Advertisement

ರಾಹುಲ್‌ ಎಚ್ಡಿಕೆಗೆ ಕೊಟ್ಟ ಭರವಸೆ ಏನು?

06:00 AM Jun 20, 2018 | Team Udayavani |

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಸೇರಿ ಮೂರೂ ಪಕ್ಷದ ಶಾಸಕರು ತಕ್ಷಣಕ್ಕೆ ಮತ್ತೂಂದು ಚುನಾವಣೆಗೆ ಹೋಗಲು ತಯಾರಿಲ್ಲ. ಹೀಗಾಗಿ, ಸಮ್ಮಿಶ್ರ ಸರ್ಕಾರ ತೆವಳುತ್ತಾ, ಕುಂಟುತ್ತಾ ಆದರೂ ಕನಿಷ್ಠ ಒಂದೆರಡು ವರ್ಷಗಳವರೆಗೆ ನಡೆಯಲೇಬೇಕು. ಲೋಕಸಭೆ ಚುನಾವಣೆ ಫ‌ಲಿತಾಂಶದ ನಂತರದ ರಾಜಕೀಯ ವಿದ್ಯಮಾನಗಳು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಆ ನಂತರದ ಭವಿಷ್ಯ ನಿರ್ಧರಿಸುತ್ತದೆ. ಕಂಟಕವೂ ಎದುರಾಗಬಹುದು, ಇಲ್ಲವೇ ಅಸಮಾಧಾನ, ಅತೃಪ್ತಿ, ಕಾಳೆಲೆಯುವಿಕೆ ನಡುವೆಯೂ ಐದು ವರ್ಷ ಅವಧಿ ಪೂರೈಸಲೂಬಹುದು. 

Advertisement

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಬಿಜೆಪಿ ಅತಿ ದೊಡ್ಡ ಪಕ್ಷವಾದರೂ ಮ್ಯಾಜಿಕ್‌ ಸಂಖ್ಯೆ ತಲುಪದ ಕಾರಣ ಅನಿರೀಕ್ಷಿತ ಎಂಬಂತೆ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಹದಿನೈದು ದಿನದ ನಂತರ ಒಂದು ಹಂತದ ಸಂಪುಟ ವಿಸ್ತರಣೆಯಾಗಿ, ನಂತರ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡು ಹೈಕಮಾಂಡ್‌ ಮಧ್ಯಪ್ರವೇಶದೊಂದಿಗೆ ಸದ್ಯಕ್ಕೆ ಬಂಡಾಯ ಥಂಡಾ ಆಗಿದೆ. ಆದರೆ, ಸರ್ಕಾರದ ಆಯುಷ್ಯ ಎಷ್ಟು ದಿನ ಎಂಬ ಪ್ರಶ್ನೆ ಆಗ್ಗಿಂದಾಗ್ಗೆ ಉದ್ಭವಿಸಿ ನಾನಾ ರೀತಿಯ ಚರ್ಚೆಗಳಿಗೆ, ಊಹಾ ಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಖುದ್ದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಲೋಕಸಭೆ ಚುನಾವಣೆವರೆಗೂ ನನ್ನನ್ನು ಯಾರೂ ಮುಟ್ಟಲಾಗದು ಎಂದು ಹೇಳಿರುವುದು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಅದೇ ಧಾಟಿಯಲ್ಲಿ ಮಾತನಾಡಿರುವುದು ನೋಡಿದರೆ ಇಂಥ ದ್ದೊಂದು ಅನುಮಾನ ಇರುವುದಂತೂ ಸಹಜ.

