Advertisement

ಜನರಲ್ಲೇ ಮೂಡಬೇಕಿದೆ ಜಾಗೃತಿ ಪ್ರಜ್ಞೆ

11:03 PM Apr 22, 2020 | Sriram |

ಉಡುಪಿ: ಕೋವಿಡ್‌-19 ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್‌ ವಿಧಿಸಿ ದೇಶಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಗಳ ಒಳಗೆ ಜನರ ಓಡಾಟ ಹಾಗೂ ಜಿಲ್ಲೆಗಳನ್ನು ಸಂಪರ್ಕಿಸುವ ಗಡಿಗಳನ್ನು ಸೀಲ್‌ಡೌನ್‌ ಮಾಡಿ ಸಾರ್ವಜನಿಕರು ಆಯಾ ಜಿಲ್ಲೆಯಲ್ಲೆ ಇರುವಂತೆ ಸುರಕ್ಷ ಕ್ರಮಗಳನ್ನು ಎಲ್ಲ ಜಿಲ್ಲೆಗಳಲ್ಲಿ ವಿಧಿಸಲಾಗಿದೆ. ಆದರೆ ಕೆಲ ಮಂದಿ ಕಾಲ್ನಡಿಗೆಯ ಮೂಲಕ ಕಣ್ಣು ತಪ್ಪಿಸಿ ಜಿಲ್ಲೆಗೆ ಬರುವ ಘಟನೆಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ. ಇದರಿಂದ ಒಬ್ಬಿಬ್ಬರ ತಪ್ಪಿನಿಂದ ಇಡೀ ಶ್ರಮವನ್ನು ಹಾಳುಗೆಡವಿದಂತಾಗುತ್ತಿದೆ.

Advertisement

ಉಡುಪಿ, ದ.ಕ. ಜಿಲ್ಲೆಗಳು ಕೋವಿಡ್‌-19 ತಡೆಗಟ್ಟುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿವೆ. ಸಾರ್ವಜನಿಕರು ಸರಕಾರ, ಆಡಳಿತ ಇಲಾಖೆಗಳ ನೀತಿ ನಿಯಮಗಳನ್ನು ಕಟ್ಟುನಿಟ್ಟಿನಲ್ಲಿ ಪಾಲಿಸಿ ಸರಕಾರಕ್ಕೆ ಸ್ಪಂದಿಸುತ್ತಿದ್ದಾರೆ. ಉರಿ ಬಿಸಿಲ ನಡುವೆಯೂ ಎಲ್ಲ ಗಡಿಗಳಲ್ಲಿ ಪೊಲೀಸ್‌ ಸಿಬಂದಿ ತಮ್ಮ ಕೆಲಸವನ್ನು ಚಾಚೂ ತಪ್ಪದೆ ಪಾಲಿಸಿ ಶ್ರಮಿಸುತ್ತಿದ್ದಾರೆ.

ಆರೋಗ್ಯ ಇಲಾಖೆಯ ಸಿಬಂದಿ ಹಾಗೂ ವಿವಿಧ ಇಲಾಖೆಯ ಸಿಬಂದಿ ಕೋವಿಡ್‌ ನಿಯಂತ್ರಣಕ್ಕೆ ಹಗಲಿರುಳು ಪರಿಶ್ರಮ ಪಡುತ್ತಿದ್ದಾರೆ. ಆದರೆ ಕೆಲ ಮಂದಿಯ ತಪ್ಪಿನಿಂದ ಈ ಎಲ್ಲ ಆಡಳಿತದ ಶ್ರಮ ಸೇರಿದಂತೆ ಪ್ರಜ್ಞಾವಂತ ನಾಗರಿಕರ ಪರಿಶ್ರಮಕ್ಕೆ ಧಕ್ಕೆ ತಂದಂತಾಗುತ್ತಿದೆ.

