ಪ್ರಗ್ನೆನ್ಸಿಗೂ ಮೊದಲು ನನ್ನ ತೂಕಕಡಿಮೆಯಿತ್ತು. ಹೆರಿಗೆಯ ನಂತರ ಏರಿಕೆಯಾಗಿದ್ದು ಎಷ್ಟೇ ಪ್ರಯತ್ನಿಸಿದರೂ ಮೊದಲಿನ ತೂಕಕ್ಕೆ ಬರಲೇ ಇಲ್ಲ ಅಂದಳು ಅವಳು. ನೀನು ಸ್ವಲ್ಪನಾದರೂ ಹತ್ತಿರಕ್ಕೆ ತಂದಿದ್ದೀಯ, ಆದರೆ ನನ್ನದು ಮೊದಲು ಮತ್ತು ಈಗಿನತೂಕಕ್ಕೆ ಭಾರೀವ್ಯತ್ಯಾಸವಿದೆ ಅಂದಳು ಇವಳು. ನಾನು ಡಯಟ್ ಮೊರೆಹೋದರೂ ಏನೂಪ್ರಯೋಜನವಿಲ್ಲ ಎಂದಳುಮತ್ತೂಬ್ಬಳು. ಇದು ಇವರುಗಳ ಕಥೆಯಷ್ಟೇ ಅಲ್ಲ, ಬಹುತೇಕ ಹೆಣ್ಣುಮಕ್ಕಳ ಕೊರಗು, ಸದಾ ಫಿಟ್ನೆಸ್ ಮಂತ್ರ.
ನನಗಾಗಿದ್ದು ಸಿಸೇರಿಯನ್ ಡೆಲಿವರಿ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ದಿನ, ಅಮ್ಮ ನೆಲದ ಮೇಲೆ ಬ್ಯಾಗ್ ಇಟ್ಟು ಕೊಂಡು ಬಟ್ಟೆಗಳನ್ನೆಲ್ಲ ತುಂಬಿಸುತ್ತಿದ್ದಳು.ಕೂರಲೂ, ನಿಲ್ಲಲೂ, ನಡೆಯಲೂ ಕಷ್ಟಪಡುತ್ತಿದ್ದ ನಾನು ಅವಳ ಬಳಿ ಹೇಳಿಯೇಬಿಟ್ಟಿದ್ದೆ: ನಿನ್ನ ನೋಡಿದಾಗ ಆಸೆಯಾಗುತ್ತಿದೆ, ನಾನ್ಯಾವಾಗ ಮೊದಲಿನಂತೆ ಆರಾಮ ಆಗುವುದು- ಎಂದು.
ಕೆಲವೊಂದು ಪೇರೆಂಟಿಂಗ್‌ವೆಬ್‌ಸೈಟ್, ಅಪ್ಲಿಕೇಶನ್‌ಗಳಲ್ಲಿ ಹೆಣ್ಣುಮಕ್ಕಳು ಡೆಲಿವರಿಯ ನಂತರ ತೂಕ ಇಳಿಸಿಕೊಳ್ಳುವುದು ಹೇಗೆ? ಡೆಲಿವರಿ ಆದ ಎಷ್ಟನೇ ದಿನದಿಂದ ವ್ಯಾಯಾಮ ಮಾಡಬಹುದು? ತೂಕ ಇಳಿಸಲು ಯಾವ ಆಹಾರ ಸೇವಿಸಿದರೆ ಉತ್ತಮ? ಎಂಬಿತ್ಯಾದಿ ಪ್ರಶ್ನೆಕೇಳಿರುತ್ತಾರೆ. ಎಲ್ಲದಕ್ಕೂ ಉತ್ತರ ಸಮಯ! ಇದು ಎಲ್ಲರಿಗೂ ತಿಳಿದಿದೆ. ಆದರೂ ಅನಾವಶ್ಯಕ ಹೆದರಿಕೆ. ಮ್ಯಾರಥಾನ್, ಟ್ರೆಕ್ಕಿಂಗ್, ಹೈಕಿಂಗ್ ಎಂದೆಲ್ಲ ಓಡಾಡುವ ಹೆಣ್ಣುಮಕ್ಕಳು, ಡೆಲಿವರಿ ಆದಮೇಲೆ ಬರುವ ಸಣ್ಣದಾದ ಬೆನ್ನು ನೋವಿಗೂ ಬೇಸರಿಸುತ್ತಾರೆ. ಹೇಗಿದ್ದವಳು ಹೇಗಾಗಿಬಿಟ್ಟೆ ಎಂದು ಕೊರಗುತ್ತಾರೆ.
