Advertisement

ಎಸ್ಪಿಬಿ ಗಾಯನ ಶಕ್ತಿಯ ರಹಸ್ಯವೇನು?

09:32 AM Jun 03, 2017 | |

ಪ್ರಾಣಾಯಾಮ ಎಂದರೇನು? ಉಸಿರಾಟದ ಮೇಲೆ ನಿಯಂತ್ರಣ ಇಟ್ಟುಕೊಳ್ಳುವ ಪ್ರಕ್ರಿಯೆ. ಆದಷ್ಟು ಕಡಿಮೆ ಉಸಿರಾಡುವ ಕಸರತ್ತು. ಪ್ರತಿ ಗಾಯಕ ಕೂಡ ತನಗೆ ತಿಳಿದೋ, ತಿಳಿಯದೆಯೋ ಇದೇ ಕೆಲಸ ಮಾಡುತ್ತಿರುತ್ತಾನೆ. ಉಸಿರನ್ನು ಸಂಗೀತವಾಗಿಸುವ ಪ್ರಕ್ರಿಯೆ ಇದೆಯಲ್ಲ, ದೇಹ ಸೇರಿದ ಅಷ್ಟೂ ಉಸಿರು ಸ್ವರಗಳಾಗಿ ಹೊರಬರುತ್ತದೆ. ಒಳಗೆ ಎಳೆದುಕೊಂಡಾಗ ಗಾಳಿ, ಹೊರಗೆ ಬಂದಾಗ ಸಂಗೀತ. ಇದನ್ನು ಯೋಗದ ಭಾಷೆಯಲ್ಲಿ ರೇಚಕ ಎನ್ನಲಾಗುತ್ತದೆ. 

Advertisement

“ಸ್ಟೇಜ್‌ ಹೊರಗೆ ಇದ್ದಾಗ ಒಂಥರಾ ಇರ್ತೀರಿ, ಸ್ಟೇಜ್‌ ಏರಿದ ಮೇಲೆ ಅಬ್ಟಾ ಹೀಗೂ ಹಾಡಬಹುದಾ? ಅಂತ ತೋರಿಸ್ತೀರಿ. ಈ ವಯಸ್ಸಲ್ಲಿ ಇದೆಲ್ಲಾ ಹೇಗೆ ಸಾಧ್ಯ?’ 

“ನನ್ನ ಹೆಂಡ್ತೀನೂ ನಿಮ್ಮ ಥರಾನೇ ಕೇಳ್ತಾಳೆ. ಮೈಕು ಹಿಡಿದರೆ ಎಲ್ಲಿಂದ ಎನರ್ಜಿ ಬರುತ್ತೋ ಗೊತ್ತಿಲ್ಲ’ 

-ಹಿರಿಯ ಗಾಯಕ ಎಸ್‌ಪಿ ಬಾಲಸುಬ್ರಮಣ್ಯಂ ಅವರ ಉತ್ತರವಿದು. ಜೂನ್‌ 4ಕ್ಕೆ 71ವಸಂತಕ್ಕೆ ಕಾಲಿಡಲಿದ್ದಾರವರು. 50 ಸಾವಿರ ಹಾಡುಗಳು. ಹಾಡಿದ್ದನ್ನೇ ಹಾಡಿದ್ದಾರೆ ಅಂತ ಲೆಕ್ಕ ಹಾಕಿದರೂ ಏನಿಲ್ಲವೆಂದರೆ ಇದುವರೆಗೆ ಲಕ್ಷಾಂತರ ಬಾರಿ ಹಾಡಿದ್ದಾರೆ. ವಯಸ್ಸಾದಂತೆ ಶರೀರ, ಶಾರೀರ ಎರಡೂ ಕ್ಷೀಣವಾಗುತ್ತಾ ಹೋಗಬೇಕು. ಆದರೆ ಬಾಲು ಅವರ ಕಂಠ ಸಾಣೆ ಹಿಡಿದಂತೆ ಸ್ವರ ವಿನ್ಯಾಸಗಳು ಅದ್ಭುತವಾಗಿ ಕೇಳಸಿಗುತ್ತದೆ. ಇದರ ಹಿಂದಿನ ಗುಟ್ಟೇನು ಅಂತ ಹುಡುಕಿ ಹೊರಟರೆ ಆಯುರ್ವೇದದ ಚರಕ ಸಂಹಿತೆ ನೋಡಲೇಬೇಕಾಗುತ್ತದೆ. 

