Advertisement

ನಿಮ್ಮ ಆಯ್ಕೆಯ ಮಾನದಂಡವೇನು? ಜಾತಿಯೇ, ಧರ್ಮವೇ?

06:00 AM Apr 29, 2018 | |

ನಮಗೆ ಈಗ ಅತೀ ಮುಖ್ಯ ಏನು ಎನ್ನುವುದೇ ಗೊಂದಲ. ವ್ಯಕ್ತಿಯೇ, ಪಕ್ಷವೇ, ಅವನು ಮಾಡಿದ ಅಥವಾ ಮಾಡುವ ಕೆಲಸವೇ ಎನ್ನುವುದು ಈಗ ತೂಗುಯ್ನಾಲೆ. ಖಂಡಿತಕ್ಕೂ ನಾವು ಈಗ ನೆರವು ಕೇಳಬೇಕು ಎನಿಸುತ್ತದೆ. ಕೇಳುವುದಾದರೂ ಯಾರನ್ನು ಎನ್ನುವುದು ಮತ್ತೂಂದು ಗೊಂದಲ. ಈಗ ನಡೆಯುತ್ತಿರುವುದೆಲ್ಲವೂ ಗೋಸುಂಬೆತನ. ಇದರಾಚೆಗಿರುವ ಸತ್ಯವನ್ನು ನಾವು ನೋಡುವ ಪ್ರಯತ್ನ ಮಾಡಬೇಕು. ಅಲ್ಲೊಂದು ಲೋಕವಿದೆ ಎನ್ನುವುದನ್ನು ತಿಳಿಯುವ ಜಾಣ್ಮೆ ಅಗತ್ಯ. ಇಲ್ಲದಿದ್ದರೆ ನಾವು ನಾವಾಗಿ ಬೆಳೆಯುವುದಿಲ್ಲ.

Advertisement

ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಚುನಾವಣೆ ಮುಗಿದು ಹೋಗುತ್ತದೆ. ನಾವು ಮತ್ತೆ ಐದು ವರ್ಷ ಕಾಯಬೇಕು. ಈ ಚುನಾವಣೆಯ ಕಾಲಘಟ್ಟದಲ್ಲಿ ಏನು ಮಹತ್ವ ಎಂದು ಕೇಳಿದರೆ ಯಾರಲ್ಲೂ ಸ್ಪಷ್ಟ ಉತ್ತರ ಸಿಗದು. ಈ ಉತ್ತರಕ್ಕಾಗಿ ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. 

ನಾವು ಅಭ್ಯರ್ಥಿಗಳನ್ನು ಆಯ್ಕೆಮಾಡಿಕೊಳ್ಳಲು ಪ್ರಮುಖವಾಗಿ ಏನನ್ನು ನೋಡಬೇಕು? ರಾಜಕೀಯ ಪಕ್ಷವನ್ನು ನೋಡಬೇಕೇ, ಅಭ್ಯರ್ಥಿಗಳನ್ನು ನೋಡಬೇಕೇ, ಅವರು ಮಾಡುವ ಅಥವಾ ಮಾಡಿದ ಕೆಲಸಗಳ ಪರಿಣಾಮವನ್ನು ನೋಡಬೇಕೇ ಅಥವಾ ಆ ಪಕ್ಷಗಳು ನಮ್ಮ ಮುಂದಿಡುವ ಪ್ರಣಾಳಿಕೆಯನ್ನು ನೋಡಬೇಕೇ?  ಈ ಪ್ರಶ್ನೆಗಳು ಪ್ರತಿಯೊಬ್ಬ ಪ್ರಜೆಯನ್ನು ಕಾಡುತ್ತದೆ. ನಾವು 1976-77ರ ಕಾಲವನ್ನು ಅವಲೋಕಿಸಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಅದೇನೆಂದರೆ ಆ ಕಾಲಘಟದಲ್ಲಿ ನಮಗೆ ಮುಖ್ಯವೆನಿಸಿದ್ದು ಪಕ್ಷ. ಆಗ ನಮಗಿದ್ದುದು ಆಯ್ಕೆಗೆ ಅತೀ ಸುಲಭ ಕಾಂಗ್ರೆಸ್‌ ಪಕ್ಷ. ಇದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿತ್ತು. ನಮಗೆ ಆಯ್ಕೆಗೆ ಆ ಪಕ್ಷದ ಅಭ್ಯರ್ಥಿಯೇ ಕಾಣಿಸುತ್ತಿದ್ದರು. ಮುಂದೆ 1985ರ ಕಾಲದಲ್ಲಿ ರಾಜಕೀಯ ಗರಿಗಟ್ಟಿತು. ಕಾಂಗ್ರೆಸ್‌, ಜನತಾ ಪಕ್ಷ, ಕ್ರಾಂತಿರಂಗ ಪಕ್ಷ, ಬಿಜೆಪಿ ಪಕ್ಷಗಳು ತಲೆಯೆತ್ತಿದ್ದವು.

