ವಿಜಯಪುರ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಾರಥ್ಯ ವಹಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಬಜೆಟ್‌ನಲ್ಲಿ ಆಲಮೇಲ ತೋಟಗಾರಿಕೆ ಕಾಲೇಜು ಆರಂಭಿಸುವುದಾಗಿ ಘೋಷಿಸಿದ್ದರು. ಆಲಮೇಲ ಸುತ್ತಲೂ ನೀರಾವರಿ ಹೆಚ್ಚಿದ್ದು, ತೋಟಗಾರಿಕೆ ಬೆಳೆಯುತ್ತಿರುವ ರೈತರಿಗೆ ಅನುಕೂಲವಾಗಲಿ, ಇಲ್ಲಿರುವ ಸರ್ಕಾರದ ಸೌಲಭ್ಯ-ಸಂಪನ್ಮೂಲಗಳ ಸದ್ಬಳಕೆ ಆಗಲಿ ಎಂಬುದಾಗಿತ್ತು.
ಇದಕ್ಕಾಗಿ 2019ರ ಬಜೆಟ್‌ನಲ್ಲಿ ಹಾಸನ ಹಾಗೂ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ತೋಟಗಾರಿಕೆ ಕಾಲೇಜು ಘೋಷಣೆ ಮಾಡಲಾಗಿತ್ತು. ತೋಟಗಾರಿಕೆ ಹೆಚ್ಚು ಬೆಳೆಯುವ ವಿಜಯಪುರ ಜಿಲ್ಲೆಯ ರೈತರು ತಮ್ಮ ಸಮಸ್ಯೆ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಅಲಿಯಬೇಕಿದೆ. ಶಿಕ್ಷಣಕ್ಕಾಗಿ ಜಿಲ್ಲೆಯ ಮಕ್ಕಳು ಬೆಳಗಾವಿ ಜಿಲ್ಲೆಯ ಅರಭಾವಿ, ಉತ್ತರ ಕನ್ನಡ ಜಿಲ್ಲೆಯ ಶಿರಶಿ ಅಂತೆಲ್ಲ ದೂರದ ಕಾಲೇಜನ್ನು ಅವಲಂಬಿಸಬೇಕಿದೆ.
ಈ ಸಮಸ್ಯೆ ನಿವಾರಣೆಗಾಗಿ ಅಂದು ಜಿಲ್ಲಾ ಉಸ್ತುವಾರಿ ಜೊತೆ ತೋಟಗಾರಿಕೆ ಸಚಿವರಾಗಿದ್ದ ಎಂ.ಸಿ.ಮನಗೂಳಿ ಅವರು ತಾವು ಪ್ರತಿನಿಧಿಸುತ್ತಿದ್ದ ಸಿಂದಗಿ ಕ್ಷೇತ್ರ ವ್ಯಾಪ್ತಿಯ ಆಲೇಮಲ ಪಟ್ಟಣದಲ್ಲಿ ಕಾಲೇಜು ಆರಂಭಕ್ಕೆ ಸೂಕ್ತ ಎಂದು ಸ್ಥಳ ನಿಗದಿ ಮಾಡಿದ್ದರು. ಬಳಿಕ ಆಲಮೇಲ ಬದಲಾಗಿ ಈಗಾಗಲೇ ಬಾಗಲಕೋಟೆ ತೋಟಗಾರಿಕೆ ವಿವಿ ಅಧೀನದಲ್ಲಿನ ತಿಡಗುಂದಿ ತೋಟಗಾರಿಕೆ ಸಂಶೋಧನಾ ಕೇಂದ್ರದ ಹೆಸರು ತಳುಕು ಹಾಕಿಕೊಂಡಿತು. ಅಲ್ಲಿಂದ ಆಲಮೇಲ-ತಿಡಗುಂದಿ ತಿಕ್ಕಾಟ ಆರಂಭವಾಗಿ, ಜಿಲ್ಲೆಯಲ್ಲಿ ತೋಟಗಾರಿಕೆ ಕಾಲೇಜು ಆರಂಭಕ್ಕೆ ಕೊಕ್ಕೆ ಬಿತ್ತು. ಆಲಮೇಲ ಪರಿಸರದಲ್ಲಿ ತೋಟಗಾರಿಕೆ ಕಾಲೇಜು ಆರಂಭಿಸುವುದರಿಂದ ಜಿಲ್ಲೆಯ ಕೊಲ್ಹಾರ, ನಿಡಗುಂದಿ ಹೊರತಾಗಿ ಜಿಲ್ಲಾ ಕೇಂದ್ರ ಮಾತ್ರವಲ್ಲ ಇತರೆ ಬಹುತೇಕ ತಾಲೂಕುಗಳಿಗೆ ಕನಿಷ್ಟ ದೂರದಲ್ಲಿದೆ.
