ನವದೆಹಲಿ:ಮಾಜಿ ಪ್ರಧಾನಿ, ಕಾಂಗ್ರೆಸ್ ಹಿರಿಯ ಮುಖಂಡ ಮನಮೋಹನ್ ಸಿಂಗ್ ಅವರಿಗೆ ನೀಡಿದ್ದ ವಿಶೇಷ ಭದ್ರತಾ ವ್ಯವಸ್ಥೆ(ಎಸ್ ಪಿಜಿ)ಯನ್ನು ಕೇಂದ್ರ ಸರಕಾರ ವಾಪಸ್ ಪಡೆದಿದ್ದು, ಝಡ್ ಪ್ಲಸ್ ಭದ್ರತೆಯನ್ನು ಮುಂದುವರಿಸುವುದಾಗಿ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಎಸ್ ಪಿಜಿ ಅಂದರೆ ಏನು? ಹಾಲಿ ಮತ್ತು ಮಾಜಿ ಪ್ರಧಾನಿಗಳಿಗೆ ಈ ಭದ್ರತೆ ಯಾವಾಗಿನಿಂದ ಕೊಡಲು ಆರಂಭಿಸಲಾಗಿತ್ತು ಎಂಬಿತ್ಯಾದಿ ಕಿರು ಚಿತ್ರಣ ಇಲ್ಲಿದೆ.
ಇಂದಿರಾ, ರಾಜೀವ್ ಹತ್ಯೆ ಬಳಿಕ ಎಸ್ ಪಿಜಿ ಜಾರಿಯಾಗಿತ್ತು:
1984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಅಂಗರಕ್ಷಕರೇ ಗುಂಡು ಹಾರಿಸಿ ಹತ್ಯೆಗೈದಿದ್ದರು. ಆ ಬಳಿಕ 1985ರಲ್ಲಿ ಹಾಲಿ ಪ್ರಧಾನಿಗೆ ಮತ್ತು ಮಾಜಿ ಪ್ರಧಾನ ಮಂತ್ರಿಗಳಿಗೆ ಮತ್ತು ಅವರ ನಿಕಟ ಕುಟುಂಬಕ್ಕೆ ಎಸ್ ಪಿಜಿ ಭದ್ರತೆ ಕೊಡುವ ವ್ಯವಸ್ಥೆ ಜಾರಿಯಾಗಿತ್ತು. ನಂತರ ತಮಿಳುನಾಡಿನ ಶ್ರೀಪೆರುಂಬುದೂರಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಎಲ್ ಟಿಟಿಇ ಆತ್ಮಹತ್ಯಾ ಬಾಂಬ್ ದಾಳಿ ಮೂಲಕ ಹತ್ಯೆಗೈದ ನಂತರ ಎಸ್ ಪಿಜಿ ಭದ್ರತೆಯಲ್ಲಿ ಮತ್ತಷ್ಟು ಬದಲಾವಣೆ ಮಾಡಲಾಗಿತ್ತು.
ಎಸ್ ಪಿಜಿ(ಸ್ಪೆಶಲ್ ಪ್ರೊಟೆಕ್ಷನ್ ಗ್ರೂಪ್ ಆ್ಯಕ್ಟ್) 1988:
ಎಸ್ ಪಿಜಿ ಕಾಯ್ದೆ 1988ರ ಪ್ರಕಾರ ಕೇಂದ್ರ ಸರಕಾರ ಸಂವಿಧಾನಾತ್ಮಕ ಹಾಗೂ ಶಸ್ತ್ರಾಸ್ತ್ರ ಪಡೆ ನಿಯಮಾನುಸಾರ ಹಾಲಿ ಪ್ರಧಾನಿಗೆ ಮತ್ತು ಮಾಜಿ ಪ್ರಧಾನಿ ಹಾಗೂ ಕುಟುಂಬ ವರ್ಗಕ್ಕೆ ತೀರಾ ನಿಕಟ ರಕ್ಷಣಾ ಭದ್ರತೆಯನ್ನು ನೀಡುತ್ತದೆ.
ಭದ್ರತೆಯಲ್ಲಿ ಎಷ್ಟು ವಿಧ, ಯಾರಿಗೆಲ್ಲ ಭದ್ರತೆ ಸೌಲಭ್ಯ ಇದೆ?
ಎಸ್ ಪಿಜಿ ನಂತರ ನಾಲ್ಕು ಹಂತದ ಭದ್ರತಾ ಶ್ರೇಣಿಯನ್ನು ವರ್ಗಿಕರಿಸಲಾಗಿದೆ. ಝಡ್ ಪ್ಲಸ್, ಝಡ್, ವೈ ಮತ್ತು ಎಕ್ಸ್ ಭದ್ರತೆ ಇದೆ. ಇದರಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರು, ಭಾರತೀಯ ಸೇನೆಯ ಸೇನಾಧಿಕಾರಿಗಳು, ರಾಜ್ಯದ ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಕ್ಯಾಬಿನೆಟ್ ಸಚಿವರು ಸೇರಿದ್ದಾರೆ.
