Advertisement

ಚಹಾ ಹೇಗಿದೆ? ಫ‌ಂಟಾಸ್ಟಿಕ್‌!

12:30 AM Mar 05, 2019 | |

ಪಾಕ್‌ನ ಕಸ್ಟಡಿಯಲ್ಲಿ ನಿಂತು ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌, ವಿಡಿಯೋದಲ್ಲಿ ಭಾರತೀಯರಿಗೆ ಮುಖ ತೋರಿಸಿದ್ದರು. ಸಾಕಷ್ಟು ಹೊಡೆತ ತಿಂದಿದ್ದನ್ನು ಬಾತುಕೊಂಡಿದ್ದ ಅವರ ಕಂಗಳೇ ಹೇಳುತ್ತಿದ್ದವು. ಆದರೂ, “ನನಗೇನೂ ಆಗಿಲ್ಲ, ಚಿಂತಿಸಬೇಡಿ… ನೀವೆಲ್ಲ ಧೈರ್ಯವಾಗಿರಿ’ ಎನ್ನುವ ಗಟ್ಟಿ ಧ್ವನಿಯನ್ನು ಅವರ ಕೈಯಲ್ಲಿದ್ದ ಚಹಾದ ಬಟ್ಟಲು ಹೇಳುತ್ತಿತ್ತು…

Advertisement

ಜೈಲು ಕಂಬಿಯ ಮೈಯಿಂದ “ಠಣ್‌ ಠಣ್‌’ ಎಂಬ ಸ್ವರ ಎದ್ದಿತ್ತು. ಲಾಹೋರ್‌ ಸೆಂಟ್ರಲ್‌ ಜೈಲಿನ ನೆಲ ಮಹಡಿಯಲ್ಲಿದ್ದ ಕಗ್ಗತ್ತಲ ಕೋಣೆಯ ಘೋರ ಮೌನ ಸೀಳಲು ಆ ಸದ್ದು ಬೇಕಾದಷ್ಟು. ಮೂಲೆಯಲ್ಲಿ ಶವದಂತೆ ಮಲಗಿದ್ದ ಸರಬ್ಜಿತ್‌ ಸಿಂಗ್‌ಗೆ ಮಾತ್ರ ಆ ಸದ್ದು ಕೇಳದೇ ಹೋಗಿತ್ತು. “ಈ ನರಪೇತಲ, ಸತ್ತೇ ಹೋದನಾ?’ ಎಂಬ ಅನುಮಾನದಲ್ಲೇ ಪಾಕ್‌ನ ಜೈಲರ್‌, ಲಾಠಿಯಿಂದ ಜೋರಾಗಿ ತಿವಿದ. ಅಮ್ಮಾ ಎನ್ನುತ್ತಾ ಕೋಳ ತೊಟ್ಟ ಕೈಗಳನ್ನು ಅಲುಗಾಡಿಸಿದ್ದ ಸರಬ್ಜಿತ್‌. ಪುಣ್ಯಕ್ಕೆ ಜೀವ ಇತ್ತು. “ಊಠೊ ಊಠೊ… ತುಮ್ಹಾರೆ ಬೆಹನ್‌ ತುಮೆ ದೇಖೆ ಆ ರಹಿ ಹೈ’ ಎಂದು ಹೇಳಿ, ಅವನು ಹೊರಟ.

