ಹೊಸದಿಲ್ಲಿ: ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದ ಕರ್ನಾಟಕ ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಸಾರ್ವಜನಿಕರಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಆರ್ಥಿಕ ನೆರವು ಒದಗಿಸುವುದಾಗಿ ರಾಜಕೀಯ ಪಕ್ಷಗಳು ತಮ್ಮ ಚುನಾವಣ ಪ್ರಣಾಳಿಕೆಯಲ್ಲಿ ಘೋಷಿಸುವುದನ್ನು ಪ್ರಜಾಪ್ರಾತಿನಿಧ್ಯ ಕಾಯ್ದೆಯಡಿ “ಭ್ರಷ್ಟ ಪ್ರಕ್ರಿಯೆ’ ಎಂದು ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್‌ನ ನ್ಯಾ| ಸೂರ್ಯಕಾಂತ್ ಮತ್ತು ನ್ಯಾ| ಕೆ.ವಿ. ವಿಶ್ವನಾಥನ್ ಅವರ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ರಾಜ್ಯದ ಜನತೆಗೆ ಉಚಿತ ಗ್ಯಾರಂಟಿಗಳ ಆಮಿಷವೊಡ್ಡಿರುವುದು ಚುನಾವಣ ಅಕ್ರಮವಾಗಿದ್ದು, ಚಾಮರಾಜಪೇಟೆ ಅಸೆಂಬ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಇದೇ ಕ್ಷೇತ್ರದ ಮತದಾರರೊಬ್ಬರು ಅರ್ಜಿ ಸಲ್ಲಿಸಿದ್ದರು. ಅದನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿತ್ತು.
2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಸಾರ್ವಜನಿಕರಿಗೆ ಆರ್ಥಿಕ ನೆರವು ಘೋಷಿಸಿರುವುದು ಚುನಾವಣ ಭ್ರಷ್ಟಾಚಾರವೆಂದು ಪರಿಗಣಿಸಲ್ಪಡುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು. ಆದರೆ ಈ ವಾದವನ್ನು ತಿರಸ್ಕರಿಸಿದ್ದ ಹೈಕೋರ್ಟ್, “ಈ ರೀತಿಯ ಘೋಷಣೆಗಳನ್ನು ತಪ್ಪು ನೀತಿನಿರೂಪಣೆ ಎಂದು ವ್ಯಾಖ್ಯಾನಿಸಬಹುದೇ ವಿನಾ ಪ್ರಜಾಪ್ರಾತಿನಿಧ್ಯ ಕಾಯ್ದೆಯಡಿ ಭ್ರಷ್ಟ ಪ್ರಕ್ರಿಯೆ ಎಂದು ಪರಿಗಣಿಸಲಾಗದು’ ಎಂದಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, “ಗ್ಯಾರಂಟಿಗಳ ಘೋಷಣೆಯನ್ನು ಚುನಾವಣ ಅಕ್ರಮ ಎಂದು ಪರಿಗಣಿಸಲಾಗದು’ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿದೆ.
ಏನಿದು ಪ್ರಕರಣ?
– ಶಾಸಕ ಜಮೀರ್ ಅಹ್ಮದ್ ಅನರ್ಹತೆ ಕೋರಿ ಚಾಮರಾಜಪೇಟೆ ನಿವಾಸಿಯಿಂದ ಅರ್ಜಿ
– ಜನತೆಗೆ ಉಚಿತ ಗ್ಯಾರಂಟಿಗಳ ಆಮಿಷವೊಡ್ಡುವುದು ಚುನಾವಣ ಅಕ್ರಮ ಎಂದು ವಾದ
– ತಪ್ಪು ನೀತಿ ಎನ್ನಬಹುದೇ ವಿನಾ ಚುನಾವಣ ಅಕ್ರಮ ಎನ್ನಲಾಗದು ಎಂದಿದ್ದ ಹೈಕೋರ್ಟ್
– ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆಹೋಗಿದ್ದ ಅರ್ಜಿದಾರ
– ಜನರಿಗೆ ಆರ್ಥಿಕ ನೆರವು ಘೋಷಿಸುವುದು “ಭ್ರಷ್ಟ ಪ್ರಕ್ರಿಯೆ’ ಅಲ್ಲ ಎಂದು ಹೇಳಿ ಅರ್ಜಿ ವಜಾಗೊಳಿಸಿದ ಸುಪ್ರೀಂ