ಬೆಂಗಳೂರು/ಮಂಡ್ಯ: ಎಲ್ಲ ಶಾಸಕರಿಗೂ ಸರ್ಕಾರ ಉಳಿಯಬೇಕಿದೆ. ಹೀಗಾಗಿ, ಯಾವ ಶಾಸಕರನ್ನೂ ಮನವೊಲಿಸುವ ಅಗತ್ಯವಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಆನಂದ್‌ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರ ಉಳಿಯಬೇಕು ಎನ್ನುವುದು ಎಲ್ಲ ಶಾಸಕರ ಇಚ್ಚೆ. ಹೀಗಾಗಿ ಸ್ವಯಂಪ್ರೇರಿತರಾಗಿ ಸರ್ಕಾರದಲ್ಲಿ ಉಳಿಯುವ ಮನಸ್ಸು ಮಾಡಿದ್ದಾರೆ. ಯಾವ ಶಾಸಕರನ್ನೂ ಮನವೊಲಿಸುವ ಅಗತ್ಯವಿಲ್ಲ ಎಂದರು.
ಯಾರು ಏನು ಮಾಡುತ್ತಿದ್ದಾರೆ ಎನ್ನುವುದು ಎಲ್ಲವೂ ಗೊತ್ತಿದೆ. ನಾವು ಕಣ್ಣು ಮುಚ್ಚಿಕೊಂಡು ರಾಜಕಾರಣ ಮಾಡುತ್ತಿಲ್ಲ. ಎಲ್ಲದಕ್ಕೂ ಔಷಧಿ ಇದೆ. ಅದಕ್ಕೆ ಸಮಯ ಸಂದರ್ಭ ಬಂದಾಗ ಉತ್ತರ ನೀಡುತ್ತೇನೆ. ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಅವಿರತ ಪ್ರಯತ್ನಕ್ಕಿಳಿದಿದೆ. ಆದರೆ, ಅದು ಸಫಲವಾಗುವುದಿಲ್ಲ. ಮೈತ್ರಿ ಸರ್ಕಾರ ಪೂರ್ಣಾವಧಿ ಇರುತ್ತದೆ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಎಲ್ಲರ ಜತೆಗೆ ಮಾತನಾಡಿ ಹೋಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅವರು ಬರುವ ಅಗತ್ಯವಿಲ್ಲ. ನಾವಿದ್ದೇವೆ. ನಾವೇ ನಿಭಾಯಿಸುತ್ತೇವೆ. ಮುಖ್ಯಮಂತ್ರಿ ಕುಮಾರಸ್ವಾಮಿ ನಿರಂತರ ಸಂಪರ್ಕದಲ್ಲಿದ್ದಾರೆ. ಅವರು ಎಲ್ಲ ಶಾಸಕರ ಜತೆಯೂ ಮಾತನಾಡಿದ್ದಾರೆ ಎಂದರು.
ಆನಂದ ಸಿಂಗ್ ಬುದ್ಧಿವಂತ, ಪ್ರಜ್ಞಾವಂತ. ವೇಣುಗೋಪಾಲ್ ಜತೆ ಮಾತುಕತೆ ನಡೆಸಿ ಅವರನ್ನು ಸಮಾಧಾನಪಡಿಸಲಾಗಿತ್ತು. ಅವರ ರಾಜೀನಾಮೆ ನನಗೆ ಶಾಕ್ ನೀಡಿದೆ. ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೆ, ಅವರು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ. ಆನಂದ್‌ಸಿಂಗ್ ಈಗಲೂ ನನ್ನ ಆತ್ಮೀಯ. ಅವರು ರಾಜೀನಾಮೆ ವಾಪಸ್ ಪಡೆಯುತ್ತಾರೆ ಎನ್ನುವ ವಿಶ್ವಾಸವಿದೆ. ಆದರೆ, ರಾಜೀನಾಮೆ ನೀಡಿದವರ ಮನವೊಲಿಸುವುದರಲ್ಲಿ ಅರ್ಥವಿಲ್ಲ. ಅದಕ್ಕೆ ಮುಂದಾಗುವುದೂ ಇಲ್ಲ ಎಂದರು.
ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿದೇಶ ಪ್ರವಾಸಕ್ಕೆ ಹೋಗಿರುವುದನ್ನು ಸಮರ್ಥಿಸಿಕೊಂಡ ಡಿ.ಕೆ. ಶಿವಕುಮಾರ್, ಅವರಿಗೂ ಖಾಸಗಿ ಜೀವನ ಇದೆ. ಅದಕ್ಕೆ ವಿದೇಶ ಪ್ರವಾಸ ಹೋಗಿದ್ದಾರೆ. ಎಲ್ಲರೂ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಆಗಲು ಆಗುತ್ತದೆಯಾ ಎಂದು ಮಾರ್ಮಿಕವಾಗಿ ಮಾತನಾಡಿದರು.