ಸರಬ್ಜಿತ್‌ನ ಒಣತುಟಿಗಳು ಸಂತೋಷದಿಂದ ಬಿರಿದಿದ್ದು ಅದೇ ಮೊದಲು. ಜೈಲಿನ ನರಕದೊಳಗೆ ಬಿದ್ದ ಇಸವಿ ನೆನಪಿಲ್ಲ. ನಾನೇ ಸರಬ್ಜಿತ್‌ ಎನ್ನಲು ಅವನಲ್ಲಿ ದೈಹಿಕ ಸಾಕ್ಷಿಗಳೇ ಉಳಿದಿರಲಿಲ್ಲ. ಚರ್ಮ ಸತ್ತು ಸಿಪ್ಪೆ ಸುಲಿದು, ಮೂಳೆ ಇಣುಕುವ ದೇಹ ನೋಡಿ ಅವನ ಬಲ್ಲವರಿಗೆ ಗುರುತೇ ಸಿಕ್ಕದೇನೋ. ಕೊಳಕು ಅಂಗಿ ಹರಿದು ಯಾವ ಕಾಲವೋ ಆಗಿದೆ. ಮುಖದಲ್ಲಿ ಕಣ್ಣುಗಳೆಲ್ಲಿ ಎನ್ನುವಷ್ಟು, ಆಳಕ್ಕಿಳಿದಿವೆ. ಹಣ್ಣಾದ ಕೂದಲಲ್ಲಿ, ಅವತ್ತಿನ ಯಂಗ್‌ಮ್ಯಾನ್‌ ಸರಬ್ಜಿತ್‌ನ ರಾಜ್‌ಕಪೂರ್‌ ಸ್ಟೈಲ್‌ ಇಲ್ಲವೇ ಇಲ್ಲ. ಪಂಜಾಬಿನ ಗದ್ದೆಯ ಕಬ್ಬನ್ನು ಯಾವ ದವಡೆಗಳು ಸಲೀಸಾಗಿ ಪುಡಿಗಟ್ಟುತ್ತಿದ್ದವೋ, ಆ ದವಡೆಗಳೆಲ್ಲ ಗಲಗಲನೆ ಅಲುಗುತ್ತಿವೆ. ಸೊಂಟದ ಮೇಲೆ ಬಲ ಹಾಕಿ ನಿಧಾನಕ್ಕೆ ಮೇಲೇಳುತ್ತಾ, ಕಂಬಿಗಳ ಆಚೆ ಇದ್ದ ಬಕೆಟ್‌ ನೀರಿನ ಬಿಂಬದಲ್ಲಿ ತನ್ನ ಮುಖ ನೋಡಿಕೊಂಡಾಗ, ಎದೆಯಲ್ಲೇನೋ ಅಳು. ಎಷ್ಟೊಂದು ಗಾಯಗಳು, ಏನಿದು ಬೆಳ್ಳಿಗಡ್ಡ! ಮುರುಟಿ ಹೋಗಿದ್ದ ತೋರು ಬೆರಳಿನಿಂದ ಹಲ್ಲುಜ್ಜಿಕೊಂಡು, ಮಿಕ್ಕ ನೀರಿನಲ್ಲಿ ಅಕ್ಕನಿಗಾಗಿ ತನ್ನ ಕೈಯ್ನಾರೆ ಚಹಾ ಮಾಡಲು ಸನ್ನದ್ಧನಾದ. ಕಂಬಿಯಾಚೆಗೆ ಜೈಲರ್‌ ಇಟ್ಟಿದ್ದ, ಕೆಂಡದ ಸ್ಟೌ ಅನ್ನು ಶಕ್ತಿಮೀರಿ ಹತ್ತಿರಕ್ಕೆ ಎಳೆದು, ಇರುವೆಗಳ ಕಣ್ತಪ್ಪಿಸಲು, ಬಟ್ಟೆ ಗಂಟಿನ ನಡುವೆ ಎಂದೋ ಇಟ್ಟಿದ್ದ ಸಕ್ಕರೆಯ ಪೊಟ್ಟಣವನ್ನು ಮೆಲ್ಲನೆ ಬಿಚ್ಚಿದ. ಚಹಾದ ಪುಡಿಯನ್ನು ಹಾಕಿ, ಸಕ್ಕರೆ ಬೆರೆಸಿ, ಕುದಿಸುವಾಗ ಆ ಪರಿಮಳದಲ್ಲೇನೋ ಸುಖ ದಕ್ಕುತ್ತಿತ್ತು. ಓಡೋಡಿ ಬಂದಿದ್ದ ಅಕ್ಕನಿಗೆ, ತಮ್ಮನ ಈ ಕೊಳಕು ಅವಸ್ಥೆ ಕಂಡು ಹೇಸಿಗೆ ಹುಟ್ಟಲಿಲ್ಲ. ಆ ಗಲೀಜು ನೀರಿನಲ್ಲಿ ಮಾಡಿದ ಚಹಾವನ್ನು ಆನಂದದಿಂದ ಕುಡಿದು, “ಹೊಟ್ಟೆ ತುಂಬಿತಪ್ಪಾ’ ಅಂದಳು, ಬಿಕ್ಕುತ್ತಾ!

