ಕೊಲಂಬೋ: ದ್ವೀಪರಾಷ್ಟ್ರ ಶ್ರೀಲಂಕಾ ಹಿಂದೆದೂ ಕಂಡು ಕೇಳರಿಯದ ಬಿಕ್ಕಟ್ಟಿಗೆ ಸಿಲುಕಿದೆ. ಆರ್ಥಿಕ ಸಂಕಷ್ಟದ ಕಾರಣದಿಂದ ದೇಶದೆಲ್ಲೆಡೆ ಅರಾಜಕತೆ ಸೃಷ್ಠಿಯಾಗಿದೆ. ಸರ್ಕಾರದ ವಿರುದ್ಧ ದಂಗೆ ಎದ್ದಿರುವ ಜನರು ಶನಿವಾರ ಲಂಕಾ ಅಧ್ಯಕ್ಷರ ಮನೆಗೆ ನುಗ್ಗಿದ್ದಾರೆ. ಸಾವಿರಾರು ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ ಕಾಂಪೌಂಡ್‌ಗೆ ನುಗ್ಗುವ ಮೊದಲು ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಕೊಲಂಬೊದಲ್ಲಿನ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಗೋಟಬಯ ರಾಜಪಕ್ಸೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಈ ಮಧ್ಯೆ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಕೂಡಾ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ, ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರು ಅಧಿಕಾರದಲ್ಲಿ ಉಳಿಯುತ್ತಾರೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ.
ಅಧ್ಯಕ್ಷರು ರಾಜೀನಾಮೆ ನೀಡಿದರೆ ಏನಾಗುತ್ತದೆ?
ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ತಮ್ಮ ಅಧಿಕಾರಾವಧಿ ಮುಗಿಯುವ ಮೊದಲು ರಾಜೀನಾಮೆ ಸಲ್ಲಿಸಿದರೆ, ಸಂಸತ್ತು ತನ್ನ ಸದಸ್ಯರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಅಧ್ಯಕ್ಷರ ರಾಜೀನಾಮೆಯ ಒಂದು ತಿಂಗಳ ಅವಧಿಯಲ್ಲಿ ಹೊಸ ನೇಮಕಾತಿಯನ್ನು ಮಾಡಬೇಕಾಗಿದೆ.
ಇದನ್ನೂ ಓದಿ:ಮಂಗಳೂರು ವಿಮಾನ ಪ್ರಯಾಣಿಕರು ರಾತ್ರಿಯಿಡೀ ಕೊಚ್ಚಿ ನಿಲ್ದಾಣದಲ್ಲೇ ಬಾಕಿ!
ಅಧ್ಯಕ್ಷರು ರಾಜೀನಾಮೆ ನೀಡಿದರೆ, ಅವರು ರಾಜೀನಾಮೆ ನೀಡಿದ ಮೂರು ದಿನಗಳಲ್ಲಿ ಸಂಸತ್ತಿನ ಸಭೆಯನ್ನು ಕರೆಯಬೇಕು. ಸಭೆಯಲ್ಲಿ, ಸಂಸತ್ತಿನ ಪ್ರಧಾನ ಕಾರ್ಯದರ್ಶಿಯು ಅಧ್ಯಕ್ಷರ ರಾಜೀನಾಮೆಯ ಬಗ್ಗೆ ಸಂಸತ್ತಿಗೆ ತಿಳಿಸಬೇಕು. ತೆರವಾಗಿರುವ ಹುದ್ದೆಗೆ ನಾಮಪತ್ರಗಳನ್ನು ಸ್ವೀಕರಿಸಲು ದಿನಾಂಕ ನಿಗದಿ ಮಾಡಬೇಕು.
ಪ್ರಕ್ರಿಯೆ ಹೇಗೆ?
ಸಂಸತ್ತಿನ ಒಬ್ಬ ಸದಸ್ಯರನ್ನು ಮಾತ್ರ ಈ ಹುದ್ದೆಗೆ ನಾಮನಿರ್ದೇಶನ ಮಾಡಿದರೆ, ಆ ವ್ಯಕ್ತಿಯನ್ನು ಕಚೇರಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಘೋಷಿಸಬೇಕು. ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ನಾಮನಿರ್ದೇಶನಗೊಂಡರೆ, ನಂತರ ರಹಸ್ಯ ಮತದಾನವನ್ನು ನಡೆಸಲಾಗುವುದು.
ಹೊಸ ಅಧ್ಯಕ್ಷರು ಆಯ್ಕೆಯಾಗುವವರೆಗೆ ಏನಾಗುತ್ತದೆ?
ಶ್ರೀಲಂಕಾದ ಸಂವಿಧಾನದ ಪ್ರಕಾರ, ಹಾಲಿ ಪ್ರಧಾನಿ ಹಂಗಾಮಿ ಅಧ್ಯಕ್ಷರಾಗುತ್ತಾರೆ. ಈ ಸಮಯದಲ್ಲಿ ಪ್ರಧಾನ ಮಂತ್ರಿಯ ಕಛೇರಿಯಲ್ಲಿ ಕಾರ್ಯನಿರ್ವಹಿಸಲು ಸಂಪುಟದ ಮಂತ್ರಿಗಳಲ್ಲಿ ಒಬ್ಬರನ್ನು ನೇಮಿಸಲಾಗುತ್ತದೆ. ಹೊಸದಾಗಿ ಚುನಾಯಿತರಾದ ಅಧ್ಯಕ್ಷರು ಉಳಿದ ಅವಧಿಗೆ ಅಧಿಕಾರವನ್ನು ನಿರ್ವಹಿಸಬಹುದು.