ಸಮ್ಮಿಶ್ರ ಸರ್ಕಾರದಲ್ಲಿ 79 ಸಂಖ್ಯಾಬಲ ಹೊಂದಿರುವ ಕಾಂಗ್ರೆಸ್‌ ಮಾತ್ರ ಐದು ವರ್ಷ ನೀವೇ ಮುಖ್ಯಮಂತ್ರಿ ಅಂದಿದ್ದೇವೆ, ನಿಮಗ್ಯಾಕೆ ಚಿಂತೆ ಎನ್ನುತ್ತಿದೆ. ಆದರೆ, ರಾಜಕಾರಣದಲ್ಲಿ ಎಚ್‌.ಡಿ.ದೇವೇಗೌಡರಷ್ಟೇ ರಾಜಕೀಯ ದಾಳ ಉರುಳಿಸುವುದ ರಲ್ಲಿ ಚಾಣಾಕ್ಷರಾದ ಸಿದ್ದರಾಮಯ್ಯ ಅವರ ಹೆಜ್ಜೆ ಹಾಗೂ ನಡೆಯ ಬಗ್ಗೆಯೇ ಎಲ್ಲರಿಗೂ ಆತಂಕ, ಕುತೂಹಲ, ಅನುಮಾನ. ಸಚಿವ ಸ್ಥಾನ ಸಿಗದೆ ಅತೃಪ್ತರು ಬಹಿರಂಗ ಬಂಡಾಯ ಸಾರಿ ಆರೋಪಗಳ ಸುರಿಮಳೆಗೈಯುತ್ತಿದ್ದರೆ ಸಮನ್ವಯ ಸಮಿತಿ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಬಾದಾಮಿಯಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವಲ್ಲಿ ತಲ್ಲೀನರಾಗಿದ್ದರು.
ಸಮಾನ ಕನಿಷ್ಠ ಕಾರ್ಯಕ್ರಮ ರೂಪಿಸುವ ಹೊತ್ತಿನಲ್ಲಿ ಧರ್ಮಸ್ಥಳದ ನಿಸರ್ಗ ಚಿಕಿತ್ಸಾ ಕೇಂದ್ರದಲ್ಲಿ ಹತ್ತು ದಿನದ ಚಿಕಿತ್ಸೆಗೆ ದಾಖಲಾಗಿದ್ದಾರೆ. ಹೋಗುವ ಮುಂಚೆ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತೂಂದು ಬಜೆಟ್‌ ಮಂಡಿಸುವ ಅಗತ್ಯವಿಲ್ಲ ಎಂದು ಹೇಳಿ ಹೋಗಿದ್ದಾರೆ.

ಇದರ ಬೆನ್ನಲ್ಲೇ ಡಿಸಿಎಂ ಡಾ.ಜಿ.ಪರಮೇಶ್ವರ್‌, ಹೊಸ ಸರ್ಕಾರ ಬಂದಾಗ ಬಜೆಟ್‌ ಮಂಡಿಸುವುದು ವಾಡಿಕೆ ಎಂದು ಕುಮಾರ ಸ್ವಾಮಿ ಪರ ನಿಂತಿದ್ದಾರೆ. ಮತ್ತೂಂದೆಡೆ ಸಿದ್ದರಾಮಯ್ಯ ಅವರ ಪರಮಾಪ್ತ ಎಂದೇ ಹೇಳಲಾಗಿದ್ದ ಡಿ.ಕೆ.ಶಿವಕುಮಾರ್‌ ಸಹ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆ ತರುವ ಹಾಗೂ ಮುಜುಗರ ಉಂಟು ಮಾಡು ವಂತಹ ಹೇಳಿಕೆ ಯಾರೂ ನೀಡಬಾರದು, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ದೀಕ್ಷೆ ಕೊಟ್ಟಿದ್ದಾರೆ, ಅದರಂತೆ ನಾವು ಮುನ್ನಡೆ ಯಬೇಕಿದೆ ಎಂದು ಹೇಳಿರುವುದು ಹೈಕಮಾಂಡ್‌ ಇಶಾರೆ ಮೇಲೆಯೇ ಎಂಬುದು ಗುಟ್ಟೇನಲ್ಲ. ದೆಹಲಿ ಮಟ್ಟದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ನೇರವಾಗಿ ರಾಹುಲ್‌ಗಾಂಧಿ ಜತೆ ಒನ್‌ ಟು ಒನ್‌ ಮಾತನಾಡುವ ಲಿಂಕ್‌ ಸಿಕ್ಕಿದೆ. ಬಜೆಟ್‌ ಮಂಡನೆ ವಿಚಾರದಲ್ಲಿ ನೇರವಾಗಿ ರಾಹುಲ್‌ಗಾಂಧಿ ಜತೆ ಮಾತನಾಡಿರುವ ಕುಮಾರಸ್ವಾಮಿ ಒಪ್ಪಿಗೆ ಪಡೆದಿದ್ದಾರೆ. ಜತೆಗೆ ರಾಜ್ಯ ನಾಯಕರ ಸಣ್ಣಪುಟ್ಟ ಅಸಹಕಾರದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ನಾವು ನಿಮ್ಮೊಂದಿಗಿದ್ದೇವೆ. 5 ವರ್ಷ ಸಂಪೂರ್ಣ ನೀವು ನಮ್ಮ ಮುಖ್ಯಮಂತ್ರಿಯಾಗಿರಲು ನಮ್ಮ ಬೆಂಬಲವಿರಲಿದೆ ಎಂಬ ಗಟ್ಟಿ ಭರವಸೆಯೂ ರಾಹುಲ್‌ ಗಾಂಧಿಯಿಂದ ದೊರೆತಿದೆ. ರಾಷ್ಟ್ರಮಟ್ಟದಲ್ಲಿ ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡಲು ಕಾಂಗ್ರೆಸ್‌ಗೂ ಜೆಡಿಎಸ್‌, ಟಿಡಿಪಿ, ಟಿಆರ್‌ಎಸ್‌, ಆಪ್‌, ಟಿಎಂಸಿ, ಬಿಜೆಡಿ, ಎನ್‌ಸಿಪಿ ಹಾಗೂ ಎಡಪಕ್ಷಗಳ ಬೆಂಬಲ ಬೇಕೇಬೇಕು. ಹೀಗಾಗಿ ಕರ್ನಾಟಕದಲ್ಲಿ ಜೆಡಿಎಸ್‌ ನೇತೃತ್ವದ ಮೈತ್ರಿಯಡಿ ಹೋಗುವುದು ಕಾಂಗ್ರೆಸ್‌ಗೆ ಅನಿವಾರ್ಯ. 

