Advertisement

ವಸ್ತುಗಳ್ತಗಳ ಬೆಲೆಯೇಕೆ  ನಿಗದಿಯಾಗುತ್ತೆ? 

02:44 PM Sep 18, 2017 | |

ಸೂಪರ್‌ಮಾರ್ಕೆಟ್‌ನಲ್ಲಿನ ಮಳಿಗೆಯೊಂದರಲ್ಲಿ ಪ್ರತಿನಿತ್ಯ ಕನಿಷ್ಠ 100 ಗ್ರಾಹಕರು 999ರ ಬೆಲೆಯ ಉತ್ಪನ್ನಕ್ಕೆ ಸಾವಿರ ರೂಪಾಯಿ ಹಣ ಕೊಟ್ಟು, ಚಿಲ್ಲರೆ ಪಡೆಯದೇ ಮನೆಗೆ ತೆರಳುತ್ತಾರೆ ಎಂದುಕೊಳ್ಳಿ. ಅಂದರೆ ದಿನಕ್ಕೆ ನೂರು ರೂಪಾಯಿ ಲೆಕ್ಕಕ್ಕೆ ಸಿಗದ ಮತ್ತು ತೆರಿಗೆಯಿಂದ ತಪ್ಪಿಸಿಕೊಂಡ ಹಣ ಮಳಿಗೆಯವನ ಪೆಟ್ಟಿಗೆ ಸೇರಿತು. ಈ ಮೊತ್ತ ತಿಂಗಳಿಗೆ 3,000 ರೂಪಾಯಿ ಆಯಿತು. ವರ್ಷಕ್ಕೆ 36,000 ರೂಪಾಯಿ ಆಯಿತು !

Advertisement

ನೀವು ಶಾಪಿಂಗ್‌ಗೆ ಹೋದಾಗಲೆಲ್ಲ ಒಂದು ಸಂಗತಿಯನ್ನಂತೂ ಗಮನಿಸಿರುತ್ತೀರಿ. ಬಟ್ಟೆ, ಸ್ಟೇಷನರಿ ಉತ್ಪನ್ನ, ಆಟಿಕೆ, ಮೊಬೈಲ್‌ಫೋನ್‌ಗಳು… ಬಹುತೇಕ ಎಲ್ಲಾ ವಸ್ತುಗಳ ಬೆಲೆ 9ರಿಂದ ಕೊನೆಗೊಂಡಿರುತ್ತದೆ.ಅಂದರೆ ಶೂ “ಕೇವಲ 499 ರೂಪಾಯಿ’, “ಸ್ಮಾರ್ಟ್‌ಫೋನ್‌ 4,999 ರೂ’, “ಟಿಶರ್ಟ್‌ ಎಟ್‌ 299′ ಇತ್ಯಾದಿ. ಬಟ್ಟೆ ಮತ್ತು ಶೂ ಮಳಿಗೆಗಳಲ್ಲಂತೂ ಬ್ರಾಂಡೆಡ್‌ ವಸ್ತುಗಳ ಎಂಆರ್‌ಪಿಯನ್ನೂ ಅಳಿಸಿ ಬೆಲೆಯನ್ನು ಕರೆಕ್ಟಾಗಿ 9 ಸಂಖ್ಯೆಯಿಂದ
ಅಂತ್ಯಗೊಳಿಸಿರುತ್ತಾರೆ. ನಮ್ಮಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ 99 ಡಾಲರ್‌, 299 ರಿಯಾಲ್ಸ್‌, 99 ಪೌಂಡ್‌ ಎಂದೇ ಬೆಲೆಗಳನ್ನು ನಿಗದಿಪಡಿಸಲಾಗಿರುತ್ತದೆ.