“ನಾನಿಲ್ಲಿ ಚೆನ್ನಾಗಿದ್ದೇನೆ, ನನಗೇನೂ ಆಗಿಯೇ ಇಲ್ಲ’ ಎನ್ನುವುದನ್ನು ಸರಬ್ಜಿತ್‌ ಚಹಾದ ಮೂಲಕ ಮರೆಮಾಚಲು ಯತ್ನಿಸಿದ್ದ.
ಸರಬ್ಜಿತ್‌ ಜೀವ ಪಾಕ್‌ನಲ್ಲಿ ಹಾರಿ ಹೋಗಿ, ವರುಷಗಳೇ ಆಗಿವೆ. ಮೊನ್ನೆ ಅದೇ ಲಾಹೋರ್‌ ಜೈಲಿನ ಆಚೆಗಿನ ಕಸ್ಟಡಿಯಲ್ಲಿ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌, ವಿಡಿಯೋದಲ್ಲಿ ಭಾರತೀಯರಿಗೆ ಮುಖ ತೋರಿಸಿದ್ದರು. ಸಾಕಷ್ಟು ಹೊಡೆತ ತಿಂದಿದ್ದನ್ನು ಬಾತುಕೊಂಡಿದ್ದ ಅವರ ಕಂಗಳೇ ಹೇಳುತ್ತಿದ್ದವು. ಆದರೂ, “ನನಗೇನೂ ಆಗಿಲ್ಲ, ಚಿಂತಿಸಬೇಡಿ… ನೀವೆಲ್ಲ ಧೈರ್ಯವಾಗಿರಿ’ ಎನ್ನುವ ಗಟ್ಟಿ ಧ್ವನಿಯನ್ನು ಅವರ ಕೈಯಲ್ಲಿದ್ದ ಚಹಾದ ಬಟ್ಟಲು ಹೇಳುತ್ತಿತ್ತು. “ಹೇಗಿದೆ ಚಹಾ?’ ಎಂದು ಪಾಕ್‌ ಅಧಿಕಾರಿ ಕೇಳಿದ್ದಕ್ಕೆ, “ಫ‌ಂಟಾಸ್ಟಿಕ್‌ ಆಗಿದೆ’ ಎನ್ನುತ್ತಾ, ಇನ್ನೊಂದು ಸಿಪ್‌ ಹೀರಿ, “ಅಬ್ಟಾ, ಅಭಿ ಆರಾಮಾಗಿದ್ದಾರಲ್ಲ’ ಎನ್ನುವ ಫೀಲ್‌ ಅನ್ನು ನಮಗೆ ದಾಟಿಸಿದ್ದರು.