ಈ ಮಧ್ಯೆ ಸಿದ್ದರಾಮಯ್ಯ ಅವರು ಕ್ರಮೇಣ ಕಾಂಗ್ರೆಸ್‌ನಲ್ಲಿ ಹಿಡಿತ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿದ್ದ ಎಂ.ಬಿ.ಪಾಟೀಲ್‌ಗೆ‌ ದೆಹಲಿಗೆ ಬುಲಾವ್‌ ನೀಡಿದ್ದ ಹೈಕಮಾಂಡ್‌ ದಿನೇಶ್‌ ಗುಂಡೂರಾವ್‌, ಕೃಷ್ಣಬೈರೇಗೌಡರನ್ನು ಮಾತ್ರ ಕರೆಸಿಕೊಂಡಿತು. ಅಷ್ಟೇ ಅಲ್ಲದೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಹೆಚ್ಚಾದಾಗ ಸೋನಿಯಾಗಾಂಧಿ-ರಾಹುಲ್‌ಗಾಂಧಿ ಅವರು ಎಚ್‌.ಡಿ. ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿಯವರನ್ನು ಸಂಪರ್ಕಿಸಿ ನೀವೂ ಮಧ್ಯಪ್ರವೇಶ ಮಾಡಿ ಸಮಾಧಾನಪಡಿಸಿ ಎಂದು ಹೇಳಿದ್ದರು. ಆದಾದ ನಂತರವೇ ಕುಮಾರಸ್ವಾಮಿ ಎಂ.ಬಿ.ಪಾಟೀಲ್‌ ಮನೆಗೆ ತೆರಳಿ ಮಾತನಾಡಿದರು. ದೇವೇಗೌಡರು ಎಚ್‌.ಕೆ.ಪಾಟೀಲ್‌, ಶಾಮನೂರು ಶಿವಶಂಕರಪ್ಪ ಸೇರಿದಂತೆ ಕೆಲವರ ಜತೆ ದೂರವಾಣಿ ಮೂಲಕ ಮಾತನಾಡಿ ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು ಎಂಬ ಮಾತುಗಳು ಇವೆ. ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ವಂಚಿತರು ಎಚ್‌.ಡಿ.ದೇವೇಗೌಡರ ಮೊರೆ ಹೋಗುವಂತಾಗಿದೆ. ಈ ಎಲ್ಲ ವಿದ್ಯಮಾನಗಳು ಸಿದ್ದರಾಮಯ್ಯ ಅವರನ್ನು ಕನಲಿಸಿದೆ ಎಂದು ಹೇಳಲಾಗುತ್ತಿದೆ.

