Advertisement

ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೌನವೇಕೆ? ಎಚ್‌ಡಿಕೆ

06:20 AM Dec 23, 2017 | |

ಬೆಂಗಳೂರು:ಮಹದಾಯಿ ವಿಚಾರದಲ್ಲಿ ಪ್ರಧಾನಿ ನರೇಂದ್ರಮೋದಿ ಯಾಕೆ ಬಾಯಿ ಬಿಡುತ್ತಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Advertisement

ಮಹದಾಯಿ ನೀರು ಅಮಿತ್‌ ಶಾ, ಮನೋಹರ ಪರಿಕ್ಕರ್‌, ಯಡಿಯುರಪ್ಪನವರ ಆಸ್ತಿಯಲ್ಲ. ರಾಜ್ಯದ ಜನತೆಯ ನ್ಯಾಯಯುತ ಪಾಲು. ಒಕ್ಕೂಟ ವ್ಯವಸ್ಥೆಯಲ್ಲಿ ಅದನ್ನು ಕೊಡಿಸಬೇಕಾದುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹದಾಯಿ ನೀರು ರಾಜ್ಯಕ್ಕೆ ಹರಿಯಬೇಕಾದರೆ ನಿರ್ಧಾರ ಕೈಗೊಳ್ಳಬೇಕಾಗಿರುವುದು ಈ ದೇಶದ ಪ್ರಧಾನಮಂತ್ರಿ. ಇದುವರೆಗೂ ಅವರು ಯಾಕೆ ಆ ವಿಚಾರದಲ್ಲಿ ಮೌನ ವಹಿಸಿದ್ದಾರೆ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ಮನೋಹರ ಪರಿಕ್ಕರ್‌ ಪತ್ರ ಬರೆದಿದ್ದು ಇದೊಂದು ನಾಟಕ. ಇದೇ ಪರಿಕ್ಕರ್‌ ಹಿಂದೆ ಪ್ರಧಾನಿಯಾಗಿದ್ದ ವಾಜಪೇಯಿ ಅವರು ಮಹದಾಯಿ ತಿರುವು ಯೋಜನೆಗೆ ಒಪ್ಪಿಗೆ ಕೊಟ್ಟಿದ್ದಾಗ ಒಂದೇ ಒಂದೇ ಹನಿ ನೀರು ಕರ್ನಾಟಕಕ್ಕೆ ಬಿಡುವುದಿಲ್ಲ ಎಂದು ಹಠ ಹಿಡಿದು ಬಹಿರಂಗವಾಗಿ ಹೇಳಿಕೆ ನೀಡಿದ್ದರು ಎಂದು ದೂರಿದರು.

ರಾಜ್ಯ ಸರ್ಕಾರದ ಬಗ್ಗೆ ವಿಶ್ವಾಸವಿಲ್ಲ ಎಂಬ ಪರಿಕ್ಕರ್‌ ಹೇಳಿಕೆ ಬಗ್ಗೆ ಗರಂ ಆದ ಕುಮಾರಸ್ವಾಮಿ, ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ಅವರ್ಯಾರು.  ಆಯಾ ಸಂದರ್ಭಗಳಲ್ಲಿ ಮುಖ್ಯಮಂತ್ರಿಗಳು ಹದಿನೈದು ಪತ್ರ ಬರೆದಿದ್ದರೂ ಸ್ಪಂದಿಸದ ಇವರು ಯಡಿಯೂರಪ್ಪನ ಪತ್ರಕ್ಕೆ ಒಂದೇ ದಿನದಲ್ಲಿ ಸ್ಪಂದಿಸಿದ್ದಾರೆ. ಅದೂ ಮಾತುಕತೆಗೆ ಸಿದ್ಧ ಎಂದು ಮಾತ್ರ. ಇದರಿಂದ ನೀರು ಬರುತ್ತಾ? ಜನರನ್ನು ತಪ್ಪು ದಾರಿಗೆ ಎಳೆಯುವುದು ಬೇಡ. ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ಜ.5 ರಿಂದ ಯಾತ್ರೆ
ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷ ಸಂಘಟನೆಗಾಗಿ ಜ.5 ರಿಂದ 25 ದಿನಗಳ ಕಾಲ ನಿರಂತರವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡಲಿದ್ದೇನೆ. ಬಿಜೆಪಿಯ ಪರಿವರ್ತನಾ ರ್ಯಾಲಿ, ಕಾಂಗ್ರೆಸ್‌ನ ಸಾಧನಾ ಸಂಭ್ರಮದ ಹಾರಾಟ-ಹೋರಾಟ ಎಲ್ಲವೂ ಮುಗಿದ ಮೇಲೆ ನಾನು ಹೋಗುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ಕೊಡುಗೆ ಈ ರಾಜ್ಯಕ್ಕೆ ಏನು ಎಂಬುದನ್ನು ಅಲ್ಲಿನ ಜನತೆಗೆ ವಿವರಿಸುತ್ತೇನೆ. ಎರಡೂ ರಾಷ್ಟ್ರೀಯ ಪಕ್ಷಗಳ ಬಂಡವಾಳ ಬಿಚ್ಚಿಟ್ಟು ಬರ್ತೇನೆ ಎಂದು ತಿಳಿಸಿದರು.

ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ನಾವು ನಾಲ್ವರು ಕಾರಣ ಎಂಬ ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆಗ ನಮ್ಮ ಪಕ್ಷದ 58 ಶಾಸಕರಲ್ಲಿ 8 ಮಂದಿ ಸಿದ್ದರಾಮಯ್ಯ ಜತೆ ಹೋಗಿದ್ದರು. ಉಳಿದವರಲ್ಲಿ 39 ಶಾಸಕರು ನನ್ನನ್ನು ಬೆಂಬಲಿಸಿದ್ದರು. ಜತೆಗೆ ಬಿಜೆಪಿ ಬೆಂಬಲ ನೀಡಿದ್ದರಿಂದ ಮುಖ್ಯಮಂತ್ರಿಯಾದೆ. ಇವರು ನಾಲ್ವರಿಂದ ಆಗಲಿಲ್ಲ. ನಾವು ಸರ್ಕಾರ ರಚಿಸಿದ್ದರಿಂದ  ಇವರೂ ಅಧಿಕಾರ ಅನುಭವಿಸಿದರು ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next