ಶ್ರೀನಗರದ ಲಾಲ್‌ಚೌಕದ ಘಂಟಾಘರ್‌ ಸನಿಹದಲ್ಲೇ ಶರೀಫ‌ಜ್ಜನ ಚಹಾದಂಗಡಿ ಇದೆ. ಅಲ್ಲೆಲ್ಲ ಚಹಾ ಮಾಡೋದು, ಇಲ್ಲಿನಂತೆ ಅಗಲ ಪಾತ್ರೆಗಳಲ್ಲಲ್ಲ, ಚೊಟ್ಟುಗಳಲ್ಲೂ ಅಲ್ಲ; ಸಮೋವರ್‌ನಲ್ಲಿ! ಅದು ಉಬ್ಬಿದ ಹೊಟ್ಟೆಯ, ಉದ್ದನೆ ಮೂತಿ ಇರುವ ಪಾತ್ರೆ. ಕೆಳಕ್ಕೆ ಕುದಿವ ಕೆಂಡ, ಅದರ ಕಾವು ಮೇಲಕ್ಕೆ ಹೋಗಲೆಂದೇ ಇರುವ ಒಂದು ಪೈಪು. ಆ ಪೈಪಿನ ಸುತ್ತ ಚಹಾದ ನೀರು. ಮೇಲೆ ಮುಚ್ಚಳ. ಮರಗಟ್ಟುವ ಚಳಿಗೆ ಆ ಚಹಾ ತಣ್ಣಗಾಗದು. ಗ್ರೀನ್‌ ಟೀಯ ಎಲೆಗಳನ್ನು ಕುದಿಸಿ, ಅದಕ್ಕೆ ಏಲಕ್ಕಿ- ದಾಲಿcನ್ನಿ, ಜೇನನ್ನು ಬೆರೆಸಿ, ಗುಲಾಬಿ ದಳ ಕರಗಿಸಿಕೊಂಡು ಅದು ಕುದ್ದರೆ, ಕಾವಾ ಚಹಾ ರೆಡಿ. ಕಾವಾ, ಕಾಶ್ಮೀರಿಗರ ಜೀವ. ಷರೀಫ‌ಜ್ಜ, ಹಾಗೆ ಕುದ್ದ ಚಹಾವನ್ನು ಬಟ್ಟಲಿಗೆ ಬಗ್ಗಿಸಿ, ನಿತ್ಯವೂ ನೂರಾರು ಕೈಗಳಿಗಿಡುತ್ತಾರೆ. ಅದರಲ್ಲಿ ಗನ್‌ ಹಿಡಿದ ಮಿಲಿಟರಿಯ ಕೈ ಯಾವುದು, ಸೈನಿಕರ ಮೇಲೆ ಕಲ್ಲು ತೂರಿದ ಕೈ ಯಾವುದು ಅಂತೆಲ್ಲ ನೋಡುವ ಉಸಾಬರಿ ಅವನಿಗೆ ಬೇಕಿಲ್ಲ. ಅವನ ಕೆಲಸ, ಕೇಳಿದವರಿಗೆ ನಗು ನಗುತ್ತಾ ಚಹಾ ಕೊಡುವುದಷ್ಟೇ. “ಶಾಸ್ತ್ರೀಜಿ ಕಾಲದಿಂದ ಚಹಾ ಮಾರಿ¤ದ್ದೀನಿ. ನನ್ನಲ್ಲಿ ಚಹಾ ಕುಡಿದ ಪ್ರತಿಯೊಬ್ಬರೂ ಇಲ್ಲಿ ಶಾಂತಿ ಬಯಸಿದರೆ ಸಾಕು’ ಎನ್ನುತ್ತಾನೆ ಆ ತಾತ. ಅತಿಥಿ ಮೇಲೆ ಪ್ರೀತಿ ಇದ್ದರಷ್ಟೇ ಚಹಾ ಕೊತಕೊತನೆ ಕುದಿಯುತ್ತದಂತೆ. ಷರೀಫ‌ಜ್ಜ ಮಾಡುವ ಚಹಾ, ಈಗಲೂ ಅದೇ ಪ್ರೀತಿಯಲ್ಲೇ ಕುದಿಯುತ್ತದೆ.

