Advertisement

ಹಿಂದುತ್ವದ ಮಹತ್ವ ಏನು ಎನ್ನುವುದು ಈಗ ಅರಿವಾಗುತ್ತಿದೆ : ಭಟ್ಕಳದಲ್ಲಿ ಸಿ.ಟಿ.ರವಿ

08:45 PM Feb 19, 2023 | Team Udayavani |

ಭಟ್ಕಳ: ”ಈ ಹಿಂದೆ ಕುಂಕುಮ ಹಚ್ಚದವರು, ಕೇಸರಿ ಕಂಡರೆ ದೂರ ಸರಿಯುವವರೂ ಕೂಡಾ ಇಂದು ನಾನೂ ಹಿಂದೂ ಎಂದು ಹಿಂದೆ ಮುಂದೆ ನೋಡದೇ ಹೇಳುತ್ತಿದ್ದಾರೆಂದರೆ ಹಿಂದುತ್ವದ ಮಹತ್ವ ಏನು ಎನ್ನುವುದು ಅರಿವಾಗುತ್ತದೆ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

Advertisement

ಅವರು ನಗರದಲ್ಲಿರುವ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿ ಉಪಸ್ಥಿತರಿದ್ದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ,ಚುನಾವಣೆ ಹತ್ತಿರ ಬರುತ್ತಿದ್ದಂತೆ ಅವರ ಬಾಯಿಯಲ್ಲಿಯೂ ಹಿಂದೂ ಪದ ಹೊರ ಬರುತ್ತದೆ ಎಂದಾದರೆ ಬಿಜೆಪಿಯ ಹಾಗೂ ಹಿಂದುತ್ವದ ಶಕ್ತಿ ಎಷ್ಟು ಎನ್ನುವುದನ್ನು ನಮ್ಮ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರ ಹೆಸರು ಹೇಳದೇ ಛೇಡಿಸಿದರು.

ನಮ್ಮ ಪಕ್ಷದ ಸಿದ್ಧಾಂತ ಜಾತಿ ಮೊದಲು, ಕುಟುಂಬ ಮೊದಲು ಎನ್ನುವುದಲ್ಲ ಬದಲಿಗೆ ರಾಷ್ಟ್ರ ಮೊದಲು ಎನ್ನುವುದು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಹೆಸರು ಹೇಳದೆಯೇ ಟೀಕಿಸಿದರು.

ಬಿಜೆಪಿ. ಪಕ್ಷದಲ್ಲಿ ಕಾರ್ಯಕರ್ತರೇ ಮಾಲಕರು, ಪಕ್ಷಕ್ಕೆ ಬೇರೆ ಮಾಲಕರಿಲ್ಲ, ಆದರೆ ಜೆಡಿಎಸ್. ಪಕ್ಷದಲ್ಲಿ ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿಯವರೇ ಮಾಲಕರು, ಕಾಂಗ್ರೆಸ್ ಪಕ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ ಮ್ಯಾನೇಜರ್ ಅಲ್ಲಿ ಮಾಲಕರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಎಂದರು.

ಪಕ್ಷದ ಜವಾಬ್ದಾರಿಯನ್ನು ಕಾರ್ಯಕರ್ತರಿಗೆ ನೀಡಿದ ಏಕೈಕ ಪಕ್ಷ ನಮ್ಮದು. ನಮ್ಮ ಕಾರ್ಯಕರ್ತರು ಪಕ್ಷಕ್ಕಾಗಿ, ಸೈದ್ಧಾಂತಿಕ ಕಾರ್ಯಕ್ರಮಕ್ಕೆ ನಾವೆಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು.

Advertisement

ರಾಜ್ಯ, ರಾಷ್ಟ್ರದಲ್ಲಿ ಬಿಜೆಪಿ. ಪಕ್ಷ ಇದೆ ಮುಂದೆಯೂ ಪಕ್ಷವನ್ನು ಅಧಿಕಾರಕ್ಕೆ ತರುವುದು ಕಾರ್ಯಕರ್ತರ ಕರ್ತವ್ಯ. ಇಂದಿನಿಂದಲೇ ಬೂತ್ ಮಟ್ಟದಲ್ಲಿ ಕಾರ್ಯವನ್ನು ಮಾಡಲು ಅರಂಭಿಸಿ ಎಂದೂ ಕಾರ್ಯಕರ್ತರಿಗೆ ಕರೆ ನೀಡಿದರು.

1952 ರಿಂದಲೂ ಬಗೆ ಹರಿಯದ ಕಾಶ್ಮೀರಿ ಸಮಸ್ಯೆಯನ್ನು ನಮ್ಮ ಪ್ರಧಾನ ಮಂತ್ರಿ ಮೊದೀಜಿಯವರು ಬಗೆಹರಿಸಿದ್ದರು, ಆದರೆ ಇದೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಕಾಶ್ಮೀರದಲ್ಲಿ ಮತ್ತೆ ಆರ್ಟಿಕಲ್ 370 ಮರು ಜ್ಯಾರಿ ಮಾಡುತ್ತೇವೆ ಎನ್ನುತ್ತಾರೆಂದಾರೆ ಅವರ ಮನಸ್ಥಿತಿ ಏನೆಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಅಯೋಧ್ಯೆ ಸಮಸ್ಯೆಯನ್ನು ಬಗೆಹರಿಸಿ ಅಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಕೇದಾರನಾಥ, ಕಾಶಿ, ಉಜ್ಜಯಿನಿ, ಸೊಮನಾಥ ಹೀಗೆ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ಉದ್ದಾರ ಮಾಡಿದ ಕೇಂದ್ರ ಸರಕಾರ ಅಭಿವೃದ್ಧಿಯಲ್ಲಿಯೂ ಕೂಡಾ ಎಂದೂ ಹಿಂದೆ ಬಿದ್ದಿಲ್ಲ ಎಂದರು.

