“ತೆರೆದ ಪುಸ್ತಕ ಪರೀಕ್ಷೆ’ ಇಂದು ಬಹು ಚರ್ಚಿತ ವಿಷಯ. ಪ್ರತಿಯೊಬ್ಬ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಣವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ವ್ಯಕ್ತಿ ಶಿಕ್ಷಿತನಾದರೆ ಸಮಾಜವೇ ಶಿಕ್ಷಿತವಾಗುತ್ತದೆ. ಶಿಕ್ಷಿತ ಸಮಾಜವು ದೇಶದ ಅಭಿವೃದ್ಧಿಯ ಮೂಲಮಂತ್ರ. ಆದ್ದರಿಂದ ಇಂತಹ ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕಾದುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ.
ಪರೀಕ್ಷಾ ವಿಧಾನ ಯಾವುದೇ ಇರಲಿ ಆದರೆ ಅದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಿರಬೇಕು. ಪರೀಕ್ಷೆ ಅಂದರೆ ವಿದ್ಯಾರ್ಥಿಗಳ ಬೌದ್ಧಿಕ ಗುಣಮಟ್ಟವನ್ನು ಅಳೆಯುವ ಸಾಧನ ಎಂದು ವ್ಯಾಖ್ಯಾನಿಸಬಹುದು. ಇಂದಿನ ಪರೀಕ್ಷಾ ವಿಧಾನದಲ್ಲಿ ವಿದ್ಯಾರ್ಥಿಗಳ ಕೌಶಲ್ಯ, ಚುರುಕುತನ, ಸ್ಮರಣ ಶಕ್ತಿ, ಯೋಚನಾ ಶಕ್ತಿ, ಚಾಕಚಕ್ಯತೆ, ಜ್ಞಾನ, ಆತ್ಮವಿಶ್ವಾಸ, ಸ್ಪರ್ಧಾತ್ಮಕ ಮನೋಭಾವ, ಈ ಎಲ್ಲ ಅಂಶಗಳು ಪ್ರತಿಫಲಿ ಸುತ್ತವೆ. ಆದರೆ ತೆರೆದ ಪುಸ್ತಕ ಪರೀಕ್ಷೆಯಲ್ಲಿ ಮೇಲೆ ತಿಳಿಸಿದ ಅಂಶಗಳಿಗೆ ಅವಕಾಶ ವಿರುವುದಿಲ್ಲ. ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ, ಯೋಚನಾಶಕ್ತಿ, ಕೌಶಲ್ಯ ಕುಸಿಯುವ ಅಪಾಯ ಇದೆ. ಇಂದು ಎಲ್ಲಾ ಔದ್ಯೋಗಿಕ ಕ್ಷೇತ್ರದಲ್ಲಿ ಜಾಗತಿಕವಾಗಿಯೂ ವಿದ್ಯಾರ್ಥಿಗಳ ಕೌಶಲ್ಯಕ್ಕೆ ಭಾರೀ ಬೇಡಿಕೆ ಇದೆ. ಹೇಳಿಕೇಳಿ ಇದು ಆಧುನಿಕ ತಂತ್ರಜ್ಞಾನದ ಯುಗ. ಪ್ರಾಥಮಿಕ ಹಂತದಿಂದಲೇ ಶಿಕ್ಷಣದ ಬೇರು ಗಟ್ಟಿಯಾಗಿರಬೇಕಾದುದು ಅವಶ್ಯಕವಾಗಿದೆ. ಇನ್ನೊಂದು ಅಂಶವೆಂದರೆ ತೆರೆದ ಪುಸ್ತಕ ಪರೀಕ್ಷೆಯಲ್ಲಿ ಉತ್ತರವನ್ನು ಪುಸ್ತಕ ನೋಡಿಯೆ ಬರೆ ಯುವುದರಿಂದ ಪರೀಕ್ಷಾ ಗಾಂಭೀರ್ಯ ವಿದ್ಯಾರ್ಥಿಗಳಲ್ಲಿ ಇರು ವುದಿಲ್ಲ. ಉತ್ತರಗಳನ್ನು ನೋಟ್ ಮಾಡುವುದಕ್ಕಷ್ಟೇ ವಿದ್ಯಾರ್ಥಿ ಗಮನ ಹರಿಸುತ್ತಾನೆ. ಇದಕ್ಕೆ ಜಾಸ್ತಿ ಬುದ್ಧಿಮತ್ತೆ ಅವಶ್ಯಕ ವಿರುವುದಿಲ್ಲ. ಇಷ್ಟು ಬುದ್ಧಿಮತ್ತೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ಇರುವುದರಿಂದ ಐಕ್ಯೂ ವ್ಯತ್ಯಾಸ ಕಂಡುಹಿಡಿಯಲು ಸಾಧ್ಯವಿಲ್ಲ. ಇದೊಂದು ಋಣಾತ್ಮಕ ಅಂಶ.