Advertisement

“”ಹೆಸರಿಗೆ ಮಾತ್ರ, ಅದರಲ್ಲೂ ಕುರುಬ ಸಮುದಾಯ ಬಂಡೇಳಬಹುದು ಎಂಬ ಕಾರಣಕ್ಕೆ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕ ಸ್ಥಾನ ನೀಡಿ ಉಳಿದಂತೆ ಎಲ್ಲ ಪ್ರಮುಖ ವಿಚಾರಗಳಲ್ಲಿ ನನ್ನನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇಷ್ಟು ಬೇಗ ನಾನು ಕಾಂಗ್ರೆಸ್‌ಗೆ ಬೇಡವಾದೆನಾ?” ಎಂದು ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಧರ್ಮಸ್ಥಳದ ನಿಸರ್ಗ ಚಿಕಿತ್ಸೆಯಿಂದ ಬಂದ ನಂತರ ಸಿದ್ದರಾಮಯ್ಯ ಅವರ ರಾಜಕೀಯ “ಆಟ’ ಶುರುವಾಗಲಿದೆ ಎಂದು ಅವರ ಆಪ್ತರು ಹೇಳಿಕೊಳ್ಳುತ್ತಿದ್ದಾರೆ. 

ಹೀಗಾಗಿಯೇ ಎಚ್‌.ಡಿ.ದೇವೇಗೌಡರು ಹಾಗೂ ಎಚ್‌.ಡಿ. ಕುಮಾರಸ್ವಾಮಿ ಸರ್ಕಾರದ ಆಯುಷ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಾಂಗ್ರೆಸ್‌ನಿಂದ ಅದರಲ್ಲೂ ಸೋನಿಯಾಗಾಂಧಿ- ರಾಹುಲ್‌ಗಾಂಧಿ ಮಟ್ಟದಲ್ಲೇ ನಾವಿದ್ದೇವೆ ಎಂಬ ಭರವಸೆ ಪಡೆದುಕೊಳ್ಳುವಲ್ಲಿ  ಯಶಸ್ವಿಯಾಗಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಅನಿಸಿಕೆ. ಜೆಡಿಎಸ್‌ ನಿರಾಳ, ಕಾಂಗ್ರೆಸ್‌ನಲ್ಲಿ ತಳಮಳ ಸಮ್ಮಿಶ್ರ ಸರ್ಕಾರದಲ್ಲಿ ತಮ್ಮ ಪಕ್ಷದ ಕಡೆಯಿಂದ ಯಾವುದೇ ಅಸಮಾಧಾನ, ಅತೃಪ್ತಿ ಬಹಿರಂಗವಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಕುಮಾರಸ್ವಾಮಿ ಆ ನಂತರವೇ ಕಾಂಗ್ರೆಸ್‌ ನಾಯಕರಿಗೆ ನಿಮ್ಮ ಪಕ್ಷದ ಸಮಸ್ಯೆ ಬಗೆಹರಿಸಿ ಎಂದು ಸಮನ್ವಯ ಸಮಿತಿ ಸಭೆಯಲ್ಲೇ ನೇರವಾಗಿ ಸೂಚಿಸಿದರು.

ಸಂಪುಟ ವಿಸ್ತರಣೆ ಸಂಬಂಧ ಜೆಡಿಎಸ್‌ನಲ್ಲಿ ಹೇಳಿಕೊಳ್ಳುವಂತಹ ಅಸಮಾಧಾನ ಆಗಿಲ್ಲ. ಏಕೆಂದರೆ, ಜೆಡಿಎಸ್‌ ಶಾಸಕರ ಸಂಖ್ಯೆಯೇ 37. ಇದರಿಂದ ದೊಡ್ಡ ಪೈಪೋಟಿ ಇರಲಿಲ್ಲ. ಹೀಗಾಗಿ, ನಾಯಕರು ನಿರಾಳವಾಗಿದ್ದಾರೆ. ಜತೆಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಸಿಎಂ ಎಚ್‌.ಡಿ. ಕುಮಾರಸ್ವಾಮಿಯವರು ಅಳೆದು ತೂಗಿ ಎಲ್ಲರ ಜತೆ ಮೂರ್‍ನಾಲ್ಕು ಸುತ್ತು ಚರ್ಚೆ ಮಾಡಿಯೇ ಸಂಪುಟ ಪಟ್ಟಿ ಫೈನಲ್‌ ಮಾಡಿದ್ದರು. ಎಚ್‌.ವಿಶ್ವನಾಥ್‌, ಎಚ್‌.ಕೆ.ಕುಮಾರಸ್ವಾಮಿ, ಎ.ಟಿ.ರಾಮಸ್ವಾಮಿ, ಸಿರಾ ಸತ್ಯನಾರಾಯಣ, ಬಸವರಾಜ ಹೊರಟ್ಟಿ ಅವರಂತಹ ಹಿರಿಯರನ್ನು ಸಮಾಧಾನ ಪಡಿಸಲಾಗಿದೆ. ಸಚಿವ ಸ್ಥಾನ ವಂಚಿತರಿಗೆ ಸಂಪುಟ ದರ್ಜೆ ಸ್ಥಾನಮಾನ ಸಹಿತ ನಿಗಮ ಮಂಡಳಿ ಅಧ್ಯಕ್ಷಗಿರಿಯ ಭರವಸೆಯೂ ದೊರೆತಿದೆ. ಅದು ಬೇಡ ಎಂದವರೆಗೆ ಎರಡನೇ ಕಂತಿನಲ್ಲಿ ಸಚಿವಗಿರಿಯ ಆಶ್ವಾಸನೆ ದೊರೆತಿದೆ.