ರಾಮಕೃಷ್ಣ ಹೆಗಡೆಯವರು ಚುನಾವಣಾ ಪ್ರ ಣಾಳಿಕೆ ಅತೀ ಮುಖ್ಯವೆಂದು ಹೇಳಹೊರಟರು. ಹೌದೆನಿಸಿತು. ಆ ಕಾಲದಲ್ಲಿ ಪ್ರಣಾಳಿಕೆ ಸಿದ್ಧಪಡಿಸಲು ಥಿಂಕ್‌ ಟ್ಯಾಂಕ್‌ ಬಳಕೆಯಾಯಿತು. ಹಾಗೆಂದು ಇಂದಿರಾ ಗಾಂಧಿಯವರು 20 ಅಂಶದ ಕಾರ್ಯಕ್ರಮಗಳನ್ನು ಅದಕ್ಕೂ ಮುಂಚೆಯೇ ನೀಡಿದ್ದರು. ಇದೆಲ್ಲವನ್ನೂ ನೋಡಿಕೊಂಡೇ ಬೆಳೆಯುತ್ತಾ ಬಂದ ನಾವು ಅದನ್ನೇ ಮುಖ್ಯವೆಂದು ತಿಳಿದುಕೊಂಡೆವು. ಆದರೆ ಈಗ ಕಾಲ ಬದಲಾಗಿದೆ. ಬಗೆಬಗೆಯಲ್ಲಿ ಪ್ರಣಾಳಿಕೆ ಬರುತ್ತಿವೆ. ಒಂದಕ್ಕಿಂತ ಒಂದು ಸೊಗಸಾಗಿ ಕಾಣುತ್ತಿದೆ. ಆಯ್ಕೆ ಮಾಡಲು ಯಾವುದು ಮುಖ್ಯ ಎನ್ನುವ ಬಗೆಯೂ ಗೊಂದಲ ನಿರ್ಮಾಣವಾಗಿದೆ.

ಇದೆಲ್ಲವನ್ನೂ ಬದಿಗಿಟ್ಟು ನೋಡಿದರೆ ನಮಗೆ ಈಗ ಅತೀ ಮುಖ್ಯ ಏನು ಎನ್ನುವುದೇ ಗೊಂದಲ. ವ್ಯಕ್ತಿಯೇ, ಅಲ್ಲ ಪಕ್ಷವೇ, ಅವನು ಮಾಡಿದ ಅಥವಾ ಮಾಡುವ ಕೆಲಸವೇ ಎನ್ನುವುದು ಈಗ ತೂಗುಯ್ನಾಲೆ. ಖಂಡಿತಕ್ಕೂ ನಾವು ಈಗ ನೆರವು ಕೇಳಬೇಕು ಎನಿಸುತ್ತದೆ. ಕೇಳುವುದಾದರೂ ಯಾರನ್ನು ಎನ್ನುವುದು ಮತ್ತೂಂದು ಗೊಂದಲ.

