Advertisement
ಈ ಓದು, ಪರೀಕ್ಷೆ, ಫಲಿತಾಂಶಗಳು ತಂದೊಡ್ಡುವ ತರಲೆಗಳು ಒಂದೆರಡಲ್ಲ! ಪ್ರತಿ ವರ್ಷದ ಈ ಬೇಸಿಗೆ ಅದರ ಆಟ ನೋಡುತ್ತಾ ಸಾಗುತ್ತದೆ. ಮೊದಲೇ ಒತ್ತಡದಲ್ಲಿ ಬೆಂದು ಹೋಗಿ, ಪಾಸಾಗಿ, ಉಸ್ಸಪ್ಪಾ ಅಂತ ಕೂತವರಿಗೆ ತಲೆ ಚಿಟ್ಟು ಹಿಡಿದು ಹೋಗುವಂತೆ ಅವರ ಮುಂದೆ ನಿಂತು ಮುಂದೇನು? ಮುಂದೇನು? ಅನ್ನುವ ಲೆಕ್ಕ ಇಟ್ಟವರೆಷ್ಟು? ಪತ್ರಿಕೆಗಳಲ್ಲಿ ಡಜನ್ ಡಜನ್ ಲೇಖನಗಳು, ಟಿವಿಗಳಲ್ಲಿ ಕಂತುಗಳ ಲೆಕ್ಕದಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು, ಅಲ್ಲಲ್ಲಿ ಹುಡುಗರನ್ನು ಗುಡ್ಡೆ ಹಾಕಿಕೊಂಡು ಮುಂದೇನು ಮುಂದೇನು? ಎಂಬ ಜಪತಪಗಳು ಆರಂಭವಾಗುತ್ತವೆ. ಅಲ್ಲಿ ಇಲ್ಲಿ ಎಲ್ಲಾ ಕಡೆ ಒಂದೇ ವಿಷಯ; ಎಸ್ಸೆಸ್ಸೆಲ್ಸಿ ನಂತರ ಮುಂದೇನು? ಪಿಯುಸಿ ನಂತರ ಮುಂದೇನು?
Related Articles
Advertisement
ಈಜು ಕಲಿಯುವ ಯಾವ ಉದ್ದೇಶವಿಲ್ಲದೆ ಊರಿನ ಹಳ್ಳದಲ್ಲಿ ನಿತ್ಯ ದನಗಳ ಮೈ ತೊಳೆಯುವ ಹುಡುಗ ತನ್ನಷ್ಟಕ್ಕೆ ತಾನೇ ಕಲಿಯುವ ಈಜಿಗೂ, ಈ ಕೈ ಆಡಿಸು, ಆ ಕಾಲು ಬಡಿ, ಇಷ್ಟೇ ನೀರಿರಬೇಕು, ಇಂಥದ್ದೇ ಡ್ರೆಸ್ ಇರಬೇಕು, ಬಾಯಿ ಮೂಗು ಮುಚ್ಚಿಕೊಳ್ಳಬೇಕು ಅಂತ ಹೇಳಿ ಕಲಿಸುವ ಈಜಿನಲ್ಲಿ ಯಾವುದು ತೂಕದ ಈಜು ಹೇಳಿ? ಕೆರೆಯಲ್ಲಿ ಕಲಿತವವನನ್ನು ಸಮುದ್ರದಲ್ಲಿ ಎಸೆದರೂ ಎದ್ದು ಬಂದಾನು! ನೂರು ಸಲಹೆಗಳನ್ನು ಮೆತ್ತಿಕೊಂಡು ಈಜು ಕಲಿತ ಈತ ಊರ ಬಾವಿಯನ್ನು ಕಂಡರೂ ಅಂಜಿಕೆಯಿಂದ ಓಡಿ ಹೋಗುತ್ತಾನೆ. ಡಿವಿಜಿ ಒಂದೊಳ್ಳೆ ಮಾತು ಹೇಳಿದ್ದಾರೆ, “ವನಸುಮದೆಳೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ ಹೇ ದೇವಾ…’ ಎಂದು. ಕಾಡಿನ ಹೂವಿನ ಸ್ವಾದ, ಕಾಂಪೌಂಡಿನಲ್ಲಿ ಬಿಳಿ ಗೊಬ್ಬರ ತಿಂದು ಸಲಹೆಯಂತೆ ಬೆಳೆದ ಹೂವಿನಲ್ಲಿ ಯಾವುದಕ್ಕೆ ಘಮ ಹೆಚ್ಚು?