ಪ್ರತಿಯೊಬ್ಬರ ದೇಹದಲ್ಲಿ 7 ಪ್ರಮುಖ ಚಕ್ರಗಳಿವೆ. ಸಹಸ್ರ, ಆಜ್ಞಾ, ವಿಷುದ್ಧಿ, ಅನಾಹತ, ಮಣಿಪುರ, ಸ್ವಾದೀಷ್ಟಾನ ಮತ್ತು ಮೂಲಾಧಾರ. ಪ್ರತಿ ಚಕ್ರವೂ ದೇಹದ ಆರ್ಗಾನ್‌ಗಳ ಮೇಲೆ ಹಿಡಿತ ಸಾಧಿಸಿರುತ್ತದೆ. ಪ್ರತಿ ಸಾರಿ ಹಾಡಿದಾಗಲೂ ಶ್ರುತಿ, ಸ್ವರ, ತಾಳದ ವೈಬ್ರೇಷನ್‌ ಇದರ ಮೇಲೆ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ.   ನಮ್ಮ ಸಂಗೀತದಲ್ಲಿರುವ ಸ್ವರಶಾಸ್ತ್ರ, 72 ಮೇಳಕರ್ತ ರಾಗಗಳಿವೆಯಲ್ಲಾ ಇವು ನಮ್ಮ ದೇಹದ 72 ಪ್ರಮುಖ ನರ ಮಂಡಲವನ್ನು ಕಂಟ್ರೋಲ್‌ ಮಾಡುತ್ತವೆ. 

Advertisement

ಎಸ್‌ಪಿಬಿ ಹಾಡಿರುವ “ಸಾಗರ ಸಂಗಮಂ’ನ ವೇದಂ ಅಣು ಅಣುವುಲ ನಾದಂ ಹಾಡಿನ ಆರಂಭದ ಆಲಾಪನೆ ಕೇಳಿದರೆ ನರ ನಾಡಿಗಳೆಲ್ಲವೂ ಒಮ್ಮೆಲೆ ಎದ್ದು ಬಿಡುತ್ತದೆ. ಕಾರಣ ಆ ರಾಗ ವಿಸ್ತಾರದಲ್ಲಿನ ಶ್ರುತಿ ಶುದ್ಧತೆ ಮತ್ತು ರೇಂಜ್‌.  ಕೇಳುವವರಿಗೆ ಹೀಗೆ ಆಗಬೇಕಾದರೆ ಹಾಡುವ ಎಸ್ಪಿಬಿ ಅವರಿಗೆ ದೇಹದ ಅಷ್ಟೂ ಚಕ್ರಗಳು ತೆರೆದುಕೊಳ್ಳದೆ ಇರದು. ಸಂಗೀತ ಅನ್ನೋದು ಶಕ್ತಿ. ರಾಗದ ಮೂಲಕ ಹರಿದು ಬರುವ ತೇಜಸ್ಸು. ಸ್ವರಗಳನ್ನು ಹಾಡುತ್ತಿದ್ದರೆ ದೇಹ, ಬುದ್ಧಿಯನ್ನು ಆರೋಗ್ಯವಾಗಿ ಇಟ್ಟಿರುತ್ತದೆ ಅನ್ನೋದಕ್ಕೆ ಇವರೇ ಉದಾಹರಣೆ. 
 
ಸಂಗೀತವನ್ನು ಅತಿಹರೆಯದಲ್ಲೇ ಕಲಿಯಲು ಶುರುಮಾಡಿದರೆ ದೇಹದ ಚಕ್ರಗಳು ಬೇಗ ಚಾಲೂ ಆಗುತ್ತವೆ. ಸಾಮಾನ್ಯವಾಗಿ ಮಗು ಹುಟ್ಟಿದಾಕ್ಷಣ ಮೂಲಾಧಾರ ಚಕ್ರ ಕೆಲಸ ಶುರುಮಾಡು ತ್ತದೆ. ಆಮೇಲೆ ಉಳಿದ 6 ಚಕ್ರಗಳು ವಯೋಮಾನಕ್ಕೆ ತಕ್ಕಂತೆ ಒಂದರ ಹಿಂದೆ ಒಂದು ಬೆಳವಣಿಗೆ ಕಾಣುತ್ತದೆ. ಈ ಪ್ರಕ್ರಿಯೆ 21 ವರ್ಷಗಳ ಕಾಲನಡೆಯುತ್ತದೆ. ಬಾಲ್ಯದಿಂದಲೇ ಸಂಗೀತವನ್ನು ಕೇಳುವುದು, ಹಾಡುವುದು ರೂಢಿ ಮಾಡಿಕೊಂಡವರಿಗೆ ಎಲ್ಲ ಚಕ್ರಗಳ ಬೆಳವಣಿಗೆ ಬೇಗ ಆಗುತ್ತದೆ. 

ಶ್ರುತಿಗಳು ಚಕ್ರಗಳನ್ನು ಆ್ಯಕ್ಟಿವೇಟ್‌ ಮಾಡುವ ಕೀಲಿ ಕೈ ಇದ್ದಂತೆ. ಶಡ್ಜ ಮೂಲಾಧಾರ ಚಕ್ರಗಳನ್ನು ಉತ್ತಮಪಡಿಸುತ್ತವೆೆ. ಆಧಾರ ಶಡ್ಜ ಇಲ್ಲದೆ ರಾಗಗಳು ಇಲ್ಲವೇ ಇಲ್ಲ.  ಶಡ್ಜದಲ್ಲಿ ರಾಗಗಳನ್ನು ಹಾಡುತ್ತಿದ್ದರೆ ಮೂಲಾಧಾರ ಚಕ್ರ ತೆರೆದು, ದೇಹದ ಕುಂಡಲಿ ಶಕ್ತಿ ಹೆಚ್ಚಾಗುತ್ತದೆ. ಎಸ್ಪಿಬಿ ಹಾಡಿರುವ ಸ್ವಾತಿಮುತ್ಯಂ ಚಿತ್ರದ ಸುವ್ವಿ ಸುವ್ವಿ ಆರಂಭದ ಆಲಾಪನೆ ಶಡ್ಜದಿಂದ ಶುರುವಾಗಿ ಮಂದ್ರ ದಾಟಿ, ತಾರಕ ಸ್ಥಾಯಿ ಮುಟ್ಟುತ್ತದೆ. 

ಗಮನಿಸಬೇಕಾದದ್ದು ಎಲ್ಲ ಮನೆಗಳನ್ನು ಮುಟ್ಟಿ ಬರುವ ಇವರ ಧ್ವನಿಗೆ (ಶ್ರುತಿ) ಯಾವುದೇ ತಂಬೂರದ ಅಥವಾ ಶ್ರುತಿಪೆಟ್ಟಿಗೆ ನೆರವಿಲ್ಲ. ಇಷ್ಟಾದರೂ ಶ್ರುತಿ ಎಲ್ಲೂ ಆಯತಪ್ಪಿಲ್ಲ. 

ಇಲ್ಲಿ ಎಸ್‌.ಜಾನಕಿ ಮತ್ತು ಎಸ್ಪಿಬಿ ತಮ್ಮ ತಮ್ಮ ಧ್ವನಿಯನ್ನು ಅದ್ಭುತ ಪ್ರಯೋಗಕ್ಕೆ ಒಡ್ಡಿಕೊಂಡಿದ್ದಾರೆ. ಈ ರೀತಿ ಶಡ್ಜದಿಂದ ಮಂದ್ರ, ತಾರಕಸ್ಥಾಯಿಗೆ ಧ್ವನಿಯನ್ನು ಏರಿಳಿಸುತ್ತಿದ್ದರೆ ದೇಹದ ಅಷ್ಟೂ ಚಕ್ರಗಳು ತನ್ನಿಂದ ತಾನೇ ತೆರೆದುಕೊಳ್ಳುತ್ತವೆ. 