ಸಮ್ಮಿಶ್ರ ಸರ್ಕಾರದಲ್ಲಿ ಹಂಚಿಕೆಯಾಗಿರುವ ಸಚಿವಗಿರಿಯಲ್ಲಿ ಜೆಡಿಎಸ್‌ ಒಂದು ಮಾತ್ರ ಉಳಿಸಿಕೊಂಡಿದೆ. ಆ ಒಂದು ಸಿರಾ ಸತ್ಯನಾರಾಯಣ ಅಥವಾ ಬಿ.ಎಂ.ಫ‌ರೂಕ್‌ ಇಬ್ಬರಲ್ಲಿ ಒಬ್ಬರಿಗೆ ದಕ್ಕಬಹುದು. ಬಸವರಾಜ ಹೊರಟ್ಟಿ ಅವರೂ ಆಕಾಂಕ್ಷಿಯಾಗಿದ್ದು ಒತ್ತಡ ಹೆಚ್ಚಾದರೆ ಅವರಿಗೆ ಅದೃಷ್ಟ ಖುಲಾಯಿಸಬಹುದು. ಆರು ತಿಂಗಳಲ್ಲಿ ನಾನು ಸಚಿವನಾಗುತ್ತೇನೆ, ಒಬ್ಬರು ರಾಜೀನಾಮೆ ಕೊಡ್ತಾರೆ ಎಂದು ಸಿರಾ ಸತ್ಯನಾರಾಯಣ ಹೇಳಿಕೆ ಜೆಡಿಎಸ್‌ ವಲಯದಲ್ಲಿ ನಾನಾ ಊಹಾಪೋಹಗಳಿಗೂ ಕಾರಣವಾಗಿದೆ.

ಇನ್ನು, ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ದೊಡ್ಡ ತಲೆನೋವು ಎದುರಾಗಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಖಾಲಿ ಇರುವುದು ಆರು ಸ್ಥಾನ, ಇದಕ್ಕೆ ಆಕಾಂಕ್ಷಿಗಳು ಎರಡು ಡಜನ್‌ಗೂ ಹೆಚ್ಚು. ಅದರಲ್ಲೂ ಪ್ರಮುಖವಾಗಿ ಎಚ್‌.ಕೆ.ಪಾಟೀಲ್‌, ಎಂ.ಬಿ. ಪಾಟೀಲ್‌, ಎಸ್‌.ಆರ್‌.ಪಾಟೀಲ್‌, ಶಾಮನೂರು ಶಿವಶಂಕರಪ್ಪ, ರಾಮಲಿಂಗಾರೆಡ್ಡಿ, ಎಂ.ಕೃಷ್ಣಪ್ಪ, ಸತೀಶ್‌ ಜಾರಕಿಹೊಳಿ, ರೋಷನ್‌ಬೇಗ್‌, ತನ್ವೀರ್‌ ಸೇs…, ರಹೀಂ ಖಾನ್‌, ಎಂ.ಟಿ.ಬಿ.ನಾಗರಾಜ್‌, ಶಿವಳ್ಳಿ, ಎಚ್‌.ಎಂ.ರೇವಣ್ಣ, ಸುಧಾಕರ್‌, ಎಸ್‌.ಟಿ.ಸೋಮಶೇಖರ್‌, ಈಶ್ವರ ಖಂಡ್ರೆ, ರೂಪಾ ಶಶಿಧರ್‌ ಸಚಿವ ಸ್ಥಾನ ಬೇಕೇ ಬೇಕು ಎಂದು ಹಠ ಹಿಡಿದಿದ್ದಾರೆ.

