1940-70ರ ದಶಕಗಳಲ್ಲಿ ಭಾರತದ ರಾಜಕಾರಣಿಗಳಲ್ಲಿ ಎದ್ದು ಕಾಣುತ್ತಿದ್ದ ಒಂದು ಸಾಮ್ಯ ಎಂದರೆ ಅವರೆಲ್ಲರ ತಲೆಯಲ್ಲೂ ಗಾಂಧೀ ಟೋಪಿ ರಾರಾಜಿಸುತ್ತಿತ್ತು- ಎಂಬುದು. ಆಗ ಏನು ಈಗಲೂ, ರಾಜಕಾರಣಿಗಳು ತಾವು ಗಾಂಧೀವಾದಿಗಳು ಎಂದು ತೋರಿಸಿಕೊಳ್ಳಬೇಕಾದಾಗೆಲ್ಲ ಟೋಪಿ ಧರಿಸುತ್ತಾರೆ. ಸ್ವಾರಸ್ಯವೆಂದರೆ, ಗಾಂಧಿಯ ಹೆಸರಲ್ಲಿರುವ ಈ ಟೋಪಿಯನ್ನು ಸ್ವತಃ ಗಾಂಧಿ ಧರಿಸಿದ್ದನ್ನು ಯಾರೂ ನೋಡಿಲ್ಲ!
ಹಾಗಿದ್ದರೂ ಗಾಂಧಿ ಟೋಪಿ ಎಂಬ ಹೆಸರೇ ನಿಂತಿರುವುದು ಏಕೆ? ಇದರ ಹಿಂದೊಂದು ಕಥೆ ಇದೆ. 1919ರಲ್ಲಿ ಗಾಂಧೀಜಿ, ಉತ್ತರಪ್ರದೇಶದ ರಾಮ್‌ಪುರ ಎಂಬ ಸಂಸ್ಥಾನದ ಸಯ್ಯದ್ ಹಮೀದ್ ಅಲಿ ಖಾನ್ ಬಹದ್ದೂರ್ ಎಂಬ ನವಾಬನನ್ನು ಭೇಟಿಯಾಗಲು ಹೋದರು. ನವಾಬನನ್ನು ಭೇಟಿಯಾಗುವ ಯಾರೇ ಆಗಲಿ, ತಲೆಯ ಮೇಲೊಂದು ವಸ್ತ್ರವನ್ನು ಕಟ್ಟಿಕೊಳ್ಳುವು ದು ಕಡ್ಡಾಯವಾಗಿತ್ತು. ಗಾಂಧಿಯ ತಲೆಯ ಮೇಲೊಂದು ವಸ್ತ್ರದ ತುಣುಕನ್ನು ಇಡಬೇಕೆಂದು ಅವರ ಅನುಯಾಯಿಗಳು ಪೇಟೆಯೆಲ್ಲ ಟೊಪ್ಪಿಗೆಗಾಗಿ ಸುತ್ತಾಡಿದರು.
ಆದರೆ ಯಾವುದೂ ಅವರಿಗೆ ಇಷ್ಟವಾಗಲಿಲ್ಲ. ಆಗ, ಖೀಲಾಫತ್ ಚಳವಳಿಯ ನಾಯಕರಾಗಿ ಪ್ರಸಿದ್ಧ ರಾದ ಮೊಹಮ್ಮದ್ ಅಲಿ ಮತ್ತು ಶೌಕತ್ ಅಲಿ ಯವರ ತಾಯಿ ಅಬಾದಿ ಬೇಗಮ್, ತಾನೇ ಒಂದು ಟೊಪ್ಪಿಯನ್ನು ಹೊಲಿದುಕೊಟ್ಟರು. ಅದನ್ನು ಧರಿಸಿ ಗಾಂಧೀಜಿ ನವಾಬನನ್ನು ಭೇಟಿಯಾದರು. ಇದೇ ಗಾಂಧೀಟೋಪಿ ಹುಟ್ಟಿದ ಬಗೆಯೆಂದು, ಈ ಕಥೆ ಹಲವು ಕೃತಿಗಳಲ್ಲಿ ಪ್ರಕಟವಾಗಿದೆ. ಆದರೆ ಇದಕ್ಕೂ ಒಂದು ವರ್ಷ ಮೊದಲೇ ಗಾಂಧಿಯವರು ಟೋಪಿ ಧರಿಸಲು ತೊಡಗಿದ್ದರು ಎಂದು ಹೇಳುತ್ತವೆ ಕೆಲವು ಆಕರಗಳು.