Advertisement

ನೀವು ಈಗ ಖಂಡಿತಕ್ಕೂ ಯಾವುದನ್ನೂ ನೋಡುವುದಿಲ್ಲ ಅಥವಾ ಕೇಳುವುದಿಲ್ಲ. ಈಗ ವ್ಯಕ್ತಿಯ ಜಾತಿ, ಧರ್ಮವೇ ಮುಖ್ಯವೆಂದು ತಿಳಿದಿದ್ದೀರಿ. ಅದನ್ನೇ ನೀವು ಚುನಾವಣೆಯಲ್ಲಿ ಕೂಡ ನೋಡುತ್ತೀರಿ. ಆದ್ದರಿಂದ ರಾಜಕೀಯ ಪಕ್ಷಗಳೂ ನಿಮ್ಮ ಆಯ್ಕೆಯನ್ನು ಪೋಷಿಸಲು ಭರದ ತಯಾರಿ ಮಾಡಿಕೊಳ್ಳುತ್ತ  ವೆ. ಈ ಕಾರಣದಿಂದಲೇ ಈಗ ಚುನಾವಣೆ ಕೇವಲ ಜಾತಿ, ಧರ್ಮದ ನೆಲೆಗಟ್ಟಿನಲ್ಲೇ ನಿಂತುಕೊಂಡಿದೆ.

ಜಾತಿ ಎಂದಾಕ್ಷಣ ಉಪಜಾತಿಗಳು ರಾಜಕಾರಣಿಗಳ ಕಣ್ಣಿಗೆ ಬೀಳುವುದೇ ಇಲ್ಲ. ಬಿದ್ದರೂ ಅವರು ನಮ್ಮನ್ನು ಆಯ್ಕೆಮಾಡುತ್ತಾರೆ ಎನ್ನುವ ಪೂರ್ವ ನಿರ್ಧಾರಕ್ಕೆ ಬರುತ್ತಾರೆ. ಈಗ ನಿಮ್ಮ ಕಲ್ಪನೆ ಎಷ್ಟರಮಟ್ಟಿಗೆ ನಿರ್ಮಾಣವಾಗಿದೆ ಎಂದರೆ ಈ ಲೆಕ್ಕಾಚಾರವೇ ಮುಖ್ಯ, ಉಳಿದುದು ಎಲ್ಲವೂ ಅನಿವಾರ್ಯವಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆಯಲ್ಲವೇ? ಅಲ್ಲದಿದ್ದರೆ ಈ ಜಾತಿ, ಧರ್ಮದ ನೆಲೆಗಟ್ಟಿನಲ್ಲಿ ಅಭ್ಯರ್ಥಿಗಳ ಆಯ್ಕೆ ಏಕೆ ಬೇಕು? ಈ ಪ್ರಶ್ನೆಗೆ ಉತ್ತರವನ್ನು ರಾಜಕಾರಣಿಗಳು ಕೊಡುತ್ತಾರೆಯೇ?

ಓರ್ವ ಜನಪ್ರತಿನಿಧಿ ಹೇಗಿರಬೇಕು? ಅವನ ಗುಣನಡತೆಯೇನು? ಅವನು ಕೆಲಸ ಮಾಡುವ ಸಾಮರ್ಥ್ಯವೇನು ಎನ್ನುವುದು ಮುಖ್ಯ. ನೀವು ರಾಜಕಾರಣಿಗಳು ಹೇಳುವುದೇ ಸತ್ಯ, ನೀವು ಆಡಿದ್ದೇ ಸರಿ ಎನ್ನುವುದನ್ನೂ ನಾವೂ ತಿಳಿದುಕೊಂಡಿದ್ದೇವೆ. ಆದ್ದರಿಂದಲೇ ನೀವು ಹೇಳುವವರನ್ನೇ ಮಾತಿಲ್ಲದ್ದೇ ಚುನಾಯಿಸುವ ಹಂತಕ್ಕೆ ನಾವು ಬಂದಿದ್ದೇವೆ. ಯಾರು ಮಾತುಗಾರ ಎನ್ನುವುದನ್ನೇ ನೋಡುತ್ತೇವೆ, ಅವನು ನಮಗೆ ಮುಖ್ಯವಾಗಿ ಕಾಣುತ್ತಾನೆ. ಅವನನ್ನೂ ಆಯ್ಕೆಮಾಡಿಕೊಳ್ಳುತ್ತೇವೆ.

