Advertisement
ಭಾರತದಲ್ಲೂ ಕೋವಿಡ್ 19 ವೈರಸ್ ನಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡುತ್ತಿರುವ ಸುದ್ದಿ ಸದ್ದು ಮಾಡುತ್ತಿರುವ ವೇಳೆಯಲ್ಲೇ, ಈ ಚಿಕಿತ್ಸೆ ನಿಜಕ್ಕೂ ಪರಿಣಾಮಕಾರಿಯೇ ಎನ್ನುವ ಪ್ರಶ್ನೆ ಏಳುತ್ತಿದೆ.
Related Articles
ನಮ್ಮ ದೇಹದ ಮೇಲೆ ಹೊರಗಿನ ವೈರಸ್ಸು ಅಥವಾ ಬ್ಯಾಕ್ಟೀರಿಯಾಗಳು ದಾಳಿ ಮಾಡಿದಾಗ, ನಮ್ಮ ರೋಗ ನಿರೋಧಕ ವ್ಯವಸ್ಥೆಯು ಅವುಗಳನ್ನು ಮಟ್ಟ ಹಾಕಲು ಕೆಲವು ಪ್ರೋಟೀನುಗಳನ್ನು ಬಿಡುಗಡೆ ಮಾಡುತ್ತದೆ. ಈ ಪ್ರೋಟೀನನ್ನೇ ನಾವು ಆ್ಯಂಟಿಬಾಡಿ (ಪ್ರತಿಕಾಯ) ಎನ್ನುತ್ತೇವೆ. ವ್ಯಕ್ತಿಯ ದೇಹದಲ್ಲಿ ಅಗತ್ಯ ಪ್ರಮಾಣದಲ್ಲಿ ಆ್ಯಂಟಿ ಬಾಡಿಗಳು ಉತ್ಪನ್ನವಾದರೆ ಆತ ಬೇಗನೇ ಚೇತರಿಸಿಕೊಳ್ಳುತ್ತಾನೆ.
Advertisement
ಆದರೆ, ಕೆಲವರ ರೋಗನಿರೋಧಕ ಶಕ್ತಿ ಕುಂಠಿತವಾಗಿ ಅವರ ದೇಹದಲ್ಲಿ ಅಗತ್ಯ ಪ್ರಮಾಣದಲ್ಲಿ ಆ್ಯಂಟಿ ಬಾಡಿ ಉತ್ಪತ್ತಿ ಆಗದೇ ಇರಬಹುದು. ಆಗ, ಚೇತರಿಸಿಕೊಂಡ ವ್ಯಕ್ತಿಯ ದೇಹದಲ್ಲಿನ ಆ್ಯಂಟಿಬಾಡಿಗಳನ್ನು ತೀವ್ರ ಅಸ್ವಸ್ಥವಾಗಿರುವ ಅಥವಾ ರೋಗ ಸಂಭಾವ್ಯತೆ ಅಧಿಕವಿರುವರಿಗೆ ಕೊಡಲಾಗುತ್ತದೆ. ಇದರಿಂದಾಗಿ, ಆ್ಯಂಟಿಬಾಡಿ ದಾನ ಪಡೆದವರ ರೋಗನಿರೋಧಕ ವ್ಯವಸ್ಥೆಗೆ ಬಲ ದೊರೆಯುತ್ತದೆ. ಈ ಆ್ಯಂಟಿಬಾಡಿಗಳು ‘ಪ್ಲಾಸ್ಮಾ’ ಎನ್ನುವ ನಮ್ಮ ರಕ್ತದ ದ್ರವ ಭಾಗದಲ್ಲಿ ಇರುತ್ತವೆ. ರಕ್ತದಿಂದ ಬಿಳಿ ರಕ್ತ ಕಣ, ಕೆಂಪು ರಕ್ತಕಣ ಹಾಗೂ ಪ್ಲೇಟ್ ಲೆಟ್‌ಗಳನ್ನು ಪ್ರತ್ಯೇಕಿಸಿದಾಗ ಪ್ಲಾಸ್ಮಾ ದೊರೆಯುತ್ತದೆ.
