Advertisement

ಉಪ್ಪಿ ರುಪ್ಪಿ, ನಾಗಾರ್ಜುನ ಸೇರಿ ಪಟ್ಟಿಯಲ್ಲಿರುವ ಸಿನಿಮಾಗಳ ಗತಿಯೇನು?

10:59 AM Aug 14, 2017 | |

ಉಪೇಂದ್ರ ಅವರು ಇಷ್ಟು ದಿನ ಸಾಲು ಸಾಲು ಸಿನಿಮಾಗಳನ್ನು ಮಾಡಿದ್ದಾರೆ. ಅವರು ಒಪ್ಪಿಕೊಂಡ, ಕಥೆ ಕೇಳಿ, “ಮುಂದೆ ಮಾಡೋಣ’ ಎಂದು ಹೇಳಿದ ಸಿನಿಮಾಗಳ ಪಟ್ಟಿಯೂ ದೊಡ್ಡದಿದೆ. ಈ ನಡುವೆಯೇ ಉಪ್ಪಿ 50ನೇ ಚಿತ್ರದ ಸನಿಹದಲ್ಲಿದ್ದಾರೆ. ಹಾಗಾಗಿ, ನಿಮ್ಮ 50ನೇ ಸಿನಿಮಾ ಯಾವಾಗ ಎಂದು ಕೇಳಿದರೆ ಉಪೇಂದ್ರ ಅವರು, “ಬಹುಶಃ ರಾಜಕೀಯ ಎಂಟ್ರಿಯೇ ನನ್ನ 50ನೇ ಸಿನಿಮಾ ಎನ್ನಬಹುದು’ ಎಂದು ಉತ್ತರಿಸುತ್ತಾರೆ.

Advertisement

ಈ ಮೂಲಕ ಸದ್ಯಕ್ಕೆ ಯಾವುದೇ ಸಿನಿಮಾ ಮಾಡೋದಿಲ್ಲ ಎಂಬ ಸಂದೇಶ ಕೂಡಾ ರವಾನಿಸುತ್ತಾರೆ. ಅಲ್ಲದೇ, ಅವರು ಕಮಿಟ್‌ ಆದ ಸಿನಿಮಾಗಳೆಲ್ಲವೂ ಸದ್ಯಕ್ಕೆ ಆಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ವರ್ಷ ಉಪೇಂದ್ರ ಅವರ 50ನೇ ಚಿತ್ರ ಬಿಡುಗಡೆಯಾಗಬೇಕಿತ್ತು.  ಆದರೆ, ತಮ್ಮ ರಾಜಕೀಯ ಪ್ರವೇಶವೇ 50ನೇ ಚಿತ್ರವಾಗಬಹುದು ಎನ್ನುತ್ತಾರೆ ಉಪೇಂದ್ರ.

“ಜನ ನನ್ನನ್ನು ರಿಯಲ್‌ ಸ್ಟಾರ್‌ ಎಂದು ಕರೆದು ಕರೆದೂ, 49 ಸಿನಿಮಾಗಳು ರೀಲ್‌ ಲೈಫ್ನಲ್ಲಿ ಆದರೆ, 50ನೇ ಸಿನಿಮಾ ನನ್ನ ರಿಯಲ್‌ ಲೈಫ್ನಲ್ಲಿ ಆಗುವಂತೆ ಕಾಣುತ್ತಿದೆ. ಬಹುಶಃ ರಾಜಕೀಯ ಪ್ರವೇಶವೇ ನನ್ನ 50ನೇ ಸಿನಿಮಾ ಆಗಬಹುದು’ ಎನ್ನುವ ಮೂಲಕ ಸದ್ಯಕ್ಕೆ ಸಿನಿಮಾ ಮಾಡೋದಿಲ್ಲ ಎನ್ನುತ್ತಾರೆ ಅವರು. ಇನ್ನು ಮುಂದಿನ ಒಂದು ವರ್ಷ ಯಾವುದೇ ಚಿತ್ರದಲ್ಲೂ ನಟಿಸುವುದಿಲ್ಲ ಎಂಬುದನ್ನು ಕೂಡಾ ಉಪೇಂದ್ರ ಸ್ಪಷ್ಟಪಡಿಸುತ್ತಾರೆ.

ಸದ್ಯಕ್ಕೆ ಒಪ್ಪಿಕೊಂಡ ಒಂದು ಚಿತ್ರವನ್ನು ಮುಗಿಸಿಕೊಡುವ ಮೂಲಕ ಬಣ್ಣದ ಲೋಕದಿಂದ ಒಂದು ದೊಡ್ಡ ಗ್ಯಾಪ್‌ ತೆಗೆದುಕೊಳ್ಳಲು ಉಪೇಂದ್ರ ನಿರ್ಧರಿಸಿದ್ದಾರೆ. “ಒಂದು ಚಿತ್ರ ಮುಗಿಸಿದ ನಂತರ ಪ್ರಜಾಕೀಯ, ಪ್ರಜಾಕಾರಣದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ. ಮುಂದಿನ ಒಂದು ವರ್ಷ ಯಾವುದೇ ಚಿತ್ರದಲ್ಲೂ ನಟಿಸುವುದಿಲ್ಲ’ ಎಂದು ನೇರವಾಗಿ ಹೇಳುತ್ತಾರೆ. ಈ ವರ್ಷಾರಂಭದಲ್ಲಿ ಉಪೇಂದ್ರ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಂಡ ಅನೇಕ ಸುದ್ದಿಗಳು ಬಂದುವು.