1918ರಲ್ಲಿ ಗಾಂಧೀಜಿ ಗುಜರಾತ್‌ನಲ್ಲಿದ್ದಾಗ ಉದ್ದದ ದೋತರ, ಪಾಣಿಪಂಚೆ, ತಲೆಗೆ ಕಾಠೇವಾಡಿ ಪಗಡಿ ಧರಿಸುತ್ತಿದ್ದರು. ಪಗಡಿ ಗುಜರಾತಿಗಳ ನಿತ್ಯದಿರಿಸು. ಪಗಡಿ ಧರಿಸುತ್ತಿದ್ದ ಗಾಂಧೀಜಿಯ ಚಿತ್ರಗಳು ಬಹುಸಂಖ್ಯೆಯಲ್ಲಿ ಸಿಗುತ್ತವೆ. ಅದೊಂದು ದಿನ ಅಹಮದಾಬಾದ್‌ನಲ್ಲಿ ಬಟ್ಟೆಯ ಗಿರಣಿಗಳಲ್ಲಿ ಕಾರ್ಮಿಕರಿಗೂ, ಮಾಲಿಕರಿಗೂ ಜಗಳ ಹತ್ತಿತು. ಕಾರ್ಮಿಕರು ಹರತಾಳ ಶುರುಹಚ್ಚಿಕೊಂಡರು. ಪ್ರತಿಯಾಗಿ ಮಾಲೀಕರು, ಗಿರಣಿಗಳನ್ನೇ ಅನಿರ್ದಿಷ್ಟಾವಧಿಗೆ ಮುಚ್ಚಿಬಿಟ್ಟರು. ಕಾರ್ಮಿಕರ ವೇತನ ನಿಂತಿತು. ಅವರ ಪರಿಸ್ಥಿತಿ ನಿಜಕ್ಕೂ ಗಂಭೀರವಾಯಿತು.
ಹೊಟ್ಟೆಬಟ್ಟೆಗೆ ಪರದಾಡಬೇಕಾದ ಸ್ಥಿತಿ ಬಂತು. ಗಿರಣಿ ಕಾರ್ಮಿಕರ ಯೋಗಕ್ಷೇಮ ನೋಡಿಕೊಳ್ಳುವ ಕೆಲಸವನ್ನು ಗಾಂಧೀಜಿ ವಹಿಸಿಕೊಂಡರು. ಅದೊಂದು ದಿನ ಕಾರ್ಮಿಕರಿಗೆ ಬೇಕಿದ್ದ ಎಲ್ಲ ಅಗತ್ಯ ವಸ್ತುಗಳನ್ನು ಒದಗಿಸಿಕೊಟ್ಟು, ಸಾಬರ್‌ಮತಿ ಆಶ್ರಮಕ್ಕೆ ಮರಳುತ್ತಿದ್ದಾಗ ಗಾಂಧೀಜಿಗೆ ಒಂದು ಯೋಚನೆ ಬಂತು. ನನ್ನ ಒಂದು ಪಗಡಿಯಿಂದಲೇ ಹತ್ತಾರು ಮಂದಿ ತಲೆ ಮುಚ್ಚಿಕೊಳ್ಳುವುದು ಸಾಧ್ಯವಿರುವಾಗ, ನಾನ್ಯಾಕೆ ಅಷ್ಟೊಂದು ಬಟ್ಟೆ ಬಳಸಬೇಕು?ಹೀಗೆ ಯೋಚಿಸಿದ ಅವರು, ತಕ್ಷಣ ತನ್ನ ಯೋಚನೆಯನ್ನು ಕಾರ್ಯರೂಪಕ್ಕಿಳಿಸಿದರು. ಪಗಡಿ ಕಳಚಿದರು.
ಅದರಿಂದ ಟೋಪಿ ತಯಾರಿಸಿ ಹಂಚಿದರು. ಸ್ವತಃ ತಾನೇ ಅಂಥದೊಂದು ಟೋಪಿ ಧರಿಸಿದರು. ಗಾಂಧಿ ರೂಪಿಸಿದ ಟೋಪಿ, ಕ್ರಮೇಣ ಕಾರ್ಮಿಕರ ಸಮುದಾಯ ದಲ್ಲಿ ಜನಪ್ರಿಯವಾಯಿತು. ಹರತಾಳ ನಡೆಸುತ್ತಿದ್ದವರ ಸಂಕೇತವಾಯಿತದು. ಟೋ ಪಿಯ ಜನಪ್ರಿಯತೆ ಎಷ್ಟು ಹೆಚ್ಚಿತೆಂದರೆ, ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದವರೆಲ್ಲರೂ ಅದನ್ನು ಪರಂಗಿಗಳ ವಿರುದ್ಧ ತಮ್ಮ ಪ್ರತಿಭ ಟನೆಯ ಸಂಕೇತ ಎಂಬಂತೆ ಬಳಸತೊಡಗಿದರು. ಬ್ರಿಟಿಷ್ ಸರಕಾರ 1920- 21ರ ಅವಧಿಯಲ್ಲಿ ಗಾಂಧೀಟೋಪಿಯನ್ನು ನಿಷೇಧಿಸುವ ಬಗ್ಗೆಯೂ ಯೋಚಿಸಬೇಕಾಯಿತು!
ಗಾಂಧಿಟೋಪಿ ಮುಂದೆ ಭಾರತೀಯತೆಯ ಸಂಕೇತವಾಗಿ ರಾಷ್ಟ್ರಾದ್ಯಂತ ಹರಡಿದರೂ, ಹಲವು ದಶಕಗಳವ ರೆಗೆ ತನ್ನ ಜನಪ್ರಿಯತೆ ಕಾಯ್ದುಕೊಂಡರೂ, ಸ್ವತಃ ಗಾಂಧೀಜಿ ಅದನ್ನು ಬಳಸಿದ್ದು ಹೆಚ್ಚೆಂದರೆ ಮೂರು ವರ್ಷ (1918-21) ಮಾತ್ರವೇ!
* ರೋಹಿತ್ ಚಕ್ರತೀರ್ಥ