ಲಿಂಗಾಯಿತ ಪ್ರತ್ಯೇಕ ಧರ್ಮದ ಹೋರಾಟ ಮಾಡಿದ್ದಕ್ಕೆ ಸಚಿವ ಸ್ಥಾನ ತಪ್ಪಿದೆ ಎಂದು ಕುದಿಯುತ್ತಿರುವ ಎಂ.ಬಿ.ಪಾಟೀಲ್‌ ದೆಹಲಿಗೆ ಹೋಗಿ ಹೈಕಮಾಂಡ್‌ಗೆ ಲಿಂಗಾಯಿತ ಪ್ರತ್ಯೇಕ ಹೋರಾಟದಿಂದ ಕಾಂಗ್ರೆಸ್‌ಗೆ ನಷ್ಟವಾಗಿಲ್ಲ ಎಂಬುದನ್ನು ಅಂಕಿ-ಅಂಶ ಸಮೇತ ಹೇಳಿ ಬಂದಿದ್ದಾರೆ. ಅಷ್ಟೆ ಅಲ್ಲದೆ ಇದೀಗ ಲಿಂಗಾಯಿತ- ವೀರಶೈವ ಎರಡೂ ಬಣಗಳು ಒಂದಾಗುವ ಮಾತುಗಳನ್ನು ಆಡುತ್ತಿವೆ. ನಮ್ಮ ನಮ್ಮಲ್ಲೇ ಜಗಳ ಆಡಿಕೊಂಡಿದ್ದಕ್ಕೆ ನಮಗೆ ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲ ಎಂಬ ಅರಿವು ಎರಡೂ ಬಣಗಳಿಗೆ ಆದಂತಿದೆ. ಹೀಗಾಗಿ, ಲಿಂಗಾಯಿತ-ವೀರಶೈವ ಅದರಲ್ಲೂ ಉತ್ತರ ಕರ್ನಾಟಕ ಭಾಗದವರಿಗೆ ಅನ್ಯಾಯ ಆಗಿದೆ ಎಂಬ ಕೂಗು ಎದ್ದಿದೆ. ಇದು ಒಂದು ರೀತಿಯಲ್ಲಿ ಕಾಂಗ್ರೆಸ್‌ಗೆ ತಲೆನೋವಾಗಿದೆ. 

6 ತಿಂಗಳಲ್ಲಿ ಹೊಸ ಸಚಿವರ ಕಾರ್ಯಕ್ಷಮತೆ ಪರಿಶೀಲಿಸಲಾಗುವುದು. 2 ವರ್ಷದ ನಂತರ ಸಚಿವರ ಬದಲಾಯಿಸಲಾಗುವುದು ಎಂಬ ಹೈಕಮಾಂಡ್‌ ಸೂತ್ರ ಒಪ್ಪಲು ಇವರ್ಯಾರೂ ತಯಾರಿಲ್ಲ. ಅವರಿಗೆಲ್ಲಾ ಮತ್ತೆ ಅದೇ ಅನುಮಾನ, ಈ ಸರ್ಕಾರ ಎಷ್ಟು ದಿನ ಇರುತ್ತೋ, ಅಷ್ಟರಲ್ಲಿ ನಾವೂ ಸಚಿವರಾಗಬೇಕು. ಮೊದಲು ನಮ್ಮನ್ನೇ ಸಚಿವರನ್ನಾಗಿ ಮಾಡಿ ಎಂಬುದು ಇವರ ಡಿಮ್ಯಾಂಡ್‌.
ಕಾಂಗ್ರೆಸ್‌ನಲ್ಲಿ ಮತ್ತೂಂದೆಡೆ ಕೆಪಿಸಿಸಿ ಅಧ್ಯಕ್ಷಗಿರಿಗೂ ಫೈಟ್‌ ನಡೆಯುತ್ತಿದೆ. ಸಚಿವಗಿರಿ ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹೊಣೆ ಗಾರಿಕೆಗೆ ಎಲ್ಲರೂ ಸೈ. ಆದರೆ, ಸಚಿವ ಸ್ಥಾನ ತ್ಯಾಗ ಮಾಡಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟಿಸಿ ಎಂದರೆ ನೋ…ನೋ….ಅಂತಿದ್ದಾರೆ.