ವಸ್ತುಗಳ ಬೆಲೆಯೇಕೆ ಹೀಗೆ ಸಚಿನ್‌ ಆಟದ ರೀತಿ ಸೆಂಚುರಿ ಹತ್ತಿರ ಬಂದು ನಿಂತುಬಿಡುತ್ತವೆ? ಇದರ ಹಿಂದೆ ಸಂಖ್ಯಾಶಾಸ್ತ್ರದ ಆಟವೇನಾದರೂ ಅಡಗಿದೆಯೋ? ಅಥವಾ ಇದೆಲ್ಲಾ ಕೇವಲ ಮಾರ್ಕೆಟಿಂಗ್‌ ಗಿಮಿಕ್ಕೋ? “ವ್ಯಾಪಾರಂ ದ್ರೋಹ ಚಿಂತನಂ’ ಅರ್ಥಾತ್‌ ಇನ್ನೊಬ್ಬರಿಗೆ ಯಾಮಾರಿಸಲು ಪ್ರಯತ್ನಿಸುವುದೇ ವ್ಯಾಪಾರ ಎನ್ನುವ ಮಾತಿದೆ. ಈ ವಿಷಯದಲ್ಲೂ ಇದೇ ಆಗುತ್ತಿರುವುದು. ಇದೇನು ನಮಗೆ ಗೊತ್ತಿರದ ಸಂಗತಿಯೇ? ಆದರೂ “ನಮ್ಮಂಥವ್ರ ಮುಂದೆ ಇವ್ರ ಆಟ ನಡೆಯೋಲ್ಲ’ ಅನ್ನುತ್ತಲೇ ನಾವು ಪ್ರತಿ ಬಾರಿಯೂ  ಅಂಗಡಿಗೆ ಕಾಲಿಟ್ಟು “ಒಂದು ರೂಪಾಯಿ’ ಅಂತರದ ಮಾಯಾಜಾಲಕ್ಕೆ ಸಿಲುಕಿ ಯಾಮಾರುತ್ತೇವೆ! ಯಾಮಾರುವ ಕಾರಣದಿಂದಲೇ ಈ ರೀತಿಯ ಬೆಲೆ ನಿಗದಿಯನನ್ನು “ಸೈಕಾಲಾಜಿಕಲ್‌ ಪ್ರೈಸಿಂಗ್‌’ ಅನ್ನುತ್ತಾರೆ. “9′ ಎಂಬ ಸಂಖ್ಯೆ ಹೇಗೆ ನಮ್ಮ ಮನಸ್ಸಿನೊಂದಿಗೆ ಆಟವಾಡುತ್ತದೆ ಎನ್ನುವುದನ್ನು ನೋಡೋಣ ಬನ್ನಿ

1 ಎಡದಿಂದ ಬಲಕ್ಕೆ : ನಾವೆಲ್ಲ ಎಡದಿಂದ ಬಲಕ್ಕೆ ಓದುವುದನ್ನು ಕಲಿತಿದ್ದೇವೆ. ಹೀಗಾಗಿ ಯಾವುದೇ ನಂಬರ್‌ ಗಳನ್ನು ಓದುವಾಗ ನಮ್ಮ ಮನಸ್ಸು ಮೊದಲ ಸಂಖ್ಯೆಯತ್ತ ಹೆಚ್ಚು ಗಮನ ಕೊಟ್ಟು ಮುಂದಿನ ಸಂಖ್ಯೆಗಳನ್ನು ಕಡೆಗಣಿಸುತ್ತದೆ. ಉದಾಹರಣೆಗೆ 90 ರೂಪಾಯಿಯ ಉತ್ಪನ್ನವು 89 ರೂಪಾಯಿಯಾದಾಗ ಮನಸ್ಸು ಅದನ್ನು 80ಕ್ಕೆ ಸನಿಹವೆಂದು ಭಾವಿಸುತ್ತದೆಯೇ ಹೊರತು, 90ಕ್ಕೆ ಸನಿಹವೆಂದಲ್ಲ! 80,787 ಸಂಖ್ಯೆ 80 ಸಾವಿರಕ್ಕಿಂತ 90 ಸಾವಿರಕ್ಕೇ ಸನಿಹದಲ್ಲಿದೆ ಎನ್ನುವುದನ್ನೂ ಗಮನಿಸಿ. ಆದರೂ ನಮಗದು 80 ಸಾವಿರದ ಚಿಲ್ಲರೆ ಎಂದೇ ಭಾಸವಾಗುತ್ತದೆ.

