ಮಾಸ್ಕೋ/ಉಕ್ರೇನ್: ನ್ಯಾಟೋ ಪಡೆ ಸೇರ್ಪಡೆ ವಿಚಾರದಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ತಾರಕಕ್ಕೇರಿದ್ದು, ರಷ್ಯಾ ಅಧ್ಯಕ್ಷ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ತಮ್ಮ ಪಟ್ಟನ್ನು ಸಡಿಲಿಸದೇ ಯುದ್ಧ ಮುಂದುವರಿಸಿದ್ದು, ಏತನ್ಮಧ್ಯೆ ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಹತ್ಯೆಗೆ ರಷ್ಯಾದ ವಾಗ್ನೆರ್ ಗ್ರೂಪ್ ರಹಸ್ಯವಾಗಿ ಬೀಡು ಬಿಟ್ಟಿರುವುದಾಗಿ ವರದಿ ತಿಳಿಸಿದೆ.
ಏನಿದು ವಾಗ್ನೆರ್ ಗ್ರೂಪ್?
ಡೈಲಿ ಮೇಲ್ ವರದಿ ಪ್ರಕಾರ, ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಹತ್ಯೆಗೆ ರಷ್ಯಾ ಅಧ್ಯಕ್ಷ ಪುಟಿನ್ ವಿಶೇಷ ತರಬೇತಿ ಪಡೆದ 400ಕ್ಕೂ ಅಧಿಕ ನಿಗೂಢ ಪಡೆಯನ್ನು (ವಾಗ್ನೆರ್ ಗ್ರೂಪ್) ಉಕ್ರೇನ್ ಗೆ ರವಾನಿಸಿರುವುದಾಗಿ ತಿಳಿಸಿದೆ.
2014ರಲ್ಲಿ ಖಾಸಗಿ ಮಿಲಿಟರಿ ಮತ್ತು ಭದ್ರತಾ ಕಂಪನಿಯ ನೇತೃತ್ವದಲ್ಲಿ ಈ ವಾಗ್ನೆರ್ ಗ್ರೂಪ್ ಅನ್ನು ರಚಿಸಲಾಗಿದ್ದು, ಕ್ರೆಮ್ಲಿನ್ ಇದನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ವರದಿ ಹೇಳಿದೆ. ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಹಾಗೂ ಉಕ್ರೇನ್ ಸರಕಾರ ಉನ್ನತ 23 ಅಧಿಕಾರಿಗಳನ್ನು ಹತ್ಯೆಗೈಯಲು ವಾಗ್ನೆರ್ ಪಡೆ ಪುಟಿನ್ ಆದೇಶಕ್ಕಾಗಿ ಕಾಯುತ್ತಿರುವುದಾಗಿ ಗುಪ್ತಚರ ಮೂಲಗಳು ಶಂಕಿಸಿರುವುದಾಗಿ ವರದಿ ವಿವರಿಸಿದೆ.
2017ರಲ್ಲಿ ಬ್ಲೂಮ್ ಬರ್ಗ್ ವರದಿ ಪ್ರಕಾರ, ಈ ನಿಗೂಢ ಪಡೆಯಲ್ಲಿ ಸುಮಾರು 6,000 ಖಾಸಗಿ ಯೋಧರಿರುವುದಾಗಿ ತಿಳಿಸಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಕೆ ಸೇರಿದಂತೆ ಉನ್ನತ ಮಟ್ಟದ ತರಬೇತಿ ಪಡೆದ ವಾಗ್ನರ್ ಗ್ರೂಪ್ ಮಾರಣಾಂತಿಕ ದಾಳಿಗೆ ಪ್ರತೀಕವಾಗಿದೆ ಎಂದು ವರದಿ ತಿಳಿಸಿದೆ.
ಈ ನಿಗೂಢ ಪಡೆ ಇದೀಗ ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಹಾಗೂ ಸಹೋದ್ಯೋಗಿಗಳ ಮೊಬೈಲ್ ಅನ್ನು ಟ್ರ್ಯಾಕ್ ಮಾಡುತ್ತಿರುವುದಾಗಿ ಡೈಲಿ ಮೇಲ್ ವರದಿ ಮಾಡಿದೆ. ಶಾಂತಿ ಮಾತುಕತೆಯ ಪ್ರಸ್ತಾಪದ ಹಿನ್ನೆಲೆಯಲ್ಲಿ ವಾಗ್ನೆರ್ ಗ್ರೂಪ್ ಏಕಾಏಕಿ ದಾಳಿ ನಡೆಸದಂತೆ ಪುಟಿನ್ ತಡೆದಿರುವುದಾಗಿ ವರದಿ ಹೇಳಿದೆ.