ಮುಂದಿನ ವರ್ಷ ಲೋಕಸಭೆ ಚುನಾವಣೆ ಇರುವುದರಿಂದ ಕೆಪಿಸಿಸಿ ಅಧ್ಯಕ್ಷರಾದರೆ ಸಂಪನ್ಮೂಲ ಕ್ರೊಢೀಕರಿಸಬೇಕು. ಪಕ್ಷದ ಸೋಲು-ಗೆಲುವಿಗೆ ಜವಾಬ್ದಾರಿ ಹೊರಬೇಕು ಎಂಬುದು ಇದಕ್ಕೆ ಕಾರಣ. ಹೀಗಾಗಿ, ದಿನೇಶ್‌ ಗುಂಡೂರಾವ್‌, ಬಿ.ಕೆ.ಹರಿಪ್ರಸಾದ್‌, ಎಸ್‌.ಆರ್‌.ಪಾಟೀಲ್‌, ಕೆ.ಎಚ್‌.ಮುನಿಯಪ್ಪ, ಎಚ್‌.ಕೆ.ಪಾಟೀಲ್‌ ನಡುವೆ ಅವರ್‌ಬಿಟ್ಟು ಇವರ್‌ಬಿಟ್‌ ಬೇರ್ಯಾರು ಎಂಬಂತಾಗಿದೆ. ಕೊನೆಗೆ ಡಾ.ಜಿ.ಪರಮೇಶ್ವರ್‌ ಸದ್ಯಕ್ಕೆ ಮುಂದುವರಿಯಲಿ ಎಂದೂ ಆಗಬಹುದು. ಇಲ್ಲವೇ ಬೇರೆ ಬೇರೆ ಲೆಕ್ಕಾಚಾರದೊಂದಿಗೆ  ಸಿದ್ದರಾಮಯ್ಯ ಅವರನ್ನೂ ನೇಮಿಸಬಹುದು. ಈ ಪ್ರಕ್ರಿಯೆ ಹಾಗೂ ಎರಡನೆಯ ಹಂತದ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕದ ನಂತರ ಸಮ್ಮಿಶ್ರ ಸರ್ಕಾರದ ಭದ್ರತೆಯ ಬಗ್ಗೆ  ಸ್ಪಷ್ಟ ಚಿತ್ರಣ ದೊರೆಯಬಹುದು.

ಅತ್ತ ಪ್ರತಿಪಕ್ಷ ಬಿಜೆಪಿಯೂ ಸುಮ್ಮನೆ ಕುಳಿತಿಲ್ಲ. ಅತಿ ಹೆಚ್ಚು ಸ್ಥಾನ ಗಳಿಸಿದರೂ ಸರ್ಕಾರ ರಚನೆ ಮಾಡಲು ಸಾಧ್ಯವಾಗದಿರುವುದು. ಲಿಂಗಾಯಿತ ಸಮುದಾಯದ ಪ್ರಭಾವಿ ನಾಯಕ ಬಿ.ಎಸ್‌. ಯಡಿಯೂರಪ್ಪ ಕೇವಲ ಮೂರು ದಿನದ ಮಟ್ಟಿಗೆ ಮುಖ್ಯ ಮಂತ್ರಿಯಾಗಿ ಅಧಿಕಾರದಿಂದ ಕೆಳಗೆ ಇಳಿದಿದ್ದು ಬಿಜೆಪಿ ಹಾಗೂ ಲಿಂಗಾಯಿತ ವಲಯದಲ್ಲಿ ಅಸಮಾಧಾನ ಇದ್ದೇ ಇದೆ. ಹೀಗಾಗಿ, ಬಿಜೆಪಿ ಈಗ ಅವಕಾಶಕ್ಕಾಗಿ ಕಾಯುತ್ತಿದೆ. ಸಮ್ಮಿಶ್ರ ಸರ್ಕಾರದ ವಿರುದ್ಧ 20 ರಿಂದ 25 ಶಾಸಕರು ಬಂಡಾಯ ಎದ್ದರೆ “ರಂಗಪ್ರವೇಶ’ ಮಾಡಬಹುದು. 

ಎಸ್‌.ಲಕ್ಷ್ಮಿನಾರಾಯಣ 

Advertisement

Udayavani is now on Telegram. Click here to join our channel and stay updated with the latest news.

Next