2 ಕಾಸುಳಿಸೇ ಕೈಲಾಸ: ಹಣ ಉಳಿಸುವ ಇಚ್ಛೆ ನಮಗೆಲ್ಲರಿಗೂ ಇದೆ. ವಸ್ತುವೊಂದನ್ನು ಮೂಲಬೆಲೆಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಿದಾಗ ನಮ್ಮ ಸುಪ್ತಮನಸ್ಸಿಗೆ “ನಾವು ದಡ್ಡರಲ್ಲ’ ಎಂಬ ಸಮಾಧಾನಕರ ಸಂದೇಶ ರವಾನೆಯಾಗುತ್ತದೆ! ಹೀಗಾಗಿ 99 ರೂಪಾಯಿಗೆ ಖರೀದಿಸಿದ ವಸ್ತುವಿನಲ್ಲಿ ಒಂದು ರೂಪಾಯಿ ಉಳಿಸಿದ “ಅನಗತ್ಯ’ ಸಮಾಧಾನ ನಮಗಾಗುತ್ತದೆ.

Advertisement

3 ರೌಂಡ್‌ ಡಿಜಿಟ್‌ -ಬೆಸ ಸಂಖ್ಯೆ: ಯಾವುದೇ ಅಂಕಿ ಸಂಖ್ಯೆಯಿರಲಿ. ರೌಂಡ್‌ ಡಿಜಿಟ್‌ ಅನ್ನು ಹೇಳಿದಾಗ ಅದನ್ನು ನಮ್ಮ ಮನಸ್ಸು ಒಪ್ಪುವುದಿಲ್ಲ. ಅಂದರೆ ಬಂಗಳೂರಿನ ಶ್ರೀನಿವಾಸನಗರದಲ್ಲಿ 3 ಲಕ್ಷ ಜನರಿದ್ದಾರೆ ಎಂದು ಹೇಳುವುದಕ್ಕೂ 3 ಲಕ್ಷದ 1 ಸಾವಿರದ 15 ಜನರಿದ್ದಾರೆ ಎಂದು ಹೇಳುವುದಕ್ಕೂ ವ್ಯತ್ಯಾಸವಿದೆ. 3 ಲಕ್ಷ ಎಂದು ರೌಂಡ್‌ ಡಿಜಿಟ್‌ ಹೇಳುವವನನ್ನು ನೀವು ನಂಬುವ ಸಾಧ್ಯತೆ ಕಡಿಮೆ. ಬೆಲೆ ನಿಗದಿಯ ವಿಚಾರದಲ್ಲೂ
ಇದೇ ಆಗುತ್ತಿದೆ. ಒಂದು ಉತ್ಪನ್ನದ ಬೆಲೆ 1000 ರೂಪಾಯಿ ಎನ್ನುವುದಕ್ಕಿಂತ 999 ರೂಪಾಯಿ ಇಟ್ಟಾಗ, ಅಂಗಡಿಯವರು ಸರಿಯಾಗಿ ಯೋಚಿಸಿ, ಅಳೆದೂತೂಗಿ ಬೆಲೆ ನಿಗದಿ ಮಾಡಿದ್ದಾರೆ ಎಂದು ನಮ್ಮ ಸುಪ್ತಮನಸ್ಸು ಭಾವಿಸುತ್ತದೆ!( ಇದನ್ನು ಇನ್ನೊಂದು ರೀತಿಯಲ್ಲೂ ಹೇಳಬಹುದು. ಸಮ ಸಂಖ್ಯೆಗಿಂತ ಬೆಸ ಸಂಖ್ಯೆಯನ್ನು ನಮ್ಮ ಮನಸ್ಸು ಹೆಚ್ಚು ನಂಬುತ್ತದೆ.)  