ಈ ರೀತಿಯ ಚಿಕಿತ್ಸಾ ವಿಧಾನ ಹಿಂದೆಯೂ ಇತ್ತೇ?1890ರಲ್ಲಿ ಜರ್ಮನಿಯ ವೈದ್ಯ ಎಮಿಲ್ ವಾನ್ ಬೆಹ್ರಿಂಗ್ ಇದೇ ರೀತಿಯ ಚಿಕಿತ್ಸೆಯನ್ನು ಮೊದಲು ಪ್ರಯೋಗಿಸಿದ್ದರು. ಡಿಫ್ತೀರಿಯಾದಿಂದ ಬಳಲುತ್ತಿದ್ದ ಮೊಲವೊಂದರ ಸೀರಂನ್ನು (ರಕ್ತಸಾರ) ಹೊರತೆಗೆದ ಅವರು, ಈ ರಕ್ತಸಾರವು ಡಿಫ್ತೀರಿಯಾ ತಡೆಗಟ್ಟಲು ಪರಿಣಾಮಕಾರಿ ಎನ್ನುವುದನ್ನು ಪತ್ತೆಹಚ್ಚಿದರು. ಇದಷ್ಟೇ ಅಲ್ಲದೇ, ಮನುಷ್ಯರ ಮೇಲೂ ಶತಮಾನದ ಹಿಂದೆ ಈ ರೀತಿಯ ಪ್ರಯೋಗಗಳಾಗಿದ್ದವು. 1918ರಲ್ಲಿ ಸ್ಪಾನಿಶ್ ಫ್ಲ್ಯೂ ಸಾಂಕ್ರಾಮಿಕದ ವೇಳೆ, 1920ರಲ್ಲಿ ಡಿಫ್ತೀರಿಯಾ ಹಾವಳಿ ಇದ್ದವೇಳೆ, ಗುಣಮುಖರಾದವರ ಸೀರಂ ಅನ್ನು ಅನ್ಯ ರೋಗಿಗಳಿಗೆ ಕೊಡಲಾಗಿತ್ತು. ಆದರೆ ಆ ವೇಳೆ, ಅದರಿಂದ ಪ್ರಯೋಜನವೇನೂ ಆಗಿರಲಿಲ್ಲ. ಬದಲಾಗಿ ಸೈಡ್‌ಎಫೆಕ್ಟ್ ಗಳು ಹೆಚ್ಚಾಗಿದ್ದವು. ಆ ಸಮಯದಲ್ಲಿ ವೈದ್ಯಕೀಯ ವಿಜ್ಞಾನ ಅಂಬೆಗಾಲಿಡುತ್ತಿದ್ದದ್ದು ಇದಕ್ಕೆ ಕಾರಣವಾಗಿತ್ತು. ಆದರೆ ಈಗ, ಅಂದರೆ ಕಳೆದೊಂದು ದಶಕದಲ್ಲಿ ಕನ್ವಲ್‌ಸೆಂಟ್ ಪ್ಲಾಸ್ಮಾ ಥೆರಪಿಯು ವೈರಾಣು ಸಾಂಕ್ರಾಮಿಕದ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಿದೆ. 2009-2010ರ ವೇಳೆಯ ಎಚ್1ಎನ್1 ಸಾಂಕ್ರಾಮಿಕದ ಸಮಯದಲ್ಲಿ ಹಾಗೂ 2018ರ ವೇಳೆ ಎಬೊಲಾ ಪೀಡಿತರಿಗಂಎ ಚಿಕಿತ್ಸೆ ನೀಡುವಲ್ಲಿ…ಅಲ್ಲದೇ ಸಾರ್ಸ್, ಮರ್ಸ್ ವೈರಾಣು ಆಪತ್ತಿನ ಸಮಯದಲ್ಲೂ ಈ ಚಿಕಿತ್ಸಾ ವಿಧಾನವನ್ನು ಬಳಸಲಾಗಿದೆ. ನಿರ್ಭೀತಿಯಿಂದ ಪ್ಲಾಸ್ಮಾ ದಾನ ಮಾಡಬಹುದು
ಕೋವಿಡ್ ಸೋಂಕಿನಿಂದ ಗುಣಮುಕ್ತರಾದವರು ಯಾವುದೇ ಭಯವಿಲ್ಲದೇ ಪ್ಲಾಸ್ಮಾ ದಾನ ಮಾಡಬಹುದು. ಪ್ಲಾಸ್ಮಾ ದಾನ ಮಾಡುವುದರಿಂದಾಗಿ, ದೌರ್ಬಲ್ಯ, ನಿಶ್ಶಕ್ತಿ ಕಾಡುವುದಿಲ್ಲ. ಈ ಬಗ್ಗೆ ಅನವಶ್ಯಕ ಆತಂಕ ಬೇಡ ಎನ್ನುತ್ತಾರೆ ವೈದ್ಯರು. 14 ದಿನದಿಂದ 20 ದಿನ
ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆಯೇ ಪ್ಲಾಸ್ಮಾ ದಾನ ಮಾಡಬಹುದು ಎನ್ನುವುದು ಸುಳ್ಳು. ಸೋಂಕಿತನೊಬ್ಬ ಸಂಪೂರ್ಣವಾಗಿ ರೋಗದಿಂದ ಗುಣಮುಕ್ತನಾದ ನಂತರವೇ (ಅದೂ ಕನಿಷ್ಠ 14 ದಿನಗಳ ನಂತರ) ಆತನಿಂದ ಪ್ಲಾಸ್ಮಾ ಪಡೆಯಲಾಗುತ್ತದೆ. ರಕ್ತದಾನದಂತೆಯೇ…
ಪ್ಲಾಸ್ಮಾ ದಾನ ಕೂಡ ರಕ್ತದಾನದಂತೆಯೇ ಇರುತ್ತದೆ. ಒಂದು ಮಷೀನ್, ದಾನಿಗಳಿಂದ ಪಡೆದ ರಕ್ತದಿಂದ ಕೆಂಪು ರಕ್ತ ಕಣಗಳನ್ನು ಹಾಗೂ ಪ್ಲಾಸ್ಮಾವನ್ನು ಬೇರ್ಪಡಿಸುತ್ತದೆ. ಈ ಪ್ರಕ್ರಿಯೆಗೆ ಹೆಚ್ಚೆಂದರೆ ಒಂದು ತಾಸು ಸಮಯ ಬೇಕಾಗುತ್ತದೆ. ಹಾಗೆಂದು, ಚೇತರಿಸಿಕೊಂಡವರೆಲ್ಲ ಪ್ಲಾಸ್ಮಾ ದಾನಕ್ಕೆ ಅರ್ಹರಾಗುತ್ತಾರೆ ಎಂದೇನೂ ಇಲ್ಲ. ವ್ಯಕ್ತಿಯು ದೈಹಿಕವಾಗಿ ಸದೃಢನಾಗಿರಬೇಕು. ಕೋವಿಡ್-19 ನಿಂದ ಗುಣಮುಖರಾದವರಲ್ಲಿ ಅನೇಕರು 60-65ವರ್ಷಕ್ಕೂ ಮೇಲ್ಪಟ್ಟವರಿದ್ದು, ಇವರಲ್ಲಿ ಅನ್ಯ ಖಾಯಿಲೆಗಳು, ಆರೋಗ್ಯ ಸಮಸ್ಯೆಗಳು ಇರುತ್ತವೆ. ಹೀಗಾಗಿ, ಸೋಂಕಿನಿಂದ ಗುಣಮುಖರಾದವರೆಲ್ಲ ದಾನಿಗಳಾಗಲಾರರು. ಪ್ಲಾಸ್ಮಾ ಥೆರಪಿ ಅಂಗೀಕೃತ ಚಿಕಿತ್ಸೆಯಲ್ಲ-ಕೇಂದ್ರದ ಎಚ್ಚರಿಕೆ
ಕೋವಿಡ್ 19 ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಅನುಮತಿಗೊಳಪಟ್ಟ ಚಿಕಿತ್ಸೆಯಲ್ಲ, ಇದು ಅಪಾಯಕ್ಕೂ ಎಡೆಮಾಡಿಕೊಡಬಲ್ಲದು ಎಂದು ಕೇಂದ್ರ ಸರ್ಕಾರ ಮಂಗಳವಾರ ಎಚ್ಚರಿಸಿದೆ. ದೇಶದಲ್ಲಿ ಕೋವಿಡ್ 19ಗೆ ಯಾವುದೇ ಅಂಗೀಕೃತ ಚಿಕಿತ್ಸೆ ಇಲ್ಲ, ಇದರಲ್ಲಿ ಪ್ಲಾಸ್ಮಾ ಥೆರಪಿ ಕೂಡಾ ಸೇರಿದೆ. ಪ್ಲಾಸ್ಮಾ ಥೆರಪಿ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಒಂದು ವೇಳೆ ಇದನ್ನು ಸಮರ್ಪಕವಾಗಿ ಬಳಕೆ ಮಾಡದಿದ್ದರೆ, ಇದು ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದು ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ. ಕೋವಿಡ್ 19 ವೈರಸ್‌ಗೆ ಪ್ಲಾಸ್ಮಾ ಥೆರಪಿ ಫಲಕಾರಿ ಎಂಬುದು ವೈಜ್ಞಾನಿಕ ಸಾಕ್ಷ್ಯ ಲಭ್ಯವಾಗುವವರೆಗೆ ಇದು ಪ್ರಾಯೋಗಿಕ ಹಂತದಲ್ಲಿಯೇ ಇರಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸಲಹೆ ನೀಡಿದೆ.