ಆರೋಹಣದಲ್ಲಿ  ಶಡ್ಜದ  ಸಾ- ಸ್ವರ ಸಂಗೀತದ ಅಡಿಪಾಯ.  ಆಧಾರ ಶಡ್ಜವನ್ನು ತಂಬೂರ ಶ್ರುತಿಯೊಂದಿಗೆ ತಾರಕ ಸ್ಥಾಯಿ ಯಲ್ಲಿ ಹಾಡಿದರೆ, ಅದು ಸ್ವರ ಶುದ್ಧಿಯಲ್ಲಿದ್ದರೆ ಮೂಲಾಧಾರ ಚಕ್ರದ ಶಕ್ತಿ ಹೆಚ್ಚುತ್ತಾ ಹೋಗುತ್ತದೆ. ಶಡ್ಜದಲ್ಲೇ ಹಾಡುತ್ತಿದ್ದರೆ ಕುಂಡಲಿನಿ ಶಕ್ತಿ ಹೆಚ್ಚುತ್ತಾ ಹೋಗುತ್ತದೆ. ಒಂದು ಸಲ ಈ ಕುಂಡಲಿನಿ ಸಕ್ರಿಯವಾದರೆ ಸ್ಪೈನಲ್‌ ಕಾರ್ಡ್‌ ಮೂಲಕ ಸಹಸ್ರ ಚಕ್ರವನ್ನು ತಲುಪುತ್ತದೆ. ಅವರೋಹಣದಿಂದ ಇಡೀ ದೇಹದ ನಾಡಿಗಳಲ್ಲಿ ಶಕ್ತಿಯು ಓಡಾಡುತ್ತಿರುತ್ತದೆ.  ರಿ-ಸ್ವರ ಸ್ವಾಧೀಷ್ಟಾನ ಚಕ್ರ, ಗಾ, ಮಣಿಪುರಕ್ಕೆ ಬರುತ್ತದೆ,  ಮಾ- ಅನಾಹತ ಚಕ್ರ, ಪಾ- ವಿಶುದ್ಧಿ ಚಕ್ರ, ದಾ- ಆಜ್ಞಾ ಚಕ್ರ.  ನೀ. ಸಹಸ್ರಾರು ಚಕ್ರ.

ಶಡ್ಜ ಅಥವಾ ತಾರಕ ಸ್ಥಾಯಿಯಲ್ಲಿ ಹಾಡುವಾಗ ಗಾಯಕರು ಕಣ್ಣುಮುಚ್ಚಿ  ಸ್ವರದಲ್ಲಿ ಇಳಿಯುವುದನ್ನು ನೋಡಿಬರಬಹುದು. ಮೇಲುನೋಟಕ್ಕೆ ಇದು ಗಾಯಕನ ತಾದ್ಯಾತ್ಮವನ್ನು ತೋರಿಸುತ್ತದೆ. ಆದರೆ ಸ್ವರಗಳ ಹಿಂದಿನ ಭಾವಗಳನ್ನು ಮೆದುಳಿಗೆ ತಂದುಕೊಳ್ಳುವ ಪ್ರಕ್ರಿಯೆ ಇದು. ಶಾಸ್ತ್ರೀಯ ಸಂಗೀತಗಾರರಿಗೆ ಈ ಅವಕಾಶ ಹೆಚ್ಚಿರುತ್ತದೆ. ಸಿನಿಮಾ ಹಾಡುಗಾರರಿಗೆ ಕ್ಷಣಮಾತ್ರದಲ್ಲಿ ಇಂಥ ಅನುಭವ ಸಿಗಬಹುದು. 

ಇದೊಂದು ರೀತಿ ಧ್ಯಾನಸ್ಥ ಸ್ಥಿತಿ. ಯೋಗದಲ್ಲಿ ಸುಖ ಪ್ರಾಣಾಯಾಮ ಮಾಡುವಾಗ ಈ ಸ್ಥಿತಿಗೆ ತಲುಪುತ್ತೇವೆ. ಪ್ರಾಣಾಯಾಮ ಎಂದರೇನು? ಉಸಿರಾಟದ ಮೇಲೆ ನಿಯಂತ್ರಣ ಇಟ್ಟುಕೊಳ್ಳುವ ಪ್ರಕ್ರಿಯೆ. ಆದಷ್ಟು ಕಡಿಮೆ ಉಸಿರಾಡುವ ಕಸರತ್ತು. ಪ್ರತಿ ಗಾಯಕ ಕೂಡ ತನಗೆ ತಿಳಿದೋ, ತಿಳಿಯದೆಯೋ ಇದೇ ಕೆಲಸ ಮಾಡುತ್ತಿರುತ್ತಾನೆ. 