ಒಂದು ರೂಪಾಯಿ ಕಪ್ಪುಹಣ!
ಸಾಮಾನ್ಯವಾಗಿ ಕಂಪೆನಿಯೊಂದು ತನ್ನ ಉತ್ಪನ್ನಕ್ಕೆ ಗರಿಷ್ಠ ಬೆಲೆ ನಮೂದಿಸಿ ಸುಮ್ಮನಾಗಿಬಿಡುತ್ತದೆ. ಅದನ್ನು 99/49/199ಗೆ ಇಳಿಸುವುದು ಮಳಿಗೆಗಳ ತಂತ್ರವಷ್ಟೆ. ಆದರೆ ಮಳಿಗೆಗಳು ಪರೋಕ್ಷವಾಗಿ ಗ್ರಾಹಕರಿಂದ ಎಷ್ಟೊಂದು ಹಣ ಸಂಪಾದಿಸುತ್ತಿವೆ ಗೊತ್ತೇ? ಉದಾಹರಣೆಗೆ ನೀವು 999 ರೂಪಾಯಿಯ ಶರ್ಟ್‌ ಖರೀದಿಸುತ್ತೀರಿ ಎಂದುಕೊಳ್ಳಿ. ನಿಮ್ಮ ಬಳಿ ನಿಖರವಾಗಿ ಅಷ್ಟು ಚೇಂಜ್‌ ಇರುವುದಿಲ್ಲ. ಹೀಗಾಗಿ 1000 ರೂಪಾಯಿ ಕೊಡುತ್ತೀರಿ. ಒಂದು ರೂಪಾಯಿ ಚೇಂಜ್‌ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಅಂದರೆ ಇಲ್ಲಿ ಬಿಲ್‌ ಆಗುವುದು ಕೇವಲ 999 ರೂಪಾಯಿಗೆ ಅಷ್ಟೆ. ಹಾಗಿದ್ದರೆ ಆ ಒಂದು ರೂಪಾಯಿ ಎಲ್ಲಿ ಹೋಗುತ್ತದೆ? ಏನಾಗುತ್ತದೆ? ಅದು ಕಪ್ಪುಹಣವಾಗಿ ಬದಲಾಗುತ್ತದೆ!  

ಉದಾಹರಣೆ: ಸೂಪರ್‌ಮಾರ್ಕೆಟ್‌ನಲ್ಲಿನ ಮಳಿಗೆಯೊಂದರಲ್ಲಿ ಪ್ರತಿನಿತ್ಯ ಕನಿಷ್ಠ 100 ಗ್ರಾಹಕರು 999ರ ಉತ್ಪನ್ನಕ್ಕೆ ಸಾವಿರ ರೂಪಾಯಿ ಹಣ ಕೊಟ್ಟು, ಚಿಲ್ಲರೆ ಪಡೆಯದೇ ಮನೆಗೆ ತೆರಳುತ್ತಾರೆ ಎಂದುಕೊಳ್ಳಿ. ಅಂದರೆ ದಿನಕ್ಕೆ ನೂರು ರೂಪಾಯಿ ಲೆಕ್ಕಕ್ಕೆ ಸಿಗದ ಮತ್ತು ತೆರಿಗೆಯಿಂದ ತಪ್ಪಿಸಿಕೊಂಡ ಹಣ ಮಳಿಗೆಯವನ ಪೆಟ್ಟಿಗೆ ಸೇರಿತು. ಈ ಮೊತ್ತ ತಿಂಗಳಿಗೆ 3,000 ರೂಪಾಯಿ ಆಯಿತು. ವರ್ಷಕ್ಕೆ? 36,000 ರೂಪಾಯಿ. ಒಂದು ವೇಳೆ ಇದು ಸೂಪರ್‌ ಮಾರ್ಕೆಟ್‌ ಚೈನ್‌ ಆಗಿದ್ದು, ದೇಶಾದ್ಯಂತ ಇದೇ ಬ್ರಾಂಡ್‌ನ‌ 1000 ಮಳಿಗೆಗಳಿದ್ದರೆ? ಯಜಮಾನನಿಗೆ ವರ್ಷಕ್ಕೆ 36 ಕೋಟಿ ರೂಪಾಯಿ ಗಳಿಕೆ. ಅದೂ ಒಂದೊಂದು ರೂಪಾಯಿ ಲೆಕ್ಕದಲ್ಲಿ! ಹೇ, ಒಂದು ರೂಪಾಯಿಗೆ ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದೇ ಎಲ್ಲರೂ ಭಾವಿಸುತ್ತಿರುವುದರಿಂದ ಮಳಿಗೆಗಳು ಕಂಡಂತೆ ಹಣ ಮಾಡಿಕೊಳ್ಳುತ್ತಾ ಸಾಗುತ್ತಿವೆ. ಇದರ ನೀತಿಯಿಷ್ಟೆ- ಮುಜುಗರ ಬಿಟ್ಟು ಆ ಒಂದು ರೂಪಾಯಿ ವಾಪಸ್‌ ಕೇಳಿ ಪಡೆದಿರೆಂದರೆ ಕಪ್ಪು ಹಣದ ವಿರುದ್ಧ ನೀವೂ ಹೋರಾಟ ಮಾಡಿದಂತಾಗುತ್ತದೆ!