ಮಂಜು ಮಾಂಡವ್ಯ ನಿರ್ದೇಶನದ ಚಿತ್ರ, ಉದಯ್‌ ಪ್ರಕಾಶ್‌ ನಿರ್ದೇಶನದಲ್ಲಿ “ಡಾ.ಮೋದಿ’, ಶಶಾಂಕ್‌ ನಿರ್ದೇಶನದಲ್ಲೊಂದು ಚಿತ್ರ … ಹೀಗೆ ಒಂದಷ್ಟು ಚಿತ್ರಗಳು ಉಪೇಂದ್ರ ಪಟ್ಟಿಯಲ್ಲಿದ್ದವು. ಈಗ ಉಪೇಂದ್ರ ಅವರ ಏಕಾಏಕಿ ರಾಜಕೀಯ ಎಂಟ್ರಿಯಿಂದ ಈ ಚಿತ್ರಗಳೆಲ್ಲವೂ ಮುಂದೆ ಹೋದಂತಾಗಿವೆ. ಒಂದು ವೇಳೆ ಉಪೇಂದ್ರ ಅವರ ರಾಜಕೀಯ ಕಲ್ಪನೆ ವಕೌಟ್‌ ಆದರೆ, ಮುಂದೆ ಉಪೇಂದ್ರ ಸಿನಿಮಾದಿಂದ ದೂರವಾದರೂ ಅಚ್ಚರಿಯಿಲ್ಲ.

Advertisement

ಆ ತರಹ ಆದರೆ, ಈ ಸಿನಿಮಾಗಳು ಕೂಡಾ ನಿಂತಂತೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿವೆ. ಈ ನಡುವೆಯೇ ಉಪೇಂದ್ರ ಅವರ “ನಾಗಾರ್ಜುನ’ ಹಾಗೂ “ಉಪ್ಪಿ ರುಪಿ’ ಚಿತ್ರಗಳ ಮುಹೂರ್ತ ಕೂಡಾ ಆಗಿತ್ತು. ಅದರಲ್ಲೂ “ಉಪ್ಪಿ ರುಪಿ’ ಚಿತ್ರದ ಚಿತ್ರೀಕರಣ ಕೂಡಾ ಆರಂಭವಾಗಿತ್ತು. ಮುಂದೆ ಈ ಚಿತ್ರಗಳು ಮುಂದುವರಿಯುತ್ತಾ, ಉಪೇಂದ್ರ ಇವುಗಳನ್ನು ಮುಗಿಸಿಕೊಡುತ್ತಾರಾ ಎಂಬ ಪ್ರಶ್ನೆ ಎದ್ದಿರೋದು ಸುಳ್ಳಲ್ಲ. 

“ಕುರುಕ್ಷೇತ್ರ’ ಒಪ್ಪಿಕೊಳ್ಳದ್ದು ಇದೇ ಕಾರಣಕ್ಕಾ?: ಮುನಿರತ್ನ ಅವರು “ಕುರುಕ್ಷೇತ್ರ’ ನಿರ್ಮಿಸುತ್ತಾರೆಂದಾಗ ಉಪೇಂದ್ರ ಅವರು “ಕುರುಕ್ಷೇತ್ರ’ದ ಚಿತ್ರದಲ್ಲಿ ಯಾವ ಪಾತ್ರ ಮಾಡುತ್ತಾರೆಂಬ ಕುತೂಹಲ ಅನೇಕರಲ್ಲಿತ್ತು. ಅದಕ್ಕೆ ಕಾರಣ ಉಪೇಂದ್ರ ಹಾಗೂ ಮುನಿರತ್ನ ಕಾಂಬಿನೇಶನ್‌. ಮುನಿರತ್ನ ಅವರು ಉಪೇಂದ್ರ ಅವರ “ರಕ್ತಕಣ್ಣೀರು’, “ಕಠಾರಿವೀರ ಸುರಸುಂದರಾಂಗಿ’ ಚಿತ್ರಗಳನ್ನು ನಿರ್ಮಿಸಿದ್ದರು. ಅದರಾಚೆಗೂ ಅವರಿಬ್ಬರು ಆತ್ಮೀಯರು.

ಈ ಕಾರಣದಿಂದ “ಕುರುಕ್ಷೇತ್ರ’ದಲ್ಲೂ ಉಪೇಂದ್ರ ನಟಿಸಬಹುದೆಂಬ ನಿರೀಕ್ಷೆ ಇತ್ತು. ಉಪೇಂದ್ರ ನಟಿಸದಿರಲು ಅವರ ರಾಜಕೀಯ ಎಂಟ್ರಿಯೇ ಕಾರಣ ಎಂದು ಹೇಳಲಾಗುತ್ತಿದೆ. ರಾಜಕೀಯದಕ್ಕೆ ಎಂಟ್ರಿಕೊಡುತ್ತಿರುವುದರಿಂದ “ಕುರುಕ್ಷೇತ್ರ’ದಂತಹ ಬಹು ತಾರಾಗಣದ ಚಿತ್ರಕ್ಕೆ ಡೇಟ್ಸ್‌ ಹೊಂದಿಸಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಈ ಸಿನಿಮಾದಲ್ಲಿ ಯಾವುದೇ ಪಾತ್ರವನ್ನು ಉಪೇಂದ್ರ ಒಪ್ಪಿಕೊಳ್ಳಲಿಲ್ಲ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next