Advertisement
ಈ ಕುರಿತ ಸಲ್ಲಿಕೆಯಾಗಿರುವ ಪಿಐಎಲ್ ಹಾಗೂ ತಕರಾರು ಅರ್ಜಿಗಳನ್ನು ಶುಕ್ರವಾರ ಹಂಗಾಮಿ ಮುಖ್ಯನ್ಯಾಯಮೂರ್ತಿ ಎಚ್.ಜಿ ರಮೇಶ್ ಹಾಗೂ ನ್ಯಾ. ಪಿ.ಎಸ್ ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ನೇಮಕಾತಿಪಟ್ಟಿಯಲ್ಲಿರುವ ಎಷ್ಟು ಅಭ್ಯರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆಂಬ ಮಾಹಿತಿಯಿದ್ದರೆ ನೀಡಿ ಎಂದು ಅರ್ಜಿದಾರರ ಪರ ವಕೀಲರಿಗೆ ತಿಳಿಸಿತು. ಪ್ರಕರಣದ ತನಿಖಾ ವರದಿ ಸಲ್ಲಿಸಿರುವ ಸಿಐಡಿ ಕೂಡ ಈ ಅಂಶ ಉಲ್ಲೇಖೀಸಿಲ್ಲ. ಇದೀಗ ನೇಮಕಾತಿ ಅಧಿಸೂಚನೆ ರದ್ದುಕೋರಲಾಗಿದೆ. ಹೀಗಿದ್ದಾಗ, ಅಕ್ರಮ ಎಸಗದೇ ಆಯ್ಕೆ ಆಗಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗುವುದಿಲ್ಲವೇ? ಅವರ ಮುಂದಿನ ಪರಿಸ್ಥಿತಿಯೇನು ಎಂದು ಹೇಳಿತು. ಕೆಪಿಎಸ್‌ಸಿ ನೇಮಕಾತಿಯಲ್ಲಿ ರಾಜ್ಯಸರ್ಕಾರದ ಪಾತ್ರವೇನು
ಎಂಬುದರ ಬಗ್ಗೆಯೂ ಕೋರ್ಟ್ ವಿವರಣೆ ಪಡೆಯಿತು. ಸರ್ಕಾರಿ ಸೇವೆಗೆ ಸಂಬಂಧಿಸಿದ ಅರ್ಜಿಗಳು ಪಿಐಎಲ್ ಮಾನ್ಯತೆ ಹೊಂದಲಿವೆಯೇ ಎಂಬುದರ ಬಗ್ಗೆ ಅರ್ಜಿದಾರರ ಪರ ವಕೀಲರ ವಾದ ಆಲಿಸಿ ಅ.30ಕ್ಕೆ ವಿಚಾರಣೆ ಮುಂದೂಡಿತು.
ಅರ್ಜಿದಾರರಾಗಿರುವ ಡಾ. ಮೈತ್ರಿಯಾ ಅವರ ನೇಮಕಾತಿ ಬಗ್ಗೆಯೂ ಮಾಹಿತಿ ಪಡೆದ ನ್ಯಾಯಪೀಠ, ಅವರಿಗೆ ಹುದ್ದೆ ಸಿಕ್ಕಿದೆಯೇ ಎಂದು ವಕೀಲರನ್ನು ಪ್ರಶ್ನಿಸಿತು. ಈ ವೇಳೆ ಇತರೆ ಅಭ್ಯರ್ಥಿಗಳ ಪರ ವಕೀಲರು, ಅವರೂ ಗ್ರೂಪ್ ಎ ಹುದ್ದೆಗೆ ಆಯ್ಕೆಗೊಂಡಿದ್ದಾರೆ. ಸಂದರ್ಶನದಲ್ಲಿಯೂ ಅಂಕ ನೀಡಲಾಗಿದೆ. 75 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂಬ ಆರೋಪ ಮಾಡಿದ್ದಾರೆ. ಇಷ್ಟಕ್ಕೂ ಕೆಪಿಎಸ್‌ಸಿ ಸದಸ್ಯರ ಕೊಠಡಿಗೆ ಅವರು ತೆರಳುವ ಅಗತ್ಯವೇನಿತ್ತು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ನಿಮ್ಮ ವಾದ ಮಂಡನೆಗೆ ಅವಕಾಶ ಬಂದಾಗ ವಿವರಣೆ ನೀಡಿ ಎಂದು ತಾಕೀತು ಮಾಡಿತು.