 ಒಟ್ಟಲ್ಲಿ ಒಂದು ವಿಷಯ ಅರ್ಥಮಾಡಿಕೊಳ್ಳಿ. ಮಾರುಕಟ್ಟೆ ವ್ಯವಸ್ಥೆಯಿರುವುದೇ ನಮ್ಮನ್ನು ಮಂಗ ಮಾಡಲು. ಹೀಗಾಗಿ ಜಾಗೋ ಗ್ರಾಹಕ್‌ ಜಾಗೋ ಎಂದು ಎಷ್ಟೇ ಜಾಗಟೆ ಬಾರಿಸಿದರೂ ನಾವು ಎಚ್ಚೆತ್ತುಕೊಳ್ಳುವುದಿಲ್ಲ ಎಂದರೆ ಸಾಕಾಲಾಜಿಕಲ್‌ ಪ್ರೈಸಿಂಗ್‌ ವಿಧವಿಧ ರೂಪ ಪಡೆದು ನಮ್ಮನ್ನು ಯಾಮಾರಿಸುತ್ತಲೇ ಇರುತ್ತದೆ.

ಆನ್‌ಲೈನ್‌ ವ್ಯಾಪಾರದಲ್ಲೂ 99!
ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡುವಾಗಲೂ ಬೆಲೆ 9ರಿಂದ ಕೊನೆಯಾಗಿರುವುದನ್ನು ನೀವು ನೋಡುತ್ತೀರಿ. ಇದರ ಅಗತ್ಯವೇನಿದೆ? ಹೇಗಿದ್ದರೂ ಆನ್‌ಲೈನಲ್ಲಾದರೆ ನಿಖರವಾಗಿ ನೆಟ್‌ ಬ್ಯಾಂಕಿಂಗ್‌ ಮೂಲಕ ಪಾವತಿ ಮಾಡಬಹುದಲ್ಲವೇ? ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಆನ್‌ಲೈನ್‌ ಮಾರುಕಟ್ಟೆಯಲ್ಲೂ ಸೈಕಾಲಾಜಿಕಲ್‌ ಪ್ರೈಸಿಂಗ್‌ ತಂತ್ರವಿದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಆದರೆ ಅದರ ಜೊತೆಗೆ ಇನ್ನೊಂದು ಕಾರಣವೂ ಇದೆ. ಆನ್‌ಲೈನ್‌ ಸ್ಟೋರ್‌ಗಳಲ್ಲಿ ನಮ್ಮ ಪ್ರೈಸ್‌ ರೇಂಜ್‌ಗೆ ಅನುಗುಣವಾಗಿ ಉತ್ಪನ್ನಗಳನ್ನು ಹುಡುಕುವ ಆಪ್ಶನ್‌ ಇರುತ್ತವೆ. ಅಂದರೆ ಒಂದು ಮೊಬೈಲ್‌ ಬೇಕಾದಾಗ ನಿಮ್ಮ ರೇಂಜ್‌ 1000 ದಿಂದ 5000 ರೂಪಾಯಿ ಎಂದು ಕೊಳ್ಳಿ. ಆ ಸಂಖ್ಯೆಯನ್ನು ನೀವು ನಮೂದಿಸಿದರೆ ಆ ಬೆಲೆಯಲ್ಲಿನ ಉತ್ಪನ್ನಗಳು ಮಾತ್ರ ನಿಮಗೆದುರಾಗುತ್ತವೆ. ಆದರೆ ಒಂದು ವೇಳೆ ಮೊಬೈಲ್‌ ಫೋನೊಂದರ ಬೆಲೆ 5001 ರೂಪಾಯಿಯಿದ್ದರೆ? ಅದು ನಿಮ್ಮಿಂದ ತಪ್ಪಿಸಿಕೊಂಡುಬಿಡುತ್ತದಲ್ಲ? ಅದಕ್ಕೇ ಅದನ್ನು 4,999 ರೂಪಾಯಿಗೆ ಇಳಿಸುತ್ತಾರೆ ಎನ್ನಲಾಗುತ್ತದೆ. 

