Advertisement

ರಮೇಶ ಕಳಕೊಂಡ ಆ “ವಸ್ತು’ಯಾವುದು?

11:14 PM Apr 26, 2019 | Lakshmi GovindaRaju |

ಬೆಳಗಾವಿ: “ಯಾವುದೋ “ವಸ್ತು’ ಕಳೆದುಕೊಂಡಿದ್ದಾನೆ. ಅದಕ್ಕೇ ಹೀಗೆಲ್ಲ ವರ್ತಿಸುತ್ತಿದ್ದಾನೆ! ಇದು ಸಹೋದರ, ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಸಚಿವ ಸತೀಶ ಜಾರಕಿಹೊಳಿ ಮೊನ್ನೆ ನೀಡಿದ್ದ ಹೇಳಿಕೆ. ಇದು ಈಗ ಬೆಳಗಾವಿ ಜಿಲ್ಲೆಯಷ್ಟೇ ಅಲ್ಲ, ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ವ್ಯಾಪಕ ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.

Advertisement

ಮಾಜಿ ಸಚಿವರೂ ಆಗಿದ್ದು ಕಾಂಗ್ರೆಸ್‌ನಿಂದ ಬಹುತೇಕ ಹೊರಗಡೆ ಬಂದಿರುವಂತೆ ಹೇಳಿಕೆ ನೀಡುತ್ತಿರುವ ಹಿರಿಯ ನಾಯಕ ರಮೇಶ ಜಾರಕಿಹೊಳಿ ನಿಜವಾಗಿಯೂ ಕಳೆದುಕೊಂಡಿರುವ “ಆ ವಸ್ತು’ ಯಾವುದು ಎಂದು ಸತೀಶ ನಿಖರವಾಗಿ ಹೇಳಿಲ್ಲ. ಹಾಗಾಗಿ, ಈ ಬಗ್ಗೆ ನಾನಾ ರೀತಿಯ ಚರ್ಚೆಗಳು ಆರಂಭವಾಗಿವೆ.

ಲೋಕಸಭಾ ಚುನಾವಣೆ ಸಂದರ್ಭ ಹಾಗೂ ಮತದಾನ ಪೂರ್ಣಗೊಂಡ ನಂತರ ಗೋಕಾಕ ತಾಲೂಕಿನ ಜಾರಕಿಹೊಳಿ ಕುಟುಂಬದ ರಾಜಕಾರಣ ಹಾಗೂ ಬೀದಿಗೆ ಬಂದಿರುವ ಜಗಳ ಇಡೀ ರಾಜ್ಯದ ಗಮನ ಸೆಳೆದಿದೆ. ಸಹೋದರರ ಒಂದೊಂದು ಹೇಳಿಕೆಯೂ ಕುತೂಹಲಕಾರಿ ಚರ್ಚೆಗೆ ಕಾರಣವಾಗುತ್ತಿವೆ. ಜನರ ಚರ್ಚೆಗೆ ಹೊಸ ಆಹಾರವಾಗುತ್ತಿವೆ.

ಇದಕ್ಕೆ ಈಗ ಹೊಸ ಸೇರ್ಪಡೆ “ಕಳೆದು ಹೋದ ವಸ್ತು’ ಎಂಬ ವಿವಾದಾಸ್ಪದ ಹೇಳಿಕೆ. ರಮೇಶ ವಿರುದ್ಧ ತೀರ ವೈಯಕ್ತಿಕ ಟೀಕೆಗಳನ್ನು ಮಾಡಿರುವ ಸತೀಶ “ವಸ್ತು’ ವಿಷಯ ಪ್ರಸ್ತಾಪಿಸಿ ಕುತೂಹಲ ಮೂಡಿಸಿದ್ದಾರೆ. ರಮೇಶ ಒಂದು ಮಹತ್ವದ “ವಸ್ತು’ ಕಳೆದುಕೊಂಡಿದ್ದಾರೆ. ಅದರಿಂದ ಹತಾಶರಾಗಿ ಅವರು ಈ ರೀತಿ ಅಸಮಾಧಾನದಿಂದ ಮಾತನಾಡುತ್ತಿದ್ದಾರೆಂದು ಹೇಳಿರುವುದು ನಾನಾ ರೀತಿಯ ರಾಜಕೀಯ ವಿಶ್ಲೇಷಣೆಗೆ ಎಡೆಮಾಡಿಕೊಟ್ಟಿದೆ.