ಹಿಂದೆ ಶಿಕ್ಷಣದ ಸ್ವರೂಪ ಇಂದಿನಷ್ಟು ಆಧುನಿಕವಾಗಿರಲಿಲ್ಲ. ಹೊಟ್ಟೆಪಾಡಿಗಾಗಿ ಒಂದು ಉದ್ಯೋಗದ ಅವಶ್ಯಕತೆ ಗೋಸ್ಕರ ಮಾತ್ರವೇ ಶಿಕ್ಷಣ ಎಂಬಂತಹ ಪರಿಸ್ಥಿತಿ ಇತ್ತು. ಹೊಟ್ಟೆಪಾಡಿನ ದುಡಿಮೆಯ ದೃಷ್ಟಿಯಲ್ಲಿ ಶಿಕ್ಷಣ ಅಷ್ಟೊಂದು ಮಹತ್ವದ ವಿಷಯವಾಗಿರಲಿಲ್ಲ. ಆದರೆ ಇಂದು ಶಿಕ್ಷಣವೇ ಸರ್ವಸ್ವ. ಆದ್ದರಿಂದ ಇಂದು ಶಿಕ್ಷಣವೆಂಬುದು ಒಂದು ರೀತಿಯ ವ್ಯಾಪಾರ, ಸ್ಪರ್ಧೆ, ಒತ್ತಡ. ಉತ್ತಮ ಭವಿಷ್ಯದತ್ತ ದಾಪುಗಾಲು ಹಾಕುವ ಸವಾಲು, ಈ ಎಲ್ಲ ಸವಾಲುಗಳನ್ನು ಎದುರಿಸುವುದರಲ್ಲಿ ಮಕ್ಕಳ, ಹೆತ್ತವರ ಪರಿಸ್ಥಿತಿ ಶೋಚನೀಯ ಹಾಗೂ ಯೋಚನೀಯ. ಇವರ ಧಾವಂತದ ಬದುಕು ಒಂದು ಸವಾಲೇ ಸರಿ. ಎಲ್.ಕೆ.ಜಿ.ಯಿಂದ ಪ್ರಾರಂಭವಾದ ಶಿಕ್ಷಣ ಸ್ನಾತಕೋತ್ತರ ಪದವಿ ತನಕ ಕನಿಷ್ಠ ಗುಣಮಟ್ಟ ಎಂಬ ಪರಿಧಿಗೆ ಸೇರಿದೆ. ಈ ಎಲ್ಲ ಹಂತಗಳಲ್ಲೂ ಶಿಕ್ಷಣದ ಉದ್ದೇಶ ಅಂಕ ಗಳಿಕೆ ಹಾಗೂ ಉದ್ಯೋಗ.
ಇವಿಷ್ಟೇ ವಿದ್ಯಾರ್ಥಿಗಳ, ಹೆತ್ತವರ ಅಂತಿಮ ಗುರಿ. ಇವೆಲ್ಲವನ್ನು ತೆರೆದ ಪರೀಕ್ಷಾ ವಿಧಾನದಿಂದ ಖಂಡಿತ ತಲುಪಲು ಸಾಧ್ಯವಿಲ್ಲ. ಎಲ್ಲದಕ್ಕೂ ಅದರದೇ ಆದ ಇತಿಮಿತಿಗಳಿವೆ. ವಿದ್ಯಾರ್ಥಿಗಳು ವರ್ಷದ ಸಾಧನೆಯನ್ನು ಪರೀಕ್ಷಾ ಹಾಲ್‌ನಲ್ಲಿ ಕೂತು 3 ಗಂಟೆಯೊಳಗೆ ಉತ್ತರ ಪತ್ರಿಕೆಯಲ್ಲಿ ಡೌನ್‌ಲೋಡ್ ಮಾಡುವುದು. ಇದು ಸಹ ಅತ್ಯಂತ ಶ್ರೇಷ್ಠ ಪದ್ಧತಿ ಎಂದು ಹೇಳಲಾಗದಿದ್ದರೂ ತೆರೆದ ಪುಸ್ತಕ ಪರೀಕ್ಷೆಗೆ ಹೋಲಿಸಿದಲ್ಲಿ ಉತ್ತಮ ಅನ್ನಬಹುದಷ್ಟೆ.
ಶಿಕ್ಷಣ ಎಂದರೆ ಕೇವಲ ಪರೀಕ್ಷೆ ಪಾಸು ಮಾಡುವ ಶಿಕ್ಷಣ ಆಗಬಾರದು. ಶಿಕ್ಷಣವೆಂದರೆ ಅದರ ಜೊತೆಗೆ ಬದುಕಿನಲ್ಲಿ ಎದುರಾಗುವಂತಹ ಕಠಿಣ ಪರೀಕ್ಷೆಗಳನ್ನು ಎದುರಿಸುವಂತಹ ಸಾಮರ್ಥ್ಯ. ಆತ್ಮಸ್ಥೈರ್ಯ, ಆತ್ಮವಿಶ್ವಾಸ ಸಮಾಜದಲ್ಲಿ ಉತ್ತಮ ನಾಗರಿಕ, ಸತøಜೆ, ಸಜ್ಜನನಾಗಿ ಬಾಳಲು ಕಲಿಸುವಂತಹ ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯ.
ಚಂದ್ರಿಕಾ ಎಂ. ಶೆಣೈ