99 ರೂಪಾಯಿ ನಾಣ್ಯ!
2005ನೇ ಇಸವಿಯಲ್ಲಿ ಯುನೈಟೆಡ್‌ ಕಿಂಗ್ಡಮ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಮಾನ್‌ಸ್ಟರ್‌ ರೇವಿಂಗ್‌ ಲೂನಿ ಪಾರ್ಟಿ, ತಾನು ಅಧಿಕಾರಕ್ಕೆ ಬಂದರೆ 99 ಪೆನ್ಸ್‌ ಮೌಲ್ಯದ ಕಾಯಿನ್‌ ಅನ್ನು ಅಸ್ತಿತ್ವಕ್ಕೆ ತರುವುದಾಗಿ ಭರವಸೆ ನೀಡಿತ್ತು. ಅಂದರೆ 1 ಪೆನ್ಸ್‌ ಹೇಗೆ ಕಪ್ಪು ಹಣವಾಗುತ್ತದೆ ಎನ್ನುವ ಕುರಿತು ಆ ರಾಷ್ಟ್ರಗಳಲ್ಲೂ ಚರ್ಚೆ ಶುರುವಾಗಿದೆ ಎಂದಾಯಿತು. (ನಮ್ಮಲ್ಲೂ ಡಿಮಾನಿಟೈಸೇಷನ್‌ನಂತರ ವಿಧವಿಧ ಮೌಲ್ಯದ ನೋಟುಗಳು ಬರಲಾರಂಭಿಸಿವೆ.ಹೀಗಾಗಿ 99 ರೂಪಾಯಿಯ ನಾಣ್ಯ ಪರಿಚಯಿಸಿದರೆ ಹೇಗಿರುತ್ತದೆ? 599 ರೂಪಾಯಿಯ ಪ್ರಾಡಕ್ಟ್ ಖರೀದಿಸಲು 500 ರೂಪಾಯಿ ನೋಟು ಪ್ಲಸ್‌ 99 ಕಾಯಿನ್‌ ಕೊಟ್ಟರಾಯಿತು.)

ಹೆಚ್ಚು ಬೆಲೆಗೆ ಖರೀದಿಸಿದರು!
ಮೆಸಾಚುಸೆಟ್ಸ್‌ ಇನ್ಸ್‌ಟಿಟ್ಯೂಟ್‌ ಆಫ್ ಟೆಕ್ನಾಲಜಿ ಮತ್ತು ಯೂನಿವರ್ಸಿಟಿ ಆಫ್ ಶಿಕಾಗೋ ಸಮ-ಬೆಸದ ನಿಜ ಶಕ್ತಿಯನ್ನು ತಿಳಿದುಕೊಳ್ಳಲು ಜಂಟಿಯಾಗಿ  ಯೋಗವೊಂದನ್ನು ನಡೆಸಿದವು. ಇದಕ್ಕಾಗಿ ಅವು ಗಾಳವಾಗಿ ಬಳಸಿದ್ದು ಮಹಿಳೆಯರ ಉಡುಗೆಯನ್ನು. ಟ್ಯಾಂಕ್‌ ಟಾಪ್‌
ಒಂದರ ಬೆಲೆಯನ್ನು ಕ್ರಮವಾಗಿ 34 ಡಾಲರ್‌, 39 ಡಾಲರ್‌ ಮತ್ತು 44 ಡಾಲರ್‌ಗೆ ಮಾರಾಟಕ್ಕಿಡಲಾಯಿತು. ಆದಾಗ್ಯೂ 34 ಡಾಲರ್‌ ಅತಿ ಕಡಿಮೆ ಬೆಲೆಯಾದರೂ ಆ ಬಟ್ಟೆ ಹೆಚ್ಚು ಮಾರಾಟವಾಗಿದ್ದು 39 ಡಾಲರ್‌ ಬೆಲೆ ನಿಗದಿಪಡಿಸಿದಾಗ! ( ಗ್ರಾಹಕರ ಮನಸ್ಸು ಸಮಸಂಖ್ಯೆಗಳಾದ 34 ಮತ್ತು 44ಕ್ಕಿಂತ 39ಕ್ಕೇ ಹೆಚ್ಚು ಮಹತ್ವ ಕೊಟ್ಟಿತ್ತು!)

ರಾಘವೇಂದ್ರ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next