ಉಸಿರನ್ನು ಸಂಗೀತವಾಗಿಸುವ ಪ್ರಕ್ರಿಯೆ ಇದೆಯಲ್ಲ, ದೇಹ ಸೇರಿದ ಅಷ್ಟೂ ಉಸಿರು ಸ್ವರಗಳಾಗಿ ಹೊರಬರುತ್ತದೆ. ಒಳಗೆ ಎಳೆದುಕೊಂಡಾಗ ಗಾಳಿ, ಹೊರಗೆ ಬಂದಾಗ ಸಂಗೀತ. ಇದನ್ನು ಯೋಗದ ಭಾಷೆಯಲ್ಲಿ ರೇಚಕ ಎನ್ನಲಾಗುತ್ತದೆ. 
ಹಾಡುಗಾರರಿಗೆ ಆಕ್ಸಿಜನ್‌ ಬೇಗ ಬ್ಲೆಡ್‌ ಸೆಲ್ಸ್‌ಗೆ ಸೇರುವುದರಿಂದ ರೋಗ ನಿರೋಧಕ ಗುಣ ಹೆಚ್ಚುತ್ತದೆ ಎನ್ನಲಾಗುತ್ತದೆ. ಇದೂ ಕೂಡ ಎಸ್ಪಿಬಿ ದೀರ್ಘಾವಧಿಯ ಹಾಡುಗಾರಿಕೆಯ ಗುಟ್ಟು ಇರಬಹುದು. 

ಇನ್ನು ತಾಳದ ವಿಚಾರಕ್ಕೆ ಬಂದಾಗ – ಎಸ್ಪಿಬಿ ಎಲ್ಲ ಶ್ರುತಿಯಲ್ಲೂ ಹಾಡಿದಂತೆ, ಎಲ್ಲಾ ಬೀಟ್‌(ತಾಳ)ಗಳಲ್ಲೂ ಹಾಡಿದ್ದು ಉಂಟು. ಇದು ಚಿತ್ರಜಗತ್ತಿನ ದೈತ್ಯ ಪ್ರಯತ್ನವೂ ಕೂಡ. 5-6 ನೇ ಕಾಲ, ಅಂದರೆ ಫಾಸ್ಟ್‌ ಬೀಟ್‌ಗೂ ಮೆದುಳಿನ ಯೋಚನೆ‌ ಅಲೆಗಳಿಗೂ ಸಂಬಂಧವಿದೆ. ಫಾಸ್ಟ್‌ ಬೀಟ್‌ ಹಾಡುವುದರಿಂದ ಕ್ರಿಯಾಶೀಲತೆ ಜಾಸ್ತಿ. ತರಿಕೆರೆ ಏರಿಮೇಲೆ ಮೂರು ಕುರಿಮರಿ ಮೇಯ್ತಿತ್ತು, ಲೂನಾಮೇಲೆ ನನ್ನ ಮೈನಾ, ಮೀನಾಕ್ಷಿ ನಿನ್ನ ಕೆನ್ನೆ ಮೇಲೆ ಮುರಳಿಗೇಕೆ ಕಣ್ಣು, ಇನ್ನು ಗ್ಯಾರಂಟಿ ನಂಜುಂಡಿ ಕಲ್ಯಾಣ, ಇತ್ತೀಚೆಗೆ ಹಾಡಿದ ಚೆನ್ನೈ ಎಕ್ಸ್‌ಪ್ರೆಸ್‌ ಟೈಟಲ್‌ ಸಾಂಗ್‌ ಹೀಗೆ ಹುಡುಕುತ್ತಾ ಹೋದರೆ ಎಸ್ಪಿಬಿ ಹಾಡಿರುವ ಸಾವಿರಾರು ಫಾಸ್ಟ್‌ ಬೀಟ್‌ ಹಾಡುಗಳು ಸಿಗುತ್ತವೆ.   ಅದೇ ರೀತಿ, ವಿಳಂಬಿತ ಕಾಲದಲ್ಲಿ ಹಾಡುವುದರಿಂದ ಕೇಳುವುದರಿಂದ ಮನಸ್ಸು ಭಾವೋದ್ವೇಗಗೊಳ್ಳುವುದಿಲ್ಲ. ಪವಡಿಸು ಪರಮಾತ್ಮ ಹಾಡಿದಾಗ, ಒಬ್ಬನೇ ಒಬ್ಬನೇ ಮಂಜನಾಥನೊಬ್ಬನೇ ರೋಜಾ ಜಾನೆಮನ್‌, ತೆಲುಸಾ ಮನಸಾ ಇಂಥ ಹಾಡುಗಳನ್ನು ಹಾಡಿದಾಗ, ಕೇಳಿದಾಗ ಮನಸ್ಸು ತಣ್ಣಗಾಗುವುದು ಇದೇ ಕಾರಣಕ್ಕೆ.