ಇದು ನಿಲ್ಲಬೇಕು. ರಾಜಕಾರಣಿಗಳ ಮಾತನ್ನು ಕೇಳಿದ ನಂತರವೂ ನಾವೂ ನಮ್ಮ ಬುದ್ದಿಶಕ್ತಿಯನ್ನು ಬಳಸಿಕೊಂಡು ಆಲೋಚಿಸಬೇಕು. ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ನಮ್ಮ ಮೆದುಳು ಅರ್ಥಮಾಡುತ್ತದೆ. ನಿಮಗೆ ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ದೇವರಾಜ ಅರಸು ಅವರಂಥ ರಾಜಕಾರಣಿಯನ್ನೂ ಸೋಲಿಸಲು ಕಾರಣವೇನು? ಅವರು ಸಮಾಜಕ್ಕೆ ಮೌಲ್ಯಗಳನ್ನು ಕೊಡಲಿಲ್ಲವೇ?  ಅವರು ಸಾಮಾಜಿಕ ನ್ಯಾಯವನ್ನು ಕೊಡಲಿಲ್ಲವೇ? ನೀವು ನಿಮ್ಮ ಆಯ್ಕೆಯ ಮಾನದಂಡವನ್ನೇ ಬದಲಾಯಿಸಿಕೊಳ್ಳಿ, ನಂತರ ನಮಗೆ ಬುದ್ಧಿ ಹೇಳಿ. ಅದನ್ನು ನಾವು ಕೇಳುತ್ತೇವೆ.ಈಗ ನೀವು ಹೇಳುತ್ತಿರುವುದು ಬಾಯಿ ಮಾತಿನ ಭರವಸೆಗಳನ್ನು ನಾವು ನಂಬಲಾರೆವು ಎನ್ನುವ ತಾಕತ್ತು ನಮಗೆ ಬರಬೇಕು. ಎಲ್ಲಿಯವರೆಗೆ ನಾವು ನಮ್ಮತನವನ್ನು ಕಳೆದು ಕೊಳ್ಳುತ್ತೇವೆಯೂ ಅಲ್ಲಿಯತನಕ ನಾವು ಇದೇ ಸತ್ಯವೆಂದು ನಂಬುತ್ತೇವೆ. ಅದನ್ನೇ ಪಾಲಿಸುತ್ತೇವೆ. 

ಈಗ ನಡೆಯುತ್ತಿರುವುದೆಲ್ಲವೂ ಗೋಸುಂಬೆತನ. ಇದರಾಚೆಗಿರುವ ಸತ್ಯವನ್ನು ನಾವು ನೋಡುವ ಪ್ರಯತ್ನ ಮಾಡಬೇಕು. ಅಲ್ಲೊಂದು ಲೋಕವಿದೆ ಎನ್ನುವುದನ್ನು ತಿಳಿಯುವ ಜಾಣ್ಮೆ ಅಗತ್ಯ. ಇಲ್ಲದಿದ್ದರೆ ನಾವು ನಾವಾಗಿ ಬೆಳೆಯುವುದಿಲ್ಲ. ಈಗ ನೀವೇ ಯೋಚಿಸಿ ನಮಗೆ ಮುಖ್ಯ ಯಾವುದು? ನಮ್ಮ ಪ್ರತಿನಿಧಿ ಹೇಗಿರಬೇಕು. ನಮ್ಮ ಆಯ್ಕೆ ಹೇಗಿದ್ದರೆ ಚೆನ್ನ? ಆಗ ನಾವು ಬುದ್ಧಿವಂತರೆನಿಸಿಕೊಳ್ಳುತ್ತೇವೆ. ನಮ್ಮ ಆಯ್ಕೆಯೂ ಸರಿಯಾಗಿರುತ್ತದೆ.

ಚಿದಂಬರ ಬೈಕಂಪಾಡಿ

Advertisement

Udayavani is now on Telegram. Click here to join our channel and stay updated with the latest news.

Next