ನೆರೆಯ ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ರೈತರು, ವಿದ್ಯಾರ್ಥಿಗಳಿಗೂ ಒಳ ಮಾರ್ಗದಲ್ಲಿ ಆಲಮೇಲ ತ್ವರಿತವಾಗಿ ತಲುಪಲು ಅನುಕೂಲವಾಗಲಿದೆ. ಆಲಮೇಲ ಹೊರ ವಲಯದಲ್ಲಿ ಕಡಣಿ ರಸ್ತೆಯಲ್ಲಿ 2002 ರಲ್ಲಿ ಸ್ಥಾಪನೆಯಾಗಿರುವ ಧಾರವಾಡ ಕೃಷಿ ವಿವಿ ಕೃಷಿ ಸಂಶೋಧನಾ ಕೇಂದ್ರವಿದೆ. ಕೃಷಿ ಇಲಾಖೆಯಿಂದ ಹಸ್ತಾಂತರ ಮಾಡಿಕೊಂಡಿರುವ ಕೃಷಿ ವಿಶ್ವವಿದ್ಯಾಲಯದ ಅಧೀನದಲ್ಲಿ 178.16 ಎಕರೆ ಕರಿಮಣ್ಣಿನ ಫಲವತ್ತಾದ ಜಮೀನಿದೆ. ಸದ್ಯದ ಸ್ಥಿತಿಯಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆಗೆ ಇಷ್ಟೊಂದು ವಿಸ್ತಾರದ ಜಮೀನು ಒಂದೇ ಕಡೆ ಲಭ್ಯವಾಗುವುದು ಕಷ್ಟಸಾಧ್ಯವೂ ಇದೆ. ಸಂಶೋಧನಾ ಕೇಂದ್ರದ ಆಡಳಿತಕ್ಕೆ ಕಟ್ಟಿರುವಸದರಿ ಜಮೀನಿನಲ್ಲಿ ಸದ್ಯ ಮುಂಗಾರು ಹಂಗಾಮಿನಲ್ಲಿ ತೊಗರಿ, ಸೋಯಾ, ಉದ್ದು, ಅಲಸಂದಿ, ಮೆಕ್ಕೇಜೋಳ, ಹಿಂಗಾರು ಹಂಗಾಮಿನಲ್ಲಿ ಜೋಳ, ಕಡಲೆ, ಗೋಧಿ ಬೀಜೋತ್ಪಾದನೆ ಮಾಡಲಾಗುತ್ತದೆ.
ಸಂಶೋಧನಾ ಕೇಂದ್ರದಲ್ಲಿ ಹಳೆಯದಾದ ಒಂದು ಸಣ್ಣ ಕಚೇರಿ, ಸಿಬ್ಬಂದಿ ವಸತಿ ಗೃಹವಿದ್ದರೂ ದುಸ್ಥಿತಿಯಲ್ಲಿವೆ. ಒಂದು ಗೋದಾಮು ಇದೆ. 4 ಎತ್ತುಗಳಿವೆ, ಅವುಗನ್ನು ಕಟ್ಟಲು ಒಂದು ದನದ ಕೊಟ್ಟಿಗೆ ಇದೆ, 1 ಟ್ಯಾಕ್ಟರ್ ಇದೆ. ಮೂರು ಕೊಳವೆ ಬಾವಿಗಳಿದ್ದು, 5 ಅಶ್ವಶಕ್ತಿಯ ಎರಡು ಹಾಗೂ 7 ಅಶ್ವಶಕ್ತಿಯ ಒಂದು ಮೋಟಾರು ಅಳವಡಿಸಲಾಗಿದೆ. ಇದಲ್ಲದೇ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಯೋಜನೆಯಿಂದ ಹೊಲಗಾಲುವೆ ಮೂಲಕ ನೀರು ಪಡೆಯುವ ಅವಕಾಶವಿದೆ. ಇಷ್ಟೆಲ್ಲವನ್ನು ನೋಡಿಕೊಳ್ಳಲು ಓರ್ವ ಕ್ಷೇತ್ರ ಅಧೀಕ್ಷಕ, ಓರ್ವ ಕ್ಷೇತ್ರ ಸಹಾಯಕ, ಮೂವರು ಸಿಬ್ಬಂದಿ ಮಾತ್ರ ಇದ್ದು, ಇದ್ದವರು ಕೂಡ ನಿವೃತ್ತರಾಗಿದ್ದಾರೆ. ಪರಿಣಾಮ ಸ್ಥಳೀಯ ಸಿಬ್ಬಂದಿ-ಕಾರ್ಮಿಕರನ್ನು ದಿನಗಳೂಲಿ ಆಧಾರದಲ್ಲಿ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. ಎಲ್ಲ ಇರುವ ಕಡೆಗಳಲ್ಲೇ ಅಭಿವೃದ್ಧಿ ಮಾಡಿದರೆ, ಅಭಿವೃದ್ಧಿ ಹೀನ ಪರಿಸರ ಮುಂದುವರೆಯುವುದು ಯಾವಾಗ? ಬೇರೆಡೆ ಎಲ್ಲ ಸೌಲಭ್ಯ, ಸಂಪನ್ಮೂಲ ಇದೆ ಎಂದಾದರೆ ಅಲ್ಲಿ ಅಭಿವೃದ್ಧಿ ಆಗಿಲ್ಲ ಎಂದೇ ಹಿಂದೆಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದಾಗಿ ಅಲ್ಲೀಗ ಅಭಿವೃದ್ಧಿ ಆಗಿದೆ ಎಂದು ಹೇಳಲು ಸಾಧ್ಯವಿದೆ.