ಸಂಗೀತದ ಮೂಲಕ ಉಸಿರಾಟ ಮತ್ತು ಎದೆಬಡಿತದ ನಡುವೆ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ ಅನ್ನೋದು ಸಾಬೀತಾಗಿದೆ. ಮನಸ್ಸು ಚಿಂತೆಯಲ್ಲಿ ಬಿದ್ದರೆ ಸಂಗೀತವೊಂದೇ ಸುಲಭವಾಗಿ ಚಿಕಿತ್ಸೆ ಕೊಡಬಹುದು. ಅದನ್ನು ಪ್ರಫ‌ುಲ್ಲಗೊಳಿಸಬಲ್ಲದು. 

ಮಾನಸಿಕ ಸಮತೋಲನಕ್ಕೆ ಶಂಕರಾಭರಣ ರಾಗ ಬಹಳ ಮುಖ್ಯವಾಗುತ್ತದೆ. ರಾಗ ಸಂಚಾರಗಳನ್ನು ಹಾಡುತ್ತಿದ್ದರೆ ದೇಹದಲ್ಲಿ ಹಾರ್ಮೋನ್‌ ವ್ಯತ್ಯಾಸಗಳು ನಿಧಾನಕ್ಕೆ ಸರಿಹೋಗಿರುವ ಉದಾಹರಣೆಗಳು ಇವೆ. ಮೈಗ್ರೇನ್‌, ತಲೆನೋವಿಗೆ ಪರಿಹಾರ ನೀಡುವ ಶಕ್ತಿ ಮೋಹನ ರಾಗ, ದರ್ಬಾರಿ ಕನ್ನಡಕ್ಕಿದೆ. ಎಲ್ಲಾ ರಾಗಗಳಲ್ಲೂ ಎಸ್ಪಿಬಿ ಹಾಡಿದ್ದಾರೆ, ಹಾಡುತ್ತಲೂ ಇದ್ದಾರೆ ಅನ್ನೋದು ಇಲ್ಲಿ ಮುಖ್ಯ.
ಎಸ್ಪಿಬಿ ಅವರ ಎಷ್ಟೋ ಹಾಡುಗಳನ್ನು ಕೇಳಿದರೆ ಕಣ್ಣಲ್ಲಿ ನೀರು ಬರುವುದುಂಟು. ಅಂದರೆ ಭಾವಕ್ಕೂ ಫ್ರೀಕ್ವೆನ್ಸಿ ಉಂಟು. ಸ್ವರದ ಫ್ರೀಕ್ವೆನ್ಸಿ, ಭಾವದ ಫ್ರಿಕ್ವೆನ್ಸಿ ಎರಡೂ ಮ್ಯಾಚ್‌ ಆದರೆ ಸ್ವರ್ಗ ಸದೃಶ್ಯವಾದ ಅನುಭವ ಸಿಗುತ್ತದೆ. ಎಸ್ಪಿಬಿ ಅವರು  “ಪವಡಿಸು ಪರಮಾತ್ಮ’ ಹಾಡನ್ನು ಹಾಡಿ ಕಣ್ಣಲ್ಲಿ ನೀರು ತಂದುಕೊಂಡದ್ದು ಇದೇ ಕಾರಣಕ್ಕೆ ಇರಬಹುದು! 

– ಕಟ್ಟೆ ಗುರುರಾಜ್‌

Advertisement

Udayavani is now on Telegram. Click here to join our channel and stay updated with the latest news.

Next