ಅನ್ಯಮಾರ್ಗ
ನಗರಗಳ ರಸ್ತೆ, ರಾ.ಹೆದ್ದಾರಿಗಳಲ್ಲಿ ಬಿಗಿ ತಪಾಸಣೆ ಮಾಡಲಾಗುತ್ತಿದ್ದು ಅಗತ್ಯ ತುರ್ತು ಸೇವೆಗಳ ವಾಹನಗಳನ್ನು ಮಾತ್ರ ಬಿಡಲಾಗುತ್ತಿದೆ. ಉಳಿದ ಎಲ್ಲ ವಾಹನಗಳನ್ನು ನಿರ್ಬಂಧಿಸಲಾಗಿದೆ. ಆದರೆ ಕೆಲವು ಮಂದಿ ಕಾಲು ನಡಿಗೆಯ ಮೂಲಕ ಜಿಲ್ಲೆಗೆ ಪ್ರವೇಶಿಸುತ್ತಿರುವ ಘಟನೆಗಳು ವರದಿಯಾಗುತ್ತಿದೆ. ಒಳ ರಸ್ತೆ , ರೈಲು ಮಾರ್ಗದ ದಾರಿಯಲ್ಲಿ ಬರುವ ಮೂಲಕ ಜಿಲ್ಲೆಯನ್ನು ಪ್ರವೇಶಿಸುತ್ತಿದ್ದು ಬುಧವಾರ ದ.ಕ. ಜಿಲ್ಲೆಯಿಂದ 4 ಮಂದಿ ಹುಬ್ಬಳಿಗೆ ತೆರಳಲೆಂದು ಕಾಲು ನಡಿಗೆಯ ಮೂಲಕ ಉಡುಪಿ ಜಿಲ್ಲೆಗೆ ಪ್ರವೇಶಿಸಿದಾಗ ಸಾರ್ವಜನಿಕರು ಪೊಲೀಸರ ಗಮನಕ್ಕೆ ತಂದು ತಡೆಹಿಡಿದಿದ್ದಾರೆ. ಕಳೆದ ವಾರವು ಒಬ್ಬ ವ್ಯಕ್ತಿಯನ್ನು ತಡೆಹಿಡಿಯಲಾಗಿತ್ತು.

ಸ್ವಯಂಜಾಗೃತಿ ಮದ್ದು
ಸದ್ಯ ಸರಕಾರಗಳು ಹೊರಡಿಸುವ ನಿಯಮಗಳನ್ನು ಪಾಲಿಸುವಲ್ಲಿ ಪ್ರತಿಯೊಬ್ಬ ಪ್ರಜೆಯೂ ಸ್ವ ಜಾಗೃತಿಯನ್ನು ಹೊಂದಿ ನಡೆ‌ದುಕೊಳ್ಳುವುದು ಅತ್ಯಗತ್ಯವಾಗಿದೆ. ತಮ್ಮ ಸ್ವ ಉದ್ದೇಶಕ್ಕೆ ಆಡಳಿತ ಇಲಾಖೆಯ ನಿರ್ದೇಶನವನ್ನು ಮತ್ತು ಸಾವಿರು ಮಂದಿಗೆ ತೊಂದರೆಗೆ ಇಡು ಮಾಡುವುದು ಎಷ್ಟು ಸರಿ ಎಂಬುವುದು ಅರಿಯಬೇಕಿದೆ. ಸಾರ್ವಜನಿಕರು ಕೂಡ ಕಾಲು ನಡಿಗೆಯಲ್ಲಿ ಓಡಾಡುವಂತವರನ್ನು ತಡೆದು ಮನ ಪರಿವರ್ತಿಸುವ ಮತ್ತು ಕೋವಿಡ್‌-19 ಹೆಲ್ಪ್ ಲೈನ್‌ಗೆ ತಿಳಿಸಿ ಇಲಾಖೆಯ ಜತೆ ಕೈಜೋಡಿಸುವುದು ಅತ್ಯಗತ್ಯವಾಗಿದೆ.

Advertisement

ಇಲಾಖೆ ಜತೆ ಜನತೆ ಕೈಜೋಡಿಸಿ
ಆಡಳಿತ ಇಲಾಖೆಗಳು ಈಗಾಗಲೇ ಅನೇಕ ಕ್ರಮಗಳನ್ನು ತಂದಿವೆ. ಮುಖ್ಯವಾಗಿ ಜನ ಸಹಕರಿಸಬೇಕು. ಬುಧವಾರ 4 ಮಂದಿ ದ.ಕ.ದಿಂದ ಉಡುಪಿ ಜಿಲ್ಲೆಗೆ ಬಂದಿದ್ದು ಹುಬ್ಬಳ್ಳಿಗೆ ಹೋಗುವ ಯೋಜನೆ ಹಾಕಿಕೊಂಡಿದ್ದರು ಎಂದು ತಿಳಿದುಬಂದಿದೆ. ಬಳಿಕ ಇವರನ್ನು ತಡೆಹಿಡಿಯಲಾಗಿದೆ. ಇಂತಹ ಮಂದಿ ಕಂಡುಬಂದರೆ ಕೋವಿಡ್‌-19 ಹೆಲ್ಪ್ ಲೈನ್‌ಗೆ ಕರೆ ಮಾಡಿ ಸಂಬಂಧ ಪಟ್ಟ ಇಲಾಖೆಗೆ ತಿಳಿಸುವ ದೊಡ್ಡ ಹೊಣೆ ಸಾರ್ವಜನಿಕರ ಮೇಲಿದೆ. ಇಲಾಖೆಯ ಜತೆ ಸಾರ್ವಜನಿಕರು ಕೈಜೋಡಿಸಬೇಕಿದೆ.
-ವಿಶು ಶೆಟ್ಟಿ , ಸಾಮಾಜಿಕ ಕಾರ್ಯಕರ್ತ

Advertisement

Udayavani is now on Telegram. Click here to join our channel and stay updated with the latest news.

Next