Advertisement
ವಿತ್ತ ಸಚಿವ ಅರುಣ್ ಜೇಟ್ಲಿ 2014 ಜುಲೈ 10ರಂದು ತನ್ನ ಚೊಚ್ಚಲ ಬಜೆಟ್ ಅನ್ನು ಮೋದಿ ಸರಕಾರ ಬಂದಾಗ ಮಂಡಿಸಿದರು. ಒಂದು ಲೆಕ್ಕದಲ್ಲಿ ಮುಂದಿನ ಫೆಬ್ರವರಿ 1ರಂದು ಮಂಡಿಸುವ ಈ ಮಧ್ಯಂತರ ಬಜೆಟ್ ಐದು ವರ್ಷಗಳ ಅವಧಿಯಲ್ಲಿ ಅವರ ಆರನೇ ಬಜೆಟ್ ಆಗಲಿದೆ. ಬಜೆಟ್ ಮಂಡನೆ ದಿನ, ವಿತ್ತ ಮಂತ್ರಿಗಳು ಅನಾರೋಗ್ಯ ನಿಮಿತ್ತ ಬರಲಾಗದಿದ್ದರೆ, ಅವರ ಗೈರು ಹಾಜರಿಯಲ್ಲಿ ರೈಲ್ವೇ ಮಂತ್ರಿಗಳಾದ ಪಿಯೂಷ್ ಗೋಯಲ್ ಆಯವ್ಯಯ ಮಂಡಿಸಲಿದ್ದಾರೆ ಎಂಬ ಸುದ್ದಿಯೂ ಇದೆ. ಸದ್ಯ ಎಲ್ಲಾ ತಯಾರಿಯನ್ನು ಜೇಟ್ಲಿ ಮಾಡಿರುವುದರಿಂದ ಅದು ಜೇಟ್ಲಿಯವರ ಬಜೆಟ್ ಎನ್ನುವುದಕ್ಕೆ ಅಡ್ಡಿ ಇಲ್ಲ.
Related Articles
Advertisement
ಜನತೆಯನ್ನು ಓಲೈಸಬಹುದೆ?ಪ್ರತಿ ವರ್ಷ ಕೇಂದ್ರ ಹಾಗೂ ರಾಜ್ಯ ಸರಕಾರ ಬಜೆಟ್ ಮಂಡಿಸುವಾಗ ಜನತೆಗೆ ಒಂದು ಆಸೆ ಇರುತ್ತದೆ. ಸರಕಾರ ನಮಗೇನು ಕೊಡುತ್ತದೆ, ಏನು ಜನ ಕಲ್ಯಾಣ ಮಾಡುತ್ತದೆ ಎಂದು. ಚುನಾವಣೆಯ ಹೊಸ್ತಿಲಲ್ಲಿರುವ ಸರಕಾರಕ್ಕೆ ಈ ಮಧ್ಯಂತರ ಬಜೆಟ್ ಜನರಿಗೆ ಖುಷಿ ತಂದರೇನೆ ಚುನಾವಣೆ ಗೆಲ್ಲಲು ಹೆಚ್ಚು ಅನುಕೂಲ. ಈಗಾಗಲೇ ನೋಟ್ ಬ್ಯಾನ್, ಜಿ.ಎಸ್.ಟಿ. ಆರ್.ಬಿ.ಐ. ಗುದ್ದಾಟದ ಬಗ್ಗೆ ಸಾರ್ವಜನಿಕ ಟೀಕೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ವಿತ್ತ ಮಂತ್ರಿಗಳು ಜನಸಾಮಾನ್ಯನ ದಿನಬಳಕೆ ವಸ್ತುಗಳಿಗೆ ತೆರಿಗೆ ಏರಿಸಬಾರದು. ಟೆಲಿಫೋನ್ ಬಿಲ್, ವಿಮೆ ಕಂತು, ಹೊಟೇಲ್ ತಿಂಡಿ, ಊಟಕ್ಕೂ ಸರಕು ಸೇವಾ ತೆರಿಗೆ ಹಾಕುವುದು ಇದು ತೆರಿಗೆ ಪರಿಕ್ರಮಗಳೇ ಅಲ್ಲ. ತುಂಬಾ ತೆರಿಗೆ ಕಳ್ಳತನ, ದುರುಪಯೋಗ ಆಗುತ್ತಿದೆ. ಕೆಲವು ಖಾಸಗಿ ವ್ಯಾಪಾರ ಕ್ಷೇತ್ರಗಳಲ್ಲಿ ತೆರಿಗೆ ಇಲ್ಲದಿದ್ದರೂ, ತೆರಿಗೆ ಇದೆಯೆಂದು ತೆರಿಗೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿದೆ. ಹಾಗೆಯೇ ಜನಾಕರ್ಷಕ ಇನ್ನೊಂದು ವಿಷಯ ನೇರ ತೆರಿಗೆಯಾದ ಇನ್‌ಕಮ್ ಟ್ಯಾಕ್ಸ್. ಕಳೆದ ಬಜೆಟ್‌ನಲ್ಲಿಯೇ ಆದಾಯ ಮಿತಿಯನ್ನು 5 ಲಕ್ಷಕ್ಕೆ ಏರಿಸುತ್ತಾರೆ ಎಂಬ ಸುದ್ದಿ ಇತ್ತು. ಕೊನೆಗೆ ಸ್ಟಾಂಡರ್ಡ್ ಡಿಡಕ್ಷನ್ ಕೊಟ್ಟು, ಸ್ಲಾಬ್ ಹಾಗೆಯೇ ಉಳಿಸಿಕೊಂಡಿರುವ ವಿತ್ತಮಂತ್ರಿಗಳು ಈ ಸಲ ಇದು ರೂಪಾ 3.5 ಲಕ್ಷಕ್ಕೆ ಏರಿಕೆಯಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಮಧ್ಯಮ ವರ್ಗದವರನ್ನು ತಟ್ಟುವ ಈ ತೆರಿಗೆ ಮಿತಿಯನ್ನು ಎಷ್ಟು ಇಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಹಿಂದೆಲ್ಲಾ ಜೇಟ್ಲಿಯವರು ಹೊಸ ಸಂಪ್ರದಾಯ ತುಳಿದಿದ್ದಾರೆ. ರೈಲ್ವೇ ಬಜೆಟ್ ಮತ್ತು ವಿತ್ತ ಬಜೆಟ್ ಒಟ್ಟಿಗೆ ಮಾಡಿ ಫೆಬ್ರವರಿ 28ರ ಬದಲು ಫೆಬ್ರವರಿ 1ರಂದು ಮಂಡಿಸುವ ಸಂಪ್ರದಾಯ ಪ್ರಾರಂಭಿಸಿದ್ದಾರೆ. ಪರೋಕ್ಷ ತೆರಿಗೆಯನ್ನು ಬಜೆಟ್ ವ್ಯಾಪ್ತಿಯಿಂದ ಹೊರಗೆ ತಂದಿದ್ದಾರೆ. ಪ್ರತಿ ವರ್ಷದಂತೆ ನಡೆಯುವ ಬಜೆಟ್ ಪೂರ್ವ ಸಮಾಲೋಚನೆ, ಆರ್ಥಿಕ ತಜ್ಞರು, ಉದ್ದಿಮೆ ವ್ಯಾಪಾರಸ್ಥರು, ಕೃಷಿ ತಜ್ಞರು, ಬ್ಯಾಂಕಿಂಗ್ ಹಾಗೂ ಟ್ರೇಡ್ ಯೂನಿಯನ್‌ಗಳೊಡನೆ ಸಂವಾದ ಈ ಸಲ ನಡೆದಿಲ್ಲ. ಇದು ಒಂದು ಹೊಸ ಟ್ರೆಂಡ್. ಅರುಣ್ ಜೇಟ್ಲಿ ಟ್ರೆಂಡ್ ಆಗಲಿದೆ. ಹಾಗೆಯೇ ಇನ್ನೊಂದು ಸುದ್ದಿ ಹರಿದಾಡುತ್ತಿದೆ. ಮುಂದಿನ ಸಾರ್ವತ್ರಿಕ ಚುನಾವಣೆ ಗಮನದಲ್ಲಿಟ್ಟುಕೊಂಡು ರೈತರಿಗೆ ಖುಷಿ ತರಲು ರಾಷ್ಟ್ರೀಕೃತ ಬ್ಯಾಂಕಿನ ಕೃಷಿ ಸಾಲ ಮನ್ನಾ ಮಾಡುವುದು. ಪೂರಾ ಅಲ್ಲದಿದ್ದರೂ, ಬಡ್ಡಿ ಮನ್ನಾದಂತಹ ಕ್ರಮಕ್ಕೆ ಕೇಂದ್ರ ಸರಕಾರ ಮುಂದಾಗುವ ಸಾಧ್ಯತೆ ಕೇಳಿಬರುತ್ತಿದೆ. ಒಂದೊಮ್ಮೆ ಹೌದಾದರೆ ಇದುವೇ ಸಂಪನ್ಮೂಲ ಕ್ರೂಢೀಕರಣಕ್ಕೆ ದೊಡ್ಡ ಸಮಸ್ಯೆಯಾಗಲಿದೆ. ವಿತ್ತೀಯ ಕೊರತೆ ಮುಂದಿನ ಸರಕಾರದ ಹೆಗಲ ಮೇಲೆ ಹೋಗಲಿದೆ. ಹೊಸ ಸರಕಾರ ಮುಂದಿನ ಪೂರ್ಣ ಬಜೆಟ್‌ನಲ್ಲಿ ಇದನ್ನು ಸರಿಪಡಿಸುವುದು ಅನಿವಾರ್ಯವಾಗಲಿದೆ. ಇದರೊಟ್ಟಿಗೆ ಕಂದಾಯ ಕೊರತೆಯ ಮೇಲೆ ಈ ಮಧ್ಯಂತರ ಬಜೆಟ್ ಕಣ್ಣಿಟ್ಟುಕೊಂಡೆ ಮಂಡಿಸಬೇಕಾಗಿದೆ. ಆರ್ಥಿಕ ಪ್ರಗತಿ
ಮೋದಿ ಸರಕಾರ ಮುಂಬರುವ ಸಾರ್ವತ್ರಿಕ ಚುನಾವಣೆ ಗಮನದಲ್ಲಿಟ್ಟುಕೊಂಡು ದೂರಗಾಮಿತ್ವದ ಜನಪರ ಕಾರ್ಯಕ್ರಮವಿರುವ ಮತ್ತು ದೇಶದ ಅರ್ಥವ್ಯವಸ್ಥೆ ಬಲಪಡಿಸುವ ಮಧ್ಯಂತರ ಬಜೆಟ್ ಮಂಡಿಸಬೇಕಾಗಿದೆ. ದೇಶದಲ್ಲಿ ಹೂಡಿಕೆಯ ಮತ್ತು ವಿದೇಶಿ ವಿನಿಮಯ ಸಂಗ್ರಹ ಹೆಚ್ಚಿಸುವ ಅರ್ಥ ವ್ಯವಸ್ಥೆ ಬೇಕು. ಜಿ.ಎಸ್.ಟಿ.ಯಲ್ಲಿ ಇನ್ನು ಕೆಲವು ತೆರಿಗೆ ಇಳಿಸಬೇಕು. ಬೆಳೆ ವಿಮೆ, ರೈತರ ಸಬ್ಸಿಡಿ, ರಸಗೊಬ್ಬರ ಮತ್ತು ಆರೋಗ್ಯ ಇವುಗಳ ಬಗ್ಗೆ ಸೂಕ್ತ ತಿಳಿವಳಿಕೆ ಜನರಿಗೆ ನೀಡಬೇಕು.ವಿತ್ತೀಯ ಕೊರತೆ ಪರಿಕಲ್ಪನೆ ಅಗತ್ಯ. ಎಲ್ಲಾ ಆದಾಯ ಮತ್ತು ವೆಚ್ಚದ ಅಂತರವೇ ಈ ವಿತ್ತೀಯ ಕೊರತೆ. ಇದು ಹೆಚ್ಚೆಂದರೆ ಬಜೆಟ್‌ನ ಶೇಕಡಾ 3ಕ್ಕಿಂತ ಹೆಚ್ಚಿರಬಾರದು. ಕಳೆದ ಬಜೆಟ್‌ನಲ್ಲಿಯೇ ಇದು ಹೆಚ್ಚಾಗಿದೆ. ದೇಶದ ಆರ್ಥಿಕ ಬೆಳವಣಿಗೆ, ಕೃಷಿ ಮತ್ತು ಉತ್ಪಾದನಾ ವಲಯದ ಸುಧಾರಣೆಯಿಂದ ಶೇ. 7.2ಗೆ ಏರಲಿದೆ. ಆದರೆ ಇದರ ನಿಜ ಸ್ಥಿತಿ ಮಾರ್ಚ್ ನಂತರವೇ ಗೊತ್ತಾಗಬಹುದು.ವಿತ್ತೀಯ ಕೊರತೆ ಜಾಸ್ತಿ ಆದರೆ, ಜಿ.ಡಿ.ಪಿ. ಮತ್ತೆ ಕುಸಿಯಲಿದೆ. ಅಂತೂ ಈ ಸಲದ ಬಜೆಟ್ ಚಾಕಚಕ್ಯತೆಯ ಓಲೈಸುವ ಕಭಿ ಖುಶ್ ಯಾ ಕಭಿ ಗಮ್ ಆಯವ್ಯಯ ಆಗುತ್ತಾ ಕಾದು ನೋಡಬೇಕಾಗಿದೆ. ನಾಗ ಶಿರೂರು