ಆದರೆ, ಇಂಥದೊಂದು ದೈಹಿಕ ಬದಲಾವಣೆ ಆಗಿದ್ದು ಒಂದು ಜೀವವನ್ನು ಭೂಮಿಗೆ ಪರಿಚಯಿಸಿದ ಮೇಲೆ ಎಂಬುದನ್ನು ಮರೆಯಬಾರದು. ಹಾಗೆ ನೋಡಿದರೆ ಇಂದಿನ ಹೆಣ್ಣು ಮಕ್ಕಳಿಗೆ ಫಿಟ್ನೆಸ್ ಟ್ರೆಂಡ್ ಜಾಸ್ತಿಯಾಗಿ, ಹಲವು ಬಾರಿ ಅದೇ ಒಂದು ಚಿಂತೆಯಾಗಿ ಪರಿಣಮಿಸುತ್ತದೆ. ದೇಹ ಪೂರ್ತಿಯಾಗಿ ಚೇತರಿಸಿಕೊಳ್ಳುವ ತನಕ ಯಾವುದೇ ರೀತಿಯ ಅಡ್ಡಪರಿಣಾಮ ಬೀರುವ ವ್ಯಾಯಾಮಗಳನ್ನುಮಾಡದಿರುವುದೇ ಒಳಿತು.ಹೀಗೆ ಮಾಡದೇ ಹೋದರೆ,ಒಂದು ನೋವಿಗೆ ಹತ್ತು ನೋವುಗಳು ಜೊತೆಯಾದೀತು. ಬಾಣಂತಿಯಾಗಿದ್ದಾಗ ಬಾಣಂತಿ ಪಥ್ಯವಿರಲಿ, ಒಂಬತ್ತು ತಿಂಗಳು
ಜೀವವೊಂದನ್ನು ಹೊತ್ತಿದ್ದ ದೇಹಕ್ಕೆ ರೆಸ್ಟ್ ಬೇಕು. ಎದೆ ಹಾಲುಣಿಸುವ ತಾಯಂದಿರಿಗೆ ಹಸಿವು ಜಾಸ್ತಿ.ಮೊದಲ ಕೆಲವು ತಿಂಗಳುಗಳು, ಜಾಸ್ತಿ ತಿಂದರೆ ಎಲ್ಲಿ ದಪ್ಪ ಆಗುವೆನೋ ಎಂದು ಆಲೋಚಿಸದೆ, ಮಗು ಹಾಗೂ ತನ್ನ ಆರೋಗ್ಯದ ದೃಷ್ಟಿಯಿಂದ ತಾಯಿಯಾದವಳು ಹೆಚ್ಚು ಆಹಾರ ಸೇವಿಸಬೇಕು. ಕನಿಷ್ಠ 3 ತಿಂಗಳಾದರೂ ರೆಸ್ಟ್ ಅತ್ಯಗತ್ಯ. ಇದು 6 ತಿಂಗಳವರೆಗೆ ಮುಂದುವರಿದರೂ ಅಡ್ಡಿಯಿಲ್ಲ. ತದನಂತರ ಮೊದಲಿನಂತಾಗಲು ಚೈತನ್ಯ ಬರುವುದು. ಹಲವರಿಗೆ ಅವೆಷ್ಟು ಕ್ರೀಮ್ ಅಥವಾ ಆಯಿಲ್ ಹಚ್ಚಿದರೂ ಬರುವ ಸ್ಟ್ರೆಚ್ ಮಾರರ್ಕ್ಸ್, ತಲೆಕೂದಲು ಹೆಚ್ಚೆಚ್ಚು ಉದುರುವುದು, ಇನ್ನೂ ಏನೇನೋ ದೈಹಿಕ ಬದಲಾವಣೆಗಳು. ಇವು ಯಾವುದಕ್ಕೂ ಅಸಹ್ಯ ಪಡದೆ, ಏನೇ ಆದರೂ ನಮ್ಮ ದೇಹವನ್ನು ಇಷ್ಟಪಡುವ, ಪ್ರೀತಿಸುವ ನಿಲುವು ಎಲ್ಲಾ ಹೆಣ್ಣುಮಕ್ಕಳದ್ದಾಗಬೇಕು.
-ಸುಪ್ರೀತಾ ವೆಂಕಟ್