Advertisement

ಹಾಗೆ ನೋಡಿದರೆ, ಚಹಾದ್ದು ಅತಿ ಎತ್ತರದ ಸಂಧಾನ. ಯುದೊœàನ್ಮಾದವನ್ನೂ ತಣ್ಣಗೆ ಮಾಡುವ ಪೇಯ. ಒಮ್ಮೆ ಚಹಾಗುರುವೊಬ್ಬ ಚಹಾಕೂಟ ಏರ್ಪಡಿಸಿದ್ದ. ಅಲ್ಲಿಗೆ ಬಂದಿದ್ದ ಸೈನಿಕನನ್ನು ತನಗೆ ಅರಿವಿಲ್ಲದೇ ನಿರ್ಲಕ್ಷಿಸಿಬಿಟ್ಟ. ಸೈನಿಕ ಸಿಟ್ಟಿಗೆದ್ದು, ಇದನ್ನು ಖಡ್ಗದಿಂದಲೇ ಬಗೆಹರಿಸೋಣ ಎನ್ನುತ್ತಾ ಸವಾಲು ಎಸೆಯುತ್ತಾನೆ. ಚಹಾಗುರುವಿಗೆ ಚಹಾ ಮಾಡುವುದಷ್ಟೇ ಗೊತ್ತು; ಖಡ್ಗದ ಬುಡ, ತಲೆ ಕಂಡವನೇ ಇಲ್ಲ. ಆತ ಸೀದಾ ಝೆನ್‌ ಗುರುವಿನ ಬಳಿ ಹೋದ. ಚಹಾ ಮಾಡುವಾಗಿನ ಇವನ ಶ್ರದ್ಧೆ, ಏಕಾಗ್ರತೆಯನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸಿದ್ದ ಝೆನ್‌ ಗುರು, “ಒಂದು ಕೆಲಸ ಮಾಡು, ಅವನು ಯುದ್ಧಕ್ಕೆ ನಿಂತಾಗ, ನೀನು ಖಡ್ಗವನ್ನು ಎರಡೂ ಕೈಗಳಿಂದ ಮೇಲಕ್ಕೆ ಹಿಡಿದು ನಿಲ್ಲು. ಚಹಾ ಮಾಡುವಾಗಿನ ಏಕಾಗ್ರತೆಯೇ ಇರಲಿ’ ಎಂದ. ಸರಿ, ಸೈನಿಕ ದುರುಗುಟ್ಟುತ್ತಲೇ ಕಾಳಗಕ್ಕೆ ನಿಂತ; ಚಹಾಗುರು, ಖಡ್ಗ ಮೇಲಕ್ಕೆ ಹಿಡಿದು, ಅವನನ್ನೇ ಮುಗ್ಧವಾಗಿ ನೋಡುತ್ತಾ ನಿಂತ. ಆ ಕಂಗಳ ಮಾನವೀಯ ಭಾಷೆ ಕಂಡು, ಸೈನಿಕ ಕಾದಾಡುವುದನ್ನೇ ಕೈಬಿಟ್ಟ!