ಎಸ್ ಪಿಜಿ ಭದ್ರತೆ: ಹಾಲಿ ಪ್ರಧಾನಿ(ನರೇಂದ್ರ ಮೋದಿ)ಗೆ ಎಸ್ ಪಿಜಿ ಭದ್ರತೆ ನೀಡಲಾಗುತ್ತದೆ. ಎಸ್ ಪಿಜಿ ಭದ್ರತೆ ಯಾವ ರೀತಿಯಲ್ಲಿ ಇರಲಿದೆ ಎಂಬ ಮಾಹಿತಿ ಪ್ರಧಾನಿಗೆ ಮಾತ್ರ ನೀಡಲಾಗುತ್ತದೆ. ಇನ್ನುಳಿದಂತೆ ಅದರ ವಿವರ ಬಹಿರಂಗಪಡಿಸುವುದಿಲ್ಲ.
ಝಡ್ ಪ್ಲಸ್ ಭದ್ರತೆ: ಇದರಲ್ಲಿ ಒಟ್ಟು 55 ಮಂದಿ ಭದ್ರತಾ ಸಿಬ್ಬಂದಿಗಳಿರುತ್ತಾರೆ. ಪೊಲೀಸ್ ಸೇರಿದಂತೆ 10ಕ್ಕೂ ಅಧಿಕ ಎಸ್ ಎಸ್ ಜಿ ಕಮಾಂಡೋಗಳಿರುತ್ತಾರೆ.
ಝಡ್ ಕೆಟಗರಿ: ಇದರಲ್ಲಿ ಒಟ್ಟು 22 ಮಂದಿ ಸಿಬ್ಬಂದಿಗಳಿದ್ದು, ಪೊಲೀಸ್ ಸೇರಿದಂತೆ ನಾಲ್ಕರಿಂದ ಐದು ಮಂದಿ ಎನ್ ಎಸ್ ಜಿ ಕಮಾಂಡೋಗಳಿರುತ್ತಾರೆ.
ವೈ ಕೆಟಗರಿ: ಇದರಲ್ಲಿ ಪೊಲೀಸ್ ಹಾಗೂ ಇಬ್ಬರು ಎನ್ ಎಸ್ ಜಿ ಕಮಾಂಡೋ ಸೇರಿದಂತೆ ಒಟ್ಟು 11 ಮಂದಿ ಸಿಬ್ಬಂದಿಗಳಿರುತ್ತಾರೆ.
ಎಕ್ಸ್ ಕೆಟಗರಿ: ಇದರಲ್ಲಿ ಎನ್ ಎಸ್ ಜಿ ಕಮಾಂಡೋ ಇರುವುದಿಲ್ಲ. ಶಸ್ತ್ರ ಸಜ್ಜಿತ ಪೊಲೀಸ್ ಸೇರಿದಂತೆ ಇಬ್ಬರು ಭದ್ರತಾ ಸಿಬ್ಬಂದಿಗಳಿರುತ್ತಾರೆ.
ಎಸ್ ಪಿಜಿಗೆ, ಝಡ್ ಪ್ಲಸ್ ಆಯ್ಕೆ :
ಎಸ್ ಪಿಜಿಗೆ ಹಾಗೂ ಝಡ್ ಪ್ಲಸ್ ಭದ್ರತೆ ಆಯ್ಕೆಗೆ ಹಲವು ಮಾನದಂಡಗಳನ್ನು ಅನುಸರಿಸಲಾಗುತ್ತದೆ. ಅವರ ತರಬೇತಿಗೆ ಅನುಸಾರವಾಗಿ ಆಯ್ಕೆ ಮಾಡಲಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಎಸ್ ಪಿಜಿ ಗೆ ಸೇರುವ ಮುನ್ನ ತಾವು ಯಾವುದೇ ವಿಧದಲ್ಲೂ ಟ್ರೇಡ್ ಯೂನಿಯನ್ ಆಗಲಿ, ಲೇಬರ್ ಯೂನಿಯನ್ ಆಗಲಿ, ರಾಜಕೀಯ ಪಕ್ಷಗಳ ಜೊತೆ ಸಂಬಂಧ, ಸದಸ್ಯತ್ವ ಹೊಂದಿಲ್ಲ ಎಂಬ ಬಗ್ಗೆ ದೃಢೀಕರಿಸಬೇಕು. ಸಾಮಾಜಿಕ, ಧಾರ್ಮಿಕ ಸಂಘಟನೆ ಸದಸ್ಯತ್ವ ಹೊಂದಿಲ್ಲ, ಯಾವುದೇ ಮಾಧ್ಯಮದ ಜೊತೆ ಸಂವಹನ, ಸಂಪರ್ಕಕ್ಕೆ ನಿರ್ಬಂಧ, ಯಾವುದೇ ವಿಧದ ಪುಸ್ತಕ ಬರೆಯುವುದು ಕೂಡಾ ನಿಷೇಧ.
ಎನ್ ಎಸ್ ಜಿ ಸದಸ್ಯರು ಯಾವುದೇ ಸಮಾರಂಭದಲ್ಲಿ ಭಾಗವಹಿಸುವುದಾಗಲಿ, ಯಾವುದೇ ಸಭೆ, ಸಮಾರಂಭವನ್ನು ಉದ್ದೇಶಿಸಿ ಸಭೆ ನಡೆಸುವುದು, ಪ್ರತಿಭಟನೆಯಲ್ಲಿ ಕಾಣಿಸಿಕೊಳ್ಳುವುದು ನಿರ್ಬಂಧಿಸಲಾಗಿದೆ.