ಸಲಹೆ ಮಾರ್ಗದರ್ಶನ ಬೇಕು ನಿಜ. ಆದರೆ, ಅವು ಮಕ್ಕಳ ಪ್ರತಿಯೊಂದು ಭಿನ್ನತೆಯನ್ನು ಧರಿಸಿರಬೇಕು. ಜಗತ್ತಿನ ಪ್ರತಿಮಗುವೂ ಒಂದರಂತೆ ಮತ್ತೂಂದಿಲ್ಲ. ತಾನೇನು ಎಂಬುದು ಮಗುವಿಗೆ ಗೊತ್ತಿರುತ್ತದೆ. ಅದಕ್ಕೆ ಸ್ವಲ್ಪ ಹೊರಗಿನ ಪ್ರೋತ್ಸಾಹ ಸಿಕ್ಕರೆ ಸಾಕು, ಆ ಕ್ಷೇತ್ರದಲ್ಲಿ ಮುನ್ನುಗ್ಗುತ್ತದೆ. ಎಲ್ಲವನ್ನೂ ಹೇಳಿ ಹೇಳಿಯೇ ನುಗ್ಗಿಸಬಾರದು. ಸುಮ್ಮನೆ ಒಂದು ಆಲ್ ದಿ ಬೆಸ್ಟ್ ಹೇಳಿ ಕಳುಹಿಸಬೇಕು. ಕಲಿಯುವವ ಹೊಡೆದಾಡಿ ಮುಂದೆ ನುಗ್ಗಬೇಕು. ಹೀಗೆ ಹೋಗು, ಅಲ್ಲಿ ಲೆಫ್ಟ್ಗೆ ತಗೋ, ಮುಂದೆ ಹೋಗಿ ರೈಟ್‌ಗೆ ತಿರುಗು. ಆಮೇಲೆ ನೇರವಾಗಿ ಹೋಗು ಅಂತ ಹೇಳಿ ಕಳುಹಿಸಲು ನೀವೇ ಆಗ್ಬೇಕಾ? ಆತನಿಗೆ ಅದಕ್ಕಿಂತ ನೂರು ಪಟ್ಟು ಸಾಮರ್ಥ್ಯವಿದೆ. ಅದನ್ನು ಗೌರವಿಸಿ, ಪ್ರೋತ್ಸಾಹಿಸಿ. ಮುಂದೇನು? ಮುಂದೇನು? ಎಂಬ ಗೊಂದಲಕ್ಕೆ ಜಾಸ್ತಿ ಒಡ್ಡಬೇಡಿ. ಈ ಕ್ಷಣದಲ್ಲಿ 3 ಈಡಿಯಟ್ಸ್ ಸಿನಿಮಾದಲ್ಲಿ ಆಮಿರ್‌ಖಾನ್ ಆಡಿದ ಒಂದು ಮಾತು ನೆನಪಾಗುತ್ತಿದೆ- ನಿನ್ನ ಮನಸ್ಸಿಗೆ ಏನು ತೋಚುತ್ತದೋ ಅದನ್ನು ಮಾಡು. ಏನು ಓದಬೇಕು ಅನಿಸುತ್ತದೋ ಅದನ್ನು ಓದು. ರೇಸ್ ನಡೆದಿದೆ ಎಂದು ಹುಚ್ಚು ಹಿಡಿದವರ ಹಾಗೆ ನೀನೂ ಓಡಬೇಡ. ಯೋಗ್ಯತೆ ಗಳಿಸಿಕೊಳ್ಳಲಿಕ್ಕೆ ಏನು ಬೇಕೋ ಅದನ್ನು ಮಾಡು. ಒಮ್ಮೆ ಯೋಗ್ಯ ಅನಿಸಿಕೊಂಡರೆ ಸಾಕು, ಯಶಸ್ಸು ನಿನ್ನ ಹಿಂದೆ ನೆರಳಿನಂತೆ ಬರುತ್ತೆ!ಎಂಥ ಮಾತು! – ಸದಾಶಿವ್ ಸೊರಟೂರು