ಚಹಾಪ್ರಿಯರ ಕಂಗಳು ಯಾರನ್ನೂ ಸುಡುವುದಿಲ್ಲ ಎನ್ನುವ ಮಾತುಂಟು. ಹಿಂದೊಮ್ಮೆ ಒಬ್ಬ ರಾಜನ ಕಿವಿಗೆ ಒಂದು ದೂರು ಬಿತ್ತು. “ಇವರಿಬ್ಬರೂ ಗಡಿಯಲ್ಲಿ ಚಹಾ ಮಾರುವವರು. ಈ ರಾಜ್ಯದಿಂದ ಆ ರಾಜ್ಯಕ್ಕೆ ಓಡಾಡುತ್ತಾ ವ್ಯಾಪಾರ ಮಾಡ್ತಾರೆ. ನಮ್ಮ ರಹಸ್ಯಗಳನ್ನು ಅವರಿಗೆ ದಾಟಿಸುತ್ತಾರೇನೋ ಎಂಬ ಅನುಮಾನ ಹುಟ್ಟಿದೆ’ ಎನ್ನುತ್ತಾ, ಇಬ್ಬರು ಚಹಾ ವ್ಯಾಪಾರಿಗಳತ್ತ ಮಂತ್ರಿ, ಬೆರಳು ಮಾಡಿದ. ತನ್ನ ಸುರಕ್ಷಿತ ರಾಜ್ಯಕ್ಕೆ ಇದ್ಯಾವ ಕಂಟಕ ಬಂತೆಂದು ರಾಜ ಸಿಟ್ಟಾಗಿ, ಅದರಲ್ಲಿ ಒಬ್ಬನನ್ನು ಬೇರೊಂದು ದಿಕ್ಕಿಗೆ ಓಡಿಸಿದ. ಮತ್ತೂಬ್ಬನಿಗೆ ಒಂದು ಕಪ್‌ ಚಹಾ ಮಾಡಿಕೊಡಲು ಹೇಳಿದ. ಅದನ್ನು ಕುಡಿಯುತ್ತಲೇ ಅವನಿಗೆ ಸಿಟ್ಟು ಸರ್ರನೆ ಇಳಿಯಿತು. ಕೊನೆಗೆ ರಾಜನಿಗೆ ಸತ್ಯ ತಿಳಿದು, “ನನ್ನ ದೇಶದ ಮೇಲೆರಗುತ್ತಿದ್ದ ಶತ್ರುಗಳಿಗೆ ಇದೇ ರೀತಿ ಚಹಾ ಕುಡಿಸಿಯೇ ನೀವು ಅವರ ಆಕ್ರೋಶ ತಣ್ಣಗೆ ಮಾಡಿ, ವಾಪಸು ಕಳುಹಿಸುತ್ತಿದ್ದೀರಿ. ನಿಮ್ಮ ಕೆಲಸವನ್ನು ಮುಂದುವರಿಸಿ’ ಎನ್ನುತ್ತಾ, ಅವರನ್ನು ನಂಬಿ, ಸೈನ್ಯದ ಸಂಖ್ಯೆಯನ್ನೇ ಇಳಿಸಿಬಿಟ್ಟ. 

ಈ ಚಹಾದ ತತ್ವಗಳೆಲ್ಲ ಇಂದಿನ ಗಡಿ ಸಮಸ್ಯೆಗೆ ಉತ್ತರವೇನೂ ಅಲ್ಲ. ಆದರೆ, ಬಂದೂಕು, ಬಾಂಬುಗಳಾಚೆ ಚಹಾ ತನ್ನ ಪಾಡಿಗೆ ತಾನು, ಶಾಂತಿಯನ್ನು ಒಡಮೂಡಿಸುವ ಕೆಲಸ ಮಾಡುತ್ತಿರುವುದಂತೂ ಸುಳ್ಳಲ್ಲ. ಶಾಂತಿಯ ಮಾತು ಬಂದಾಗಲೆಲ್ಲ, ಅಲ್ಲಿ ಚಹಾದ ಹಾಜರಿ ಇದ್ದೇ ಇರುತ್ತದೆ. ಆಫ್ಘಾನಿಸ್ತಾನದ ಮೇಲಿನ ಕಾರ್ಯಾಚರಣೆಯನ್ನೇ ಕಣ್ಮುಂದೆ ತಂದುಕೊಳ್ಳಿ. ಅಲ್ಲಿ ಅಮೆರಿಕನ್ನರಿಗೆ ಸಿಕ್ಕ ಸಿಕ್ಕವರ ಮೇಲೆಲ್ಲ ಅನುಮಾನ. ಪಾಪ ಮನುಷ್ಯನಾರು? ತಾಲಿಬಾನಿ ಯಾರು? ಎನ್ನುವುದೇ ಒಗಟಾಯಿತು. ಆಗ ಅಲ್ಲಿನ ಮುಗ್ಧರು, ಚಹಾವನ್ನು ಸೈನಿಕರ ಕೈಗಿಟ್ಟು, ಸ್ನೇಹ ಸಂಪಾದಿಸುವ ಉಪಾಯ ಮಾಡಿದರು. ಬಂದೂಕು ಹಿಡಿದ ಒಬ್ಬ ಸೈನಿಕನಿಗೆ, ಅಜ್ಜ ಚಹಾದ ಗ್ಲಾಸ್‌ ನೀಡುತ್ತಿರುವ ಫೋಟೋವಂತೂ, ಎಲ್ಲರ ಮನ ಕರಗಿಸಿತು.