ಇಷ್ಟೆಲ್ಲದರ ಮಧ್ಯೆ ಆಲಮೇಲ ಕೃಷಿ ಸಂಶೋಧನಾ ಕೇಂದ್ರ ನಿರೀಕ್ಷಿತ ಪ್ರಮಾಣದಲ್ಲಿ ಮೂಲಭೂತ ಸೌಲಭ್ಯ ಹೊಂದಿಲ್ಲ ಎಂದಾದರೆ 178.16 ಎಕರೆ ವಿಸ್ತಾರದ ನೆಲೆಯಲ್ಲಿ ಹೊಸದಾಗಿ ಸಂಪನ್ಮೂಲ ಸೃಷ್ಟಿಸುವುದು ಅಸಾಧ್ಯವೇನಲ್ಲ. ಆಲಮೇಲ ನೂತನ ತಾಲೂಕ ಕೇಂದ್ರವಾಗಿದ್ದು, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ದೊರೆಯಲಿದೆ. ಜಿಲ್ಲೆಯ ಕೊನೆಯಲ್ಲಿರುವ ಈ ಪ್ರದೇಶದ ಅಭಿವೃದ್ದಿಗೆ ತೋಟಗಾರಿಕೆ ಕಾಲೇಜು ಹೆಚ್ಚು ನೆರವು ನೀಡಲಿದೆ. ಇದೇ ಹಂತದಲ್ಲಿ ತೋಟಗಾರಿಕೆ ಕಾಲೇಜು ಆರಂಭಕ್ಕೂ ಚುರುಕು ನೀಡಿದರೆ ಭೀಮಾ ತೀರದ ರೈತರಿಗೆ ಕೃಷಿ ಜೊತೆಗೆ ತೋಟಗಾರಿಕೆ ಕ್ಷೇತ್ರ ವಿಸ್ತಾರಕ್ಕೆ ಸಹಕಾರಿ ಆಗಲಿದೆ. ಆರಂಭದಿಂದ ತೋಟಗಾರಿಕೆ ಬೆಳೆಯಲು ಹೆಚ್ಚಿನ ಪ್ರೋತ್ಸಾಹ, ಪ್ರೇರಣೆ ನೀಸಲು ಸಹಕಾರಿ ಆಗಲಿದೆ ಎಂಬುದು ಆಲಮೇಲ ಭಾಗದ ಜನರ ಆಗ್ರಹ.
ಆಲಮೇಲ ತೋಟಗಾರಿಕೆ ಕಾಲೇಜು ಆರಂಭಕ್ಕೆ ಸಂಸದ ರಮೇಶ ಜಿಗಜಿಣಗಿ ತಿಡಗುಂದಿ ಹೆಸರು ಪ್ರಸ್ತಾಪಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ಕೊಕ್ಕೆ ಹಾಕುವಲ್ಲಿ ರಾಜಕೀಯವಾಗಿ ಕಾಣದ ಕೈಗಳು ಕೆಲಸ ಮಾಡಿವೆ. ನಮ್ಮ ಭಾಕ್ಕೆ ದಕ್ಕಿರುವ ದೊಡ್ಡ ಯೋಜನೆಯೊಂದು ಕೈತಪ್ಪುವಂತೆ ಮಾಡಿದ್ದು, ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ತಾರತಮ್ಯ ಮಾಡುವುದು ಸಲ್ಲದ ಕ್ರಮ.
-ಅಶೋಕ ಮನಗೂಳಿ ಕಾಂಗ್ರೆಸ್ ಮುಖಂಡರು, ಸಿಂದಗಿ
-ಎಸ್. ಕಮತರ