“ಪರಿವಾರ’ ಕುತೂಹಲ: ಸತೀಶ ಅವರ ಈ ಟೀಕೆಗಳ ಹಿಂದಿನ ಅಸಲಿ ರಾಜಕಾರಣವೇ ಬೇರೆ. ಪಿಎಲ್‌ಡಿ ಬ್ಯಾಂಕ್‌ ಹಾಗೂ ಲೋಕಸಭಾ ಚುನಾವಣೆಗೆ ರಮೇಶ ಪ್ರಚಾರಕ್ಕೆ ಬರದೇ ಇರುವುದು ನಿಮಿತ್ತ ಮಾತ್ರ. ಇದರ ಹೊರತಾಗಿ ಸತೀಶ ತಮ್ಮ ಸಹೋದರನ ವಿರುದ್ಧ “ಒಂದೇ ಪರಿವಾರ’, “ಟಾಪ್‌ ಸಿಕ್ರೆಟ್‌’ ಹಾಗೂ “ಕಳೆದುಕೊಂಡಿರುವ ವಸ್ತು’ ಎಂಬ ಮೂರು ವಿಷಯಗಳ ಅಸ್ತ್ರವನ್ನು ನೇರವಾಗಿ ಪ್ರಯೋಗ ಮಾಡಿದ್ದಾರೆ.

Advertisement

ಇದು ರಮೇಶ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಹಾಗೂ ಸಚಿವ ಡಿ.ಕೆ.ಶಿವಕುಮಾರ ಅವರನ್ನು ಗುರಿಯಾಗಿಟ್ಟುಕೊಂಡು ಮಾಡಿದ ಅಸ್ತ್ರಗಳು ಎಂಬುದು ಸತೀಶ ಆಪ್ತ ವಲಯದ ಹೇಳಿಕೆ. ಬೆಳಗಾವಿ ತಾಲೂಕಿನ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಸಂದರ್ಭ ಶಾಸಕಿ ಹೆಬ್ಟಾಳಕರ, ರಮೇಶ ಹಾಗೂ ಡಿ.ಕೆ.ಶಿವಕುಮಾರ ಮಧ್ಯೆ ಇದೇ ರೀತಿಯ ಭಿನ್ನಾಭಿಪ್ರಾಯ ಉಂಟಾದಾಗ ಮೂವರು “ಒಂದೇ ಪರಿವಾರ’ದವರು ಎಂಬ ಸ್ವಾರಸ್ಯಕರ ಹೇಳಿಕೆ ನೀಡಿದ್ದ ಸತೀಶ, ಆಗಲೂ ಇದೇ ರೀತಿಯ ಕುತೂಹಲದ ಚರ್ಚೆಗೆ ಕಾರಣವಾಗಿದ್ದರು.

ಜಾರಕಿಹೊಳಿ ಕುಟುಂಬದ ಬಡಿದಾಟ ಹಾಗೂ ಭಿನ್ನಾಭಿಪ್ರಾಯ ಹೊಸದೇನಲ್ಲ. ಆದರೆ, ಈ ಬಾರಿ ಸತೀಶ ಅವರು ಕುಟುಂಬದ ಈ ಕದನದಲ್ಲಿ ರಮೇಶ ಅವರ ಅಳಿಯ ಅಂಬಿರಾವ್‌ ಪಾಟೀಲರ ಹೆಸರು ಪ್ರಸ್ತಾಪಿಸಿರುವುದು ಎಲ್ಲವನ್ನೂ ಗಂಭೀರವಾಗುವಂತೆ ಮಾಡಿದೆ. ಇದೇ ಕಾರಣಕ್ಕೆ ವೈಯಕ್ತಿಕ ಟೀಕೆಗಳು ನಡೆದಿವೆ. ಬಹು ಚರ್ಚೆಯಲ್ಲಿರುವ ಈ “ಕಳೆದುಕೊಂಡ ವಸ್ತು’ವಿನ ಬಗ್ಗೆ ಉಂಟಾಗಿರುವ ಕುತೂಹಲ ತಣಿಯಲು ಸ್ವತಃ ರಮೇಶ ಇಲ್ಲವೇ ಸತೀಶ ಜಾರಕಿಹೊಳಿ ಬಾಯಿ ಬಿಡಬೇಕು. ಅದಾಗದಿದ್ದರೆ “ಆ ವಸ್ತು’ವೇ ವಾಸ್ತವ ಸಂಗತಿಯನ್ನು ಬಹಿರಂಗಪಡಿಸಬೇಕು ಎಂಬ ಮಾತುಗಳೂ ಕೇಳಿ ಬರುತ್ತಿವೆ.

* ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next