ಸೈನಿಕರ ಪಾಲಿಗೆ ಚಹಾ ಸಂಧಾನಕಾರ, ನೆಮ್ಮದಿ ನೀಡುವ ಗೆಳೆಯನಲ್ಲದೇ, ಜೋಶ್‌ ತುಂಬುವ ಜೀವಾತ್ಮವೂ ಹೌದು. ಎರಡನೇ ಮಹಾಯುದ್ಧದ ವೇಳೆ ನಿರಾಸೆಯನ್ನಪ್ಪಿದ ಸೈನಿಕರಿಗೆ ಜಗತ್ತಿನಾದ್ಯಂತ ಬ್ಲ್ಯಾಕ್‌ ವಿತರಿಸಿ, ಧೈರ್ಯ ತುಂಬಿದ್ದು ಕೂಡ ಇದೇ ಚಹಾವೇ. ಎಲ್ಲೋ ಕಾಶ್ಮೀರದ ತುದಿಯ ಕಾಡಿನಲ್ಲಿ ಒಂಟಿಯಾಗಿ ನಿಂತ ಸೈನಿಕನಿಗೆ ಜೊತೆಯಾಗುವುದು ಕೂಡ ಅದೇ ಒಂದು ಬಟ್ಟಲು ಚಹಾವೇ. ಶತ್ರುವಿನ ಕೋಟೆಯೊಳಗೆ ಸೆರೆಯಾದವನಿಗೆ, ಅವನಿಗೆ “ನೀ ಬದುಕ್ತೀ ಕಣೋ’ ಎಂದು ಮುನ್ಸೂಚನೆ ಕೊಡುವುದು ಕೂಡ ಇದೇ ಚಹಾವೇ.

ದೇಶ ಸೇವೆ ಮಾಡುವ ಎಲ್ಲರೂ “ಆ ಚಹಾ’ ಕುಡೀತಾರೆ!
ಭಾರತ- ಟಿಬೆಟ್‌… ಗಡಿಯಲ್ಲೊಂದು ದೇಶದ ಕೊನೆಯ ಚಹಾದ ಅಂಗಡಿ ಇದೆ. ಐಎಎಸ್‌ ಪಾಸ್‌ ಆಗಿ, ಮುಸ್ಸೂರಿಯಲ್ಲಿ ತರಬೇತಿ ಪಡೆಯುವ ಪ್ರತಿಯೊಬ್ಬರಿಗೂ ಈ ಚಹಾದ ಪರಿಚಯ ಇದ್ದೇ ಇರುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ, ಸೈನಿಕರಿಗೆ, ಭಾವಿ ದೇಶ ಸೇವಕರಿಗೆ ತುಂಬಾ ಇಷ್ಟ ಆಗುವುದು ತುಳಸಿ ಚಹಾ. ಇಲ್ಲಿ ಚಹಾ ಕುಡಿಯುವ ಜೋಶೇ ಬೇರೆ.

ನೀವು ಮೊದಲ ಬಾರಿಗೆ ಚಹಾ ಕುಡಿಯುತ್ತಿದ್ದೀರಿ ಅಂದ್ರೆ ಕೇವಲ ಅಪರಿಚಿತ; ಎರಡನೇ ಬಾರಿಗೆ ಕುಡಿಯುತ್ತಿದ್ದೀರಿ ಅಂದ್ರೆ, ಅತಿಥಿ ಅಂತ. ಮೂರನೇ ಬಾರಿಗೆ ಚಹಾ ಕುಡಿಯಲು ಬಂದಿದ್ದೀರಿ ಅಂದ್ರೆ, ನೀವು ಕುಟುಂಬದ ಸದಸ್ಯ.
– ಹಾಜಿ ಅಲಿ, ಸೂಫಿ ಸಂತ

– ಕೀರ್ತಿ ಕೋಲ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next