ಳಿಯ ಶ್ರೀರಾಮ ದೇವಾಲಯದ ಆವರಣದಲ್ಲಿ. ಕೋಲಾರ ಜಿಲ್ಲೆಯ ನರಸಾಪುರದಿಂದ ಈ ಏಕಶಿಲಾ ವಿಗ್ರಹ ವನ್ನು ಸಾಗಿಸುವ ಕಾರ್ಯಕ್ಕೆ ಸೋಮವಾರ ಚಾಲನೆ ದೊರೆತಿದೆ. 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಿಗ್ರಹ, 62 ಅಡಿ ಎತ್ತರ, 12 ಅಡಿ ಅಗಲವಿದ್ದು, ಬರೋಬ್ಬರಿ 750 ಟನ್‌ ತೂಗುತ್ತದೆ. ವಿಗ್ರಹ ಕೆತ್ತನೆ ಕಾರ್ಯ ಶೇ.60ರಷ್ಟು ಪೂರ್ಣಗೊಂಡಿದ್ದು, ಬಾಕಿ ಕೆತ್ತನೆ ಪ್ರತಿಷ್ಠಾಪನೆ ನಂತರ ನಡೆಯಲಿದೆ.

ಕಲ್ಲಿಗಾಗಿ ಮೂರು ತಿಂಗಳು ಹುಡುಕಾಟ: ಕಾಚರಕನಹಳ್ಳಿಯ ಕೆರೆಯಲ್ಲಿ 600 ವರ್ಷ ಹಳೆಯದಾದ ಹನುಮಾನ್‌ ದೇವಾಲಯವಿದ್ದು, ಇದರ ನೆನಪಿಗಾಗಿ ಸುತ್ತಲ 18 ಗ್ರಾಮಗಳ ಸಾರ್ವಜನಿಕರು ಶ್ರೀರಾಮ ದೇವಾಲಯ ನಿರ್ಮಿಸಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಿದ್ದ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ, ದೇವಾಲಯದ ಆವರಣದಲ್ಲಿ ಕಲ್ಲಿನ ಹನುಮಾನ್‌ ವಿಗ್ರಹ
ಪ್ರತಿಷ್ಠಾಪಿಸುವ ಸಲಹೆ ನೀಡಿದ್ದರು. ಅದರಂತೆ ಬೃಹತ್‌ ವಿಗ್ರಹವೊಂದನ್ನು ಸ್ಥಾಪಿಸಲು ಶ್ರೀರಾಮಚೈತನ್ಯ ವರ್ಧಿನಿ ಟ್ರಸ್ಟ್‌ ನಿರ್ಧರಿಸಿತ್ತು. ಆದರೆ ಅಷ್ಟು ದೊಡ್ಡ ಕಲ್ಲು ಹುಡುಕಲು 3 ತಿಂಗಳೇ ಬೇಕಾಯಿತು. ನರಸಾಪುರ ಸಮೀಪದ ಬೈರಸಂದ್ರ
ಗ್ರಾಮದ ಮುನಿರಾಜು ಎಂಬುವವರ ಜಮೀನಿನಲ್ಲಿ ಬೃಹತ್‌ ಶಿಲೆ ಇರುವುದನ್ನು ಮಾಲೂರಿನ ಶಿಲ್ಪಿ ರಾಜಶೇಖರಾಚಾರ್ಯ ಪತ್ತೆ ಹಚ್ಚಿದರು.  

ಶಾಸ್ತ್ರ ಪ್ರಕಾರ ವಿಗ್ರಹ ಕೆತ್ತನೆ: ಶಿಲ್ಪಿ ರಾಜಶೇಖರಾಚಾರ್ಯ ನೇತೃತ್ವದ 25 ಶಿಲ್ಪಿಗಳು 2015ರ ಸೆಪ್ಟೆಂಬರ್‌ನಲ್ಲಿ ವಿಗ್ರಹ ಕೆತ್ತನೆ ಕಾರ್ಯ ಆರಂಭಿಸಿದ್ದಾರೆ. ವಿಗ್ರಹ ಕೆತ್ತನೆ ವೇಳೆ ಅನುಸರಿಸುವ “ಶಿಲ್ಪ ಶಾಸ್ತ್ರ’ದ ಅನುಸಾರವೇ, ಯಾವುದೇ ದೋಷವಿಲ್ಲದ ಕೃಷ್ಣ ಶಿಲೆಯಲ್ಲಿ ವಿಗ್ರಹ ಕೆತ್ತಲಾಗುತ್ತಿದೆ. ವಿಗ್ರಹ ಕಾಚರಕನಹಳ್ಳಿ ತಲುಪಿದ ನಂತರ ಇನ್ನೂ ಆರೇಳು ತಿಂಗಳ ಕಾಲ ಸೂಕ್ಷ್ಮ ಕೆತ್ತನೆ ಕಾರ್ಯ ನಡೆಯಲಿದೆ. 

ಸಾಗಣೆಗೆ 320 ಚಕ್ರಗಳ ವಿಶೇಷ ಟ್ರಕ್‌: ಸುಮಾರು 750 ಟನ್‌ ತೂಕದ ವಿಗ್ರಹವನ್ನು ನರಸಾಪುರದಿಂದ 86 ಕಿ.ಮೀ ದೂರದಲ್ಲಿರುವ ಕಾಚರಕನಹಳ್ಳಿಗೆ ಸಾಗಿಸಲು ಮುಂಬೈ ಮೂಲದ ಸಂಸ್ಥೆಯೊಂದು 100 ಅಡಿ ಉದ್ದದ, 320 ಟಯರ್‌ಗಳನ್ನು ಹೊಂದಿರುವ ವಿಶೇಷ ಟ್ರಕ್‌ ಸಿದ್ಧಪಡಿಸಿದೆ. ವಿಗ್ರಹವನ್ನು ನಾಜೂಕಾಗಿ ಎತ್ತಿಡಲು ಹೈಡ್ರೋಲಿಕ್‌ ಜಾಕ್‌ ತಂತ್ರಜ್ಞಾನ ಹಾಗೂ ಬೃಹತ್‌ ಕಬ್ಬಿಣದ ಫ್ಲಾಟ್‌ಫಾರಂ ಮೇಲಿಟ್ಟು ಸಾಗಿಸಲು ಅಗತ್ಯವಿರುವ ತಾಂತ್ರಿಕ ಸಹಕಾರವನ್ನು ಪುಣೆ ಮೂಲದ ಸಂಸ್ಥೆ ನೀಡುತ್ತಿದೆ.
ವಿಶೇಷ ವಾಹನವು ಪ್ರತಿ ನಿತ್ಯ ಗಂಟೆಗೆ 3 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ವಾಹನದ ಸುಗಮ ಸಂಚಾರಕ್ಕೆಂದೇ ಗೆದ್ದಲಹಳ್ಳಿ ಸಮೀಪದ ರೈಲ್ವೆ ಸೇತುವೆ ವಿಸ್ತರಿಸಲಾಗಿದೆ. ಹಳೆಯ ಸೇತುವೆ ಇರುವ ಮಾರ್ಗದಲ್ಲಿ ಒಂದು ಕಿ.ಮೀ ಪ್ರತ್ಯೇಕ ಹೆದ್ದಾರಿ ನಿರ್ಮಿಸಲಾಗಿದೆ. ಮುಂದಿನ ಭಾನುವಾರದೊಳಗೆ ವಿಗ್ರಹ ಕಾಚರಕನಹಳ್ಳಿ ತಲುಪುವ ನಿರೀಕ್ಷೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next