ದೇಶದ ಉದ್ದಗಲಕ್ಕೂ ಯಾವುದ ಜಾತಿ, ಪಂಥ, ಪಂಗಡಳನ್ನು ನೋಡದೇ ಸರ್ವಾಂಗೀಣ ಅಭಿವೃದ್ಧಿಯನ್ನು ಕೇಂದ್ರ ಸರಕಾರ ಮಾಡಿದೆ ಎಂದ ಅವರು ರಾಜ್ಯದಲ್ಲಿಯೂ ಕೂಡಾ ಹೆದ್ದಾರಿಗಳ ಅಭಿವೃದ್ಧಿ, ವಿಮಾನ ನಿಲ್ದಾಣಗಳ ಅಭಿವೃದ್ಧಿಯನ್ನು ಮಾಡುವಾಗ ಯಾವುದೇ ತಾರತಮ್ಯ ಮಾಡಿಲ್ಲ ಎಂದರು.

ಈಸಂದರ್ಭದಲ್ಲಿ ಮಾತನಾಡಿದ ಶಾಸಕ ಸುನಿಲ್ ನಾಯ್ಕ, ಕಳೆದ ಐದು ವರ್ಷಗಳಲ್ಲಿ ನಮ್ಮ ಕಾರ್ಯಕರ್ತರ ಹಿತ ಕಾಪಾಡುವಲ್ಲಿ ನಾನು ಬಹಳಷ್ಟು ಶ್ರಮಿಸಿದ್ದೇನೆ. ಕಾರ್ಯಕರ್ತರೇ ನಮ್ಮ ಪಕ್ಷದ ಆಸ್ತಿಯಾಗಿದ್ದರಿಂದ ಯಾವುದೇ ತೊಂದರೆ ಆದರೂ ಅವರೊಂದಿಗೆ ನಿಂತು ಅವರ ಹಿತಕಾಪಾಡುವಲ್ಲಿ ಮುಂದಾಗಿದ್ದೇನೆ. ಈ ಹಿಂದೆ 2013 ರಿಂದ 2018 ರ ತನಕ ನಮ್ಮ ಕಾರ್ಯಕರ್ತರ ಮೇಲೆ 3218 ಪ್ರಕರಣ ದಾಖಲಾಗಿದ್ದವು. ಹೊನ್ನಾವರದ ಪ್ರಕರಣದಲ್ಲಿ 3440 ಪ್ರಕರಣಗಳು ದಾಖಲಾಗಿದ್ದವು. ಆದರೆ 2018ರಿಂದ ಇಲ್ಲಿಯ ತನಕ ನಮ್ಮ ಕಾರ್ಯಕರ್ತರ ಮೇಲೆ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 300 ದಾಟಿಲ್ಲ ಎನ್ನುವುದು ನನಗೆ ಹೆಮ್ಮೆಯ ಸಂಗತಿ. ಅವರು ಹೋರಾಟ ಮಾಡಿಲ್ಲ ಎಂದಲ್ಲ, ನಮ್ಮ ಹೋರಾಟ ನಿರಂತವಾಗಿ ನಡೆಯುತ್ತಲೇ ಇದೆ ಎಂದರು.

ಕಾರ್ಯಕರ್ತರ ಹಿತಕಾಪಾಡುತ್ತಾ ಬಂದಿದ್ದೇನೆ, ಮುಂದಿನ ಮೂರು ತಿಂಗಳು ಕಾರ್ಯಕರ್ತರು ನಮ್ಮ ಹಿತ ಕಾಯಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಜಿಲ್ಲಾ ಬಿಜೆಪಿ. ಅಧ್ಯಕ್ಷ ವೆಂಕಟೇಶ ನಾಯಕ, ಮಂಡಳ ಅಧ್ಯಕ್ಷ ಸುಬ್ರಾಯ ದೇವಡಿಗ ಮಾತನಾಡಿದರು. ಈ ಸಂದರ್ಭದಲ್ಲಿ ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ಕ್ಷೇತ್ರ ಪ್ರಭಾರಿ ಎನ್.ಎಸ್.ಹೆಗಡೆ, ಪ್ರಥಮ ನಾಯಕ, ರವಿ ನಾಯಕ, ರಾಜೇಶ ನಾಯ್ಕ, ಭಾಸ್ಕರ ದೈಮನೆ, ಮೋಹನ ನಾಯ್ಕ, ಸುರೇಶ ನಾಯ್ಕ, ಗೋವರ್ಧನ ನಾಯ್ಕ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next